ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲರಿಗೂ ನಮಸ್ಕಾರಗಳು.

ತಾವೆಲ್ಲರೂ ಕುಶಲವೆಂದೇ ನಾನು ಭಾವಿಸುತ್ತೇನೆ. ಸೆಪ್ಟಂಬರ್ ಎಂದಾಕ್ಷಣ ನಿಮಗೆ ನೆನಪಾಗುವ ಸಂಗತಿಯಾವುದು, ಹೇಳಬಲ್ಲಿರಾ? ಹೌದು, ಶಿಕ್ಷಕರ ದಿನಾಚರಣೆ. ಸರ್ವ ಶಿಕ್ಷಕರ ಹಾಗೂ ವಿದ್ಯಾರ್ಥಿಗಳಪಾಲಿನ ಮೇರು ವ್ಯಕ್ತಿತ್ವ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಅವರ ಜನ್ಮದಿನವಾದ ಸೆಪ್ಟಂಬರ್ – 5 ನ್ನು ಇಡೀ ದೇಶದಾದ್ಯಂತ ಅತ್ಯಂತ ಸಂಭ್ರಮದಿಂದ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತೇವೆ ಹಾಗೂ ಗುರುಗಳಿಗೆಲ್ಲರಿಗೂ ಗೌರವ ನಮನ ಸಲ್ಲಿಸುತ್ತೇವೆ. ಹಲವು ಶಾಲೆಗಳಲ್ಲಂತೂ ವಿದ್ಯಾರ್ಥಿಗಳೇ ಶಿಕ್ಷಕರಿಗೆ ವಿವಿಧ ಕ್ರೀಡೆ, ನೃತ್ಯ ಮುಂತಾದ ಸ್ಪರ್ಧೆಗಳನ್ನೇರ್ಪಡಿಸಿ ಶಿಕ್ಷಕರೂ ಮಕ್ಕಳ ಜೊತೆಗೆ ಮಕ್ಕಳಾಗುವಂತೆ ಮಾಡಿ ಸಂಭ್ರಮಿಸುತ್ತಾರೆ. ಇವೆಲ್ಲಾ ಮರೆಯಲಾರದ ಹಾಗೂ ಸದಾ ನೆನಪಿನಲ್ಲುಳಿಯುವ ಸಂಗತಿಗಳು.

ಮಕ್ಕಳೇ, ನೀವೀಗಾಗಲೇ ಓದಿರುವ ತಿಳಿದಿರುವ ಹಾಗೆ ಡಾ.ರಾಧಾಕೃಷ್ಣನ್ ಅವರು ಸಮಸ್ತ ಶಿಕ್ಷಕ ಕುಲದ ಹೆಮ್ಮೆ, ಗುರು ಎಂಬ ಪದಕ್ಕೆ ನಿಜದರ್ಥ ಕಲ್ಪಿಸಿದ ಮೇರು, ಆದರ್ಶ ಶಿಕ್ಷಕ ಎಂಬ ಪದಕ್ಕೆ ಸಂವಾದಿ….. ಶಿಕ್ಷಕ ಎನ್ನುವ ಪದ ಕಿವಿಗೆ ಬಿದ್ದೊಡನೇ ಥಟ್ಟನೇ ನೆನಪಾಗುವ ಹೆಸರು. ಇದಕ್ಕೆಲ್ಲಾ ಕಾರಣ ಶಿಕ್ಷಕ ವೃತ್ತಿಗೆ ಅಗತ್ಯವಿರುವಷ್ಟು ಹಾಗೂ ಅದಕ್ಕಿಂತ ಹೆಚ್ಚೇ ಗೌರವ ಬರುವ ಹಾಗೇ ತಮ್ಮ ವೃತ್ತಿ ಪೂರ್ಣಗೊಳಿಸಿದವರು. ಹಾಗಾಗಿಯೇ ಅವರ ನಿವೃತ್ತಿಯ ದಿನ ಅವರ ಶಿಷ್ಯವೃಂದದಿಂದ ಅವರಿಗೆ ಸಿಕ್ಕ ಗೌರವ ಎಂದಿಗೂ ಮರೆಯಲಾರದ್ದು ಹಾಗೂ ಇತರರಿಗೂ ಮಾದರಿಯಾದದ್ದು.  ಅವರು ಅಂತಹ ಶಿಷ್ಯಕೋಟಿಯನ್ನು ಪಡೆದಿದ್ದರು ಎಂಬುದೂ ಅವರ ಪಾಲಿನ ಹೆಮ್ಮೆ. ಕೆಲವೇ ಕೆಲವು ಗುರುಗಳಿಗೆ ಮಾತ್ರ ಅಂತಹ ಗೌರವ ಸಿಗಲು ಸಾಧ್ಯ. ನಾನೂ ಕೂಡಾ ಅಂತಹ ಪುಣ್ಯಶಾಲಿಯ ಸಾಲಿನಲ್ಲಿ ಇದ್ದೇನೆ ಎಂಬುದೂ ನನ್ನ ಪಾಲಿನ ಹೆಮ್ಮೆ. ವರ್ಗಾವಣೆಗೊಂಡು ಶಾಲೆಯಿಂದ ಬೀಳ್ಕೊಟ್ಟ ದಿನ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ದೊರೆತ ಅಭೂತಪೂರ್ವ ಸನ್ಮಾನ ನನ್ನ ವೃತ್ತಿಜೀವನವನ್ನು ಧನ್ಯವಾಗಿಸಿದ್ದಂತೂ ಸತ್ಯ. ಎಲ್ಲರಿಗೂ ಅಂತಹ ಗೌರವ ಸಿಗಲಿ ಎಂದು ಆಶಿಸುತ್ತೇನೆ.

ರಾಧಕೃಕ್ಷನ್ ಅವರಿಗೆ ಸಿಕ್ಕಂತೆ ಗೌರವ ಸಿಗಬೇಕೆಂದು ಬಯಸುವುದಾದರೆ ಪ್ರತೀ ಶಿಕ್ಷಕನೂ ತನ್ನ ಶಿಷ್ಯರಲ್ಲಿ ದಿಕ್ಸೂಚಿಯಂತಹ ಪರಿಣಾಮ ಬೀರಬೇಕು. ಅಕ್ಷರಜ್ಞಾನದ ಜೊತೆಗೆ ಜೀವನದ ಗುರಿ ಕುರಿತು ಸ್ಪಷ್ಟ ನಿರ್ದೇಶನ ನೀಡುವ ಮಾರ್ಗದರ್ಶನಾಗಿ ನಿಲ್ಲಬೇಕು. ನಿಜದರ್ಥದಲ್ಲಿ ಆತನೊಬ್ಬ ಗೆಳೆಯ, ತತ್ವಜ್ಞಾನಿ, ತಂದೆ-ತಾಯಿ-, ಅಣ್ಣ-ಅಕ್ಕ ಹೀಗೆ ಬಹುಮುಖ ಪಾತ್ರಗಳಿಂದ ಹತ್ತಿರವಾಗಬೇಕು. ‘ನಿನ್ನ ಮೇಲೆ ಪ್ರಭಾವ ಬೀರಿದ ಅಥವಾ ನಿನ್ನ ಮೆಚ್ಚಿನ ಗುರುಗಳು ಯಾರು’? ಎಂದು ಕೇಳುವ ಪ್ರಶ್ನೆಗೆ, ಶಾಲೆಯಲ್ಲಿ ಹತ್ತಾರು ಜನ ಶಿಕ್ಷಕರಿದ್ದರೂ ಬರುವ ಹೆಸರು ಒಂದೇ ಒಂದು ಆಗಿರುತ್ತದೆ. ಆ ಹೆಸರು ನಮ್ಮದಾಗಬೇಕು. ಈಗಲೂ ನನ್ನ ಪ್ರಾಥಮಿಕ ಶಾಲಾ ಗುರುಗಳು ನನ್ನ ಪಾಲಿನ ಮಾರ್ಗದರ್ಶಿ, ನನ್ನಂಥ ಏಕಲವ್ಯನ ಪಾಲಿನ ದ್ರೋಣ ಅವರು. ನನ್ನ ಬದುಕಿನ ನಿಜವಾದಶಿಲ್ಪಿ ಜಕಣಾಚಾರಿ ಗುರುಗಳು. ನನಗೀಗಲೂ ನೆನಪಿದೆ ತಂದೆಯವರೊಡನೆ ಒಮ್ಮೆ ಮಾತನಾಡುತ್ತಾ” ಶಂಕ್ರಣ್ಣ ಸುರೇಶನನ್ನ ಚೆನ್ನಾಗಿ ಓದ್ಸು, ಶಾಲೆ ಬಿಡಿಸ್ಬ್ಯಾಡ, ಅವನು ನೌಕರಿ ತಗೋತಾನೆ” ಅಂದ್ದದ್ದು ಸದಾ ಕಿವಿಯಲ್ಲಿ ಮಾರ್ಧನಿಸುತ್ತದೆ. ಅವರ ಆ ಮಾತು ನಿಜವಾಗಿಸುವ ಛಲ ನನ್ನನ್ನಿಂದು ಇಲ್ಲಿ ತಂದು ನಿಲ್ಲಿಸಿದೆ.

ಒಬ್ಬರನ್ನು ಆದರ್ಶ ಅಂದುಕೊಂಡ ಮೇಲೆ ಗುರಿ ತಲುಪುವವರೆಗೆ ಹಾಗೂ ನಂತರವೂ ನೆನಪಿಡಬೇಕಾದದ್ದು ಅತೀ ಅವಶ್ಯಕ. “ಅನುಸರಿಸಬೇಕು ಹಾಗೂ ಗುರಿಯ ಮೇರೆಯ ಮುಟ್ಟಿ ಜಯಘೋಷಮೊಳಗಿಸಬೇಕು”. ಮಕ್ಕಳೇ ನೀವೂ ನಿಮ್ಮ ಪಾಲಿನ ಗುರಿಯ ತೋರುವ ಗುರುವನ್ನು ಹುಡುಕುತ್ತಿದ್ದೀರಿ ಅಲ್ಲವೇ? ಶಿಕ್ಷಕರೇನೀವೂ ಕೂಡಾ ಆದರ್ಶರಾಗುವ ಮನಸ್ಸು ಮಾಡುತ್ತಿದ್ದೀರಿ ಅಲ್ಲವೇ? ನಿಮ್ಮೆಲ್ಲರ ಕನಸುಗಳು ನನಸಾಗಲಿ. ಮತ್ತೊಮ್ಮೆ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


About The Author

3 thoughts on “ಶಿಕ್ಷಕ ದಿನಾಚರಣೆ ವಿಶೇಷ- ಸುರೇಶ್ ಕಲಾಪ್ರಿಯ”

  1. ತುಂಬಾ ಅರ್ಥ ಪೂರ್ಣ ಲೇಖನ ಇತ್ತೀಚಿಗೆ ಶಿಕ್ಷಕ ಕರ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಕಡಿಮೆಯಾಗುತ್ತಿದೆ ಎನ್ನುವ ವಿಶ್ ಯು ಆತಂಕ ತಂದರು ಅಲ್ಲಲ್ಲಿ ಅಲ್ಲಲೊಬ್ಬರು ವೃತ್ತಿ ಗೌರವ ಹೆಚ್ಚು ಮಾಡುವವರಿದ್ದಾರೆ ಕೆಲವರು ಪ್ರಚಾರಕ್ಕೆ ಬರುತ್ತಾರೆ ಕೆಲವರು ಎಲೆ ಮರಿ ಕಾಯಿಯಂತೆ ಕೆಲಸ ಮಾಡುತ್ತಾರೆ

  2. ಆತ್ಮೀಯ ಗೆಳೆಯ ಕವಿ ಕಲಾಪ್ರಿಯ ಸುರೇಶ, ಅದ್ಭುತವಾದ ವಿಚಾರಗಳನ್ನು ಅಕ್ಷರ ರೂಪದಲ್ಲಿ ಅರ್ಪಿಸಿರುವಿರಿ ನಿಜಕ್ಕೂ ಎಂಹ ಉತ್ತಮ ವಿಷಯ ಓದಿ ತುಂಬಾ ಸಂತೋಷವಾಯಿತು. ಆತ್ಮೀಯ ಧನ್ಯವಾದಗಳು ಸರ್ ನಿಮಗೆ

  3. ಯಾವುದೇ ಸಾಧನೆ ಮಾಡಬೇಕಾದರೆ ಮಾರ್ಗದರ್ಶನದ ಅವಶ್ಯಕತೆ ಇದೆ.ಮಕ್ಕಳು ಮನೆಯಲ್ಲಿ ಹಾಗೂ ಗೆಳೆಯರೊಂದಿಗೆ ಸ್ವಲ್ಪ ಕಲಿತಿರುತ್ತಾರೆಯಾದರೂ ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದ ನಂತರ ಅವರ ಆಟ,ಮಾತು,ವರ್ತನೆ ,ಶಿಸ್ತು ಇವುಗಳಲ್ಲಿ ಬಹಳಷ್ಟು ಬದಲಾವಣೆ ಕಾಣಬಹುದು.
    ಪುಟ್ಟ ಮಕ್ಕಳಿರಲಿ,ಸ್ವಲ್ಪ ದೊಡ್ಡವರಿರಲಿ ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ನೋಡಿ ಅವರ ಮನಸ್ಸಿನಲ್ಲಿ ಭರವಸೆ,ಧೈರ್ಯ, ಛಲ,ನಂಬಿಕೆ ಹುಟ್ಟುವಂತೆ ಮಾಡುವ,ಮಕ್ಕಳ ಅತಿ ಪುಟ್ಟ ಸಾಧನೆಗೂ ಬೆನ್ನುಚಪ್ಪರಿಸಿ ಅವರು ದೊಡ್ಡ ಸಾಧನೆ ಮಾಡಲು ಪ್ರೇರಣೆ ನೀಡಿದ ಮತ್ತು ನೀಡುತ್ತಿರುವ ಎಲ್ಲಾ ಗುರುಗಳಿಗೆ ನಮಸ್ಕಾರಗಳು.
    ಗುರುಗಳೇ ತಮ್ಮ ಲೇಖನ ಉತ್ತಮವಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮಿಂದ ಬರಹಗಳು ಪ್ರಕಟವಾಗಲಿ.

Leave a Reply

You cannot copy content of this page

Scroll to Top