ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದೊಂದು ಶಾಲೆ. ಆ ಶಾಲೆಯಲ್ಲಿ ಶಾಲೆ ಮುಗಿಯುವ ಸಮಯಕ್ಕೆ ಹೊಡೆಯುವ ಘಂಟೆಯ ಶಬ್ದಕ್ಕೆ ಎಲ್ಲ ಶಿಕ್ಷಕರು ಧಾವಿಸಿ ಮನೆಗೆ ಓಡುವ ಧಾವಂತದಲ್ಲಿ ಇದ್ದರೆ ಕೇವಲ ಓರ್ವ ವ್ಯಕ್ತಿ ಮಾತ್ರ ಆರಾಮಾಗಿ ಇರುತ್ತಿದ್ದರು.

ವಿದ್ಯಾರ್ಥಿಗಳು ಕೂಡ ಮನೆಗೆ ಓಡುವ ಆತುರದಲ್ಲಿ ಇರುತ್ತಿದ್ದರು. ಆದರೆ ಅದೊಬ್ಬ ವಿದ್ಯಾರ್ಥಿ ಮಾತ್ರ ತನ್ನ ಗುರುಗಳು ಹೀಗೇಕೆ ಶಾಲೆಯಲ್ಲಿಯೇ ಉಳಿದುಕೊಳ್ಳಲು ಬಯಸುತ್ತಾರೆ ಎಂಬುದನ್ನು ತಿಳಿಯುವ ಕಾತುರದಿಂದ ಆ ದಿನ ಶಾಲೆ ಬಿಟ್ಟೊಡನೆ ಮನೆಯತ್ತ ಧಾವಿಸಲಿಲ್ಲ, ಬದಲಾಗಿ ಶಾಲೆಯ ಹೊರ ಆವರಣದಲ್ಲಿ ಯಾರೋ ಬಂದು ತನ್ನನ್ನು ಕರೆದೊಯ್ಯುವರು ಎಂಬ ರೀತಿಯಲ್ಲಿ ಕಾಯುತ್ತಾ ನಿಂತುಕೊಂಡ. ಆ ಶಿಕ್ಷಕರಿಗೂ ಕೂಡ ಆ ಬಾಲಕ  ಅವರನ್ನು ಹಿಂಬಾಲಿಸಬಲ್ಲ ಎಂಬ ಸುಳಿವೇ ಸಿಗದಂತೆ ಆತನ ವರ್ತನೆ ಇತ್ತು.

ಪ್ರತಿಯೊಂದು ತರಗತಿಯ ಕೋಣೆಗಳು ಖಾಲಿಯಾದವು.ಶಾಲೆಯ ಕಾರಿಡಾರುಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಾ ಕ್ರಮೇಣ ಎಲ್ಲವೂ ಶಾಂತವಾಯಿತು.ಇದೀಗ ಆ ಶಿಕ್ಷಕರು ಎರಡು ಕುರ್ಚಿಗಳನ್ನು ತಂದು ಹೊರಗೆ ಹಾಕಿಕೊಂಡರು. ಯಾವಾಗಲೂ ಶಾಲೆಗೆ ತಾವು ತಂದಿರುತ್ತಿದ್ದ ಪುಟ್ಟ ಬ್ಯಾಗನ್ನು ಕುರ್ಚಿಯ ಮೇಲಿಟ್ಟು ಅದನ್ನು ತೆರೆದು ಅದರಿಂದ ಹಳೆಯ ಡೈರಿಯನ್ನು ಹೊರಗೆ ತೆಗೆದರು.
ಕಂದು ಬಣ್ಣದ ಹೊರ ಆವರಣವನ್ನು ಹೊಂದಿದ್ದ ಆ ಡೈರಿಯನ್ನು ತೆಗೆದು ಡೆಸ್ಕ್ ನ ಮೇಲೆ ಕುಳಿತುಕೊಂಡು ಅದರಲ್ಲಿ ಬರೆಯಲಾರಂಭಿಸಿದರು.

ವಿದ್ಯಾರ್ಥಿಗೆ ತುಸು ಸೋಜಿಗವಾಯಿತು. ಅದು ತಮ್ಮ ತರಗತಿಯ ಹಾಜರಿ ಪುಸ್ತಕವಾಗಿರಲಿಲ್ಲ. ಪ್ರತಿ ಬಾರಿಯೂ ತೆಗೆದುಕೊಳ್ಳುವ ಪರೀಕ್ಷೆಯ ಅಂಕಗಳನ್ನು ನಮೂದಿಸುವ ಪುಸ್ತಕವು ಕೂಡ ಅದಾಗಿರಲಿಲ್ಲ…. ಹಾಗಾದರೆ ಗುರುಗಳು ಏನನ್ನು ಬರೆಯುತ್ತಿದ್ದಾರೆ ಎಂಬ ಕುತೂಹಲ ಆತನಲ್ಲಿ ಸಮಯ ಕಳೆದಂತೆ ಹೆಚ್ಚಾಯಿತು

ಅದೇ ಸಮಯದಲ್ಲಿ ಶಾಲೆಯ ಕಾರ್ಯದರ್ಶಿ ಹೆಡ್ ಮಾಸ್ತರರ ಕೋಣೆಯಿಂದ ಈ ಶಿಕ್ಷಕರಿಗೆ ಕರೆ ಕಳುಹಿಸಿ ದರು. ಬರೆಯುತ್ತಿದ್ದ ಡೈರಿಯನ್ನು ಹಾಗೆಯೇ ಬಿಟ್ಟು ಆ ಶಿಕ್ಷಕ ತರಗತಿಯ ಕೋಣೆಯಿಂದ ಹೊರಟುಹೋದರು  ಹೆಡ್ ಮಾಸ್ತರರ ಕೋಣೆಗೆ ಶಿಕ್ಷಕರು ಹೋಗುವುದನ್ನೇ ಕಾಯುತ್ತಿದ್ದ ಬಾಲಕ ನಿಧಾನವಾಗಿ ಯಾರಿಗೂ ಕಾಣದಂತೆ ಡೆಸ್ಕ್ ನ ಬಳಿ ಬಂದು ನಿಂತನು. ಡೈರಿಯ ಮೇಲೆ ಕಣ್ಣಾಡಿಸಿದನು.
.
-ವಾರಗಳ ನಂತರ ವಿಮಲ ತನ್ನ ಕೈಯನ್ನು ಮೊದಲ ಬಾರಿಗೆ ಎತ್ತಿದಳು
 -ಜಯಂತ ಮೊತ್ತ ಮೊದಲ ಬಾರಿಗೆ ಯಾವುದೇ ತಪ್ಪಿಲ್ಲದಂತೆ ಪಠ್ಯದ ಒಂದು ಇಡೀ ಪ್ಯಾರಾ ಓದಿದ. ಈ ಕುರಿತು ಆತನನ್ನು ನಾನು ಪ್ರಶಂಸಿಸಿದಾಗ ಆತನ ಮುಖದಲ್ಲಿ ಮಂದಹಾಸ ಮೂಡಿತು.
-ದಯಾನಂದನ ಗಮನ ತರಗತಿ ಕೋಣೆಯ ಹೊರಗೆ ಇತ್ತು ಮುಂದಿನ ಬಾರಿ ಆತನ ಕುರಿತು ಮತ್ತಷ್ಟು ಗಮನಹರಿಸಬೇಕು ಎಂದೆಲ್ಲಾ ಬರೆದದ್ದು ಕಂಡಿತು.
ಪುಟದ ಕೊನೆಯಲ್ಲಿ ತನ್ನ ಹೆಸರನ್ನು ಕಂಡ ಬಾಲಕ ಕಾತರದಿಂದ ಓದಲ ಆರಂಭಿಸಿದ.
-ಮಹಾಂತೇಶ ಇಂದು ಯಾರಿಗೋ ಕಾಯುತ್ತಿರುವ ನೆವ ದಿಂದ  ಶಾಲೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಾನೆ… ಆತನ ಕುತೂಹಲ ಮೇರೆ ಮೀರಿದೆ… ನಿಜವಾಗಿಯೂ ಇದು ಒಳ್ಳೆಯ ತೆರೆದುಕೊಳ್ಳುವಿಕೆ ಮುಂದಿನ ದಿನಗಳಲ್ಲಿ ಆತನ ಕುರಿತು ಇನ್ನಷ್ಟು ಕಾಳಜಿ ವಹಿಸಬೇಕು ಎಂಬ ಬರಹವನ್ನು ನೋಡಿ ಬಾಲಕ ಉಗುಳು ನುಂಗಿಕೊಂಡ. ಅರೆ! ನಾನು ಬೇಕೆಂದೆ ತರಗತಿಯ ಕೋಣೆಯಲ್ಲಿ ಉಳಿದುಕೊಂಡಿದ್ದು ಈ ಶಿಕ್ಷಕರಿಗೆ ಹೇಗೆ ಗೊತ್ತಾಯ್ತು ಎಂದು ಆತನಿಗೆ ಸೋಜಿಗವಾಯಿತು. ಗುರುಗಳು ತನ್ನನ್ನು ಗಮನಿಸುತ್ತಿದ್ದಾರೆ ಎಂಬುದೇ ಆತನ ಸಂತಸಕ್ಕೆ ಕಾರಣವಾಯಿತು.

 ನೀನು ಇದನ್ನು ಓದಿದೆಯಾ? ಎಂಬ ದನಿ ಕೇಳಿ ಆತ ಹಿಂದೆ ತಿರುಗಿ ನೋಡಿದ. ಅಲ್ಲಿ ಶಿಕ್ಷಕರು ನಸುನಗುತ್ತಾ ನಿಂತಿದ್ದರು. ನಿಧಾನವಾಗಿ ಪುಸ್ತಕವನ್ನು ಮುಚ್ಚುತ್ತಾ ಈ ರೀತಿ ಪ್ರತಿದಿನ ಮಕ್ಕಳ ಕುರಿತು ನಾನು ಕೆಲವು ವಿಷಯಗಳನ್ನು ಬರೆಯುತ್ತೇನೆ… ಎಲ್ಲವನ್ನು ಕಡ್ಡಾಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಅದು ಮರೆತು ಹೋಗಬಾರದು ಎಂಬ ಕಾರಣಕ್ಕಾಗಿ ಹೀಗೆ ಬರೆಯುತ್ತೇನೆ ಎಂದು ಹೇಳಿ ಅವರು ತಮ್ಮ ಮಾತನ್ನು ನಿಲ್ಲಿಸಿದರು.

 ಮತ್ತೆ ಮುಂದುವರಿಸಿ ಹೀಗೆ ಮಕ್ಕಳ ಕಡೆ ಗಮನವಿಟ್ಟು ಅವರ ಅಭ್ಯಾಸಗಳನ್ನು ನಾವು ನೋಡಿದಾಗ ಅವರ ಕುರಿತು ಹೆಚ್ಚಿನ ಮಾಹಿತಿ ದೊರೆಯುತ್ತದೆ. ಎಷ್ಟೋ ಬಾರಿ ಕೆಲವರು ಎಲ್ಲ ಗೊತ್ತಿದ್ದು ಉತ್ತರ ಹೇಳಲು ಹಿಂಜರಿಯುತ್ತಾರೆ, ಆಟ ಪಾಠಗಳಲ್ಲಿ ಭಾಗವಹಿಸುವುದಿಲ್ಲ ಪಠ್ಯೇತರ ಚಟುವಟಿಕೆಗಳಿಂದ ದೂರವೇ ಉಳಿಯುತ್ತಾರೆ ಮತ್ತೆ ಕೆಲ ಮಕ್ಕಳು ಕೀಟಲೆ ಮಾಡಿಯೂ ಏನೂ ಗೊತ್ತಿಲ್ಲದ ಮಳ್ಳರಂತೆ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ಅವರನ್ನು  ಪ್ರೀತಿಯಿಂದ ಮಾತನಾಡಿಸಿದಾಗ ನಿಧಾನವಾಗಿ ಎಲ್ಲರೊಂದಿಗೆ ಬೆರೆಯಲು ಆರಂಭಿಸುತ್ತಾರೆ ಎಂದು ತನಗೆ ತಾನೆ ಹೇಳಿಕೊಳ್ಳುವಂತೆ ಶಿಕ್ಷಕರು ಮುಂದುವರೆಸಿದರು.

ನಮ್ಮಂತಹ ಶಿಕ್ಷಕರು ಬಹಳಷ್ಟು ಬಾರಿ ಮಕ್ಕಳು ಕೇವಲ ಕಲಿಯಲು ಶಾಲೆಗೆ ಬರುತ್ತಾರೆ ಎಂದು ಭಾವಿಸುತ್ತೇವೆ. ಆದರೆ ಎಷ್ಟೋ ಬಾರಿ ಮಕ್ಕಳು ಬಾಯಿಂದ ಹೇಳಲು ಸಾಧ್ಯವಾಗದ ಎಷ್ಟೋ ವಿಷಯಗಳನ್ನು ತಮ್ಮ ತಲೆಯಲ್ಲಿ ತುರುಕಿಕೊಂಡು ತರಗತಿಯ ಕೋಣೆಯಲ್ಲಿ ಬಂದು ಕುಳಿತಿರುತ್ತಾರೆ. ಅಂತಹ ಮಕ್ಕಳ ಭಾವನೆಗಳನ್ನು ಅವರು ಹೇಳದೆಯೇ ಅರಿತುಕೊಂಡು ಅವುಗಳಿಗೆ ಪರಿಹಾರ ಹುಡುಕುವುದು ಶಿಕ್ಷಕರಾದ ನಮ್ಮ ಕರ್ತವ್ಯ… ನೀನೇನಂತಿಯ? ಎಂದು ಹೇಳಿ ಆ ಬಾಲಕನ ಬೆನ್ನು ತಟ್ಟಿ ಪ್ರಶ್ನಾರ್ಥಕವಾಗಿ ನೋಡಿದರು.

ಶಾಲೆಯ ಯಾವುದೇ ಪಠ್ಯ ಪುಸ್ತಕದಲ್ಲಿಯೂ ಆ ಪಾಠ ಇರಲಿಲ್ಲವಾದರೂ ಆ ಬಾಲಕನಿಗೆ ಕಲಿಸದೆಯೇ ಒಂದು ಹೊಸ ಪಾಠದ ಅರಿವಾಯಿತು. ಕಲಿಕೆ ಎಂಬದು ತರಗತಿ ಕೋಣೆಯಲ್ಲಿ ಮಾತ್ರವಲ್ಲ. ಪಠ್ಯದ ವಿವರಣೆ ಕೊಡುವುದು ಮಾತ್ರ ಕಲಿಕೆಯಲ್ಲ, ಪರೀಕ್ಷೆಯನ್ನು ತೆಗೆದುಕೊಂಡು ಮಕ್ಕಳ ಉತ್ತರಗಳಿಗೆ ಅಂಕಗಳನ್ನು ಕೊಡುವುದು ಕೂಡ ಕಲಿಕೆಯ ಭಾಗವಲ್ಲ. ನಿಜವಾದಕಲಿಕೆ ಮಕ್ಕಳ ಮೇಲೆ ಗಮನವಿಟ್ಟು ಅವರ ಮಾತುಗಳನ್ನು ಹೆಚ್ಚು ಆಲಿಸುವುದು ಅದರಲ್ಲೂ ಅವರು ಹೇಳುವ ಮಾತಿಗಿಂತ ಹೇಳದೆ ಉಳಿಸಿದ ಮಾತುಗಳನ್ನು ಅರಿತುಕೊಳ್ಳುವುದು ಕಲಿಸುವಿಕೆಯ ಒಂದು ಭಾಗ ಎಂಬುದು ಆ ಬಾಲಕನಿಗೆ ಮನದಟ್ಟಾಯಿತು.

ಹೌದಲ್ವೆ ಸ್ನೇಹಿತರೆ?  ಮೇಲಿನ ಈ ಕಥೆಯ ಸಾರ ನೂರು ಪ್ರತಿಶತ ನಿಜ. ಪ್ರತಿಯೊಂದು ಮಗುವಿನಲ್ಲೂ ಒಂದು ಕಥೆ ಇರುತ್ತದೆ. ಎಲ್ಲ ಮಕ್ಕಳು ಕೂಡ ತಮ್ಮದೇ ಆದ ಸಮಸ್ಯೆಗಳೊಂದಿಗೆ ಒದ್ದಾಡುತ್ತಿರುತ್ತಾರೆ. ಎಷ್ಟೋ ಬಾರಿ ಅವರ ಮಾತುಗಳನ್ನು ಅಯ್ಯೋ! ಸಣ್ಣ ಮಕ್ಕಳು ಅವರಿಗೇನು ತಿಳಿಯುತ್ತೆ ಎಂದು ಹೇಳುವ ಮೂಲಕ ಕೇಳಿಸಿಕೊಳ್ಳದೆ ಹೋಗುವ ಪಾಲಕರು ಮತ್ತು ಶಿಕ್ಷಕರ ನಡುವೆ ನಮ್ಮ ಕಥೆಯ ಶಿಕ್ಷಕ ವಿಭಿನ್ನವಾಗಿ ಕಾಣುತ್ತಾನೆ.

ಶಿಕ್ಷಕರು ಇರಬೇಕಾಗಿರುವುದು ಹಾಗೆಯೇ. ಮಕ್ಕಳು ಹೇಳಿಕೊಳ್ಳುವ ಭಾವನೆಗಳಿಗಿಂತ ಅವರ ಹೇಳದೆ ಉಳಿದ ಮಾತುಗಳಲ್ಲಿ ಅವರ ಮುಂದಿನ ಬದುಕಿನ, ಭವಿಷ್ಯದ ಮುನ್ನುಡಿ ಅಡಗಿರುತ್ತದೆ. ಅವರ ನಾಡಿಮಿಡಿತವನ್ನು ಅರಿತು ಸೂಕ್ತ ಸಮಯದಲ್ಲಿ ತಪ್ಪು ಸರಿಗಳ ಅರಿವನ್ನು ಮೂಡಿಸಿ ಉತ್ತಮ ಮಾರ್ಗದಲ್ಲಿ ಚಲಿಸಲು ಪ್ರೋತ್ಸಾಹಿಸುವ ಮೂಲಕ ಮಕ್ಕಳನ್ನು ಭವಿಷ್ಯದ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರು ಪ್ರಸ್ತುತ ಜೀವನದ ಅವಶ್ಯಕತೆ.
ಅಂತಹ ಶಿಕ್ಷಕರ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂಬ ಹಾರೈಸುವ


About The Author

1 thought on ““ಶಿಕ್ಷಣಕ್ಕೆ…. ಹೊಸ ವಾಖ್ಯಾನ” ವೀಣಾ ಹೇಮಂತ್ ಗೌಡ ಪಾಟೀಲ್”

Leave a Reply

You cannot copy content of this page

Scroll to Top