ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಮೊದಲೇ ಹೇಳಿದಂತೆ ಮೂಲೆಯ ಮನೆ ಆ ಕಡೆ ಈ ಕಡೆ ಎರಡು ಕಡೆ ರಸ್ತೆ ಓನರ್ ಶ್ರೀಕಂಠರಾಯರ ಅಣ್ಣ ತಮ್ಮಂದಿರು ಅಕ್ಕಪಕ್ಕದಲ್ಲಿ ಒಟ್ಟಿನಲ್ಲಿ ಆ ಕಾರ್ನರ್ ಪೂರ್ತಿ ಅವರದೇ ಆಸ್ತಿ ನಮ್ಮ ಮನೆ ಮೂರು ಮೆಟ್ಟಿಲುಗಳ ಮೇಲೆ ಇದ್ದಿದ್ದು ಬಾಗಿಲು ತೆಗೆದ ತಕ್ಷಣ ಒಂದು ಹಾಲ್ ಅದರ ಎಡಗಡೆ ಒಂದು ಪುಟ್ಟ ರೂಂ ಎದುರುಗಡೆ ಅಡುಗೆ ಮನೆಗೆ ಪ್ರವೇಶ ಅದಕ್ಕೆ ಬಾಗಿಲು ಇರಲಿಲ್ಲ ಪ್ರವೇಶ ದ್ವಾರದ ಎದುರುಗಡೆಯೇ ರುಬ್ಬುವ ಕಲ್ಲು. ಕೆಳಗೆ ಕೂತು ರುಬ್ಬಬೇಕಿತ್ತು. ಅಲ್ಲಿ ನಿಂತು ಅಡುಗೆ ಮಾಡಲು ಕಟ್ಟೆ ಇರಲಿಲ್ಲ ಆದರೆ ಒಂದು ದೊಡ್ಡ ಮೇಜನ್ನು ಗೋಡೆಯ ಪಕ್ಕ ಹಾಕಿದ್ದರು ಅದರ ಮೇಲೆ ಸ್ಟವ್ ಇಟ್ಟುಕೊಂಡು ಪಕ್ಕದಲ್ಲಿ ಸ್ವಲ್ಪ ಸಾಮಾನು ಹಾಗೂ ಮೇಜಿನ ಕೆಳಗೆ ಸ್ವಲ್ಪ ಸಾಮಾನುಗಳನ್ನು ಇಟ್ಟುಕೊಂಡಿದ್ದು ದೇವರನ್ನು ಇಡಲು ಗೋಡೆಯ ಒಳಗೆ ಮಾಡಿದ ಒಂದು ಸಣ್ಣ ಕಪಾಟು ಅಲ್ಲಿ ಒಂದು ಫೋಟೋ ಇಟ್ಟುಕೊಂಡು ದೀಪ ಮತ್ತು ಊದುಕಡ್ಡಿ ಹಚ್ಚಿಸುತ್ತಿದ್ದೆ.

ನಾವು ಮೈಸೂರಿನಲ್ಲಿ ಬೇರೆ ಮನೆ ಅಂತ ಮಾಡಿರದಿದ್ದಿದರಿಂದ ಏನೂ ಸಾಮಾನುಗಳು ಇರಲಿಲ್ಲ. ಅಮ್ಮ ಒಂದಷ್ಟು ಸ್ಟೀಲ್ ಪಾತ್ರೆಗಳು ತಟ್ಟೆ ಲೋಟ ಅವುಗಳನ್ನೆಲ್ಲ ಕಳುಹಿಸಿದ್ದರು .ಒಂದು ಹತ್ತು ಲೀಟರ್ ನ ಕುಕ್ಕರ್ ಹಾಗೂ ಪಂಪ್ ಸ್ಟವ್   ಮತ್ತು ಹಾಸಿಗೆ ಬೆಡ್ ಶೀಟ್ ಅವುಗಳನ್ನು ಅಲ್ಲಿಯೇ ಕೊಂಡುಕೊಂಡೆವು ಮತ್ತೆ ಒಂದು ವರ್ಷಕ್ಕೆ ವರ್ಗಾವಣೆ ಸಿಕ್ಕುತ್ತದೆ ಎಂದು ಹೇಳಿದ್ದರಿಂದ ಹೆಚ್ಚಿನ ಸಾಮಾನುಗಳು ಬೇಡ ಎಂದು ನಿರ್ಧರಿಸಿ ಕೊಂಡಿದ್ದೆವು.

ಹಾಲ್ನಲ್ಲಿ ಓನರ್ ಮನೆಯದೇ ಎರಡು ಬೆಂಚ್ ಗಳನ್ನು ಹಾಕಿದ್ದರು ಕೂರುವ ವ್ಯವಸ್ಥೆಗೆ ಅದೇ ಸಾಕಾಗಿತ್ತು. ಅಡುಗೆ ಮನೆಯ ದೊಡ್ಡ ಮೇಜು ಇತ್ತು. ಬಚ್ಚಲು ಮನೆಯಲ್ಲಿ ಸೌದೆ ಇಡಲು ಸಾಕಷ್ಟು ವ್ಯವಸ್ಥೆ ಮಾಡಿದ್ದು ಹಂಡೆ ಸೌದೆ ಒಲೆ ಇತ್ತು. ಅಡುಗೆ ಮನೆಯಲ್ಲಿ ಸಿಂಕ್ ಸಹ ಇರಲಿಲ್ಲ ಬಚ್ಚಲು ಮನೆಯಲ್ಲಿಯೇ ಪಾತ್ರೆಗಳನ್ನು ತೊಳೆದುಕೊಳ್ಳಬೇಕು. ಸಣ್ಣ ಪುಟ್ಟ ಬಟ್ಟೆಗಳನ್ನು ಬಚ್ಚಲು ಮನೆಯಲ್ಲಿಯೇ ಒಗೆದುಕೊಳ್ಳಬಹುದಿತ್ತು.ದೊಡ್ಡ ಬೆಡ್ ಶೀಟ್ ಮುಂತಾದುವುಗಳನ್ನು ಓನರ್ ಮನೆಯ ಹಿತ್ತಲಿನ ಒಗೆಯುವ ಕಲ್ಲಿನಲ್ಲಿ ಒಗೆದುಕೊಳ್ಳಬೇಕಿತ್ತು.  ರೂಮ್ ಸಹ ತುಂಬಾ ಚಿಕ್ಕದಾಗಿದ್ದು ಮಲಗಲು ಜಾಗ ಸಾಲುತ್ತಿರಲಿಲ್ಲ ಸೂಟ್ಕೇಸ್ ಹಾಸಿಗೆಗಳು ಬಟ್ಟೆಗಳನ್ನು ಇಟ್ಟುಕೊಳ್ಳಲು ಸ್ಟೋರ್ ರೂಮ್ ತರಹ ಉಪಯೋಗಿಸಬೇಕಿತ್ತು. ಹಾಲ್ನಲ್ಲಿಯೇ ಮಲಗಬೇಕಿತ್ತು. ಸೀಲಿಂಗ್ ಫ್ಯಾನ್ ವ್ಯವಸ್ಥೆ ಇಲ್ಲದಿದ್ದದರಿಂದ ಆ ಚಿಕ್ಕಬಳ್ಳಾಪುರದ ಹವಾಮಾನಕ್ಕೆ ಒಂದು ಟೇಬಲ್ ಫ್ಯಾನ್ ಕೊಳ್ಳಲೇ ಬೇಕಾಯಿ‌ತು.  

ಅಷ್ಟು ಅಗತ್ಯಕ್ಕೆ ಬೇಕಾದಷ್ಟು ಮಾತ್ರ ವಸ್ತುಗಳನ್ನು ಇಟ್ಟುಕೊಂಡಿರುವ ಎಷ್ಟು ಚೆನ್ನಾಗಿ ಮ್ಯಾನೇಜ್ ಮಾಡಿದೆವಲ್ಲ ಎನಿಸುತ್ತದೆ .ಈಗ ಮನೆ ತುಂಬಾ ತುಂಬಿದ ಸಾಮಾನುಗಳು ಎಲ್ಲವನ್ನು ಕ್ಲೀನ್ ಮಾಡುವಾಗ ಆ ದಿನಗಳ ನೆನಪಾಗುತ್ತದೆ ಅಷ್ಟೇ ಸಾಮಾನುಗಳನ್ನು ಈಗಲೂ ಇಟ್ಟುಕೊಂಡಿದಿದ್ದರೆ ಕೆಲಸ ಎಷ್ಟು ಸುಲಭವಾಗಿತ್ತು ಅಲ್ಲವಾ ಎಂಬ ಯೋಚನೆ ಬರುತ್ತದೆ ನಿಜಕ್ಕೂ ಕೊಳ್ಳುಬಾಕತನದಿಂದ ನಮ್ಮ ಕಷ್ಟಗಳನ್ನು ನಾವೇ ಹೆಚ್ಚು ಮಾಡಿಕೊಳ್ಳುತ್ತಿದ್ದೇವಲ್ಲ ! ಆಗ ಒಂದು ಸೂಟ್ಕೇಸ್ ಅಷ್ಟೇ ಸೀರೆಗಳು ಮತ್ತೊಂದು ಸೂಟ್ಕೇಸ್ ನಲ್ಲಿ ಬೇರೆ ಬಟ್ಟೆಗಳು .  ಈಗ ಮೂರು ನಾಲ್ಕು ಬೀರುಗಳಿಂದ ವಾರ್ಡ್ರೋಬ್ಗಳಿಂದ ತುಂಬಿದ್ದರೂ ಮತ್ತೂ ಕೊಳ್ಳುವ ಆಸೆ ಮಾತ್ರ ಮುಗಿದಿಲ್ಲ. ಮನೆಯ ಸಾಮಾನುಗಳು ಅಷ್ಟೇ…..

ಅಂದು ಸೋಮವಾರ ಮೊದಲ ದಿನ ಆಫೀಸಿನಿಂದ ಬಂದ ನಂತರ ಚಿಕ್ಕಮ್ಮನ ಮನೆಯಲ್ಲಿ ರಾತ್ರಿ ಊಟ ಹಾಗೂ ಒಬ್ಬಳೇ ಹೋಗುವುದು ಬೇಡ ಎಂದು ಅಲ್ಲೇ ಮಲಗಿದ್ದು ಮಂಗಳವಾರದಿಂದ ಆರಂಭಿಸೋಣ ಎಂದುಕೊಂಡರೆ ಬುಧವಾರದಿಂದ ಆರಂಭಿಸಿದರೆ ಆಯಿತು ಎಂದರು ಸರಿ ಅಂದು ನನ್ನ ಪಾಕಶಾಲೆ ಆರಂಭವಾಗಲಿಲ್ಲ .ಬುಧವಾರ ಬೆಳಿಗ್ಗೆ ಹಾಲುಕ್ಕಿಸಿ ಚಿಕ್ಕಮ್ಮ ಹಾಗೂ ಇನ್ನೊಂದು ಇಬ್ಬರಿಗೆ ಅರಿಶಿನ ಕುಂಕುಮ ಕೊಟ್ಟು ದೇವರ ದೀಪ ಹಚ್ಚಿ ನನ್ನ ಪಾಕವನ್ನು ಉಪ್ಪಿಟ್ಟಿನ ಮುಖಾಂತರ ಆರಂಭಿಸಿದೆ. ಎಷ್ಟಾದರೂ ಉಪ್ಪಿಟ್ಟು ನನ್ನ ಪ್ರೀತಿ ಪಾತ್ರ, ನಮ್ಮ ಮನೆ ದೇವರು ತಾನೇ? ಬೆಳಿಗ್ಗೆ ತಿಂಡಿ ಮಾಡಿದರೆ ಮಧ್ಯಾಹ್ನಕ್ಕೂ ಅದನ್ನೇ ತೆಗೆದುಕೊಂಡು ಹೋಗಿ ರಾತ್ರಿಗೆ ಅನ್ನ ಮಾಡಿಕೊಳ್ಳುವುದು ಹೇಗಿದ್ದರೂ ಅಮ್ಮ ಸಾರಿನ ಪುಡಿ ಹುಳಿ ಪುಡಿ ವಾಂಗಿಬಾತ್ ಪುಡಿ ಅನ್ನದ ಪುಡಿ ಚಟ್ನಿಪುಡಿ ಕಜ್ಜಿನ ಪುಡಿ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ಕಳುಹಿಸಿಕೊಟ್ಟಿದ್ದರು ಇಲ್ಲ ಬೆಳಿಗ್ಗೆ ಅಡುಗೆ ಮಾಡಿದರೆ ಮಧ್ಯಾಹ್ನಕ್ಕೂ ಅದನ್ನೇ ತೆಗೆದುಕೊಂಡು ಹೋಗಿ ರಾತ್ರಿಗೆ ಬಂದು ಏನಾದರೂ ತಿಂಡಿ ಮಾಡುತ್ತಿದ್ದುದು.
ಶನಿವಾರ ಮಧ್ಯಾಹ್ನ ಬಂದು ದೋಸೆಗೆ ರುಬ್ಬಿದರೆ ಭಾನುವಾರ ಇಡೀ ದೋಸೆ ಸಮಾರಾಧನೆಯೇ. ಬೆಳಿಗ್ಗೆ ಚಟ್ನಿ ರುಬ್ಬಿ ಗಟ್ಟಿ ಚಟ್ನಿ ಆಗುತ್ತಿತ್ತು .ಚಿಕ್ಕಬಳ್ಳಾಪುರದಲ್ಲಿ ಆಲೂಗೆಡ್ಡೆ ತುಂಬಾ ಬೆಳೆಯುತ್ತಾರೆ ಹಾಗಾಗಿ ಸದಾ ಆಲೂಗಡ್ಡೆ ಮನೆಯಲ್ಲಿ ಇದ್ದೇ ಇರುತ್ತಿತ್ತು ದೋಸೆ ಮಾಡಿದಾಗಲೆಲ್ಲ ಆಲೂಗಡ್ಡೆ ಈರುಳ್ಳಿ ಪಲ್ಯ ಮಾಡಿಯೇ ಮಾಡಿರುತ್ತಿದ್ದೆ.

ನಮ್ಮ ಅಜ್ಜಿಯ ತಂದೆ ಅದೇ ಊರಿನವರು ಅವರು ಹೋಟೆಲ್ ಇಟ್ಟಿದ್ದುದರಿಂದ ಹೋಟೆಲ್ ವಾಸು ಎಂದೇ ಪರಿಚಿತರು ತೀರಾ ಹಳೆಯ ತಲೆಗಳಿಗೆ ಅವರು ಪರಿಚಯವಿತ್ತು ಬೇರೆಯವರಿಗೆ ಕೇಳಿ ಗೊತ್ತಿತ್ತು ಹಾಗಾಗಿ ಅವರ ಮರಿಮಗಳಂತೆ ಎಂದು ಹೇಳಿ ಬಂದು ಕೆಲವರು ಮಾತನಾಡಿಸಿಕೊಂಡು ಹೋಗುತ್ತಿದ್ದರು ನಾವು ಇದ್ದದ್ದು ಕೋಟೆ ಎಂಬ ಏರಿಯಾದಲ್ಲಿ. ಅಲ್ಲಿ ಚಿಕ್ಕಮ್ಮ ಅವರು ತುಂಬಾ ಮುಂಚಿನಿಂದ ಇದ್ದಿದ್ದರಿಂದ ಎಲ್ಲರಿಗೂ ಪರಿಚಿತರು ಹೀಗಾಗಿ ಎಲ್ಲರೂ ತುಂಬಾ ಸ್ನೇಹದಿಂದ ಮಾತನಾಡಿಸುತ್ತಿದ್ದರು ಮನೆಗೆ ಕರೆಯುತ್ತಿದ್ದರು. ಹಬ್ಬ ಹರಿದಿನಗಳು ಬಂದರಂತೂ ನನಗೆ ಅಡುಗೆ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ ಒಬ್ಬರಲ್ಲ ಒಬ್ಬರ ಮನೆಗೆ ಆಹ್ವಾನ ಇಲ್ಲ ಅವರ ಮನೆಯಿಂದ ಡಬ್ಬಿ ಗಳಲ್ಲಿ ವಿಶೇಷ ತಿಂಡಿ ತಿನಿಸುಗಳು .ಸ್ವಭಾವತಹ ತಿಂಡಿಪೋತಳಾದ ನನಗೆ ನಾನು ಮಾಡಿಕೊಳ್ಳದಿದ್ದರೂ ಎಲ್ಲಾ ತರಹದ ತಿಂಡಿ ತಿನಿಸುಗಳು ಸಿಗುತ್ತಿತ್ತು .ಆ ವರ್ಷದ ಭೀಮನ ಅಮಾವಾಸ್ಯೆ ನಾಗರ ಪಂಚಮಿ ವರಮಹಾಲಕ್ಷ್ಮಿ ಎಲ್ಲವೂ ಹಾಗೆ ಪೂಜೆ ವ್ರತ ಚಿಕ್ಕಮನ ಮನೆಯಲ್ಲಿ ಮುಗಿಸಿರುತ್ತಿದ್ದೆ. ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಅಂತೂ ಒಂದು ದೊಡ್ಡ ಡಬ್ಬ ತಿಂಡಿ ಅವರಿವರ ಮನೆಯಿಂದ ಬಂದು ನನಗೆ ಒಂದು ವಾರದ ತನಕ ಮೆಲುಕಾಡಿಸಲು ಸಾಮಗ್ರಿ ಸಿಕ್ಕಿತ್ತು. ಚಿಕ್ಕಮ್ಮನಂತು ಸರಿಯೇ ಸರಿ ಅದರೊಂದಿಗೆ ಪಕ್ಕದ ಮನೆಯ ಸುಬ್ಬಲಕ್ಷ್ಮಮ್ಮ  ಅವರೂ ಅಷ್ಟೇ .ಮನೆಯಲ್ಲಿ ಏನೊಂದು ಹೆಚ್ಚುಗಟ್ಟಲೆ ಮಾಡಿದರೂ ನನಗೊಂದು ಪಾಲು ಇದ್ದೇ ಇರುತ್ತಿತ್ತು.

ಅಮ್ಮ ಅಪ್ಪನನ್ನು ಮೈಸೂರನ್ನು ಹಾಗೂ ಮದುವೆಯಾದಾಗಿನಿಂದ ರವೀಶ್ ಅವರನ್ನು ಬಿಟ್ಟು ದೂರ ಇದ್ದದ್ದು ಇದೇ ಮೊದಲು ಮೊದಲ ಮೂರು ತಿಂಗಳ ತರಬೇತಿ ಸಮಯದಲ್ಲಿ ಒಂದು ರಜೆ ಕೊಡುವುದಿಲ್ಲ ಆದ್ದರಿಂದ ಮೊದಲ ಮೂರು ತಿಂಗಳು ಮೈಸೂರಿಗೆ ಬರಲು ಆಗಲಿಲ್ಲ ಅಲ್ಲದೆ ಖರ್ಚು ಸಹ ಹೆಚ್ಚಾಗುತ್ತಿದ್ದರಿಂದ ಪದೇಪದೇ ಮೈಸೂರಿಗೆ ಬರಲು ಕಷ್ಟವಾಗುತ್ತಿತ್ತು .ಆದರೆ ಅಲ್ಲಿ ಮನೆಯ ಸುತ್ತಮುತ್ತ ಎಲ್ಲರ ಪ್ರೀತಿ ವಾತ್ಸಲ್ಯ ಹಾಗೂ ಕಚೇರಿಯಲ್ಲಿ ಎಲ್ಲರ ಸ್ನೇಹಮಯ ನಡುವಳಿಕೆಯಿಂದ ನಾನು ಒಂಟಿ ಎಂಬ ಭಾವನೆ ಬರದೆ ಬಹಳ ಖುಷಿಯಾಗಿಯೇ ಸಮಯ ಕಳೆಯುವಂತಾಗಿತ್ತು ಇಂತಹ ಸಹೋದ್ಯೋಗಿಗಳನ್ನು ಹಾಗೂ ನೆರೆಹೊರೆಯವರನ್ನು ಮತ್ತು ಎರಡನೇ ಅಮ್ಮನಂತಹ ಚಿಕ್ಕಮ್ಮನನ್ನು ನನಗೆ ಅಲ್ಲಿ ಕರುಣಿಸಿದ ಆ ದೇವರಿಗೆ ನಾನು ಕೃತಜ್ಞತೆ ಸಲ್ಲಿಸಲೇಬೇಕು.

ಸದಾಕಾಲ ನಲ್ಲಿ ನೀರು ಬರುತ್ತಲೇ ಇದ್ದ ಕಾವೇರಿ ತಟದ ಮೈಸೂರನ್ನು ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಹೋದಾಗ ನನಗೆ ನೀರಿನ ಬವಣೆಯ ಬಿಸಿ ತಟ್ಟಿದ್ದು ಅಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುತ್ತಿದ್ದು ಅದನ್ನು ಕುಡಿಯಲು ಅಡುಗೆಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕಿತ್ತು .ಬಚ್ಚಲುಮನೆಗೆ ಸಂಗ್ರಹಿಸಿಟ್ಟ ನೀರು ಸಾಲದಿದ್ದಲ್ಲಿ ಎದುರು ಮನೆಯಲ್ಲಿದ್ದ ದ್ದ ಭಾವಿಯಿಂದ ನೀರನ್ನು ಸೇದಿಕೊಳ್ಳಬೇಕಿತ್ತು. ವಠಾರದ ಮಧ್ಯೆ ಇದ್ದ ಆ ಬಾವಿಗೆ ರಾಟೆ ಹಾಗೂ ಹಗ್ಗವನ್ನು ಆಯಾ ಮನೆಯವರೇ ತೆಗೆದುಕೊಂಡು ಹೋಗಬೇಕಿತ್ತು. ನಮ್ಮ ಓನರ್ ಅವರ ಮನೆಯಲ್ಲಿ ರಾಟೆ ಹಾಗೂ ಹಗ್ಗ ಇತ್ತು ನಾನು ಅದನ್ನೇ ಉಪಯೋಗಿಸುತ್ತಿದ್ದೆ .ಸೇದುತ್ತಾ ಹೋದರೆ ನಮ್ಮ ಎತ್ತರದಷ್ಟೇ ಹಗ್ಗ ಬೀಳುವಷ್ಟು ಆಳದ ಬಾವಿ .ಅದು ಒಮ್ಮೆ ಒಂದು ಕೊಡ ಸೇದಲು ಐದು ನಿಮಿಷ ಬೇಕಾಗಿತ್ತು. ನೀರಿನ ಪ್ರಾಮುಖ್ಯತೆಯ ಅರಿವಾಗಿದ್ದೆ ನನಗೆ ಆಗ.  ಪಕ್ಕದ ಮನೆಯಲ್ಲಿದ್ದ ನಲ್ಲಿ ಇಂದ ತಂದು ನಮ್ಮ ಮನೆಗೆ ನೀರು ತುಂಬಿಕೊಳ್ಳಬೇಕಿತ್ತು .ಬಚ್ಚಲ ಹಂಡೆ ಒಂದು ಸಣ್ಣ ತೊಟ್ಟಿ ಅಲ್ಲದೆ ಕುಡಿಯಲು ಮತ್ತು ಅಡುಗೆಗೆ ಎರಡು ಮೂರು ದೊಡ್ಡ ಕೊಳದಪ್ಪಲೆಗಳು. ನೀರಿಗಾಗಿ ಅಷ್ಟು ಪರಿಶ್ರಮ ಪಟ್ಟಿದ್ದು ಅಲ್ಲೇ ಮೊದಲು ಮತ್ತು ಅಲ್ಲೇ ಕಡೆ. ಒಬ್ಬಳೇ ಇದ್ದಾಗ ಎರಡು ದಿನಕ್ಕೊಮ್ಮೆ ಬರುವ ನೀರು ಸಾಕಾಗುತ್ತಿತ್ತು ಆದರೆ ಯಾರೊಬ್ಬರು ಬಂದರೂ ನೀರು ಸೇದಲೇಬೇಕಿತ್ತು ಬಾವಿಯ ಭೇಟಿ ಆಗಲೇಬೇಕಿತ್ತು. ಮೈಸೂರಿಗೆ ಬರಬೇಕೆಂದರೆ ಖಾಲಿ ಕೊಳದಪ್ಪಲೆಗಳನ್ನು ಓನರ್ ಅವರ ಮನೆಯಲ್ಲಿ ಇಟ್ಟು ಬರುತ್ತಿದ್ದೆ .ತುಂಬಿಸಿ ಇಡುತ್ತಿದ್ದರು .ಬಿಂದಿಗೆಗಳಲ್ಲಿ ತಂದು ಉಪಯೋಗಿಸುತ್ತಿದ್ದು ಬಚ್ಚಲುಮನೆಗೆ ಮಾತ್ರ ನೀರು ಸೇದಿಕೊಳ್ಳಲೇ ಬೇಕಿತ್ತು

ಈ ಮಧ್ಯದಲ್ಲಿ ನಾನು ಈ ಮೊದಲೇ ಪರೀಕ್ಷೆ ಬರೆದಿದ್ದ ಜನರಲ್ ಇನ್ಸೂರೆನ್ಸ್ ನ ನ್ಯೂ ಇಂಡಿಯಾ ಅಸೂರೆನ್ಸ್ ಕಂಪನಿಯಲ್ಲಿ ಸಂದರ್ಶನದ ಕರೆ ಬಂತು. ಮೊದಲೇ ಹೇಳಿದಂತೆ ತರಬೇತಿಯ ಅವಧಿಯಲ್ಲಿ ರಜೆ ಸಿಗುವುದಿಲ್ಲ ಹಾಗೆ ಏನಾದರೂ ಹಾಜರಾತಿ ಇಲ್ಲದಿದ್ದಲ್ಲಿ ಅದನ್ನು ವೇತನ ರಹಿತ ರಜಾ ಎಂದು ಪರಿಗಣಿಸುತ್ತಾರೆ ಹಾಗೂ ಉದ್ಯೋಗದ ಕನ್ಫರ್ಮೇಶನ್ ತಡವಾಗುತ್ತದೆ ಹಾಗಾಗಿ ಕಾರ್ಮಿಕ ಸಂಘದವರು ಎಂದಿಗೂ ವೇತನ ರಹಿತ ರಜಾ ಮಾಡಿಕೊಳ್ಳಬೇಡಿ ಎಂದು ತಾಕೀತು ಮಾಡಿದ್ದರು. ಏನಪ್ಪಾ ಮಾಡುವುದು ಎನ್ನುವಾಗ ದೇವರಂತೆ ನಮ್ಮ ಉಪಶಾಖಾಧಿಕಾರಿಗಳು ಹಾಗೂ ಶಾಖಾಧಿಕಾರಿಗಳು ನನಗೆ ಸಂದರ್ಶನಕ್ಕೆ ಹೋಗಿ ಬರಲು ಅನಧಿಕೃತವಾಗಿ ಅನುಮೋದನೆ ನೀಡಿದರು. ನನಗೆ ಸಂದರ್ಶನ 10 ಗಂಟೆಗೆ ಇದ್ದುದು ಹಾಗಾಗಿ ಹಿಂದಿನ ದಿನವೇ ಬೆಂಗಳೂರಿಗೆ ಹೋಗಿ 10 ಗಂಟೆಗೆ ಸಂದರ್ಶನ ಮುಗಿಸಿ 10 ಮುಕ್ಕಾಲಿಗೆ ಬಸ್ಸು ಹತ್ತಿ ಕಚೇರಿಗೆ ವಾಪಸ್ ಆಗಿದ್ದೆ. ಸೋಮವಾರಪೇಟೆಗೆ ನೇಮಕಾತಿ ಪತ್ರ ಸಹ ಬಂದಿತ್ತು ಆದರೆ ಇನ್ನೂ ಕೆಲವೇ ದಿನಗಳಲ್ಲಿ ಜೀವವಿಮನಿಗಮದಲ್ಲೇ ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ತಿಳಿದಿದ್ದರಿಂದ ಸೋಮವಾರಪೇಟೆಗೆ ಹೋಗುವ ಅವಕಾಶವನ್ನು ನಿರಾಕರಿಸಿದೆ ಅದಕ್ಕಾಗಿ ನನಗೇನು ಇಂದಿನ ದಿನದವರೆಗೂ ಪಶ್ಚಾತಾಪ ಖಂಡಿತ ಇಲ್ಲ.

ಮತ್ತೊಂದು ಚಿಕ್ಕಬಳ್ಳಾಪುರ ಶಾಖೆಯ ವೈಶಿಷ್ಟ್ಯ ಎಂದರೆ ಶುಕ್ರವಾರದ ಲಕ್ಷ್ಮಿ ಪೂಜೆ ಬ್ರಿಟಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿ ಏನಾದರೂ ಪ್ರಸಾದವನ್ನು ಹಂಚುತ್ತಿದ್ದರು. ಒಮ್ಮೊಮ್ಮೆ ಒಬ್ಬೊಬ್ಬರು ಆ  ಪ್ರಸಾದ ವಿನಿಯೋಗದ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಿದ್ದರು. ಹೆಸರುಬೇಳೆ ಕೋಸಂಬರಿ, ಕಡಲೆಬೇಳೆ ಕೋಸಂಬರಿ ಬಾಳೆಹಣ್ಣಿನ ರಸಾಯನ ಹೆಸರುಕಾಳಿನ ಉಸಲಿ ಕಡಲೆಕಾಳು ಉಸಲಿ ಕಡಲೆ ಬೇಳೆ ಉಸಲಿ ಹುಳಿ ಅವಲಕ್ಕಿ ಮುಂತಾದ ಚರುಪುಗಳು. ಅಲ್ಲಿ ಸತ್ಯನಾರಾಯಣ ಎನ್ನುವ ಕ್ಲಾಸ್ ಫೋರ್ ಉದ್ಯೋಗಿ ಇದ್ದರು ಇನ್ನೇನು ನಿವೃತ್ತಿಯ ಅಂಚಿನಲ್ಲಿ ಇದ್ದವರು ಅವರು ಅಲ್ಲಿಯ ರಾಘವೇಂದ್ರ ಮಠದಲ್ಲಿನ ಸಹ ಅರ್ಚಕರು ಸಹ .ಅವರು ಈ ಪ್ರಸಾದದ ತಯಾರಿಕೆಯ ಮೇಲ್ವಿಚಾರಕರು. ಪ್ರತಿವಾರವೂ ಅವರ ಮನೆಯಿಂದಲೇ ಈ ಪ್ರಸಾದದ ತಯಾರಿಕೆ. “ಸಂಜೆಗೆ ಮನೆಗೆ ಹೋಗಿ ಒಬ್ಬಳೇ ಏನು ಮಾಡಿಕೊಳ್ಳುತ್ತೀಯ” ಎಂದು ಹೇಳಿ ನನ್ನ ಡಬ್ಬಿಯ ತುಂಬಾ ಪ್ರತ್ಯೇಕವಾಗಿ ಮತ್ತೆ ಪ್ರಸಾದ ತುಂಬಿಕೊಡುತ್ತಿದ್ದರು. ಆ ಪ್ರೀತಿ ವಿಶ್ವಾಸವನ್ನು ಇಂದಿಗೂ ನೆನೆಯುತ್ತೇನೆ ಅದೇಕೋ ನಂತರ ಬೇರೆ ಯಾವ ಶಾಖೆಯಲ್ಲಿಯೂ ಶುಕ್ರವಾರದ ಪೂಜೆಯ ಪದ್ಧತಿ ನೋಡಲಿಲ್ಲ. ಮೊದಲು ಮಾಡುತ್ತಿದ್ದರು ಈಗ ನಿಲ್ಲಿಸಿದ್ದಾರೆ ಎಂದೇ ಹೇಳುತ್ತಿದ್ದರು ಹಾಗೆಯೇ ಆಯುಧ ಪೂಜೆಯ ಸಮಯದಲ್ಲಿನ ಪೂಜೆಗಳು ಸಹ ಕ್ರಮೇಣ ನಿಂತೇ ಹೋದವು.

ನಮ್ಮ ಚಿಕ್ಕಮ್ಮನ ಮಕ್ಕಳು ರೂಪಾ ಮತ್ತು ನಾಗೇಶ ನಮ್ಮ ಮನೆಗೆ ಬಂದು ಹೋಗುತ್ತಲೇ ಇದ್ದರು. ಬೀದಿಯ ಎಲ್ಲರೂ ಎದುರಾದಾಗ ಮಾತಾಡಿಸುತ್ತಿದ್ದರು.ಒಳ್ಳೆಯ ಕಾರ್ಯಕ್ರಮವಿದ್ದಾಗ ಓನರ್ ಮನೆಯಲ್ಲಿ ಟಿವಿ ವೀಕ್ಷಣೆ.ಪುಟ್ಟ ಟ್ರಾನ್ಸಿಸ್ಟರ್ (ಬ್ಯಾಟರಿ ಮತ್ತು ವಿದ್ಯುತ್ ಎರಡರಿಂದ ಚಾಲಿತ) ಇವೆಲ್ಲವುಗಳಿಂದ ಬೇಸರವಂತೂ ಖಂಡಿತ ಆಗುತ್ತಿರಲಿಲ್ಲ ಜೊತೆಗೆ ನನ್ನ ಓದುವಿಕೆ ಇದ್ದೇ ಇತ್ತು. ಇದರ ಬಗ್ಗೆ ಮತ್ತೊಂದು ಅಂಕಣದಲ್ಲಿ ವಿಸ್ತಾರವಾಗಿ ಬರೆಯುವೆ.

ಓನರ್ ಸುಬ್ಬಲಕ್ಷ್ಮಮ್ಮ ಅವರ ಮನೆಯಲ್ಲಿ ಅವರ ಮಗಳು ಲೀಲಾ ಬಾಣಂತನಕ್ಕೆ ಬಂದಿದ್ದರು ಆ ಮಗುವನ್ನು ಆಟವಾಡಿಸುವುದರಲ್ಲಿ ಸಂಜೆಗಳು ತುಂಬಾ ಬೇಗ ಕಳೆದು ಹೋಗುತ್ತಿದ್ದವು ಲೀಲಾ ಸಹ ತುಂಬಾ ಒಳ್ಳೆಯ ಗೆಳತಿಯಾಗಿದ್ದಳು. ಎಷ್ಟು ಸಮಯದ ನಂತರ ನನಗೆ ತಿಳಿದಿದ್ದು ಸುಬ್ಬಲಕ್ಷ್ಮಮ್ಮ  ಅವರು ಲೀಲಾಳ ಮಲತಾಯಿ ಎಂದು.  ಆದರೆ ಅವರ ನಡವಳಿಕೆ ಅವರಿಬ್ಬರ ಒಡನಾಟ ಖಂಡಿತ ಹಾಗೆ ಹೇಳಲು ಬರುತ್ತಿರಲಿಲ್ಲ ಆ ವಿಷಯಕ್ಕೆ ತುಂಬಾ ಮೆಚ್ಚಲೇ ಬೇಕು.

ನಮ್ಮ ಮಾವನವರ ಕಸಿನ್ ಒಬ್ಬರು ಅಲ್ಲಿಯೇ ಹತ್ತಿರವಿದ್ದ ದೇವನಹಳ್ಳಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ನಾವು ಚಿಕ್ಕಬಳ್ಳಾಪುರಕ್ಕೆ ಬಂದಿರಿವ ವಿಷಯ ತಿಳಿದು ಬಂದು ಭೇಟಿಯಾದರು. ನಾವೂ ರವೀಶ್ ಬಂದಾಗಲೆಲ್ಲ ಅವರ ಮನೆಗೆ ಹೋಗುತ್ತಿದ್ದೆವು. ನಾವು ಸೀಮೆಯೆಣ್ಣೆಗೆ ಕಷ್ಟ ಪಡುತ್ತಿರುವ ವಿಷಯ ತಿಳಿದು ಅದಕ್ಕೆ ವ್ಯವಸ್ಥೆ ಮಾಡಿದರು. ಜೀಪ್ನಲ್ಲಿ ಆ ಕಡೆ ಬಂದಾಗಲೆಲ್ಲಾ ೨೦‌ಲೀ ಕ್ಯಾನ್ನಲ್ಲಿ ಸೀಮೆಯೆಣ್ಣೆ ತಂದುಕೊಡುತ್ತಿದ್ದರು. ನಾವು ಸಲ್ಲಿ ಇರುವ ವರೆಗೂ ತಾಪತ್ರಯವೇ ಆಗಲಿಲ್ಲ.‌ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲೇ ಬೇಕು.

ಹೀಗೇ ಮೂರು ತಿಂಗಳುಗಳು ಕಳೆದೇ ಹೋದವು. ಈ ಮಧ್ಯೆ ರವೀಶ್ ಅಣ್ಣ ಗೆಳತಿ ಶಶಿ ಸರ್ವಮಂಗಳಾ ಇವರೆಲ್ಲರ ಪತ್ರಗಳು ನಾನೂ ಅವರಿಗೆ ಉತ್ತರಿಸುವುದು ನಡೆದೇ ಇತ್ತು. ಕೆಲವು ಶನಿವಾರಗಳು ಅರ್ಧ ದಿನ ಆಫೀಸ್ ಮುಗಿಸಿ ಬೆಂಗಳೂರಿಗೆ ನಮ್ಮ‌ ದೊಡ್ಡಮ್ಮನ ಮನೆ ನಾದಿನಿ ಮನೆಗೆ ಹೋಗಿ ಸೋಮವಾರ ಬೆಳಗ್ಗೆ ಕಛೇರಿಯ ವೇಳೆಗೆ ಬರುತ್ತಿದ್ದೆ. ತರಬೇತಿ ಅವಧಿ ಮುಗಿದು ಸೆಪ್ಟೆಂಬರ್ ೧೨ಕ್ಕೆ ಪ್ರೊಬೇಷನ್ ಅವಧಿ ಆರಂಭವಾಯಿತು. ಆಗ ನಮಗೆ ಸರ್ವಿಸಿ ರೆಕಾರ್ಡ್ ನಂಬರ್ ಸಹ ಕೊಡುತ್ತಾರೆ. ಸಂಕ್ಷಿಪ್ತವಾಗಿ S.R.Number ಎನ್ನುವ ಇದು ಸೇವಾ ಅವಧಿಯಲ್ಲಿ ನಮಗೇ ಪ್ರತ್ಯೇಕವಾಗಿ ಇರುವ ಗುರುತಿನ ನಂಬರ್. Unique Identity Number.   ೬ ಅಂಕೆಗಳನ್ನೊಳಗೊಂಡಿರುವ ನನ್ನ ಎಸ್ಸಾರ್ ಸಂಖ್ಯೆ ೫೦೮೫೦೪.  ನಮ್ಮ ತಂಡದಲ್ಲಿ ನನ್ನದೇ ಮೊದಲ ಸಂಖ್ಯೆ.  ಆ ನಂತರದಲ್ಲಿ ತಿಳಿದದ್ದು ಅದನ್ನು ಮೆರಿಟ್ ಆಧಾರದಲ್ಲೇ ಕೊಟ್ಟಿರುವುದು ಎಂದು. ೧೯೮೭ ರಲ್ಲಿ ಇನ್ನೊಬ್ಬರನ್ನು ಹೆಚ್ಚಿಗೆ ತೆಗೆದುಕೊಂಡಿದ್ದರೂ ನನಗೆ ೨ ವರ್ಷಗಳ ಮುಂಚೆಯೇ ಕೆಲಸ ಸಿಕ್ಕಿರುತ್ತಿತ್ತು. ನನ್ನವರೆಗೂ ಬಂದು ನಿಂತುಹೋಯಿತಲ್ಲಾ ಅಂತ ಬೇಸರವಾಗಿದ್ದಂತೂ ನಿಜ.ಇನ್ನೂ ಮುಗಿದಿಲ್ಲ

ಮುಂದಿನವಾರ:ಮೊದಲ ಮೈಸೂರ ಭೇಟಿ.


About The Author

13 thoughts on “”

  1. ಅಚ್ವುಕಟ್ಟಾಗಿ ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು.

    ಸುಜಾತ ರವೀಶ್

  2. ಮಲೆನಾಡಿನಲ್ಲಿ ಇದ್ದ ನಾನು ಬರಗಾಲದ ಊರಿಗೆ ಮೊದಲ ಪೋಸ್ಟಿಂಗ್ ಆದಾಗ‌ ಇದೇ ರೀತಿಯ ಕಷ್ಟಗಳನ್ನು ಅನುಭವಿಸಿದ್ದೇನೆ

    1. ಬದುಕು ವಿಭಿನ್ನ ಅನುಭವಗಳಿಗೆ ಒಡ್ಡುತ್ತದೆ ಅಲ್ಲವಾ? ಓದಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.

      ಸುಜಾತಾ ರವೀಶ್.

  3. ನಿಮ್ಮ ಅನುಭವ ಬಹಳ ಚೆನ್ನಾಗಿ ಮೂಡಿ ಬಂದಿದೆ ಮೇಡಂ. ಅಭಿನಂದನೆಗಳು

    — ಇಂದುಮತಿ ಶ್ರೀನಿವಾಸ, ಮೈಸೂರು

    1. ಓದಿ ಸುಂದರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಇಂದುಮತಿ.

      ಸುಜಾತಾ ರವೀಶ್

    1. ಓದಿ ಪ್ರತಿಕ್ರಯಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು.

      ಸುಜಾತಾ ರವೀಶ್

  4. ವೈಯಕ್ತಿಕ ಅನುಭವಗಳನ್ನು ಬಹಳ ಸರಳವಾಗಿ ಮೂಡಿಸುತ್ತಾ ಸಂಕೀರ್ಣವಲ್ಲದ ಸಹಜ ಸಂಕಟವನ್ನು ಸಹ ತಿಳಿಯಾಗಿ ತಿಳಿಯುವಂತೆ ಅರುಹಿದ್ದೀರಿ. ಮೇಲ್ನೋಟಕ್ಕೆ ಈ ಸಂಕಟಗಳು ಬಹಳ ಮಾಮೂಲು ಅನ್ನಿಸಿಯೂ ಆ ಚಣಕ್ಕೆ ಅದರ ತೂಕ – ಭಾರ ಹೆಚ್ಚು. ಸೀಮೆ ಎಣ್ಣೆಯ ಕಷ್ಟ , ಅಲ್ಲಿಂದಿಲ್ಲಿಗೆ ಎಡತಾಕುವ ಒದ್ದಾಟಗಳು ಒಂದು ರೀತಿಯಲ್ಲಿ ಜಿರಳೆಗಳು ಸದಾ ಮೈಮೇಲೆ ಹರಿದಾಡಿದಂತೆ.ಆದರೆ ಇವು ದೊಡ್ಡದಲ್ಲ,ಹಾಗೆಂದು ಸಾರಾಸಗಟಾಗಿ ಅಸಹನೀಯತೆಯನ್ನು ಇಲ್ಲ ಅನ್ನಲೂ ಆಗದ dilemma ಮತ್ತು ತಾಟಸ್ಥ್ಯಗಳ ದ್ವಂದ್ವ- Inertia ದಿಂದ static – dynamic ಎರಡೂ ಆಗದ ಆ ಸಣ್ಣ ಸಣ್ಣ ತಾಪತ್ರಯಗಳು ಈಗಿನ ಅದರ ಮೆಲುಕು ಹೃದಯಕ್ಕೆ ಬಿಸುಪಿನ ಪಲುಕು.ಇವುಗಳ ಜೊತೆಗೆ ವೃತ್ತಿಪರ ಜಾಡಿನ ವೃತ್ತಗಳ ಸರಹದ್ದು ದಾಟುವ ಪ್ರಯತ್ನದ ಅನಿವಾರ್ಯ ಸೀಮೋಲ್ಲಂಘನ ಹದವಾಗಿ ಹೃದ್ಯವಾಗಿ ಹರಳುಗಟ್ಟಿದೆ.ಅನಂತಯಾನದ ಸ್ವಾದುಫಲಗಳ ಹೃದಯಸ್ಥ ಅನುಭವಗಳು ನಾಭಿ ಹೃತ್ಕಂಠ ರಸನಾಭಿವ್ಯಕ್ತಿಯೇ ಆಗಿದೆ.

  5. ವಾವ್! ನಿಮ್ಮ ಪ್ರತಿಕ್ರಿಯೆಯ ನುಡಿಗಳೇ ಒಂದು ಸುಂದರ ಗದ್ಯ ಕಾವ್ಯ. ನಿಮ್ಮ‌ಸಹೃದಯೀ ಸವಿ ಸ್ಪಂದನೆಗೆ ನಾನು ಸದಾ ಆಭಾರಿ. ಹೃತ್ಪೂರ್ವಕ ಧನ್ಯವಾದಗಳು.

    ಸುಜಾತಾ ರವೀಶ್

  6. ಮೆರಿಟ್ ಆಧಾರದ ಮೇಲೆ ನೀಡುವ S.R ಸಂಖ್ಯೆಯ ಬಗ್ಗೆ ಮಾಹಿತಿ ನೀಡುತ್ತಾ ನಿಮ್ಮ ತಂಡದಲ್ಲಿ ನಿಮ್ಮದೇ ಮೊದಲ ಹೆಸರೆಂದು ತಿಳಿಸಿದ್ದೀರಿ. ನೀವೆಷ್ಟು ಪ್ರತಿಭಾವಂತೆ ಹಾಗೂ ಶ್ರಮಜೀವಿ ಎಂಬುದು ಇದರಿಂದಲೇ ನಮಗೆ ತಿಳಿಯುತ್ತದೆ ಸುಜಾತಾ….. ನಿಮ್ಮ ವೃತ್ತಿ ಜೀವನದ ಮತ್ತಷ್ಟು ವಿವರಗಳನ್ನು ಓದಲು ಕಾಯುತ್ತಿದ್ದೇನೆ. ಅಭಿನಂದನೆಗಳು ನಿಮಗೆ……..ಎ. ಹೇಮಗಂಗಾ

    1. ನಿಮ್ಮ ಸಹೃದಯೀ ಓದು ಮತ್ತು ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಹೇಮಾ

      ಸುಜಾತಾ ರವೀಶ್

Leave a Reply

You cannot copy content of this page

Scroll to Top