ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಉತ್ತಮ ಭವಿಷ್ಯದ ಕನಸನ್ನು ಕಾಣುತ್ತಾ ಕೊನೆಯ ಮಗಳನ್ನು ನವೋದಯ ಶಾಲೆಗೆ ಬಿಟ್ಟು ಬಂದರೂ, ಮನಸೆಲ್ಲಾ ಮಗಳ ಕಡೆಯೇ ಇರುತ್ತಿತ್ತು. ಆದರೂ ಉಳಿದಿಬ್ಬರು ಮಕ್ಕಳು ತನ್ನ ಜೊತೆ ಇರುವುದು ಸುಮತಿಗೆ ಸಮಾಧಾನ ತಂದಿತ್ತು. ಎರಡನೇ ಮಗಳು ಪ್ರಥಮ ಪಿಯುಸಿ ತರಗತಿಗೆ ಸಕಲೇಶಪುರದ ಸರ್ಕಾರಿ ಕಾಲೇಜಿನಲ್ಲಿ ಸೇರಿಕೊಂಡಳು. ಕಾಲೇಜಿನ ವ್ಯಾಸಂಗದ ಜೊತೆಜೊತೆಗೆ ಟೈಪಿಂಗ್ ಅಭ್ಯಾಸ ಮಾಡುವುದನ್ನು ಬಿಡಲಿಲ್ಲ. ಮೂರನೇಯ ಮಗಳು 9ನೇ ತರಗತಿಗೆ ತೇರ್ಗಡೆಯಾಗಿದ್ದಳು.. ಎರಡನೇ ಮಗಳು ಬೆಳಗ್ಗೆ ಬೇಗನೆ ಎದ್ದು ಆರು ಗಂಟೆ ಬಸ್ಸಿಗೆ ಕಾಲೇಜಿಗೆ ಹೊರಟರೆ, ಮೂರನೇ ಮಗಳು 8:30 ಕ್ಕೆ ಹೊರಡುವ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಳು. ಒಂದೇ ಕಟ್ಟಡದಲ್ಲಿ ಶಾಲೆ ಮತ್ತು ಕಾಲೇಜು ಕಾರ್ಯನಿರ್ವಹಿಸುವುದರಿಂದ ಎರಡನೇ ಮಗಳ ತರಗತಿಯು ಬೇಗನೆ ಪ್ರಾರಂಭವಾಗಿ 11:00 ಗಂಟೆಗೆಲ್ಲಾ ಮುಗಿಯುತ್ತಿದ್ದವು. ಹನ್ನೊಂದರ ನಂತರ ಹೈಸ್ಕೂಲ್ ತರಗತಿಗಳು ಪ್ರಾರಂಭವಾಗುತ್ತಿದ್ದುದರಿಂದ ಮೂರನೇ ಮಗಳು ಅಕ್ಕನ ಜೊತೆಗೆ ಹೋಗದೇ ಗೆಳತಿಯರ ಸಂಗಡ ಸ್ವಲ್ಪ ತಡವಾಗಿ ಶಾಲೆಗೆ ಹೋಗುತ್ತಿದ್ದಳು. ಆದರೂ ಇಬ್ಬರ ಭೇಟಿಯು ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ಪರಿಸರದಲ್ಲಿ ಆಗುತ್ತಿತ್ತು. ಸಹೋದರಿಯಬ್ಬರ ನಡುವೆ ಬಹಳ ಆತ್ಮೀಯತೆ ಇತ್ತು. ಅಕ್ಕ ತಂಗಿ ಎಂದು ಹೇಳುವುದಕ್ಕಿಂತ ಉತ್ತಮ ಸ್ನೇಹಿತೆಯರು ಎನ್ನಬಹುದು. ಅಷ್ಟು ಗಾಢವಾದ ಸ್ನೇಹ ಅವರಿಬ್ಬರಲ್ಲಿ ಇತ್ತು. ಇವರ ಅನ್ಯೋನ್ಯತೆಯನ್ನು ಕಂಡು ಅವರ ಸಹಪಾಠಿಗಳು ಇವರಿಬ್ಬರೂ ಖಂಡಿತಾ ಅಕ್ಕ ತಂಗಿಯರಲ್ಲ ಸ್ನೇಹಿತರೆಯರು ಎನ್ನುವ ವಿಚಾರಕ್ಕೆ ಬಾಜಿ ಕಟ್ಟಿ ಸೋತಿದ್ದರು. 

ಎರಡನೇ ಮಗಳು ಕಾಲೇಜು ಮುಗಿದ ನಂತರ ನೇರವಾಗಿ 

ಟೈಪಿಂಗ್ ಇನ್ಸ್ಟಿಟ್ಯೂಟ್ ಗೆ ಹೋಗಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯ ಟೈಪಿಂಗ್ ಅನ್ನು ಕಲಿಯುತ್ತಿದ್ದಳು. ಟೈಪಿಂಗ್ ಮುಗಿದ ನಂತರ ನೇರವಾಗಿ ಬಹಳ ದೂರವಿರುವ ಅಕ್ಕನ ಮನೆಗೆ ನಡೆದೇ ಹೋಗುತ್ತಿದ್ದಳು. ಅಕ್ಕನ ಮನೆಗೆ ಹೋದರೆ ಅಲ್ಲಿ ಅಕ್ಕ ಮಧ್ಯಾಹ್ನಕ್ಕೆ ಬಿಸಿ ಬಿಸಿಯಾದ ರುಚಿಕರವಾದ ಊಟವನ್ನು ಹೊಟ್ಟೆ ತುಂಬಾ ಬಡಿಸುತ್ತಿದ್ದಳು. ಅಕ್ಕನ ಮಗನ ಜೊತೆ ಆಡುವುದೇ ಅವಳಿಗೊಂದು ಖುಷಿ. ಸಂಜೆಯಾದೊಡನೆ ಅಕ್ಕನ ಮನೆಯಿಂದ ಹೊರಟು ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ಹೈಸ್ಕೂಲ್ ತರಗತಿಗಳನ್ನು ಮುಗಿಸಿ ಬರುವ ತಂಗಿಗಾಗಿ ಕಾಯುತ್ತಿದ್ದಳು. ನಂತರ ಇಬ್ಬರೂ ಒಟ್ಟಿಗೇ ಬಸ್ಸಿನಲ್ಲಿ ಮನೆಯ ಕಡೆಗೆ ಪ್ರಯಾಣ ಬೆಳೆಸುತ್ತಿದ್ದರು. ಕೆಲವೊಮ್ಮೆ ಟೈಪಿಂಗ್ ತರಗತಿಗಳು ಇಲ್ಲದೇ ಇದ್ದಾಗ ಎರಡನೇ ಮಗಳು ಮಧ್ಯಾಹ್ನದ ಬಸ್ಸಿಗೆ ಹೊರಟು ನೇರವಾಗಿ ಮನೆಗೆ ಬರುತ್ತಿದ್ದಳು. ಅಂತಹ ಸಂದರ್ಭಗಳಲ್ಲಿ ಸುಮತಿ ಮತ್ತು ಎರಡನೇ ಮಗಳು ಹೈಸ್ಕೂಲ್ ಮುಗಿಸಿ ಸಂಜೆ ಬಸ್ಸಿನಲ್ಲಿ ಬರುತ್ತಿದ್ದ ಮೂರನೇ ಮಗಳನ್ನು ಕರೆದುಕೊಂಡು ಹೋಗಲು ತಮ್ಮ ಮನೆಯಿಂದ ಬಹಳ ದೂರದಲ್ಲಿರುವ ಬಸ್ಸಿನ ನಿಲ್ದಾಣದಲ್ಲಿ ಬಂದು ಕಾಯುತ್ತಾ ಕುಳಿತುಕೊಳ್ಳುವರು. ಏಕೆಂದರೆ ಕೆಲವೊಮ್ಮೆ ಸಂಜೆ ಆರೂವರೆ ಗಂಟೆಯ ಹೊತ್ತಿಗೆ ಬರುತ್ತಿದ್ದ ಬಸ್ಸು ಕೆಲವೊಮ್ಮೆ ಸಣ್ಣಪುಟ್ಟ ರಿಪೇರಿಗಳಿಂದಾಗಿ ಡಿಪೋದಿಂದ ಬರುವುದು ತಡವಾಗುತ್ತಿತ್ತು. ಹಾಗಾಗಿ ಆ ಬಸ್ಸು ಇವರ ಊರನ್ನು ಸೇರುತ್ತಿದ್ದುದು ರಾತ್ರಿಯಾಗುತ್ತಿತ್ತು. 

ಅಂತಹ ಸಂದರ್ಭಗಳಲ್ಲಿ ಮೂರನೇ ಮಗಳು ರಾತ್ರಿ ಕತ್ತಲಲ್ಲಿ ಒಬ್ಬಳೇ ಬರಬೇಕಾಗುತ್ತದೆ. ಹಾಗಾಗಿ ಸುಮತಿ ಮತ್ತು ಎರಡನೇ ಮಗಳು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಬಸ್ ಬರುವುದು 8:00 ಆಗುತ್ತಿತ್ತು. ತುಂಬಿ ತುಳುಕಿ ಬರುತ್ತಿದ್ದ ಬಸ್ ಮಣ್ಣಿನ ರಸ್ತೆಯ ತಿರುವುಗಳಲ್ಲಿ ನಿಧಾನವಾಗಿ ಬರುತ್ತಿದ್ದ ಕಾರಣ ಕೆಲವೊಮ್ಮೆ ಇನ್ನೂ ಸ್ವಲ್ಪ ತಡವಾಗುತ್ತಿತ್ತು. ಹಾಗೆಯೇ ಅಂದು ಬಸ್ ಸ್ವಲ್ಪ ತಡವಾಗಿಯೇ ಬಂತು. ಸುಮತಿಗೆ ಎರಡನೇ ಬಾರಿಯೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯಾಗಿದ್ದರಿಂದ ಹಾಗೂ ಕಣ್ಣಿಗೆ ಧರಿಸುತ್ತಿದ್ದ ದಪ್ಪ ಕನ್ನಡಕದ ಕಾರಣ ರಾತ್ರಿ ಹೊತ್ತಿನಲ್ಲಿ ಕಣ್ಣು ಅಷ್ಟು ಸರಿಯಾಗಿ ಕಾಣುತ್ತಿರಲಿಲ್ಲ ಹಾಗಾಗಿ ಮಕ್ಕಳಿಬ್ಬರ ಕೈಯನ್ನು ಹಿಡಿದು ನಡೆಯುತ್ತಿದ್ದಳು. ಹೀಗೆ ತೋಟದ ನಡುವಿನ ಕಾರ್ಗತ್ತಲಲ್ಲಿ ರಸ್ತೆಯ ತಿರುವಿನಲ್ಲಿ ನಡೆದು ಹೋಗುತ್ತಿದ್ದಾಗ ತಮ್ಮ ಪಕ್ಕದಲ್ಲಿಯೇ ಹಾದು ಹೋದ ಇಬ್ಬರು ಯುವಕರು ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತು, ಇವರಿಗೆ ಕೇಳುವಂತೆ ತುಳು ಭಾಷೆಯಲ್ಲಿ ಜೋರಾಗಿ ಮಾತಾಡಿಕೊಂಡರು. ಒಬ್ಬಾತ ಇನ್ನೊಬ್ಬನಿಗೆ…” ಏ ಮಾರಾಯ…. ಈ ಕತ್ತಲೆಯಲ್ಲಿ ಇಲ್ಲಿ ಯಾರೂ ಇಲ್ಲ…. ಹೇಗಿದ್ದರೂ ಮುದುಕಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ…. ಮುದುಕಿಯನ್ನು ಇಲ್ಲೇ ಎಲ್ಲಾದರೂ ಕಾಫಿ ತೋಟದ ಮರಕ್ಕೆ ಕಟ್ಟಿ ಹಾಕಿ…. ಆ ಇಬ್ಬರು ಹುಡುಗಿಯರನ್ನು ಎಳೆದುಕೊಂಡು ಹೋಗೋಣ ಬಾರೋ”… ಎಂದನು. ಅವನ ಮಾತಿಗೆ ಜೊತೆಗೆ ಇದ್ದ ಇನ್ನೊಬ್ಬ…”ಏ… ಹಾಗೆಲ್ಲ ಹೇಳಬೇಡ ಅದು ನಮ್ಮ ತೋಟದ ಶಾಲೆಯ ಟೀಚರ್ ಮತ್ತು ಅವರ ಹೆಣ್ಣುಮಕ್ಕಳು ಕಣೋ”…. ಎಂದು ವ್ಯಂಗ್ಯವಾಗಿ ನುಡಿದಾಗ, ಮೊದಲು ಮಾತಾಡಿದವ…” ಟೀಚರ್ ಆದರೇನು? ಯಾರಾದರೆ ನಮಗೇನು? ಆಕೆಯ ಜೊತೆಗೆ ಹೆಣ್ಣು ಮಕ್ಕಳಿದ್ದಾರಲ್ಲವೇ? ಅವರು ನಮಗೆ ಸಾಕು….ಅವರನ್ನು ಹೊತ್ತುಕೊಂಡು ಹೋದರಾಯ್ತು”…. ಎಂದ

ತೋಟದ ನಡುವೆ ಹಾದುಹೋಗುವ ರಸ್ತೆಯಲ್ಲಿ ಬೀದಿ ದೀಪಗಳು ಇರದ ಕಾರಣ ಮಾತನಾಡುತ್ತಿರುವವರು ಯಾರೆಂದು ಕಾಣುತ್ತಿರಲಿಲ್ಲ. ಹೀಗೆ ಮಾತನಾಡಿಕೊಳ್ಳುತ್ತಿದ್ದವರ ರೂಪ ಕತ್ತಲಲ್ಲಿ ಕಾಣದಿದ್ದರೂ ಅವರ ಧ್ವನಿಯಿಂದ ಅವರುಗಳು ಯಾರೆಂದು ಸುಮತಿಗೆ ತಿಳಿಯಿತು. ಒಬ್ಬಾತ ಚಿಕ್ಕವನಿರುವಾಗ ತನ್ನಿಂದ ಅಕ್ಷರ ಅಭ್ಯಾಸ ಕಲಿತ ಹುಡುಗ. ಆ ವಯಸ್ಸಿನಲ್ಲಿಯೇ ಅವನು ಸ್ವಲ್ಪ ಪುಂಡನಾಗಿದ್ದ. ತನ್ನ ಪುಂಡತನಕ್ಕಾಗಿ ಸುಮತಿಯಿಂದ ಬುದ್ಧಿವಾದವನ್ನು ಹೇಳಿಸಿಕೊಂಡಿದ್ದ. ಶಾಲೆಯ ಕಲಿಕೆ ಹಾಗೂ ಸುಮತಿ ಟೀಚರ್ ಹೇಳಿದ ಬುದ್ಧಿ ಮಾತುಗಳು ಹಿಡಿಸದೆ ಆತ ಎಂದೋ ಶಾಲೆಯನ್ನು ಬಿಟ್ಟು ಸ್ವಲ್ಪ ದೊಡ್ಡವನಾದ ಮೇಲೆ ತೋಟದ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇತ್ತೀಚೆಗೆ ತೋಟದ ಕೆಲಸಕ್ಕೆ ಹೊಸದಾಗಿ ಬಂದಿದ್ದ ಕಟ್ಟು ಮಸ್ತಾದ ಯುವಕನೊಬ್ಬ ಅವನ ಜೊತೆಗಾರನಾಗಿದ್ದ. ಅವರ ಧ್ವನಿಯನ್ನು ಕೇಳಿದಾಗ ಈ ಇಬ್ಬರೇ ಎನ್ನುವುದು ಅವಳಿಗೆ ಮನದಟ್ಟಾಯಿತು. ಅವರ ಮಾತುಗಳನ್ನು ಕೇಳಿ ಸುಮತಿಯ ಎದೆಯಲ್ಲಿ ನಡುಕ ಉಂಟಾಯಿತು. ಎಲ್ಲಿ ತನ್ನ ಮಕ್ಕಳನ್ನು ಹೊತ್ತುಕೊಂಡು ಹೋಗುವರೋ? ಏನು ತೊಂದರೆ ಕೊಡುವರೋ?ಎನ್ನುವ ಭಯ ಅವಳನ್ನು ಕಾಡಿತು. ಇಬ್ಬರೂ ಮಕ್ಕಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಳು. ಆ ಯುವಕರಿಬ್ಬರೂ ಆರೋಗ್ಯವಂತರು ಹಾಗೂ ಗಟ್ಟಿಮುಟ್ಟಾದ ಮೈಕಟ್ಟನ್ನು ಹೊಂದಿದವರು. ತಾನು ಅನಾರೋಗ್ಯದಿಂದ ಬಹಳ ಕ್ಷೀಣಿಸಿದ್ದೇನೆ. ಆ ಗಟ್ಟಿ ಮುಟ್ಟಾದ ಯುವಕರ ಮುಂದೆ ತನ್ನ ಬಲಹೀನ ಹೆಣ್ಣು ಮಕ್ಕಳು ಏನು ಮಾಡಲು ಸಾಧ್ಯ? ಅಯ್ಯೋ ದೇವರೇ!! ಈಗೇನು ಮಾಡುವುದು? ಎಂದು ಹೆದರಿ ಕಂಗಾಲಾಗಿರುವಾಗ, ಅದೇ ರಸ್ತೆಯ ತಿರುವಿನಲ್ಲಿ ದೂರದಿಂದ ಟಾರ್ಚ್ ಲೈಟ್ ಒಂದು ಬೆಳಗಿತು. 


About The Author

Leave a Reply

You cannot copy content of this page

Scroll to Top