ಶಿಕ್ಷಕ ಸಂಗಾತಿ
ಹನಿಬಿಂದು
ಆಧುನಿಕ ಗುರುವಿನ ಸ್ಥಾನಮಾನ

ಗುರು ಸಮಾನರಾದ ” ವರ್ಣ ಮಾತ್ರೆಗಳ ” ಕಲಿಸಿದ ಸರ್ವ ಗುರುಗಳ ಚರಣಾರವಿಂದಗಳಿಗೆ ಪೊಡಮಡುತ್ತಾ , ಮೊದಲ ಗುರುವಾದ ಅಮ್ಮನನ್ನು ನೆನೆಯುತ್ತಾ, ಸರ್ವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳೊಂದಿಗೆ ನನ್ನ ಬರಹಕ್ಕೆ ಮುನ್ನುಡಿ ಇಡುತ್ತಿರುವೆ.. ಹಿಂದಿನ ಕಾಲದ ಮಾತೊಂದಿದೆ ದಾಸ ವರ್ಣರು ಹೇಳಿದ ಈ ಮಾತು ಸರ್ವಕಾಲಿಕ ಸತ್ಯವಾಗಿದೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಇದು ಹಿಂದಿನ ಕಾಲಕ್ಕಾಗಿ ಉಳಿದಿದೆ . ಆದರೆ ಇಂದು ಶಿಕ್ಷಣ ಮುಂಚಿನಂತಿಲ್ಲ . ಗುರುಕುಲದ ಪದ್ಧತಿಯನ್ನು ಬೆಳೆಸಿಕೊಂಡು ಬಂದಂತಹ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಗುರು ಕೇಂದ್ರಿತವಾಗಿಯೇ ಇತ್ತು. ಆದರೆ ಕಾಲ ನಂತರ ಅದು ಬ್ರಿಟಿಷರ ಆಳ್ವಿಕೆಯಲ್ಲಿ ಬೇರೆ ತರಹ ಪಡೆದು ಗುರುಕುಲದಿಂದ ತರಗತಿ ಕೋಣೆಗಳಿಗೆ ವರ್ಗವಾಯಿತು. ಈ ತರಗತಿ ಕೋಣೆಗಳು ಇದುವರೆಗೂ ಮುಂದೆ ಗ್ರಹ ಬದಲಾವಣೆಗಳಾಗಿವೆ. ಹಲವಾರು ಶಿಕ್ಷಣದ ಕಾಯಿದೆಗಳಾಗಿವೆ. ಶೈಕ್ಷಣಿಕ ಚಿಂತಕರು ಹೆಚ್ಚಾಗಿದ್ದಾರೆ. ಹೀಗಿರುವಾಗ ಈಗ ಗುರು ಕೇಂದ್ರಿತ ಹೋಗಿ ಮಗು ಕೇಂದ್ರಿತ ಅಥವಾ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಆಗಿದೆ. ಹಾಗಾಗಿ ಹಿಂದಿನ ಕಾಲದ ಗುರುಭಕ್ತಿ, ಸಮರ್ಪಣೆ ಈಗ ಕಾಣಲು ಸಾಧ್ಯ ಇಲ್ಲ.
ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ಕೊಟ್ಟ ಏಕಲವ್ಯನಂತಹ ಶಿಷ್ಯರು ಹೇಗೆ ಸಿಗಲು ಸಾಧ್ಯ ಇಲ್ಲವೋ, ಅರ್ಜುನನನ್ನು ಪ್ರವಪಂಚದಲ್ಲೇ ಉತ್ತಮ ಧನುರ್ಧಾರಿಯಾಗಿ ಮಾಡಿದ ದ್ರೋಣಾಚಾರ್ಯರ ಹಾಗಿನ ಗುರುಗಳೂ ಕೂಡಾ ಇಂದು ಸಿಗುವುದು ವಿರಳವೇ. ಕಾರಣ ಇಂದು ಒಂದೇ ಕ್ಷೇತ್ರವಲ್ಲ. ಉತ್ತಮ ಎನಿಸಿಕೊಳ್ಳಬೇಕಾದರೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಹೊಂದಿರಬೇಕು. ಹಾಗಿರುವಾಗ ಅದೆಲ್ಲವೂ ಈಗಿನ ಕಾಲದಲ್ಲಿ ಒಂದೇ ಗುರುವಿನಲ್ಲಿ ಅಡಕವಾಗಿರಲು ಸಾಧ್ಯವಿಲ್ಲ. ಹಲವಾರು ಕ್ಷೇತ್ರಗಳು, ಅಲ್ಲಿ ಹಲವಾರು ಗುರುಗಳು. ಯಾವ ಗುರುವಿಗೆ ಯಾವ ಶಿಷ್ಯನೋ! ಯಾವ ಶಿಷ್ಯನಿಗೆ ಯಾವ ಗುರುವಿನ ಮೇಲೆ ಪ್ರೀತಿಯೋ… ಭಕ್ತಿಗಿಂತ ಹೆಚ್ಚಾಗಿ ಪ್ರೀತಿ ಉಕ್ಕುವ ಕಾಲವಿಂದು! ಗುರುವಿನ ಗುಲಾಮನಾಗುವ ಬದಲು ಗುರುವಿನ ಮಡದಿಯಾಗುವ, ಪತಿಯಾಗುವ ಸನ್ನಿವೇಶಗಳು ಇಂದು ಹೆಚ್ಚುತ್ತಿವೆ. ಕಾಲ ಬದಲಾಗಿದೆಯೋ, ಮಾನವರ ಗುಣಗಳು ಬದಲಾಗಿವೆಯೋ ತಿಳಿಯದು. ಅಂತೂ ಇಂತೂ ಗುರುವಿನ ಭಯದ ವಾತಾವರಣ ಹೋಗಿ ಹೆಗಲಿಗೆ ಕೈ ಹಾಕಿಕೊಂಡು ಹೋಗಿ ಒಟ್ಟಿಗೆ ಕಾಫಿ ಕುಡಿದು “ಸರ್, ಗುರುಗಳೇ, ಸಾರ್” ಅನ್ನುವ ಬದಲು “ಏನ್ ಗುರು?” ಎನ್ನುವ ವರೆಗೆ ಕಾಲ ಬದಲಾಗಿದೆ ಅಲ್ಲವೇ? ಅವರು, ಇವರು, ಗುರು ದೇವೋಭವ ಎನ್ನುವ ಬದಲು ಅವನು ನಮ್ ಟೀಚರ್, ಲೆಕ್ಚರ್, ಅವನೇನು ಮಹಾ, ಅವನೇನಾ, ಎನ್ನುವವರೆಗಿನ ಖತರ್ನಾಕ್, ಗುರುವನ್ನು ಮೀರಿಸುವ ಶಿಷ್ಯ ವೃಂದವಿಂದು ಹುಟ್ಟಿಕೊಂಡಿದೆ ಇಂದು.ಅಲ್ಲವೇ?
ಪ್ರಾಥಮಿಕ ವಿಭಾಗದ ಶಿಕ್ಷಕರನ್ನು ಪ್ರೌಢ ಶಾಲೆಗೆ ಬಂದಾಗ ಮರೆಯುವ , ಕಾಲೇಜಿಗೆ ಹೋಗುವಾಗ ಉಳಿದ ಮೊದಲು ಕಲಿಸಿದ ಶಿಕ್ಷಕರನ್ನು ಮರೆತೇ ಬಿಡುವ ಶಿಷ್ಯವೃಂದವಿಂದು ಸೃಷ್ಟಿಯಾಗಿದೆ, ಆಗುತ್ತಿದೆ. ಕಾರಣ ರಾಜಕೀಯ, ಜ್ಞಾನದ ಗುಣಮಟ್ಟ, ಬದುಕಿನ ವೇಗ, ಸಮಾಜದ ಪ್ರಭಾವ, ಸಾಮಾಜಿಕ ಜಾಲ ತಾಣಗಳ ಬಳಕೆ, ದಿನೇ ದಿನೇ ಓಡುತ್ತಿರುವ ಯುಗ ಎಂದರೆ ತಪ್ಪಿಲ್ಲ. ಗುರು ಶಿಷ್ಯರ ಸಂಬಂಧ ಇಂದು ಮೊದಲಿನ ಹಾಗೆ ಇಲ್ಲವೇ ಇಲ್ಲ. ಅಲ್ಲಿದ್ದ ಬಂಧ ಇಂದು ಮೊಟಕಾಗಿದೆ. ಹಲವಾರು ಗುರುಗಳ ಆಗಮನ ಬದುಕಿಗೆ ಆದ ಮೇಲೆ use and throw ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಜನಾಂಗ ಅವರ ಅಗತ್ಯ ಕಳೆದ ಮೇಲೆ ಇತರರ ಲೆಕ್ಕ ಇಡುವುದನ್ನು ಮರೆತೇ ಬಿಟ್ಟ ಹಾಗಿದೆ.
ಶಾಲೆ, ಸಮಾಜ, ಶಿಕ್ಷಕರು, ವಿದ್ಯಾರ್ಥಿಗಳು ಒಂದು ಚೌಕದ ನಾಲ್ಕು ಬಾಹುಗಳಂತೆ. ಅವೆಲ್ಲವೂ. ಚೆನ್ನಾಗಿ, ಒಬ್ಬರಿಗೊಬ್ಬರು, ಒಂದಕ್ಕೊಂದು ಸಂಬಂಧಿಸಿದ ಪೂರಕವಾಗಿ ಇದ್ದರೆ ಮಾತ್ರ ಬದುಕು ಸುಲಭ. ಅಂತೆಯೇ ಇಂದು ಸಿಗುವ ಗುರುಗಳಲ್ಲಿ ನೃತ್ಯ ಗುರುಗಳು, ನಾಟ್ಯ ಗುರುಗಳು, ಸಂಗೀತ ಗುರುಗಳು, ವಿಷಯ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಡ್ರೈವಿಂಗ್ ಟೀಚರ್, ನಟನಾ ತರಬೇತುದಾರರು, ಟೈಲರಿಂಗ್ ಟೀಚರ್ ಯಾರು ಯಾವಾಗ ಬೇಕಾದರೂ ತಮ್ಮ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿ ಅವರ ಕೃಪೆಯಿಂದ ತಮ್ಮ ಬದುಕನ್ನು ಅವರು ಕಟ್ಟಿಕೊಳ್ಳಬಹುದು.
ಒಂದಿಪ್ಪತ್ತ ಐದು ವರ್ಷಗಳ ಹಿಂದಿನ ಕಾಲದಲ್ಲಿ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಹಾವಳಿ ಇಲ್ಲದಾಗ ಶಿಕ್ಷಕರೇ ವಿದ್ಯಾರ್ಥಿಗಳ ಬದುಕಿನ ರೋಲ್ ಮಾಡೆಲ್ ಆಗಿದ್ದರು. ಈಗ ಹಾಗಲ್ಲವಲ್ಲ, ಈಗಿನ ವಿದ್ಯಾರ್ಥಿಗಳ ಕಲಿಕೆ ಆನ್ ಲೈನಿನಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಇರುವ ಯಾವುದೇ ಗುರುವಿನಿಂದ ಆಗಲು ಸಾಧ್ಯ ಇದೆ. ಹಣ ಇದ್ದರೆ ಅಷ್ಟೇ, ಮುಗಿಯಿತು. ನಮಗೆ ಬೇಕಾದ ಅಂಗಡಿಯನ್ನು, ಗುರುವನ್ನು ನಾವೇ ಹುಡುಕಿಕೊಂಡು ಕಲಿಯಬಹುದು. ಹಾಗಿರುವಾಗ ಗುರು ಕಣ್ಣೆದುರೇ ಕಾಣಬೇಕು ಎಂದೇನಿಲ್ಲ. ಪ್ರೇರಿತನಾಗಿ ಏಕಲವ್ಯನ ಹಾಗೆ ಕಲಿಯುವ ಶಿಷ್ಯರು ಬೇಕು ಅಷ್ಟೇ.
ಜನಸಂಖ್ಯೆ ಹೆಚ್ಚಾದ ಕಾರಣ ಇಂದು ವಿದ್ಯಾರ್ಥಿಗಳು ಮತ್ತು ಗುರುಗಳು ಲೆಕ್ಕವಿಲ್ಲದಷ್ಟು ಬೆಳೆದು ಬಿಟ್ಟಿದ್ದಾರೆ. ಹಿಂದಿನ ಹಾಗೆ ಗುರುಗಳಾಗಲು ಇಂದು ಸುಲಭವಿಲ್ಲ. ಹಲವಾರು ಪರೀಕ್ಷೆಗಳನ್ನು ಬರೆದು ಮೆರಿಟ್ ಪಡೆದು ಪಾಸ್ ಅನ್ನಿಸಿಕೊಂಡ, ಅದಕ್ಕಾಗಿಯೇ ಇರುವ ಪರೀಕ್ಷೆ ಎದುರಿಸಿ ಕೋರ್ಸ್ ಮುಗಿಸಿದವರು ಮಾತ್ರ ಗುರುಗಳಾಗಬಹುದು. ಕಲಿಕೆಗೆ ಆಸಕ್ತಿ ಬೇಕು, ಕಲಿಸಲು ಜ್ಞಾನ ಇರಬೇಕು. ಯಾವುದೇ ಕ್ಷೇತ್ರದ ಅಪಾರ ಜ್ಞಾನ ಮತ್ತು ತಾಳ್ಮೆ ನಮ್ಮನ್ನು ಗುರುವನ್ನಾಗಿ ಮಾರ್ಪಡಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಒಬ್ಬಿಬ್ಬರಿಂದಾಗಿ ಉಳಿದ ಗುರುಗಳಿಗೂ ಭಕ್ತಿ ಗೌರವ ಇಲ್ಲದಂತೆ ಆಗಿದೆ. ತಮ್ಮ ವಿದ್ಯಾರ್ಥಿನಿಯರನ್ನು ಹಾಗೂ ವಿದ್ಯಾರ್ಥಿಗಳನ್ನು ದೈಹಿಕವಾಗಿ ಮಾನಸಿಕವಾಗಿ ಹಿಂಸಿಸುವುದರ ಜೊತೆಗೆ ಅವರ ಜೊತೆ ಸರಸ ಸಲ್ಲಾಪಗಳಲ್ಲಿ ತೊಡಗಿರುವುದು, ತರಗತಿ ಕೋಣೆಗಳಲ್ಲಿ ಬೇಡವಾದ ವಿಷಯಗಳ ಬಗ್ಗೆ ಚರ್ಚಿಸುವುದು, ಲೈಂಗಿಕ ದುರ್ಬಳಕೆಗೆ ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಳ್ಳುವುದು, ನಂಬಿಕೆಗೆ ದ್ರೋಹ ಬಗೆದು ಮುದುಕರು ಕೂಡಾ ಸಣ್ಣ ಸಣ್ಣ ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗುವುದು ಸರ್ವೇ ಸಾಮಾನ್ಯ ಸುದ್ದಿಯಾಗಿ ಪ್ರತಿದಿನ ಸಂಪರ್ಕ ಮಾಧ್ಯಮಗಳಲ್ಲಿ ಓದಿ, ನೋಡಿ ಸುಮ್ಮನಾಗಿ ಬಿಡುತ್ತೇವೆ. ಹಾಗೆಯೇ ಗುರುವನ್ನು ರಸ್ತೆಯಲ್ಲಿ ಥಳಿಸಿದ ವಿದ್ಯಾರ್ಥಿಗಳು, ಚಾಕುವಿನಿಂದ ಚುಚ್ಚಿ ಸಾಯಿಸಿದ ವಿದ್ಯಾರ್ಥಿಗಳ ಗುಂಪು ಹೀಗೆ ಪ್ರಪಂಚ ಗುರು ಭಕ್ತಿಯ ಹೊರತಾಗಿ ಗುರುವೇ ತಲೆಬಾಗಿ ನಮಿಸುತ್ತಾ ಬದುಕುವ ಕಾಲ ಬಂದಿದೆ. ಕಾರಣ ವಿದ್ಯಾರ್ಥಿಗೆ ಪಾಠ ಬಾರದೆ ಹೋದರೆ ಅದು ಇಂದು ಗುರುವಿನ ಸಾಮರ್ಥ್ಯದ ಕೊರತೆ, ಅವನಿಗೆ ಕಲಿಸಲು ಆ ಗುರುವಿಗೆ ಸಾಮರ್ಥ್ಯ ಇಲ್ಲ ಎಂಬುದು ಅರ್ಥ. ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದರೆ ಅದಕ್ಕೆ ಗುರುಗಳು ನೇರ ಹೊಣೆ ಇಂದು. ಎಸೆಸೆಲ್ಸಿ, ಪಿಯುಸಿ ಕಡಿಮೆ ಫಲಿತಾಂಶ ಕಂಡರೆ ಶಿಕ್ಷೆ ಆಯಾ ಶಾಲೆಯ ಶಿಕ್ಷಕ ವೃಂದಕ್ಕೆ! ಶಿಕ್ಷಣವಿಂದು ಈ ಮಟ್ಟಕ್ಕೆ ಇಳಿದಿದೆ ಮಾತ್ರವಲ್ಲದೆ ಶಿಕ್ಷಕ ಇಂದು ತನ್ನೆಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡು, ಹರಿಯುವ, ಹೊಡೆಯುವ, ಕಣ್ಣು ದೊಡ್ಡದು ಮಾಡುವ, ಕೋಪ ತೋರಿಸುವ ಸ್ವಾತಂತ್ರ್ಯ ಕಳೆದುಕೊಂಡು ಕೋಡಿಲ್ಲದ ದನದ ಹಾಗೆ, ಬಾಲವಿಲ್ಲದ ಕೋಟಿಯ ಹಾಗೆ, ನೀರಿಲ್ಲದ ಮೀನಿನ ಹಾಗೆ ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ.
ಮುಂದೆ ಏನಾಗಬಹುದು, ನಾಳೆ ಏನಾಗಬಹುದು ಎಂಬ ಅರಿವು ತಾನೇ ಬೆಳೆಸಿಕೊಂಡ ಜನರು ಇಂದು ಶಿಕ್ಷಕ ವೃತ್ತಿಗೆ ತಿಲಾಂಜಲಿ ಹೇಳಿ ಬೇರೆ ವ್ಯಾಪಾರ ಪ್ರಾರಂಭಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳು ತಮ್ಮಂತೆ ಶಿಕ್ಷಕರಾಗದೆ ಇರಲಿ ಎಂದು ಆಶಿಸುತ್ತಾ ಅವರಿಗೆ ಉನ್ನತ ವಿದ್ಯಾಭ್ಯಾಸ ನೀಡಿ ಬೇರೆ ಕೆಲಸಗಳಿಗೆ ಪ್ರೋತ್ಸಾಹಿಸುತ್ತಾರೆ. ಅತಿಥಿ ಶಿಕ್ಷಕರ, ಉಪನ್ಯಾಸಕರ ಪಾಡು ಕೂಡಾ ಕಷ್ಟದ್ದು. ಸರಿಯಾದ ಸಮಯಕ್ಕೆ ಸರಿಯಾಗಿ ನೇಮಕವಾಗದೇ, ಸಂಬಳ ಸಿಗದೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ನೇಮಕಗೊಂಡ ಶಿಕ್ಷಕರಿಗೂ ತಮ್ಮ ತಲೆಯಲ್ಲಿ ಹೊರಲಾರದಷ್ಟು ಲೋಡ್ ಬಿದ್ದು ಶೈಕ್ಷಣಿಕ ಕಲಿಕಾ ಸೇವೆ ಮಾತ್ರವಲ್ಲದೆ, ಕ್ಲರ್ಕ್, ಕ್ಲೀನರ್, ಡಿ ದರ್ಜೆ ನೌಕರರ ಕಾರ್ಯವನ್ನು ಕೂಡಾ ತಾನೇ ಮಾಡಬೇಕಾದ ಅನಿವಾರ್ಯತೆ ಇಂದು ಬಂದೊದಗಿದೆ.
ಅಷ್ಟೇ ಅಲ್ಲದೆ ಶಾಲೆಗಳಲ್ಲಿ ಎಲ್ಲಾ ವಿಷಯಗಳಿಗೆ ವಿಷಯ ಶಿಕ್ಷಕರಿಲ್ಲದೆ, ಕಡಿಮೆ ಮಕ್ಕಳಿರುವ ಕಾರಣ. ಹೆಚ್ಚು ಹೊರೆ ಹೊರುವ ಕಾರ್ಯ, ಸ್ಪೆಶಲ್ ಕ್ಲಾಸ್, ಆಡಳಿತ ಕಾರ್ಯ, ಬಟ್ಟೆ, ಪುಸ್ತಕ, ತರಕಾರಿ, ಮೊಟ್ಟೆ ಹೊರುವ ಕಾರ್ಯವನ್ನೂ ಮಾಡಬೇಕಾಗಿದೆ. ಇದಕ್ಕೆಲ್ಲ ಯಾವ ಹೆಚ್ಚುವರಿ ಅನುದಾನವನ್ನೂ ಕೂಡಾ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಹಾಗಾಗಿ ತನ್ನ ವೈಯಕ್ತಿಕ ದೈಹಿಕ ಅನಾರೋಗ್ಯ ಹೆಚ್ಚಾಗುತ್ತಾ ಬೇಗನೆ ಆರೋಗ್ಯ ಕಳೆದುಕೊಂಡವರು ಹೆಚ್ಚಾಗಿದ್ದಾರೆ. ಸ್ಟ್ರೆಸ್ ಎನ್ನುವುದು ಕಲಿಕಾರ್ಥಿಗೂ ಗುರುವಿಗೂ ಇಬ್ಬರಿಗೂ ಅತಿಯಾಗಿದೆ.
ತನಗಿಷ್ಟ ಇರಲಿ ಇಲ್ಲದೆ ಇರಲಿ ವಿದ್ಯಾರ್ಥಿ ನಿಗದಿತ ಭಾಷೆ ಹಾಗೂ ಪಠ್ಯವನ್ನು ಕಲಿಯಲೇ ಬೇಕಿದೆ. ಇದು ಕೆಲವರಿಗೆ ಹೊರೆ ಅನ್ನಿಸಿದರೆ ಪಠ್ಯೇತರ ಹೊರೆ ಶಿಕ್ಷಕರ ಮೇಲಿದೆ. ಇನ್ನು ಎಲ್ಲವನ್ನೂ ತಲೆಯಲ್ಲಿ ತುಂಬಿಸಿ ಕೆಲಸ ಮಾಡುವ ಅನಿವಾರ್ಯತೆ ಓಡುತ್ತಿರುವ ಕಾಲದಲ್ಲಿ ಶಿಕ್ಷಕರ ಮೇಲೂ ಇದೆ.
ಏನಾಗಲಿ ಶಿಕ್ಷಕ ಅಥವಾ ಗುರು ಎಂಬ ಭಾವ ಸಾರ್ವಕಾಲಿಕವಾಗಿ ಇದ್ದೇ ಇದೆ ಅಲ್ಲವೇ? ಗುರು ಕರುಣೆಯೂ ಇದೆ, ಬುದ್ಧಿ ಬಂದ ಮೇಲೆ ಆದರೂ ಗುರುವಿನ ಮಹತ್ವ ಎಲ್ಲರಿಗೂ ಅರ್ಥ ಆಗಬಹುದು. ಗುರು ದೇವೋಭವ ಎಂಬ ವೇದಗಳ ಮಾತು ನಮ್ಮ ದೇಶದಲ್ಲಿ ಉಳಿಯಬಹುದು ಎಂಬ ಆಶಯಗಳೊಂದಿಗೆ ಸರ್ವ ಶಿಕ್ಷಕ ಮನಗಳಿಗೆ ಮತ್ತೊಮ್ಮೆ ಮಗದೊಮ್ಮೆ ರಾಷ್ಟ್ರೀಯ ಶಿಕ್ಷಕರ ದಿನದ ಶುಭಾಶಯಗಳು
ಹನಿಬಿಂದು





Very meaningful Article Mam Congratulations