ಜಾಲತಾಣ ಸಂಗಾತಿ
ರಾಜು ಪವಾರ್
ಸಾಮಾಜಿಕ ಜಾಲತಾಣಗಳಲ್ಲಿ
ಸತ್ಯದ ಹುಡುಕಾ(ಗಾ)ಟ

ಸಾಮಾಜಿಕ ಜಾಲತಾಣದ ಪ್ರಭಾವ ಯುವಜನರಲ್ಲಿ ಅಷ್ಟೆ ಅಲ್ಲ ಹಿರಿ ತಲೆಯರಲ್ಲೂ ಅದು ತನ್ನ ಕದಂಬ ಬಾಹುಗಳನ್ನು ಚಾಚಿದೆ.ಹಿಂದೊಂದು ಕಾಲವಿತ್ತು ಅಂದರೆ ೨೦೦೦ನೇ ಇಸ್ವಿಯ ಮುಂಚೆ ಅಚ್ಚಾದ ಪ್ರತಿ ಅಕ್ಷರಗಳು ಸತ್ಯದ ಪ್ರತೀಕದಂತೆ. ಒಂದು ಹಾಳೆಯಲ್ಲಿ ಮುದ್ರಿತ ಸಾರಂಶವಾಗಿರಬಹುದು,ವಿವರ ವಾಗಿರಬಹುದು ಅದು ಮುದ್ರಣವಾಗಿದ್ದರೆ ಸಾಕು ಅದು ಸತ್ಯದ,ನಿಖರತೆಯ ಬರಹವಾಗಿಬಿಡುತ್ತಿತ್ತು.ಆದರೆ ಬದಲಾವಣೆಯ ಗಾಳಿ ಬೀಸಿ ಸಂವಹನ ಸಾಧನಗಳ ಅನ್ವೇಷಣೆ ಇಡೀ ಜಗತ್ತಿನ ದಿಕ್ಕನ್ನೇ ಬದಲಾಯಿಸಿ ಬಿಟ್ಟಿದೆ. ಕೇವಲ ಸಂವಹನದ ಸಾಧನವಾಗಿ ಅನ್ವೇಷಿಸಲಾದ ಮೊಬೈಲ್ ಇಂದು ಬರಿ ಮೊಬೈಲ್ ಆಗಿ ಉಳಿದಿಲ್ಲ,ಇಡೀ ಜಗತ್ತು ಅಂಗೈಯಲ್ಲಿ ತೋರಿಸುತ್ತಿದೆ. ಇಂಟರ್ನೆಟ್ ಸೌಲಭ್ಯ ಸಿಕ್ಕ ಮೇಲಂತು ಅದಿಲ್ಲದೆನೆ ದಿನ ಬೆಳಗಾಗದೇನೊ ಎಂಬಂತಾಗಿದೆ. ಈಗ ವಿಷಯಕ್ಕೆ ಬರೋಣ,ದಿನಕ್ಕೊಂದರಂತೆ ಚಿತ್ರ ವಿಚಿತ್ರ ಮೊಬೈಲ್ ಆ್ಯಪ್ ಗಳು ಹುಟ್ಟಿಕೊಳ್ಳುತ್ತಿವೆ. ಫೇಸ್ ಬುಕ್,ವಾಟ್ಸ್ಯಾಪ್,ಟ್ವಿಟರ್, ಟೆಲಿಗ್ರಾಮ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.ಅದು ಅವುಗಳ ಜನಪ್ರಿಯತೆಗೆ ಸಾಕ್ಷಿಯಾಗಿವೆ. ವ್ಯಕ್ತಿ ತಾನು ಭೇಟಿ ನೀಡಿದ ಸ್ಥಳ, ಸಮಾರಂಭ,ದಿನ ನಿತ್ಯದ ಜಂಜಾಟದ ಸುಖ-ದು:ಖದ ಘಟನಾವಳಿಗಳನ್ನು ಚಿತ್ರ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಾನೆ.ಅವುಗಳು ಬೇರೆಯವರಿಗೆ ಬೇಕೊ, ಬೇಡವೊ ಅನ್ನುವುದರ ಪರಿವೇ ಇರಲ್ಲ.ತನ್ನ ಖುಸಿ ತನಗೆ ಮುಖ್ಯ. ಚಿತ್ರಗಳು, ವಿಡಿಯೊಗಳು,ಧ್ವನಿಗಳನ್ನು ತಿರುಚುವ(edit ಮಾಡುವ) ಕುಖ್ಯಾತಿ ಆ್ಯಪ್ ಗಳು ಇಂದು ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿವೆ.ಇವುಗಳ ಮೂಲಕ ಮೂಲ ಚಿತ್ರವನ್ನೊ, ಧ್ವನಿಯನ್ನೊ,ವಿಡಿಯೊವನ್ನೊ ತಮಗೆ ಬೇಕಾದ ಹಾಗೆ ತಿರುಚಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಸಾಮಾನ್ಯವಾಗಿದೆ.ಅದನ್ನು ನೋಡಿದ ಜನ ಕೂಡ ಅದರ ಸತ್ಯಾ ಸತ್ಯತೆ ಗೊತ್ತಿಲ್ಲದೆ ಒಬ್ಬರಿಂದ ಇನ್ನೊಬ್ಬರಿಗೆ ರವಾನೆ ಮಾಡಿಬಿಡುತ್ತಾರೆ.ಅದು ಒಬ್ಬರಿಗೆ ಮನರಂಜನೆಯ ವಿಷಯವಾದರೆ ಇನ್ನೊಬ್ಬರಿಗೆ ಪೀಕಲಾಟ.ಇದು ಮನರಂಜನೆಗಷ್ಟೇ ಸೀಮಿತವಾದರೆ ಹೇಗೊ ನಡೆಯೋದು,ಆದರೆ ಅದರಿಂದ ಒಬ್ಬರ ಗೌರವಕ್ಕೆ ಧಕ್ಕೆಯಾಗೋದು,ಅವಮಾನವಾಗೋದು,ಭಿನ್ನಾಭಿಪ್ರಾಯ ವ್ಯಕ್ತವಾಗೋದು ಕೆಲವೊಂದು ಸಲ ಜಗಳವೇ ನಡೆದುಹೋಗುತ್ತದೆ. ಒಬ್ಬರಿಗೆ ಒಂದು ಸಂದೇಶ ಬಂದರೆ ಸಾಕು ಅದು ಸಾವಿರಾರು ಜನರೊಂದಿಗೆ ವಿಮಯವಾಗಿಬಿಟುತ್ತದೆ. ಕೆಲವೊಂದು ಸಲ ಅಪಘಾತವಾದ ಬಗ್ಗೆನೊ, ಯಾವುದೋ ಮಾಹಿತಿ ಬಗ್ಗೆನೊ ಬಂದಂತ ಸಂದೇಶವನ್ನು ನೋಡಿದರೆ ಅದು ವರ್ಷಾನುಗಟ್ಟಲೆ ಹಳೆಯ ಸಂದೇಶವಾಗಿರುತ್ತದೆ.ನನ್ನ ಸ್ವಂತ ಅನುಭವಕ್ಕೆ ಬಂದಂತ ಘಟನೆ ಏನೆಂದರೆ ಈಗ್ಗೆ ಎರಡು ಮೂರು ವರ್ಷದ ಹಿಂದೆ ಚೆನೈನಲ್ಲಿ ವಿಪರಿತ ಮಳೆಬಂದು ಜನರು ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಸಂದೇಶ ಹರಿದಾಡುತ್ತಿತ್ತು,ಆದರೆ ಆ ಘಳಿಗೆಯಲ್ಲಿ ಚೆನೈನಲ್ಲಿ ಯಾವುದೇ ಮಳೆ ಇಲ್ಲ ಎಂಬುದು ಖುದ್ದು ಅಲ್ಲಿ ಸ್ನೇಹಿರೊಬ್ಬರನ್ನು ಕರೆ ಮಾಡಿ ತಿಳಿದಾಗಲೆ.ಅಸಲಿಗೆ ಆ ಸಂದೇಶ ಎರಡು ತಿಂಗಳ ಹಳೆಯದ್ದಾಗಿತ್ತು.
ಕೆಲವೊಂದು ಗುಂಪುಗಳು ಸುಳ್ಳು ಸುದ್ದಿ ಹರಡಲೆಂದೇ ಕಾರ್ಯೋನ್ಮುಖವಾಗಿರುವಂತೆ ಕಾಣುತ್ತದೆ,ಯಾಕೆಂದರೆ ನಿಜ ಸುದ್ದಿಗಿಂತ ಸುಳ್ಳು ಸುದ್ದಿ ಬೇಗನೆ ಹರಡುತ್ತದೆ.ಇದರ ಹಿಂದೆ ಲಾಭದ ಉದ್ದೇಶ ಕೈಯಾಡಿಸುತ್ತಿರುತ್ತದೆ. ದೇವರ ಚಿತ್ರಗಳನ್ನು ಬಳಸಿ ಬರೆದ ಸಂದೇಶವನ್ನು ಹತ್ತು ಜನರಿಗೆ ಕಳುಹಿಸಿ ನಿಮಗೆ ಶುಭವಾಗುತ್ತದೆ,ನಿಮ್ಮ ಮೊಬೈಲ್ ಬ್ಯಾಟರಿ ಚಾರ್ಜ್ ಆಗುತ್ತದೆ ಹೀಗೆ ಹತ್ತು ಹಲವಾರು.
ಭೀಕರ ಅಪಘಾತದ ಚಿತ್ರ,ವಿಡಿಯೊಗಳು ಹರಿದಾಡುತ್ತಿರುತ್ತವೆ,ಅವುಗಳ ಜೊತೆ ಒಂದು ಸಂದೇಶ ಇದನ್ನು ಹೆಚ್ಚಿನ ಸಂಖ್ಯೆಗೆ ಹಂಚಿಕೊಳ್ಳಿ ಕಷ್ಟದಲ್ಲಿರುವವರ ಸಂಬಂಧಿಗಳಿಗೆ ತಲುಪಲಿ ಎಂದು.ಇಂಥ ಸಂದೇಶಗಳು ವಾರ,ತಿಂಗಳಾದರೂ ಹರಿದಾಡುತ್ತಿರುತ್ತವೆ.
ಹೀಗೊಂದು ಸುದ್ದಿ ಹರಿದಾಡುತ್ತಿತ್ತು; ಗೋದಿ ತಿನ್ನುವುದರಿಂದ ಏನೆಲ್ಲ ಆರೋಗ್ಯ ತೊಂದರೆ ಎಂದು, ಇದನ್ನು ನೋಡಿದ ಎಲ್ಲರೂ ಮುಂತಳ್ಳಿದ್ದೆ ತಳ್ಳಿದ್ದು. ಸ್ವಲ್ಪ ದಿನಗಳ ನಂತರ ಗೋದಿ ತಿನ್ನುವುದರಿಂದ ಏನೆಲ್ಲ ಲಾಭಗಳು ಎಂಬ ಸುದ್ದಿ ಕೂಡ ಹರಿದಾಡಲು ಆರಂಭಿಸಿತು!! ಈಗ ನಿಜವಾದ ಗೊಂದಲ,ಯಾವುದನ್ನು ನಂಬುವುದೆಂದು!? ಹೀಗೆ ಹಲವಾರು ಸಮಿಕ್ಷಾ ವರದಿ ಹಲವು ಸುದ್ದಿಗಳು ಬರುತ್ತವೆ.ಒಂದು ವರದಿ ಅದರ ಲಾಭದ ಬಗ್ಗೆ ಹೇಳಿದರೆ ಇನ್ನೊಂದು ಅದರಿಂದಾಗುವ ತೊಂದರೆ ಬಗ್ಗೆ ಹೇಳುತ್ತದೆ. ಹೀಗಾದರೆ ಯಾವುದನ್ನು ನಂಬುವುದು?
ಈ ಕೊರೊನಾ ಕಾಲದಲ್ಲೂ ಇಂಥ ಸುಳ್ಳು ಸುದ್ದಿಗಳಿಗೆ ಬರವಿಲ್ಲ.ಎಲ್ಲರೂ ತಮಗೆ ತೋಚಿದಂತೆಯೆ ಸುದ್ದಿ ಸಂಪಾದಕರು,ಎಲ್ಲರೂ ತಮಗೆ ತಾವೇ ವೈದ್ಯರು.ಇಂಥ ಸಮಯದಲ್ಲಿ ಒಂದು ಸುಳ್ಳು ಸುದ್ದಿ ಯಾವೆಲ್ಲ ಅನಾಹುತ ಮಾಡುವುದೆಂದರೆ ನಿಜ ರೋಗಿಗಳಿಗೆ ಪ್ರಾಣ ಕಂಟಕವಾದರೂ ಆಗಬಹುದು. ಕೆಲ ಸುದ್ದಿಗಳಿಂದ ಹಣ ಕಳೆದುಕೊಳ್ಳ ಬಹುದು;ಕಳೆದು ಕೊಂಡಿದ್ದಾರೆ ಕೂಡ! ಈ ಮೊಬೈಲ್ ಎಂಬ ಮಾಯಾಂಗನೆ ಕೈಯಲ್ಲಿ ಬಂದ ಮೇಲೆ ಇಂಥ ಸುದ್ದಿಗಳ ಅಸಲಿಯತ್ತನ್ನು ಯಾರೂ ಪರೀಕ್ಷಿಸಲು ಹೋಗುತ್ತಿಲ್ಲ. ಕಂಡದನ್ನು ಮುಂತಳ್ಳುವುದೇ ಕಾಯಕ.

ಪ್ರಜ್ಞಾವಂತ ಪ್ರಜೆಗಳಾಗಿ ನಾವುಗಳು ಏನು ಮಾಡಬೇಕು….? ನಮಗೆ ಬಂದಂತ ಸಂದೇಶವನ್ನು ಒಂದು ಕ್ಷಣ ಓದಿ ಅದರ ಅಸಲಿಯತ್ತನ್ನು ತಿಳಿಯಲು ಪ್ರಯತ್ನಿಸಬೇಕು.ಮುಂತಳ್ಳುವ ಮುಂಚೆ ಅದರ ಒಳಿತು ಕೆಡಕುಗಳ ಬಗ್ಗೆ ಯೋಚಿಸಬೇಕು. ಹಿರಿಯರು ಹೇಳಿದ ಹಾಗೆ ನಮ್ಮಿಂದ ಒಳ್ಳೆಯದನ್ನು ಮಾಡಲು ಆಗದಿದ್ದರೂ ಆದಿತು ಕೆಡುಕನ್ನು ಮಾಡಬಾರದೆಂಬಂತೆ ಯೋಚಿಸಬೇಕು.
ಸರ್ಕಾರಗಳು/ಪೋಲಿಸರು ಏನು ಮಾಡಬೇಕು..? ಸುಳ್ಳು ಸುದ್ದಿಗಳನ್ನು ಹಬ್ಬಿಸುವವರನ್ನು ಪತ್ತೆ ಹಚ್ಚಿ ಎಚ್ಚರಿಸಬೇಕು. ಗಂಭೀರ ವಿಷಯವಾಗಿದ್ದರೆ ಶಿಕ್ಷಿಸುವಂತಾಗಬೇಕು.ಇದೆಲ್ಲ ಕಾನೂನುಗಳು ಇದ್ದರೂ ಅವುಗಳ ಅನುಷ್ಟಾನ ಇನ್ನು ತೀವ್ರಗತಿಯಲ್ಲಿ ಆಗಬೇಕು. ಸೈಬರ್ ಕ್ರೈಂ ತಡೆಗಟ್ಟುವ ಕೆಲಸ ತುರ್ತುಗತಿಯಲ್ಲಿ ಸಾಗಬೇಕು. ಒಂದು ಸುದ್ದಿ ಸುಳ್ಳು ಎಂದು ಕಂಡುಬಂದಲ್ಲಿ ತುರ್ತಾಗಿ ವಿವರಣೆಯೊಂದಿಗೆ ಅದು ಸುಳ್ಳು ಸುದ್ದಿ ಎಂದು ಧೃಡಪಡಿಸಬೇಕು.ಅದು ಲಿಖಿತ ರೂಪದಲ್ಲಿ ಧೃಡಿಕರಣಗೊಳ್ಳಬೇಕು. ಇಲ್ಲವಾದಲ್ಲಿ ಇದನ್ನೂ ಕೂಡ ಸುಳ್ಳು ಎಂದು ನಂಬುವಂತಾಗಬಾರದು.
ರಾಜು ಪವಾರ್





1 thought on ““ಸಾಮಾಜಿಕ ಜಾಲತಾಣಗಳಲ್ಲಿ ಸತ್ಯದ ಹುಡುಕಾ(ಗಾ)ಟ” ವಿಶೇಷ ಲೇಖನ ರಾಜು ಪವಾರ್”