ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ,
“ಪ್ರೀತಿ ಸಿಂಚನ”


ನಿನ್ನೆದೆಯ ಹಸಿ ಹಸಿ ಪ್ರೀತಿ ಒರತೆ
ಸಿಂಚನವಾಗಿದೆ ಮನದ ಬುಗ್ಗೆಯಲಿ
ಮತ್ತೆ ಕನಸು ಹೊತ್ತು ಸಾಗಿದೆ
ನಿನ್ನಧರ ಮಧುರ ಮುತ್ತಿಗೆ
ಮಿಡುಕಿದಂತಾಯಿತು ಎದೆಯ ವೀಣೆ
ಯಾರು ನುಡಿಸಿದರೊ ಪ್ರೇಮ ರಾಗವ
ತಲ್ಲಣದ ಮನದಲಿ ಕಡಲ ಭೋರ್ಗರೆತ
ನಿನ್ನ ಬೆರಳ ಸ್ಪರ್ಶದ ಅಪ್ಪುಗೆಯ ಸಾಂತ್ವಾನ
ಶೀತ ಗಾಳಿಯ ಪ್ರೀತಿಗೆ ನೆನಪಿನ ಕಂಬಳಿ ಹೊದ್ದು
ಬೆಚ್ಚನೆಯ ಮುತ್ತನಿಟ್ಟು ಮಲಗು ಅಪ್ಪಿಕೊಳ್ಳುವೆ ಕನಸಿನಲಿ
ಬೇಡ ಬಿಡು ಒಸರುವ ತೊರೆ ಪ್ರೀತಿ
ಭೂತಗನ್ನಡಿಯ ಹುಸಿ ಪ್ರೇಮ ಎಂದೆಯಾ
ಮೆಚ್ಚಿಕೊಳ್ಳುವ ಮನಸ್ಸಿಲ್ಲದಿದ್ದರೆ
ಕೊಚ್ಚಿ ಹಾಕಿಬಿಡು ಭಾವವನ್ನು
ಚುಚ್ಚಬೇಡ ಹಚ್ಚಿಕೊಂಡ ಎದೆಯ ದನಿಗೆ
ಬಿಚ್ಚು ಮನಸ್ಸಿನ ತುಡಿತಕೆ
ನಾ ಬರುವ ದಾರಿಗೆ ನಿರೀಕ್ಷೆಯ ಹೂಹಾಸು
ಬಂದೇ ಬರುವೆನು ಕ್ಷಣದಲ್ಲಿ ನಿನ್ನ ಹೃದಯ ಗೂಡಿಗೆ
ಡಾ. ಮೀನಾಕ್ಷಿ ಪಾಟೀಲ



