ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಜೆ 4:00 ನಂತರ ಹಿರಿಯ ಮಗಳ ಮನೆಯಿಂದ ಮಕ್ಕಳ ಜೊತೆ ಸಕಲೇಶಪುರದ ಬಸ್ ನಿಲ್ದಾಣದ ಕಡೆಗೆ ಹೊರಟಳು. ಹೊರಡುವ ಮುನ್ನ ಮೊಮ್ಮಗನನ್ನು ಮುದ್ದು ಮಾಡಿ, ಅಳಿಯನಿಗೆ ಕೃತಜ್ಞತೆ ತಿಳಿಸಿ, ಮಗಳಿಗೆ ಜಾಗ್ರತೆ ವಹಿಸುವಂತೆ ಹೇಳುವುದನ್ನು ಮರೆಯಲಿಲ್ಲ. ಸುಮತಿ ತನ್ನ ಮಕ್ಕಳೊಂದಿಗೆ ಬಸ್ ನಿಲ್ದಾಣಕ್ಕೆ ಬಂದಳು. ಜನರ ನೂಕು ನುಗ್ಗಲಿನ ನಡುವೆ ಹೇಗೋ ಬಸ್ ಹತ್ತಿ ನಾಲ್ವರೂ ಒಂದೇ ಸೀಟಿನಲ್ಲಿ ಕುಳಿತುಕೊಂಡರು. ಮನೆ ತಲುಪುವ ವೇಳೆಗೆ ರಾತ್ರಿಯಾಗಿತ್ತು. ಬೇಗನೆ ಅನ್ನ ಸಾರು ಮಾಡಿ ಮಕ್ಕಳಿಗೆ ಊಟ ಕೊಟ್ಟು ತಾನೂ ಊಟ ಮಾಡಿ ಸುಮತಿ ಮಲಗಿದಳು. ನಂತರ ಮಾರನೇ ದಿನ ರೈಟರ್ ಅನುಮತಿ ಪಡೆದು ಮಕ್ಕಳ ಜೊತೆಗೆ ಸಕಲೇಶಪುರದ ತಾಲ್ಲೂಕು ಕಛೇರಿಗೆ ಹೊರಟಳು. ಮೂರನೇ ಮಗಳನ್ನು ಶಾಲೆಗೆ ಹೋಗುವಂತೆ ತಿಳಿಸಿ ಉಳಿದ ಇಬ್ಬರನ್ನು ಕರೆದುಕೊಂಡು ತಾಲ್ಲೂಕು ಕಛೇರಿಯ ಬಳಿಗೆ ಹೋದಳು. ಅದಾಗಲೇ ಹೇಳಿದ ಮಾತಿನಂತೆ ಅಳಿಯ ತಾಲ್ಲೂಕು ಕಛೇರಿಯ ಬಳಿ ಇವರನ್ನೇ ಕಾಯುತ್ತಿದ್ದನು. ಅಗತ್ಯಕ್ಕೆ ಬೇಕಾದ ಫಾರಂ ಪಡೆದು ವಿವರಗಳನ್ನು ತುಂಬಿಸಿ, ಸಹಿ ಪಡೆಯಲು ಕಾಯುತ್ತಿದ್ದರು. ಬಹಳ ಜನರು ಇದ್ದ ಕಾರಣ ಮಧ್ಯಾಹ್ನದ ನಂತರ ಬನ್ನಿ ಎಂದು ಅಲ್ಲಿನ ಗುಮಾಸ್ತರು ತಿಳಿಸಿದರು. ದೂರದ ಮನೆಗೆ ಹಿಂದಿರುಗಲು ಸಾಧ್ಯವಾಗದ ಕಾರಣ ಅಲ್ಲಿಯೇ ಹತ್ತಿರದ ಹೋಟೆಲ್ನಲ್ಲಿ ಊಟ ಮಾಡಿ ನಂತರ ತಾಲ್ಲೂಕು ಕಛೇರಿಯ ಬಳಿಗೆ ಬಂದರು. ಸಂಜೆಯ ವೇಳೆಗೆ ಸುಮತಿ ಕೊಟ್ಟ ಫಾರಂ ಅನ್ನು ಪರಿಶೀಲಿಸಿ ಸಹಿ ಹಾಕಿ ಕೊಟ್ಟರು. ಮಾರನೇ ದಿನ ಮನೆಯಿಂದ 60 ಕಿ.ಮೀ ದೂರದಲ್ಲಿ ಇರುವ ನವೋದಯ ಶಾಲೆಗೆ ಹೋಗೋಣ ಎಂದು ಅಳಿಯ ತಿಳಿಸಿದನು. ಆ ವೇಳೆಗೆ ಮೂರನೇ ಮಗಳು ಶಾಲೆ ಮುಗಿಸಿ ತಾಲ್ಲೂಕು ಕಛೇರಿಯ ಬಳಿಗೆ ಬಂದಳು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಅಳಿಯ ಮನೆಯ ಕಡೆ ನಡೆದನು. 

ಅಂದು ರಾತ್ರಿ ಅಲ್ಲಿಯೇ ಇದ್ದು, ಮಾರನೇ ದಿನ ಬೆಳಗ್ಗೆ ಸುಮತಿ, ಅಳಿಯ, ಎರಡನೇ ಮಗಳು ಹಾಗೂ ಕೊನೆಯ ಮಗಳು ನವೋದಯ ಶಾಲೆಯ ಕಡೆಗೆ ಪಯಣ ಬೆಳೆಸಿದರು. ಮೂರನೇ ಮಗಳು ಶಾಲೆಯ ಕಡೆಗೆ ಹೊರಟಳು. ಅದು ಮಳೆಗಾಲವಾದ್ದರಿಂದ ಬಹಳ ಚಳಿ ಇತ್ತು, ಮಳೆಯೂ ಸುರಿಯುತ್ತಿತ್ತು. ಕೈಯಲ್ಲಿ ಛತ್ರಿ ಹಿಡಿದುಕೊಂಡಿದ್ದರೂ ಮಳೆಯಲ್ಲಿ ನೆನೆಯುತ್ತಿದ್ದರು. ಹಾಸನದವರೆಗೂ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು. ನಂತರ ಅಲ್ಲಿಂದ ಮೈಸೂರಿನ ಕಡೆಗೆ ಹೋಗುವ ಬಸ್ಸಿನಲ್ಲಿ ಪ್ರಯಾಣ ಮುಂದುವರಿಸಿದರು. ಸ್ವಲ್ಪ ಹೊತ್ತಿನ ಪ್ರಯಾಣದ ನಂತರ …..”ನವೋದಯ ಶಾಲೆಯ ಹತ್ತಿರ ಇಳಿಯುವವರೆಲ್ಲಾ ಬೇಗ ಬನ್ನಿ…. ಇಲ್ಲೇ ಇಳಿದುಕೊಳ್ಳಿ”…. ಎಂದು ಕಂಡಕ್ಟರ್ ಹೋಗಿ ಕರೆದರು. ಸುಮತಿ, ಅಳಿಯ ಹಾಗೂ ಮಕ್ಕಳು ಬಸ್ಸಿನಿಂದ ಇಳಿಯುವಾಗ ಅವರ ಸಂಗಡ ಇನ್ನೂ ಕೆಲವರು ಅಲ್ಲಿ ಇಳಿದುಕೊಂಡರು. ಅವರೆಲ್ಲರೂ ತಮ್ಮ ಮಕ್ಕಳೊಂದಿಗೆ ನವೋದಯ ಶಾಲೆಯ ಕಡೆಗೆ ತೆರಳುವವರಿದ್ದರು. ಕಾಲ್ನಡಿಗೆಯಲ್ಲಿ ಸ್ವಲ್ಪ ದೂರ ಕ್ರಮಿಸಿದ ನಂತರ ನವೋದಯ ಶಾಲೆಯನ್ನು ತಲುಪಿದರು. ಅಲ್ಲಿ ತಲುಪಿದಾಗ ಶಾಲೆಯ ಪ್ರಾಂಶುಪಾಲರು ಅವರನ್ನೆಲ್ಲ ಸ್ವಾಗತಿಸಿ, ಅಲ್ಲಿನ ದೊಡ್ಡದಾದ ಒಂದು ಕೊಠಡಿಯಲ್ಲಿ ಮಕ್ಕಳೊಂದಿಗೆ ಪೋಷಕರು ಬಂದು ಕುಳಿತುಕೊಳ್ಳುವಂತೆ ಸೂಚಿಸಿದರು. ನಂತರ ಒಬ್ಬೊಬ್ಬರ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಿ ಮುದ್ರೆ ಒತ್ತಿ, ಇನ್ನೊಂದು ವಾರದ ಒಳಗಾಗಿ ಎಲ್ಲರೂ ಅವರವರ ಮಕ್ಕಳನ್ನು ಕರೆದುಕೊಂಡು ಬಂದು ನವೋದಯ ಶಾಲೆಯಲ್ಲಿ ದಾಖಲು ಮಾಡಬೇಕಾಗಿ ತಿಳಿಸಿದರು. ಜೊತೆಗೆ ಶಾಲೆಯ ನಿಯಮಗಳನ್ನು ತಿಳಿಸಿದರು. ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುಗಳನ್ನು ಜೊತೆಗೆ ಕೊಟ್ಟು ಕಳುಹಿಸಲು ತಿಳಿಸಿದರು. ಶಾಲೆಯ ಸಮವಸ್ತ್ರ, ಪುಸ್ತಕ ಹಾಗೂ ಅವರಿಗೆ ಉಳಿದುಕೊಳ್ಳಲು ವಸತಿ, ಊಟ, ಜೊತೆಗೆ ಇತರೆ ಎಲ್ಲಾ ಸೌಕರ್ಯಗಳೂ ನವೋದಯ ಶಾಲೆಯಲ್ಲಿ ಇರುವುದಾಗಿ ಅಲ್ಲಿನ ಸೆಕ್ರೆಟರಿ ಹೇಳಿದರು. 

ಅಪರೂಪಕ್ಕೊಮ್ಮೆ ರಜಾ ದಿನಗಳಲ್ಲಿ ಮಾತ್ರ ಪೋಷಕರು ಬಂದು ಮಕ್ಕಳನ್ನು ಭೇಟಿ ಮಾಡಬಹುದು ಎಂದರು. ಆದರೆ ಆಗಾಗ ಬಂದು ಭೇಟಿ ಮಾಡುವುದರಿಂದ ಮಕ್ಕಳಿಗೆ ಮನೆಯ ಕಡೆಗೆ ಗಮನ ಹೋಗುವುದು ಹಾಗಾಗಿ ಅಪರೂಪಕ್ಕೊಮ್ಮೆ ಬಂದು ತಮ್ಮ ಮಕ್ಕಳನ್ನು ಭೇಟಿ ಮಾಡಲು ತಿಳಿಸಿದರು. ಶಾಲೆಯನ್ನು ಮತ್ತು ಪರಿಸರವನ್ನು ಗಮನಿಸಿದಾಗ ಮಕ್ಕಳಿಗೆ ಬೇಕಾದ ಎಲ್ಲ ಸೌಕರ್ಯಗಳು ಇರುವುದನ್ನು ಅರಿತ ಪೋಷಕರು ಸಂತಸ ಗೊಂಡರು. ಅತ್ಯುತ್ತಮ ಗುಣಮಟ್ಟದ ಶಿಕ್ಷಕ ವೃಂದವು ಮಕ್ಕಳಿಗೆ ಪಾಠ ಪ್ರವಚನವನ್ನು ಮಾಡಲು ನೇಮಕರಾಗಿದ್ದರು. ಆ ಶಾಲೆಯಲ್ಲಿನ ಸೆಕ್ರೆಟರಿ ಕೇರಳದವರಾಗಿದ್ದರು. ಹಾಗಾಗಿ ಸುಮತಿಯ ಕುಟುಂಬದವರೊಂದಿಗೆ ಬಹಳ ಆತ್ಮೀಯವಾಗಿ ನಡೆದುಕೊಂಡರು. ಸುಮತಿಯ ಕುಟುಂಬದ ಪರಿಸ್ಥಿತಿಯ ಬಗ್ಗೆ ಕುಲಂಕುಶವಾಗಿ ತಿಳಿದುಕೊಂಡರು. ಸುಮತಿಯ ಸ್ಥಿತಿಯನ್ನು ಕಂಡು ಅವರಿಗೆ ಅಯ್ಯೋ ಪಾಪ!! ಎನಿಸಿತು. ಆದಷ್ಟು ಬೇಗ ನವೋದಯ ಶಾಲೆಗೆ ಮಗಳನ್ನು ಕರೆದುಕೊಂಡು ಬಂದು ದಾಖಲು ಮಾಡುವಂತೆ ತಿಳಿಸಿದರು. ಅಲ್ಲಿಂದ ಸಕಲೇಶಪುರದ ಕಡೆಗೆ ಹೊರಟ ಸುಮತಿ ಮತ್ತು ಮಕ್ಕಳು ಸಕಲೇಶಪುರದ ನಿಲ್ದಾಣ ತಲುಪುವಾಗ ಸಂಜೆಯಾಗಿತ್ತು. ಶಾಲೆಗೆ ಹೋಗಿದ್ದ ಮಗಳು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಅಳಿಯನಿಗೆ ವಿದಾಯ ಹೇಳಿ, ತಮ್ಮ ಊರಿನ ಕಡೆಗೆ ಹೊರಟಿದ್ದ ಬಸ್ಸಿನಲ್ಲಿ ನಾಲ್ವರೂ ಹೊರಟರು. ಮನೆ ತಲುಪಿದ ನಂತರ ಮಗಳಿಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ಹೊಸದಾಗಿ ಖರೀದಿ ಮಾಡಿದ ಒಂದು ಪೆಟ್ಟಿಗೆಯಲ್ಲಿ ಇಟ್ಟಳು. ಇಷ್ಟು ಕಾಲ ಅಮ್ಮನ ಜೊತೆ ಅವಳ ಅಕ್ಕರೆ ಆರೈಕೆಯಲ್ಲಿ ಬೆಳೆದಿದ್ದ ಮಗಳಿಗೆ ಈಗ ಅಮ್ಮನನ್ನು ತೊರೆಯಲು ಬಹಳ ಸಂಕಟವಾಯಿತು. ಸುಮತಿಗೂ ಬಹಳ ನೋವಿತ್ತು 

ಆದರೂ ತನ್ನ ಮಗಳ ಮುಂದಿನ ಉತ್ತಮ ಭವಿಷ್ಯವನ್ನು ನೆನೆದು, ನಾವು ಆಗಾಗ ಬಂದು ನಿನ್ನನ್ನು ಭೇಟಿ ಮಾಡುತ್ತೇವೆ ಎಂದು ಸಮಾಧಾನ ಪಡಿಸಿದಳು. ಕೊನೆಯ ಮಗಳು ನವೋದಯ ಶಾಲೆಗೆ ಹೊರಡುವ ಹಿಂದಿನ ದಿನವೇ ಅಳಿಯ ತಿಳಿಸಿದಂತೆ ಅವರ ಮನೆಗೆ ಹೋದರು. 

ಬೆಳಗ್ಗೆ ಬೇಗನೆ ಎದ್ದು ಎಲ್ಲರೂ ತಯಾರಾಗಿ ನವೋದಯ ಶಾಲೆಯ ಕಡೆಗೆ ಪ್ರಯಾಣ ಬೆಳೆಸಿದರು. ಮೊಮ್ಮಗ ಇನ್ನೂ ಚಿಕ್ಕವನು ಹಾಗೂ ಹಿರಿಯ ಮಗಳು ಗರ್ಭಿಣಿ ಹಾಗಾಗಿ ಅವರನ್ನು ಮನೆಯಲ್ಲೇ ಇರುವಂತೆ ತಿಳಿಸಿ, ಅಳಿಯ ಅತ್ತೆ ನಾದಿನಿಯರ ಜೊತೆಗೆ ಹೊರಟನು. ನವೋದಯ ಶಾಲೆಯನ್ನು ತಲುಪಿದ ನಂತರ ಮೊದಲು ಅಲ್ಲಿನ ಸೆಕ್ರೆಟರಿಯವರನ್ನು ಭೇಟಿ ಮಾಡಿದರು. ಅವರೊಂದಿಗೆ ಮಾತನಾಡಿ, ಮಗಳ ಬಗ್ಗೆ ಸ್ವಲ್ಪ ಗಮನಹರಿಸಲು ತಿಳಿಸಿದರು. ಆಗ ಸೆಕ್ರೆಟರಿ ನಗುತ್ತಾ….. ” ಚಿಂತಿಸಬೇಡಿ….ಇಲ್ಲಿನ ಪ್ರತಿಯೊಬ್ಬರೂ ನಮ್ಮ ಮಕ್ಕಳಂತೆಯೇ, ಇಲ್ಲಿರುವ ಶಿಕ್ಷಕರು ಕೂಡ ಎಲ್ಲರೂ ಹೊರಗಿನಿಂದ ಬಂದವರೇ, ಯಾರೂ ಇಲ್ಲಿಂದ ಅವರವರ ಮನೆಗಳಿಗೆ ಹೋಗುವುದಿಲ್ಲ. ಮಧ್ಯವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯ ನಂತರ ದೊರೆಯುವ ರಜಾ ದಿನಗಳಲ್ಲಿ ಮಾತ್ರ ಎಲ್ಲರೂ ಇಲ್ಲಿಂದ ಅವರವರ ಮನೆಗಳಿಗೆ ತೆರಳುತ್ತಾರೆ….. ಇಲ್ಲಿ ಎಲ್ಲಾ ಶಿಕ್ಷಕರು ಮಕ್ಕಳನ್ನು ಅವರ ಮಕ್ಕಳಂತೆ ಕಾಣುತ್ತಾರೆ… ನೀವು ಚಿಂತೆಪಡಬೇಡಿ…. ಅಪರೂಪಕ್ಕೊಮ್ಮೆ ಬಂದು ನಿಮ್ಮ ಮಗಳನ್ನು ಭೇಟಿ ಮಾಡಿ ಸ್ವಲ್ಪ ಹೊತ್ತು ಅವಳ ಜೊತೆಗೆ ಇಲ್ಲಿ ಕಾಲ ಕಳೆಯಬಹುದು”…. ಎಂದು ಹೇಳುತ್ತಾ ಒಬ್ಬ ಶಿಕ್ಷಕರನ್ನು ಕರೆದು ಈ ಮಗುವನ್ನು ಹೊಸದಾಗಿ ಸೇರ್ಪಡೆಯಾದ ಎಲ್ಲ ಮಕ್ಕಳು ಕುಳಿತಿರುವ ಕೊಠಡಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಭಾರವಾದ ಮನಸ್ಸಿನಿಂದ ಅಳಿಯನೊಂದಿಗೆ ಸುಮತಿ ಹಾಗೂ ಅವಳ ಅಕ್ಕಂದಿರು ಮನೆಯ ಕಡೆಗೆ ಹೊರಟರು. 


About The Author

Leave a Reply

You cannot copy content of this page

Scroll to Top