ಶಿಕ್ಷಕ ಸಂಗಾತಿ
ಅಕ್ಷತಾ ಜಗದೀಶ
ಶಿಕ್ಷಣ – ಶಿಕ್ಷಕ- ವಿದ್ಯಾರ್ಥಿ

ಶಿಕ್ಷಕರು ವಿದ್ಯಾರ್ಥಿಗಳ ಜೀವನದ ಮೇಲೆ ಮಹತ್ವಪೂರ್ಣವಾದ ಪರಿಣಾಮ ಬೀರುವ ಮೂಲಕ ಅವರ ಉಜ್ವಲ ಭವಿಷ್ಯದ ದಾರಿದೀಪದಂತೆ ಇದ್ದು ಮಾರ್ಗದರ್ಶಕರು ಆಗಿದ್ದಾರೆ. ಪ್ರತಿ ವಿದ್ಯಾರ್ಥಿಯು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಕಾರ್ಯ ನಿರ್ವಹಿಸಲು ಪ್ರೇರೇಪಿಸುವ ಶಕ್ತಿಯೇ ಶಿಕ್ಷಕರು. ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾದದ್ದು ಎಂದರು ಅತಿಶಯೋಕ್ತಿ ಆಗಲಾರದು.
ಒಂದು ಮಗುವಿಗೆ ಮಾದರಿಯಾಗಿ ನಿಲ್ಲುವ ಶಿಕ್ಷಕರು ತಮ್ಮ ವೃತ್ತಿ ಜೀವನವಿದ್ದಕ್ಕೂ ಬಹಳಷ್ಟು ವಿಷಯವನ್ನು ,ಸವಾಲನ್ನು ಎದುರಿಸಬೇಕಾಗುತ್ತದೆ. ತನ್ನ ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲದೇ ತನ್ನ ಸಹೋದ್ಯೋಗಿಗಳು ಸಿಬ್ಬಂದಿಗಳು ಮತ್ತು ಪೋಷಕರ ಬಗ್ಗೆಯೂ ಸಹ ಸಹಾನುಭೂತಿ ಉಳ್ಳವರಾಗಿರಬೇಕಾಗುತ್ತದೆ. ಆಧುನಿಕ ಯುಗಕ್ಕೆ ತಕ್ಕಂತೆ ಬೋಧಿಸುವ ಕೌಶಲ್ಯ ಹೊಂದಿರುವುದರ ಜೊತೆಗೆ ಉತ್ಸಾಹ ಭರಿತವಾಗಿ ಕಲಿಯುವವನು ಆಗಿರಬೇಕು. ನಿರಂತರವಾಗಿ ಹೊಸ ವಿಷಯವನ್ನು ಕಲಿಯುತ್ತಾ ತನ್ನ ವೃತ್ತಿಗೆ ನಿರಂತರವಾಗಿ ಓರೆ ಹೆಚ್ಚುತ್ತಾ ಈ ಜಗತ್ತಿಗೆ ತಕ್ಕಂತೆ ತನ್ನ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಮಹತ್ವದ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಪ್ರಪಂಚದಲ್ಲಿರುವ ಎಲ್ಲಾ ಉದ್ಯೋಗಗಳ ಮೂಲ ಶಾಲೆಯ ತರಗತಿಯಿಂದ ರೂಪಗೊಳ್ಳುತ್ತದೆ. ತರಗತಿಯಲ್ಲಿರುವ ನಕ್ಷತ್ರಗಳಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾವ ನಕ್ಷತ್ರ ಮಿಂಚುತ್ತವೆ ಎಂದು ಯಾರು ಊಹಿಸಲಾರರು. ಸರಿಯಾದ ಮಾರ್ಗದರ್ಶನ, ಸರಿಯಾದ ಮಾಹಿತಿ, ಉತ್ತಮ ವಿಚಾರ, ಆಲೋಚನೆಗಳನ್ನ ಅವರಲ್ಲಿ ಮೂಡಿಸುವ ಮೂಲಕ ಜಗತ್ತಿಗೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ. ಶಿಸ್ತು ಸಂಯಮ ಶಿಕ್ಷಕರಲಿದ್ದಾಗ ಮಾತ್ರ ಮಗು ಅದನ್ನು ಪಾಲಿಸುವುದು ಹಾಗೂ ಆಲಿಸುವುದು.
ತಂತ್ರಜ್ಞಾನ, ಆಧುನಿಕತೆ ಅದೆಷ್ಟೇ ಮುಂದುವರಿದರು ಸಹ ಮುದ್ದು ಮಕ್ಕಳ ಜೀವನ ಅರಳಿಸಲು ಶಿಕ್ಷಕರು ಅನಿವಾರ್ಯ. ಇಂದಿನ ಮಕ್ಕಳಿಗೆ ಮುಖ್ಯವಾಗಿ ಬೇಕಾದ ನೈತಿಕ ಮೌಲ್ಯವನ್ನು ಶಿಕ್ಷಕರು ಹೆಚ್ಚಾಗಿ ಬೋದಿಸಬೇಕು ಹಾಗೂ ನೈತಿಕತೆಯ ಮಹತ್ವವನ್ನು ಮನದಟ್ಟು ಮಾಡಬೇಕು. ಸಮಾಜದ ಭವಿಷ್ಯವೇ ಶಿಕ್ಷಕರ ಕೈಯಲ್ಲಿದೆ ಒಂದು ಹಂತ ತಲುಪಿದ ಮೇಲೆ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಶಿಕ್ಷಕರನ್ನು ನೆನೆದೇ ನೆನೆಯುತ್ತಾನೆ. ಆ ನೆನಪುಗಳು ಸುಂದರ ದಾರದಲ್ಲಿ ಪೋಣಿಸಿದ ಮುತ್ತಿನ ಹಾರದ ಹಾಗೆ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದಾಗಿದೆ.
ತನಗೆ ದಾರಿದೀವವಾದ ಶಿಕ್ಷಕರನ್ನು ನೆನಪಿಸಿಕೊಳ್ಳುವ ಈ ಸುದಿನವೇ ಶಿಕ್ಷಕರ ದಿನಾಚರಣೆ. ನಾನು ಕೂಡ ಶಿಕ್ಷಕಳಾಗಿ ನನ್ನ ಬದುಕನ್ನು ಸುಂದರವಾಗಿ ರೂಪಿಸಿದ ನನ್ನ ಶಿಕ್ಷಕ ವೃಂದದವರನ್ನು ನೆನೆಯುವ ಸುದಿನ- ಈ ದಿನ. ಹೆತ್ತವರಷ್ಟೇ ಮುಖ್ಯ ಪಾತ್ರ ವಹಿಸುವ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿಸುವ ಶಿಕ್ಷಕವೃಂದಕ್ಕೆ ಅನಂತ ಅನಂತ ನಮನಗಳೊಂದಿಗೆ ಶಿಕ್ಷಕರ ದಿನದ ಶುಭಾಶಯಗಳು.
ಅಕ್ಷತಾ ಜಗದೀಶ.




