ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎಂಬುವುದು ಬಹಳ ಅರ್ಥಪೂರ್ಣವಾದಂತಹ ಮಾತು. ಇದು ಜನಪದರ ಅನುಭವದ ಮೂಸೆಯಿಂದ ಮೂಡಿ ಬಂದ ಮುತ್ತು. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎನ್ನುವ ಮಾತಿನಲ್ಲಿ ಅಕ್ಕರೆಗೆ ಅಥವಾ ಪ್ರೀತಿಗೆ ಬಹಳ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ.ಅಕ್ಕರೆ ಎನ್ನುವುದು ಜೀವದ ಸೆಲೆಯಾಗಿದೆ.

 ಇಂದು ನಮ್ಮ ಸಮಾಜದಲ್ಲಿ ಅನ್ನದ ಹಸಿವಿನಿಂದ ಬಳಲುವವರಿಗಿಂತ ಪ್ರೀತಿ ಅಥವಾ ಅಕ್ಕರೆಯ ಹಸಿವಿನಿಂದ ಬಳಲುವರೇ ಹೆಚ್ಚಾಗಿದ್ದಾರೆ.ಇಂತಹ ಕಾಲಘಟ್ಟದಲ್ಲಿ ಪ್ರೀತಿಯು ಬಹಳ ದುಬಾರಿಯಾಗಿ ಕಂಡುಬರುವಂತಹ ಸಂದರ್ಭದಲ್ಲಿ, ಈ ಮಾತಿನ ಬಗ್ಗೆ ಚಿಂತನ ಮಂಥನ ಮಾಡಬೇಕಾದದ್ದು ಬಹಳ ಅಗತ್ಯವೆಂದು ನನಗನಿಸುತ್ತದೆ.

ಇಂದು  ಯಾಂತ್ರಿಕ ಯುಗ. ಬದುಕು ಕೂಡ ಯಾಂತ್ರಿಕವಾಗಿದೆ.ಮನುಷ ಮನುಷರ ಮನಸ್ಸುಗಳ ನಡುವೆ ದ್ವೇಷದ ಗೋಡೆ ಕಟ್ಟಲ್ಪಟ್ಟಿದೆ.ಎಲ್ಲೆಲ್ಲೂ ಮುಖವಾಡದ ಬದುಕೇ ಕಂಡುಬರುತ್ತಿದೆ.ಇಂತಹ ಬದುಕಿನಲ್ಲಿ ಯಾವುದೇ ರೀತಿಯಲ್ಲಿ ಶಾಂತಿ, ನೆಮ್ಮದಿ ಸಿಗಲಾರದು ಎಷ್ಟೇ ಪ್ರೀತಿ ತೋರಿದರೂ ಆ ಪ್ರೀತಿಯ ಹಿಂದೆ ಅದ್ಯಾವ ಕುತಂತ್ರ ಅಡಗಿದೆಯೋ ಎಂಬ ಹೆದರಿಕೆ ಕಾಡುತ್ತದೆ. ಹೀಗಿರುವಾಗ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತ ಮಾತು ಇಲ್ಲಿ ಪ್ರಸ್ತುತವಾಗುತ್ತದೆ.

ಪ್ರೀತಿ ಇಲ್ಲದೆ ಅಥವಾ ಅಕ್ಕರೆ ಇಲ್ಲದೆ ಊಟ ಹಾಕುವವರು, ಊಟವನ್ನು ಹಾಕಬೇಕಲ್ಲಾ ಎನ್ನುವಂತಹ (ಅನಿವಾರ್ಯತೆ) ಭಾವನೆಯಿಂದ ಮೃಷ್ಟಾನ್ನ ಭೋಜನ ಬಡಿಸಿದರೂ, ಅದು ರುಚಿಸದು. ಮನಸ್ಸಿಗೆ ಹಿತವಾಗದು. ಅದೇ ಪ್ರೀತಿಯಿಂದ ಅಂಬಲಿಯನ್ನು ಬಡಿಸಿದರೂ ಅದರಲ್ಲಿ ಮೃಷ್ಟಾನ್ನ ಭೋಜನ ಮಾಡಿದಷ್ಟು ಸಂತಸವಿರುತ್ತದೆ, ಸವಿಯಿರುತ್ತದೆ.ಪ್ರೀತಿ ತೋರಿಸುವಾಗ ಬಡವ -ಶ್ರೀಮಂತ, ಉಳ್ಳವರು- ಇಲ್ಲದವರು, ಅವರು -ಇವರು ಎಂಬ ಯಾವ ಭೇದ ಭಾವವು ಇರಬಾರದು ಎಂಬ ತತ್ವವೂ ವ್ಯಕ್ತವಾಗುತ್ತದೆ. ಪ್ರೀತಿಯಿಂದ ಯಾರು ಏನೇ ಕೊಟ್ಟರೂ ಅದು ಸ್ವೀಕರಿಸಲು ಯೋಗ್ಯವಾದದ್ದು ಎಂಬ ಅರ್ಥವನ್ನು ನೀಡುತ್ತದೆ.
ಇದಕ್ಕೆ ಪೂರಕವಾದ ಉದಾಹರಣೆಯನ್ನು ಮಹಾಭಾರತದಿಂದ ನಾವು ಉಲ್ಲೇಖಿಸಬಹುದು, ಕೃಷ್ಣ ಸುಧಾಮರ ಉದಾರಣೆಯನ್ನೇ ತೆಗೆದುಕೊಂಡರೆ ಸುಧಾಮ ಬಡವನಾದರೂ, ಕೃಷ್ಣನಿಗೆ ಪ್ರೀತಿಯಿಂದ ಹಿಡಿ ಅವಲಕ್ಕಿ ನೀಡಿದ್ದನ್ನು ಕೃಷ್ಣ ಅದೆಷ್ಟು ಸವಿಯಾಗಿ ತಿನ್ನುತ್ತಾನೆ!.ಸಂತಸ ಪಡುತ್ತಾನೆ!. ಹಾಗೆಯೇ ನಮ್ಮನ್ನು ಪ್ರೀತಿಸುವವರು ಅದೇನೇ ನೀಡಿದರೂ ಅದು ನಮಗೆ ಸವಿಯಾಗಿಯೇ ಇರುತ್ತದೆ.

ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಹಾಗಾಗಿ ಪ್ರತಿಯೊಂದು ಜೀವಿಯು ಕೂಡ ಪ್ರೀತಿಗಾಗಿ ಹಾತೊರೆಯುತ್ತದೆ. ತಾವು ಬಯಸುವ ಪ್ರೀತಿ ತಮಗೆ ಸಿಕ್ಕಿತೆಂದರೆ ಮನಸ್ಸಿಗೆ ಆಗುವ ಆನಂದವನ್ನು ಮಾತಿನಲ್ಲಿ ಹೇಳಲಾಗದು.ಸಂಸಾರದ ಉದಾಹರಣೆಯನ್ನೇ ತೆಗೆದುಕೊಂಡರೆ, ಗಂಡ ಹೆಂಡತಿಯ ನಡುವೆ ಪ್ರೀತಿ ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಅವರು ಒಬ್ಬರಿಗೊಬ್ಬರು ಸಹಿಸಿಕೊಂಡು, ಸಮಾಧಾನದಿಂದ ಸಂಸಾರವನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಾರೆ.
 ಅದೇ ಗಂಡ ಹೆಂಡಿರ ನಡುವೆ ಪ್ರೀತಿ ಇಲ್ಲದೆ ಇದ್ದಲ್ಲಿ  ಆಗರ್ಭ ಶ್ರೀಮಂತರಾದರೂ ಅವರು ಪ್ರೀತಿಯಿಂದ ಬಾಳುವುದಕ್ಕೆ ಸಾಧ್ಯವಿಲ್ಲ.

ಅಕ್ಕರೆ ಇದ್ದರೆ ಅಂಬಲಿಯೂ ಸವಿ. ಅದೇ ಮೃಷ್ಟಾನ್ನ, ಅದೇ ಪರಮಾನ್ನ.ಒಂದು ಪ್ರೀತಿಯ ಮಾತು ಎಷ್ಟೋ ದುಃಖ ತಪ್ತ ಮನಸ್ಸುಗಳನ್ನು ಸಾಂತ್ವಾನಗೊಳಿಸಬಲ್ಲದಂತೆ.ಅಂದರೆ ಪ್ರೀತಿಗೆ ಅಷ್ಟು ಶಕ್ತಿ ಇದೆ. ಶಕ್ತಿಯಿಂದ ಮಾಡಲಾಗದ್ದನ್ನು, ಯುಕ್ತಿಯಿಂದ ಸಾಧಿಸಲಾಗದ್ದನ್ನು, ಪ್ರೀತಿಯಿಂದ ಸಾಧಿಸಬಹುದು ಎಂಬಂತೆ. ಪ್ರೀತಿ ಇದ್ದರೆ ಎಲ್ಲವೂ ಸಾಧ್ಯ. ಸಿಹಿಕಹಿ ಎನ್ನುವಂತದ್ದು ನಮ್ಮ ಮನಸ್ಸಿನ ಭಾವನೆಗೆ ಬಿಟ್ಟದ್ದು. ನಮಗೆ ಇಷ್ಟವಾಗುವವರು ಏನಾದರೂ ಮಾಡಿದರೆ ನಮ್ಮ ಮನಸ್ಸು ಅದು ಒಳ್ಳೆಯದೆಂದೇ ಭಾವಿಸುತ್ತದೆ.ನಮಗಾಗದವರು ಒಳ್ಳೆಯದನ್ನೇ ಮಾಡಿದರೂ ನಾವು ಅದರಲ್ಲಿ ಕೆಟ್ಟದ್ದನ್ನು ಕಾಣುತ್ತೇವೆ. ಉದಾಹರಣೆಗೆ ನಮ್ಮ ಅಮ್ಮ ಎಷ್ಟು ಬೈದರೂ ನಾವು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ,ಅಮ್ಮನನ್ನು ಪ್ರೀತಿಯಿಂದ ಕಾಣುತ್ತೇವೆ. ಏಕೆಂದರೆ ಅಮ್ಮ ಎಂದರೆ ನಮಗೆ ಪ್ರೀತಿ. ಅವಳು ಬೈದರೆ ಪ್ರೀತಿಯಿಂದಲೇ ಬಯ್ಯುತ್ತಾಳೆ ಎಂಬ ನಮ್ಮ ಮನಸ್ಥಿತಿ. ಅದೇ ಅತ್ತೆ ಎಲ್ಲಿಯಾದರೂ ಬೈದಳೆಂದರೆ ನಾವು ಸಿಟ್ಟು ಮಾಡಿಕೊಂಡು, ಮುಂದೆ ಏನೇನೋ ಆವಾಂತರಕ್ಕೆ ಕಾರಣವಾಗುತ್ತದೆ.ವಿಷಯ ಇಷ್ಟೇ. ಅತ್ತೆ ಹೇಳಿದ್ದು ಕೂಡ ತಾಯಿ ಹೇಳಿದ್ದನ್ನೇ. ಆದರೆ ತಾಯಿ ಹೇಳಿದಾಗ ಬೇಸರವಾಗದ ನಮಗೆ ಅತ್ತೆ ಅದೇ ಮಾತನ್ನು ಹೇಳಿದಾಗ ಮನಸ್ಸಿಗೆ ನಾಟುತ್ತದೆ, ಅವಮಾನವಾಗುತ್ತದೆ. ಏಕೆ? ಕಾರಣ ಇಷ್ಟೇ .ಅಮ್ಮ ನಮ್ಮವರು,ಅತ್ತೆ ಎರಡನೆಯ ವ್ಯಕ್ತಿ ಎಂಬ ಭಾವ. ಇಲ್ಲಿ ಪ್ರೀತಿಯ ಕೊರತೆ ನಮ್ಮನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ.

ಈಗೀಗ “ಮುಖ ನೋಡಿ ಮಣೆ ಹಾಕು”ಎಂಬಂತೆ ಇತರರ ಶ್ರೀಮಂತಿಕೆ, ಅಧಿಕಾರ, ಹಣ, ಅಂತಸ್ತು ನೋಡಿಯೇ ಅದಕ್ಕೆ ತಕ್ಕಂತೆ ಅವರನ್ನು ಉಪಚರಿಸುತ್ತಾರೆ .ಬಡವರಾದರೆ ಅವರನ್ನು ಉಪಚರಿಸುವ ಗೋಜಿಗೆ ಹೋಗದೆ ಸುಮ್ಮನೆ ಇರುತ್ತಾರೆ. ಇಂತಹ ಜನರಿರುವಾಗ ಅಕ್ಕರೆಗೆ ಬೆಲೆಯಾದರೂ ಎಲ್ಲಿದೆ? ಹಾಗಾಗಿ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತೆ ನಮಗೆ ಪ್ರೀತಿ ಇದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಜೀವನವು ಯಾಂತ್ರಿಕವಾಗಿಯೇ ನಡೆಯುತ್ತಿದೆ. ಮನುಷ್ಯನಿಗೆ ಒತ್ತಡದ ಜೀವನದಲ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡುವುದ ಕ್ಕಾಗಲಿ ,ಎಲ್ಲರೂ ಒಟ್ಟು ಸೇರಿ ಪ್ರೀತಿಯಿಂದ ಉಣ್ಣುವುದಕ್ಕಾಗಲಿ, ಸಮಯವೇ ಇಲ್ಲ. ಒಂದೇ ಮನೆಯಲ್ಲಿ ಒಬ್ಬೊಬ್ಬರ ಊಟದ ಸಮಯ ಒಂದೊಂದು ಆಗಿರುವಾಗ, ಇನ್ನು ಪ್ರೀತಿಯಿಂದ ಇತರರಿಗೆ ಊಟ ಹಾಕಲು ಸಮಯವಾದರೂ ಎಲ್ಲಿದೆ? ಜೀವನವಿಡೀ ಒತ್ತಡದಿಂದಲೇ ಕಳೆಯುವ ಪರಿಸ್ಥಿತಿ ಬಂದಿದೆ. ಇದು ಬದಲಾಗಬೇಕು. ಪರಸ್ಪರ ಪ್ರೀತಿ ಸಹನೆಯಿಂದ ಆಗಾಗ ಒಟ್ಟು ಸೇರಿ,  ಕಾಲ ಕಳೆಯುವಂತಾಗಬೇಕು. ಕಷ್ಟವಿದ್ದರೂ, ಸಂಕಷ್ಟಗಳು ಬಂದರೂ ಪ್ರೀತಿಯಿಂದ ಅಂಬಲಿಯಾದರೂ ಸರಿ, ಸವಿದು ಬದುಕೋಣ.

————

About The Author

Leave a Reply

You cannot copy content of this page

Scroll to Top