ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಹೆಣ್ಣು ಮಕ್ಕಳನ್ನು ಗೌರವಿಸಿ”

ತಾಯಿಯ ಮಮತೆಗೆ ಸಮನಾದದ್ದು ಯಾವುದು ಇಲ್ಲ. ಮಗುವಿನ ಆರಂಭಿಕ ಬೆಳವಣಿಗೆಯ ಹಂತದಲ್ಲಿ ತಾಯಿಯ ಅವಶ್ಯಕತೆ ಬಹಳ. ಹರಿಹರೆಯಕ್ಕೆ ಬಂದಾಗ ತಾಯಿ ಹೇಳುವ ಮಾತುಗಳು ಸ್ವಲ್ಪ ಕಿರಿಕಿರಿ ಎನ್ನಿಸಿದರು ಮತ್ತೆ ಕಿವಿಯಲ್ಲಿ ಏನಾದರೂ ಪಿಸುಗುಡಲು ಅಮ್ಮನೇ ಬೇಕು.
ಇನ್ನು ಗಂಡು ಹುಡುಗರಿಗೆ ಕೂಡ ಅಮ್ಮನ ಅವಶ್ಯಕತೆ ನಿತ್ಯ ನಿರಂತರ. ಒಂದು ಹಂತದ ಬೆಳವಣಿಗೆಯಾಗಿ ಮಕ್ಕಳು ತಮ್ಮ ತಮ್ಮ ಉದ್ಯೋಗಗಳಿಗೆ ತೊಡಗಿಕೊಂಡಾಗ ಅದುವರೆಗೂ ಮನೆಗೆ, ಮಕ್ಕಳಿಗೆ ದುಡಿದ ತಾಯಿಗೆ ಬಿಡುವು ಸಿಗುತ್ತದೆ ಎಂಬುದೇನೋ ನಿಜ ಆದರೆ ಆಗಲೂ ಕೂಡ ಮಕ್ಕಳಿಗೆ ತಾಯಿ ಬೇಕಾಗುತ್ತಾಳೆ. ಇಂದಿನ ಕಾಲದ ಹೆಣ್ಣು ಮಕ್ಕಳು ಸ್ವತಹ ಅಡುಗೆಯನ್ನು ಕಲಿತಿರದಿದ್ದರೆ ಅದರಲ್ಲೂ ಸಾಂಪ್ರದಾಯಿಕ ಅಡುಗೆಗಳನ್ನು ಕಲಿಯಲು ಸಾಧ್ಯವಾಗದೇ ಹೋದರೆ ಅಮ್ಮನೇ ಅವರ ಆಸೆಗಳಿಗೆ ತನ್ನ ಕೈ ಮತ್ತು ಕೊರಳು ಎರಡನ್ನು ಕೊಡಬೇಕು. ಮುಂದೆ ಅವರಿಗೆ ಮಕ್ಕಳಾದಾಗ ಕೂಡ ಮಕ್ಕಳನ್ನು ಕಾಳಜಿ ಮಾಡಲು ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ತಾಯಿಯ ಅವಶ್ಯಕತೆ ಇರುತ್ತದೆ. ಒಂದೊಮ್ಮೆ ಮಕ್ಕಳು ದೊಡ್ಡವರಾಗಿ ತಾಯಿ ಕೂಡ ಅಯ್ಯೋ ಸಹಜವಾಗಿ ಮೆತ್ತಗಾದಾಗ ಆಕೆಯ ಉಪಸ್ಥಿತಿ ಎಲ್ಲರಿಗೂ ಅಸಹನೀಯವಾಗುತ್ತದೆ. ಈ ಹಿಂದೆ ಆಕೆಯಿಂದಲೇ ಎಲ್ಲವನ್ನು ಪಡೆದುಕೊಂಡವರು
ಕೂಡ ಆಕೆಯನ್ನು ಹೀಗಳೆಯುವ, ಆಕೆಯ ಮಾತು ಕ್ರಿಯೆಗಳೆಲ್ಲವೂ ಹೊರೆ ಎಂಬಂತೆ ಭಾವಿಸುವ ಅಸಹನೆಯ ನಡವಳಿಕೆಗಳು ಮನೆಯಲ್ಲಿ ಕಾಣತೊಡಗಿ ಆಕೆ ಇದರ ಬಿಸಿಯನ್ನು ಅನುಭವಿಸುತ್ತಾಳೆ. ಈ ಹಿಂದೆ ವಯಸ್ಸಿನಲ್ಲಿದ್ದಾಗ ಹರೆಯದ ಹುಮ್ಮಸ್ಸಿನಲ್ಲಿ ಗಂಡ ಮತ್ತು ಮಕ್ಕಳ ಮೆಚ್ಚುಗೆಯನ್ನು ಗಳಿಸಲು ಸಾಮಾಜಿಕವಾಗಿ ಹೆಣ್ಣು ಮಕ್ಕಳಿಗೆ ಇರುವ ನಿಯಮಗಳನ್ನು ಪಾಲಿಸುವ ಹುಮ್ಮಸ್ಸಿನಲ್ಲಿ ತನ್ನತನವನ್ನು ಬಿಟ್ಟು ತಮ್ಮೆಲ್ಲ ಶಕ್ತಿಯನ್ನು ಈ ಕೆಲಸಗಳಿಗೆ ವ್ಯಯ ಮಾಡುವ ಆಕೆಯ ಶ್ರಮಕ್ಕೆ ಒಂದು ಕಾಸಿನ ಕಿಮ್ಮತ್ತು ಕೂಡ ಇಲ್ಲದಂತಾದಾಗ ಆಕೆ ನಾನು
ಅಪಾತ್ರರಿಗೆ ಸೇವೆ ಮಾಡಿದ್ದೇನೆ ಎಂಬ ಭಾವದಿಂದ ಮಿಡುಕುತ್ತಾಳೆ.
ಜೀವನವೆಲ್ಲ ಬೇರೆಯವರ ಇಷ್ಟಗಳನ್ನು ಪೂರೈಸಲು ತನ್ನ ಬದುಕನ್ನು ಮುಡುಪಾಗಿಟ್ಟ ವ್ಯಕ್ತಿ ದೈಹಿಕವಾಗಿ ನಿತ್ರಾಣವನ್ನು ಅನುಭವಿಸುವಾಗ, ಮಾನಸಿಕವಾಗಿ ಪ್ರೀತಿ ಮತ್ತು ಬೆಂಬಲವಿಲ್ಲದೆ, ಆರ್ಥಿಕವಾಗಿ ಕೈಯಲ್ಲಿ ಬಿಡಿಗಾಸು ಇಲ್ಲದೆ ಹೋದಾಗ ಬದುಕು ದುರ್ಬರವೆನಿಸುತ್ತದೆ.

ಸ್ನೇಹಿತರೆ ನಾನು ಇಲ್ಲಿ ಯಾರಿಗೂ ಭಯವನ್ನು ಬಿತ್ತುತ್ತಿಲ್ಲ, ಆದರೆ ಬದುಕು ಇರುವುದೇ ಹೀಗೆಯೇ.
ಇಂತಹ ನೂರಾರು ಸಾವಿರಾರು ಹೆಣ್ಣುಮಕ್ಕಳ ನೋವು ಸಂಕಟಗಳನ್ನು ನೋಡಿಯೇ ಅವರ ನಿಟ್ಟುಸಿರಿನ ಹಿಂದಿರುವ ನೋವಿನ ಆಳವನ್ನು ಅರಿತು ಬಹಳ ಯೋಚಿಸಿ ಈ ವಿಷಯವನ್ನು ಬರೆಯುತ್ತಿದ್ದೇನೆ.
ಪ್ರೀತಿಯ ಸೋದರಿಯರೇ ನಿಮ್ಮವರನ್ನು ನೀವು ಪ್ರೀತಿಸುವುದು ಸಹಜವಾದ ಪ್ರಕ್ರಿಯೆ, ಆದರೆ ನಿಮಗೆ ಅವರ ಮೇಲೆ ಪ್ರೀತಿ ಇದೆ ಎಂಬುದನ್ನು ನಿರೂಪಿಸಲು ನಿಮ್ಮ ಸ್ವಂತಿಕೆ ಮತ್ತು ಆತ್ಮ ಗೌರವವನ್ನು ಪಣಕ್ಕಿಡಬೇಡಿ.
ಅವರೆಡೆಗಿನ ನಿಮ್ಮ ಪ್ರೀತಿ ನಿಜವಾದದ್ದು… ಆದರೆ ನಿಮ್ಮ ಮೇಲೆ ನಿಮಗಿರಬೇಕಾದ ಆತ್ಮಗೌರವ ಅದಕ್ಕಿಂತಲೂ ಹೆಚ್ಚು…. ಆಯ್ಕೆ ನಿಮ್ಮದು.
ಪದೇ ಪದೇ ಸೋಲುವ ವ್ಯಕ್ತಿ ಕೀಳರಿಮೆಯಿಂದ ಬಳಲಿದರೆ ಆತನ ಸೋಲಿನ ಲಾಭವನ್ನು ಪಡೆದುಕೊಳ್ಳುವವರಿಗೆ ಇದರಲ್ಲಿ ಹೆಚ್ಚೇನು ಎಂಬ ಭಾವ ನಿಮ್ಮ ಕುರಿತಾದ ಅಸಡ್ಡೆಯನ್ನು ಮೂಡಿಸುತ್ತದೆ.
ನಿಮ್ಮ ತೊಂದರೆಯ ಸಮಯದಲ್ಲಿ ನಿಮಗೆ ಸಾಂತ್ವನ ಹೇಳುವ ವ್ಯಕ್ತಿಯ ಅವಶ್ಯಕತೆ ನಿಮಗಿರುತ್ತದೆಯೇ ಹೊರತು ನೀವು ನೋವಿನಿಂದ ಒದ್ದಾಡುತ್ತಿರುವುದನ್ನು ನೋಡಿಯೂ ಕೂಡ ತನ್ನ ದಿನಚರಿಯಲ್ಲಾಗುವ ವ್ಯತ್ಯಾಸಕ್ಕೆ ಗೊಣಗುವ ವ್ಯಕ್ತಿ ಖಂಡಿತವಾಗಿಯೂ ನಿಮ್ಮ ಪ್ರೀತಿಗೆ ಮತ್ತು ಗೌರವಕ್ಕೆ ಅರ್ಹನಲ್ಲ…. ಆತನಿಗೆ ಯಾವುದೋ ಒಂದು ದಿನ ನಿಮಗಾಗುವ ತೊಂದರೆಗಿಂತ ತನ್ನ ವೈಯುಕ್ತಿಕ ಹಿತಾಸಕ್ತಿಯೇ ಮುಖ್ಯವಾದರೆ ಅಂತಹ ವ್ಯಕ್ತಿಗಾಗಿ ನೀವು ನಿಮ್ಮೆಲ್ಲ ಸಮಯ,ಶ್ರಮವನ್ನು ನೀಡುವ ಅವಶ್ಯಕತೆ ಇದೆಯೇ?
ನಿಮ್ಮ ಕೈಲಾಗುವ ಕೆಲಸಗಳ ಕುರಿತು ಒಂದು ಮಿತಿಯನ್ನು ಕಲ್ಪಿಸಿ. ಅದು ನಿಮ್ಮ ಗಂಡ, ಮಕ್ಕಳೇ ಆದರೂ ಸರಿ, ಅದಕ್ಕಿಂತ ಹೆಚ್ಚಿನ ಮಿತಿಯ ಅವಕಾಶವನ್ನು ಯಾರಿಗೂ ಕೊಡಬೇಡಿ.
ಕಾರಣ ನಿಜವಾದ ಸಂಗಾತಿ ನಿಮ್ಮ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾನೆ. ನಿಮ್ಮ ದೇಹದ ಸೌಂದರ್ಯಕ್ಕಿಂತ ಆತ್ಮಕ್ಕೆ ಬೆಲೆ ಕೊಡುತ್ತಾನೆ. ನಿಮ್ಮ ಮೈಯ ಬಣ್ಣಕ್ಕಿಂತ ಮನವನ್ನು ಹೆಚ್ಚು ಪ್ರೀತಿಸುತ್ತಾನೆ.

ನಿಜವಾದ ಸಂಗಾತಿ ನಿಮ್ಮನ್ನು ನೀವು ಇರುವಂತೆಯೇ ಪ್ರೀತಿಸುತ್ತಾನೆಯೇ ಹೊರತು ಆತನ ಪ್ರೀತಿ ಯಾವುದೇ ಟರ್ಮ್ಸ್ ಅಂಡ್ ಕಂಡೀಶನ್ ಗಳಿಗೆ ಒಳಪಟ್ಟಿರುವುದಿಲ್ಲ. ತನ್ನ ಸಂಗಾತಿಗೆ ಗೌರವ ಕೊಡುವುದು ಕೂಡ ನಿಜವಾದ ಪ್ರೀತಿ ಎಂಬುದು ಅವರಿಗೆ ಗೊತ್ತಿರುತ್ತದೆ.
ಹೆಣ್ಣು ಮಕ್ಕಳು ಕೇವಲ ಗೃಹಿಣಿಯರಲ್ಲ ಅವರು ಮನೆಯ ನಿರ್ಮಾತೃಗಳು. ಕೌಟುಂಬಿಕ ಜೀವನವನ್ನು ನಡೆಸಲು ಅಗತ್ಯವಾದ ಪ್ರೀತಿ, ವಿಶ್ವಾಸ ಎಂಬ ಮೌಲ್ಯಗಳ ಇಟ್ಟಿಗೆಗೆ ವಾತ್ಸಲ್ಯದ ಉಸುಕನ್ನು ಬೆರೆಸಿ ಪ್ರೀತಿಯೆಂಬ ಸಿಮೆಂಟ್ ಹಾಕಿ ಮಮತೆಯ ನೀರನ್ನು ಹಾಕಿ ಕಲಸಿ ಅತ್ಯಂತ ಬೆಲೆ ಬಾಳುವ ಗಟ್ಟಿ ಮುಟ್ಟಾದ ಮನೆಯನ್ನು ಅವರು ನಿರ್ಮಿಸಿರುತ್ತಾರೆ
ನಿಜವಾದ ಗಂಡಸರು ಎಂದೂ ಹೆಣ್ಣು ಮಕ್ಕಳನ್ನು ನೋಯಿಸುವುದಿಲ್ಲ ಬದಲಾಗಿ ಅವರ ನೋವಿನ ಹಿಂದಿನ ಭಾವಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ, ಗೌರವಿಸುತ್ತಾರೆ, ರಕ್ಷಿಸುತ್ತಾರೆ ಮತ್ತು ಅವರನ್ನು ಮೇಲಕ್ಕೆತ್ತುತ್ತಾರೆ.
ಹೆಣ್ಣು ಮಕ್ಕಳು ಕುಟುಂಬದ ಪ್ರತಿಯೊಬ್ಬ ಸದಸ್ಯರ ಕಾಳಜಿ ಮಾಡುತ್ತಾರೆ, ಅವರ ಊಟ ತಿಂಡಿ ಬಟ್ಟೆಗಳ ಕುರಿತು ಮುತುವರ್ಜಿ ವಹಿಸುತ್ತಾರೆ. ತನ್ನ ಅವಶ್ಯಕತೆ ಇದೆ ಎಂಬ ಎಲ್ಲ ಸ್ಥಳದಲ್ಲಿಯೂ ಆಕೆ ಮನೆಯ ಸದಸ್ಯರಿಗೆ ಲಭ್ಯವಾಗುತ್ತಾಳೆ. ಆಕೆಯ ದೇಹ ವಿಶ್ರಾಂತಿಯನ್ನು ಬಯಸಿದರೂ ಕೂಡ ಆಕೆ ನಿಮ್ಮೆಲ್ಲರ ಕಾಳಜಿಯಲ್ಲಿ ತೊಡಗಿಕೊಂಡಿರುತ್ತಾಳೆ. ಆಕೆಯನ್ನು ನೋಡುವವರ ಪಾಲಿಗೆ ಆಕೆ ಸಶಕ್ತಳು ಎಂಬಂತೆ ಭಾಸವಾಗುತ್ತಾಳೆ…. ಆದರೆ ಹಾಗೆ ಸಶಕ್ತಳಾಗಿರುವುದು ಆಕೆಯ ಪಾಲಿಗೆ ಬೇರೆ ಯಾವುದೇ ಆಯ್ಕೆ ಇಲ್ಲದಿರುವುದರಿಂದ ಎಂಬುದು ಉಳಿದವರ ಅರಿವಿಗೆ ಬರುವುದೇ ಇಲ್ಲ
ತನ್ನೆಲ್ಲ ನೋವನ್ನು ಮರೆತು ಆಕೆ ನಗುತ್ತಾಳೆ… ತನ್ನ ಕಣ್ಣೀರನ್ನು ಅಡಗಿಸಿರುವ ಆಕೆ ಯಾರೂ ನೋಡದ ಸ್ಥಳದಲ್ಲಿ ಅವುಗಳನ್ನು ಸುರಿಸಿ ಹಗುರಾಗುತ್ತಾಳೆ. ಆಕೆ ಯಾರಿಗೂ ಹೊರೆಯಾಗಲು ಬಯಸುವುದಿಲ್ಲ.
ನಾನು ಸಂಪೂರ್ಣವಾಗಿ ಬರಡಾಗಿದ್ದರು ಕೂಡ ಹಾಗೆ ಉಳಿದವರನ್ನು ಪ್ರೀತಿಸುತ್ತಾಳೆ. ಸೋತು ಹೋದಂತಹ ದೈಹಿಕ ಸ್ಥಿತಿಯಲ್ಲಿಯೇ ಇರಲಿ, ಅದೆಷ್ಟೇ ನೋವಿನಿಂದ ಬೇಯಲಿ ಆಕೆ ಬೇರೆಯವರ, ಅದರಲ್ಲೂ ತನ್ನ ಪತಿಯ ಮಕ್ಕಳ ಮಾತುಗಳಿಗೆ ಕಿವಿಯಾಗುತ್ತಾಳೆ. ಆಕೆಯ ಪಾಲಿಗೆ ಪ್ರೀತಿ ಮರೀಚಿಕೆಯಾಗಿದ್ದರೂ ಕೂಡ ಆಕೆ
ಉಳಿದವರ ಪಾಲಿಗೆ ಸಂಜೀವಿನಿಯಾಗುತ್ತಾಳೆ.
ಆಕೆಯ ತ್ಯಾಗ ಅಗೋಚರವಾದದ್ದು, ಆಕೆಯ ತಾಳ್ಮೆ ಅಪಾರವಾದದ್ದು, ಆಕೆಯ ಪ್ರೀತಿ ನಿರಂತರವಾದದ್ದು ಆದರೂ ಬಹಳಷ್ಟು ಬಾರಿ ಆಕೆಯನ್ನು ಹಗುರವಾಗಿ ಭಾವಿಸುವ ನಾವುಗಳು ಆಕೆಗೆ ಧನ್ಯವಾದವಂತೂ ದೂರ…ಒಂದು ಪುಟ್ಟ ಕೃತಜ್ಞತೆಯ ಮಾತನ್ನು ಕೂಡ ಹೇಳುವುದಿಲ್ಲ
ಅಂತಿಮಗಾಗಿ…. ಸಾಕಷ್ಟು ಬಲಿಷ್ಠವಾದ ಕುಟುಂಬಗಳ ಹಿಂದೆ ಖುದ್ದು ಆಧಾರ ರಹಿತಳಾಗಿದ್ದರೂ ಕೂಡ ಅತ್ಯಂತ ಶಾಂತವಾದ, ತ್ಯಾಗಮಯಿವಾದ ಹೆಣ್ಣು ಮಗಳು ಗಟ್ಟಿ ಆಧಾರಸ್ಥಂಭವಾಗಿ ನಿಂತಿರುತ್ತಾಳೆ.
ನಿಮ್ಮ ಮನೆಯ ಅಂತಹ ಹೆಣ್ಣು ಮಕ್ಕಳನ್ನು ಪ್ರೀತಿಸಿ ಗೌರವಿಸಿ ಮತ್ತು ಅವರ ಮಾತುಗಳನ್ನು ಆಲಿಸಿ. ಅವರೇ ನಿಮ್ಮ ಜೀವನಕ್ಕೆ ಉತ್ತಮ ದಾರಿ ತೋರುವ ದಿಕ್ಸೂಚಿಗಳು.
ವೀಣಾ ಹೇಮಂತ್ ಗೌಡ ಪಾಟೀಲ್





ಬಹಳ ಸುಂದರ ಲೇಖನ ಮೇಡಂ.
ಧನ್ಯವಾದಗಳು ತಮಗೆ.
Angelina Gregory