ಭಾಷಾ ಸಂಗಾತಿ
ಜಯಲಕ್ಷ್ಮಿ ಕೆ.
“ಹೇಗೆ ಬೇಕಾದರೂ ಅರ್ಥೈಸಿಕೊಳ್ಳಿ….”
ಕನ್ನಡ ಭಾಷಾಕಲಿಕೆಯ ಬಗ್ಗೆ ಬರೆಯುತ್ತಾರೆ


“ಪ್ರಿಯಕರ ಕೊಂದ ಪ್ರಿಯತಮೆ “, ” ಕಳ್ಳ ಆಡಿಸಿದ ಪೊಲೀಸ್ “, ‘ಚೈನ್ ಕಣ್ಣು ಹಾಕಿದ ಕದೀಮ’, ” ಮಹಿಳೆ ರಕ್ಷಿಸಿದ ದೋಣಿಕಾರ “, ಪೂಜಾರಿ ಕೈ ಕಟ್ಟಿ ಕೊಂದ ಪೊಲೀಸ್ “, “ಅನಾಮಿಕ ಕರೆ ತಂದ ಪೊಲೀಸ್ “, ಕೊಲೆ ಆರೋಪಿ ಖಾಕಿ ಗುಂಡು “.. ಮೇಲಿನ ವಾಕ್ಯಗಳನ್ನು ಏನೆಂದು ಅರ್ಥೈಸಿಕೊಳ್ಳುವುದು ? ಅರ್ಥ ಅಸ್ಪಷ್ಟ, ಅಲ್ಲವೇ? ಟಿವಿ ಪರದೆಯ ಮೇಲೆ ಬರುವಂತಹ ಇಂತಹ ವಾಕ್ಯಗಳನ್ನು ನಾವೆಲ್ಲರೂ ನೋಡುತ್ತಿರುತ್ತೇವೆ, ನಮಗೆ ಅರ್ಥವಾಗುವ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತೇವೆ ಕೂಡಾ. ಆದರೆ ಆ ವಾಕ್ಯದ ನಿಜವಾದ ಅರ್ಥ ಬೇರೆಯೇ ಆಗಿರುತ್ತದೆ!!ಮೊದ -ಮೊದಲು ದೂರದರ್ಶನದ ಒಂದೆರಡು ವಾಹಿನಿಗಳಲ್ಲಿ ಬರುತ್ತಿದ್ದ ಇಂತಹ ತಲೆಬರಹಗಳು ಇತ್ತೀಚೆಗೆ ಸರ್ವೇಸಾಮಾನ್ಯ ಎಂಬಂತೆ ಬಳಕೆಯಾಗುತ್ತಿವೆ. ಕನ್ನಡ ಭಾಷೆಯಲ್ಲಿ ವಿಭಕ್ತಿ ಪ್ರತ್ಯಯಗಳಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ನಾಮಪದಗಳ ಸಂಬಂಧವನ್ನು ಇತರ ಪದಗಳೊಂದಿಗೆ ಸಮೀಕರಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ವಿಭಕ್ತಿ ಪ್ರತ್ಯಯಗಳನ್ನು ಮಾಧ್ಯಮಗಳು ಇಂದು ಸಂಪೂರ್ಣವಾಗಿ ಅಲ್ಲಗಳೆಯುತ್ತಿವೆ. ಕರ್ತೃವಿನ ಪಾತ್ರವನ್ನು ಸ್ಪಷ್ಟವಾಗಿ ತಿಳಿಸಿ ಹೇಳುವ ವಿಭಕ್ತಿ ಪ್ರತ್ಯಯಗಳನ್ನು ಬಿಟ್ಟುಬಿಟ್ಟರೆ ಹೇಗೆ? ಯಾವುದೇ ವಾಕ್ಯಗಳಿಗೆ ಸೂಚ್ಯವಾದ ಅರ್ಥವನ್ನು ನೀಡುವಂತಹ ವ್ಯಾಕರಣಾಂಶವೇ ವಿಭಕ್ತಿ ಪ್ರತ್ಯಯಗಳು. ಕರ್ತೃ , ಕರ್ಮ ಕ್ರಿಯಾ ಪದಗಳ ಜೊತೆಗೆ ನಾವು ಏನನ್ನು ಹೇಳಲು ಬಯಸುತ್ತೇವೆಯೋ, ಅದಕ್ಕೆ ಸರಿಯಾದ ಅರ್ಥವನ್ನು ನೀಡತಕ್ಕಂತಹ ವಿಭಕ್ತಿ ಪ್ರತ್ಯಯಗಳ ಬಳಕೆಯೇ ಇಲ್ಲದಿದ್ದರೆ ಅರ್ಥ ಆಭಾಸವಾಗುತ್ತದೆ. ಕನ್ನಡದ ವ್ಯಾಕರಣವೇ ಕಬ್ಬಿಣದ ಕಡಲೆ ಕಾಯಿಯಾಗಿರುವ ಇಂದಿನ ಮಕ್ಕಳ ಭಾಷಾ ಬೆಳವಣಿಗೆಯ ಮೇಲೆ ಟಿವಿ ಪರದೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರುವ ಇಂತಹ ಅರ್ಥಹೀನ ವಾಕ್ಯಗಳು ವ್ಯತಿರಿಕ್ತ ಪರಿಣಾಮ ಬೀರಬಲ್ಲವು. ಮೊದಲೇ ನಮ್ಮ ಮಕ್ಕಳು ” ಜಾತ್ರೆಗೆ ನಾನು ಹೋದೆ, ಅಪ್ಪ ಹೋದೆ, ಅಮ್ಮ ಹೋದೆ, ಆಟದ ವಸ್ತು ಹೋದೆ ” ಎಂದೆಲ್ಲ ಪ್ರಬಂಧ ಬರೆಯುವಲ್ಲಿ ನಿಸ್ಸೀಮರು. ಇಂತಹ ಶಿರೋನಾಮೆ ಓದುವ ಅವರ ಭಾಷೆ ಇನ್ನೆಷ್ಟು ಶುದ್ಧವಾಗಿರಲು ಸಾಧ್ಯ? ಈ ವಾಕ್ಯಗಳೆಲ್ಲ ವಾಚಕನ ಓದಿಗೆ ಅನುಕೂಲವಾಗಿರಬಹುದು, ಆದರೆ ಕೇಳುಗರ, ಓದುಗರ ಮೇಲೆ ಈ ವಾಕ್ಯಗಳು ಬೀರುವ ಅರ್ಥ ವ್ಯತ್ಯಾಸದ ಬಗ್ಗೆಯೂ ಅರಿವಿರಬೇಕಲ್ಲವೇ? ಪ್ರತಿದಿನ ಇಂತಹದ್ದನ್ನು ಕೇಳುವ ಮಕ್ಕಳು ಇದುವೇ ಸರಿಯಾದ ವಾಕ್ಯ ಪ್ರಯೋಗ ಅಂದುಕೊಳ್ಳುತ್ತಾರೆ. ಮಾಧ್ಯಮಗಳೇ ಪ್ರಧಾನ ಪಾತ್ರ ವಹಿಸುತ್ತಿರುವ ಇಂದಿನ ದಿನಗಳಲ್ಲಿ ಅವುಗಳಲ್ಲಿ ಬಳಕೆಯಾಗುವ ಅನೌಪಚಾರಿಕ ಪದಗಳ ಬಳಕೆ ಮಕ್ಕಳ ಭಾಷೆಯನ್ನು ಕುರೂಪ ಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಸಂವಹನ ಕಲೆಗಾರಿಕೆಯನ್ನು ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವ ಮಾಧ್ಯಮಗಳು ಭಾಷಾ ಶುದ್ಧತೆಯನ್ನು ಎತ್ತಿ ಹಿಡಿಯಲಿ. ಸ್ವಚ್ಛ ಕನ್ನಡ ಭಾಷೆಯನ್ನು ಬಳಸುವ ಮೂಲಕ ಭಾಷಾ ಬೆಳವಣಿಗೆಗೆ ವರದಾನವಾಗಲಿ. ಆಗ ಭಾಷೆ ಬೆಳೆಯುತ್ತದೆ. ಇಂದು ಮಾಧ್ಯಮಗಳಲ್ಲಿ ಭಿತ್ತರಗೊಳ್ಳುತ್ತಿರುವ
ಕೆಲವೊಂದು ಅರ್ಥ ಹೀನ ಪದಗಳ ಬಳಕೆ , ಪದೇ ಪದೇ ಕೈಬಿಡುವ ವಿಭಕ್ತಿ ಪ್ರತ್ಯಯಗಳು, ಇವೆಲ್ಲವುಗಳಿಂದ ಕನ್ನಡ ಭಾಷೆಯ ಅಂದಗೆಡುತ್ತಿದೆ. ‘ ಬಟ್ ‘…’ಸೋ ‘.’ ಲೈಕ್ ‘ ಮೊದಲಾದ ಆಂಗ್ಲ ಪದಗಳ ಬಳಕೆ ಇಲ್ಲದೆ ಕನ್ನಡವನ್ನು ಮಾತನಾಡುವುದಕ್ಕೇ ಬಾರದ ಕೆಲವು ನಿರೂಪಕರು ಒಂದೆಡೆಯಾದರೆ, ಹಠಕ್ಕೆ ಬಿದ್ದಂತೆ ವಿಭಕ್ತಿ ಪ್ರತ್ಯಯಗಳನ್ನು ಅಲ್ಲ ಗಳೆಯುವ ಕನ್ನಡ ಬರಹಗಳು ಇನ್ನೊಂದೆಡೆ!
ಮಾಧ್ಯಮಗಳಲ್ಲಿ ಮೂಡಿ ಬರುವ ವಾಕ್ಯಗಳು ವಿದ್ಯಾರ್ಥಿಗಳ ಭಾಷಾ ಕಲಿಕೆಯ ಮೇಲೆ ಬಹಳ ಪ್ರಭಾವ ಬೀರುತ್ತವೆ. ಒಂದು ಉದಾಹರಣೆ ಕೊಡುವುದಾದರೆ, ಟಿ ವಿ ಯಲ್ಲಿ ಭಿತ್ತರಗೊಳ್ಳುತ್ತಿರುವ ” ಹೊಡೆದು ಹೋದ ಪೈಪ್ ನಿಂದ ಪೋಲಾದ ನೀರು “… ಇಲ್ಲಿ ಪೈಪ್ ಗೆ ಹೊಡೆದದ್ದು ಯಾರು? ‘ ಅದು ಒಡೆದು ಹೋದ ‘ ಎಂದಾಗಬೇಕು. ಹೀಗೆ ಇತ್ತೀಚೆಗೆ ಹಲವಾರು ಪದಗಳು ತಪ್ಪಾಗಿ ಬಳಕೆಯಾಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿರುತ್ತೇವೆ. ನಾವು, ಹಿರಿಯರು ಆ ಪದಗಳನ್ನು ಸರಿ ಪಡಿಸಿಕೊಂಡು ಓದುತ್ತೇವೆ ಕೂಡಾ. ಆದರೆ ಮಕ್ಕಳಿಗೆ ಆ ವಿಶೇಷ ಬುದ್ಧಿ ಇರುವುದಿಲ್ಲ. ಮಕ್ಕಳು ಸಹಜವಾಗಿ ನೋಡಿ ಕಲಿಯುವ ಪ್ರವೃತ್ತಿಯವರು ತಾನೇ. ಅದಲ್ಲದೆ ಪುಸ್ತಕಗಳನ್ನು ಓದುವ ಹವ್ಯಾಸದಿಂದ ಹಿಂದೆ ಸರಿಯುತ್ತಿರುವ ಮಕ್ಕಳಿಗೆ ಇಂದು ಮಾಧ್ಯಮಗಳೇ ಸರ್ವಸ್ವ. ಆದಕಾರಣ ಅಲ್ಲಿ ಮೂಡಿ ಬರುವ ಪ್ರತಿಯೊಂದು ಪದಗಳ ಮೇಲೆ ಮಾಧ್ಯಮದವರಿಗೆ ಹಿಡಿತವಿರಬೇಕು.
ಕನ್ನಡದ ನಿಜವಾದ ಸೊಬಗು ಉಳಿಯಬೇಕಾದರೆ ಈ ಭಾಷೆಯ ಸೊಗಡು, ಅರ್ಥ ಸಂಪತ್ತು ಮತ್ತು ವ್ಯಾಕರಣ ಶುದ್ಧಿಯನ್ನು ಅರಿತು ನಾವು ಮಾತಾಡಬೇಕು. ನನ್ನ ಮನಸ್ಸು ನಿನಗೆ ಅರ್ಥವಾದರೆ ಸಾಕಲ್ಲ, ಭಾಷಾ ಶುದ್ಧತೆಯ ಔಚಿತ್ಯ ಏನು ಎಂದು ಪ್ರಶ್ನಿಸುವುದಾದರೆ ಅದು ನಮ್ಮ ನುಡಿಯ ಮೇಲೆ ನಾವು ತೋರುವ ಅಗೌರವವಾದೀತು, ಅನಾದರವಾದೀತು. ಆದ್ದರಿಂದ ಬಳಕೆ ಮತ್ತು ಬರೆಹದಲ್ಲಿ ಸದಾ ಶುದ್ಧತೆಯನ್ನು ಕಾಪಾಡೋಣ, ಪ್ರಜ್ಞಾಪೂರ್ವಕವಾಗಿರೋಣ.
ಜಯಲಕ್ಷ್ಮಿ ಕೆ.



