ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಶ್ರೇಷ್ಠ ಶಿಕ್ಷಕ,ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಅಕ್ಷರದ ಮಹಾಬೆಳಕು ಸಾವಿತ್ರಿಬಾಯಿ ಪುಲೆ ಮತ್ತು ಸರ್ವ ಪ್ರಾಮಾಣಿಕ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತೇನೆ.
 ಮಗುವಿನ ಭವಿಷ್ಯ ನಿರ್ಮಾತೃ ,ಜ್ಞಾನದ ಖಣಿ, ಮಾರ್ಗದರ್ಶಕ ಎಂದೆಲ್ಲಾ ಹೊಗಳಿಕೆಗಳಿಗೆ ಅನ್ವರ್ಥಕವಾಗಿದ್ದ ಶಿಕ್ಷಕ ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲಿ ಮೌನವಾಗಿದ್ದಾನೆ.

 ಶ್ರೇಷ್ಠ ಚಿಂತಕರೊಬ್ಬರು ಹೇಳಿದಂತೆ,” ಅರ್ಹ ಹಾಗೂ ಯೋಗ್ಯ ವ್ಯಕ್ತಿಗಳು ಮೌನತಳಿದರೆ ಅನರ್ಹ ಹಾಗೂ ಅಯೋಗ್ಯರು ಬಾಯಿ ಬಿಡುತ್ತಾರೆ ಆಗ ಸಮಾಜದ ನಾಶ ಖಂಡಿತ”.ಇದು ಸದ್ಯದ ಪರಿಸ್ಥಿತಿಗೆ ಸರಿಯಾದ ಮಾತು. ಪ್ರಾಮಾಣಿಕರು, ಸತ್ಯವಂತರು, ಸಜ್ಜನರು, ನೇಪಥ್ಯಕ್ಕೆ ಸರಿದಂತೆ
ದಗಾಕೋರರ ಆರ್ಭಟ ಹೆಚ್ಚುತ್ತಿದೆ …

ಹೌದು, ಶಿಕ್ಷಕ ಮೌನವಾಗಿದ್ದಾನೆ
ದಾಖಲೆಗಳ ಆರ್ಭಟ ಹೆಚ್ಚುತ್ತಿದೆ…

 ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಕರ ಸ್ಥಾನಮಾನ ಬದಲಾಗಿದೆ. ಗುರುವೇ ಶ್ರೇಷ್ಠ ಎನ್ನುವ ಭಾವನೆ, ಸಂಸ್ಕೃತಿ ಈಗಿಲ್ಲ. ಎಲ್ಲವೂ ಕೇವಲ ಔಪಚಾರಿಕ. ಇಲ್ಲಿ ಮೌಲ್ಯಗಳು ಮಸಣ ಸೇರುತ್ತಿವೆ.ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಮಹತ್ವದ ಬದಲಾವಣೆಗಳು ಉಂಟಾಗುತ್ತಿವೆ.ಪ್ರಾಥಮಿಕ ಹಂತದಿಂದ ಪದವಿಯ ಹಂತದವರೆಗೂ ತಂತ್ರಜ್ಞಾನ ಬಳಕೆ ಅಗಾಧವಾಗುತ್ತಿದೆ.ಈ ತಾಂತ್ರಿಕತೆಯ ಭರಾಟೆಯಲ್ಲಿ ನೈತಿಕತೆ, ಶಿಸ್ತು ಮಾನವಿಯ ಮೌಲ್ಯಗಳು ಮಾಯವಾಗುತ್ತಿವೆ. ಇತ್ತೀಚೆಗಂತೂ ಶಿಕ್ಷಣ ಕ್ಷೇತ್ರವು ಪ್ರಯೋಗಗಾಲಯವಾಗಿದೆ.ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಶಿಕ್ಷಕರಿಗೆ ದಾಖಲೆಗಳ ಹೊರೆಯಾಗಿಸಿ ಅವರನ್ನು ಗುಮಾಸ್ತರನ್ನಾಗಿಸುವುದರ ಮೂಲಕ ಶಿಕ್ಷಣದ ಮೂಲ ಆಶಯವನ್ನು ನಾಶಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹಾಗೂ ಕಲಿಕಾ ಪರಿಸರ,ಪ್ರದೇಶದಿಂದ-ಪ್ರದೇಶಗಳಿಗೆ ಭಿನ್ನವಾಗಿರುತ್ತದೆ. ಭಾಷೆ,ಉಡುಗೆ, ಆಹಾರ, ರೀತಿ-ನೀತಿ, ಸಂಪ್ರದಾಯ, ಆಚರಣೆಗಳು, ಕೌಟುಂಬಿಕ, ಸಾಮಾಜಿಕ, ಹಾಗೂ ಆರ್ಥಿಕ ಹಿನ್ನೆಲೆಗಳು ಅತ್ಯಂತ ಭಿನ್ನತೆಯನ್ನು ಹೊಂದಿವೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶ.ಈ ಹಿನ್ನೆಲೆ ಆಧಾರಿತ ಮಗು ಕೂಡ ಭಿನ್ನ-ಭಿನ್ನ ಅಭಿರುಚಿ,ಕೌಶಲ್ಯ, ಜಾಣ್ಮೆ, ಬುದ್ಧಿವಂತಿಕೆಯನ್ನು ಹೊಂದಿರುತ್ತಾನೆ.ಆಯಾ ಪರಿಸರಕ್ಕೆ ತಕ್ಕಂತೆ ಮಕ್ಕಳ ಕಲಿಕಾ ಮಟ್ಟ ಗಮನಿಸಿ, ಬೋಧಿಸಲು

ಶಿಕ್ಷಕರನ್ನು ಎಲ್ಲಕಾರ್ಯಗಳಿಂದ ಮುಕ್ತಗೊಳಿಸುವುದುಇಂದಿನ ತುರ್ತಾಗಿದೆ. ಪ್ರಸ್ತುತ ಶಿಕ್ಷಕರು ಎದುರಿಸುತ್ತಿರುವ ಸವಾಲುಗಳನ್ನು ಹಲವಾರು ಆಯಾಮಗಳಲ್ಲಿ ಗಮನಿಸಬಹುದು.ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ, ನವೀನ ಯೋಜನೆಗಳು ಶಿಕ್ಷಕರಿಗೆ ಒತ್ತಡ ಆತಂಕವನ್ನುಂಟು ಮಾಡುತ್ತಿವೆ.ಕೋರೋನ ನಂತರದ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಮೊಬೈಲ್ಗಳಿಗೆ ದಾಸರಾದ ನೈತಿಕತೆಯೇ ಇಲ್ಲದ ವಿದ್ಯಾರ್ಥಿಗಳು,ಅವರ ಬಗ್ಗೆ ಕಾಳಜಿ ಇರದ ಪಾಲಕರು, ಅರ್ಥವಿಲ್ಲದ ಹಾಗೂ ಹೊರೆ ಎನಿಸುವ ನವೀನ ಯೋಜನೆಗಳು ಈ ಶಿಕ್ಷಕ ವೃತ್ತಿಯನ್ನು ಒಂದು ಸವಾಲನ್ನಾಗಿ ಮಾಡಿವೆ.
 ಆದಾಗ್ಯೂ ಕೆಲವು ಮೈಗಳ್ಳ, ನೀತಿಗೆಟ್ಟ ಶಿಕ್ಷಕರನ್ನು  ಹೊರತುಪಡಿಸಿದರೆ ಬಹುತೇಕ ಪ್ರಾಮಾಣಿಕ ಶಿಕ್ಷಕರು ಬದಲಾದ ಪರಿಸ್ಥಿತಿಯನ್ನು ಹಾಗೂ ಬದಲಾದ ಮಕ್ಕಳ ಮನೋಮಟ್ಟವನ್ನು ಬದಲಾದ ವ್ಯವಸ್ಥೆಗೆ ತಮ್ಮನ್ನು ಹೊಂದಿಸಿಕೊಂಡು ತಮ್ಮ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.ಅಂತವರಿಗೆ ಒಂದು ಸಲಾಂ .
ಅಷ್ಟೇ ಅಲ್ಲ ಅಂತ ಪ್ರಾಮಾಣಿಕ ಶಿಕ್ಷಕರನ್ನು ಗುರುತಿಸಿ ಅವರ ಕಾರ್ಯವನ್ನು ಹಾಗೂ ಅವರನ್ನು ಪ್ರೋತ್ಸಾಹಿಸುವುದು ಕೂಡ ಇಲಾಖೆಯ ಪ್ರತಿ ಹಂತದ ಪ್ರತಿ ಅಧಿಕಾರಿಯ ಕರ್ತವ್ಯವಾಗಿದೆ.

 ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ತೆಗೆದುಕೊಳ್ಳುವ ಶ್ರಮ ಮತ್ತು ಜವಾಬ್ದಾರಿಯ ಶೇಕಡ 25ರಷ್ಟನ್ನು ಸಹ ವಿದ್ಯಾರ್ಥಿಗಳು ಪಾಲಕರು ತೆಗೆದುಕೊಳ್ಳುತ್ತಿಲ್ಲ.ಶಿಕ್ಷಕರಿಗೆ ಹೊರೆಯಾಗುತ್ತಾ ಮಕ್ಕಳಿಗೆ ಹಗುರವಾಗುತ್ತಾ ಸಾಗುತ್ತಿದೆ ಇಂದಿನ ಶಿಕ್ಷಣ ವ್ಯವಸ್ಥೆ.ಆದ್ದರಿಂದ ಶಿಕ್ಷಕ ಮೌನವಾಗಿದ್ದಾನೆ,ಸಮಾಜ ಮಸಣವಾಗುತ್ತಿದೆ.

 ಬೇರೆ ಇಲಾಖೆಯಲ್ಲಿ ಕೇವಲ ಯಂತ್ರಗಳೊಂದಿಗೆ ಕೆಲಸ ಮಾಡಬೇಕಾದರೆ ಇಲ್ಲಿ ಜೀವಂತ ದೇವರುಗಳೊಂದಿಗೆ ಮುಂದಿನ ಸಮಾಜದ ಉತ್ತಮ ಪ್ರಜೆಗಳೊಂದಿಗೆ ಶಿಕ್ಷಕ ಕಾರ್ಯನಿರ್ವಹಿಸಬೇಕು.ಮಕ್ಕಳು ಮಶಿನ್ ಗಳಲ್ಲ…
 ಬೇರೆ ಇಲಾಖೆಗೂ ಶಿಕ್ಷಣ ಇಲಾಖೆಗೂ ಇರುವ ಮಹತ್ತರ ವ್ಯತ್ಯಾಸ ಇದೆ.

 ವೈದ್ಯ, ವಕೀಲ, ಪೊಲೀಸ್, ರಾಜಕಾರಣಿ,ಹೀಗೇ ಎಲ್ಲರನ್ನೂ ಗಮನಿಸುವ ಮಗು ಎಲ್ಲರ ಚರಿತ್ರೆ, ಕೆಲಸ ,ಅವರ ನಡೆಯನ್ನು  ಗಮನಿಸುತ್ತಾನೆ.ಅನುಕರಿಸುತ್ತಾನೆ.ಮಾಧ್ಯಮಗಳಿಂದ ಎಲ್ಲ ವಿಷಯಗಳನ್ನು ತಿಳಿದುಕೊಂಡೆ ಶಾಲೆಗೆ ಬರುವ ಮಗು ಇಲ್ಲಿ  ಮೌಲ್ಯಗಳ ಬೋಧನೆಯಿಂದ ಗೊಂದಲದ ಗೂಡಾಗುತ್ತಾನೆ.ಪ್ರತಿದಿನ ಭ್ರಷ್ಟತೆ, ಅನೈತಿಕತೆ ,ಅಶ್ಲೀಲತೆಯೇ ರಾರಾಜಿಸುತ್ತಿರುವ ಈ ಸಮಾಜದಲ್ಲಿ ಮಗುವಿಗೆ ಒಳ್ಳೆಯ ಅಂಶಗಳು ಎಲ್ಲಿಂದ ಬರಬೇಕು?ದುಡಿಮೆ, ಹಣ, ಅಂತಸ್ತು,ಅಧಿಕಾರಗಳ ಬೆನ್ನತ್ತಿರುವ ಪಾಲಕರಿಗೆ ಮಕ್ಕಳ  ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ.

ಶೀಥಿಲಗೊಂಡ ಕುಟುಂಬ
ವ್ಯವಸ್ಥೆಯೇ ಇದಕ್ಕೆ ಕಾರಣ.

 ರೌಡಿಗಳಂತೆ ಶಾಲೆಗೆ ಬರುವ,ಶಿಕ್ಷಕರಿಗೆ ಎದಿರು ವಾದಿಸುವಅಶ್ಲೀಲತೆಯನ್ನೇ ಮೈಗೂಡಿಸಿಕೊಂಡಿರುವ ಅಭ್ಯಾಸ ಮಾಡದ ಹಾಗೂ ಹೆಚ್ಚು ಗದರಿಸಿದರೆ ಶಾಲೆಯನ್ನು ಬಿಡುವ ಮಕ್ಕಳನ್ನು ಶಿಸ್ತಿಗೆ ಒಳಪಡಿಸುವುದು ಇಂದಿನ
ಬಹು ದೊಡ್ಡ ಸವಾಲಾಗಿದೆ.ಇಂಥಹ ಗುರುತರ ಜವಾಬ್ದಾರಿಯೊಂದಿಗೆ ಸಿಸಿಎ, ಎಫ್ ಎಲ್ ಏನ್, ಎಲ್ ಬಿ ಎ ಅಂತಹ ನೂತನ ಯೋಜನೆಗಳು ಶಿಕ್ಷಕರ ಹಾಗೂ ಮಕ್ಕಳ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನೇ ನಾಶಪಡಿಸುತ್ತಿವೆ.ಹಾಗೂ ಕೇವಲ ದಾಖಲೆಗೆ ಮುಖ್ಯವಾದಂತಹ ಇಂತಹ ಯೋಜನೆಗಳು ಶಿಕ್ಷಕರನ್ನು ಹೈರಾನಾಗಿಸಿವೆ.ವೈಯಕ್ತಿಕ ಬದುಕಿನಲ್ಲಿಯೂ ಬರೀ ಒತ್ತಡಗಳನ್ನೇ ಎದುರಿಸುತ್ತಿರುವ ಇಂದಿನ ಮಾನವನ ಜೀವಿತಾವಧಿ ಕಡಿಮೆಯಾಗುತ್ತಿದೆ ಇದಕ್ಕೆ ಶಿಕ್ಷಕರು ಹೊರತಾಗಿಲ್ಲ.

 ಸಮಾಜದ ಎಲ್ಲ ದಿಕ್ಕಿನಿಂದಲೂ ಅನೈತಿಕತೆ, ಅಶ್ಲೀಲತೆ,ಭ್ರಷ್ಟತೆ, ಅಪ್ರಾಮಾಣಿಕತೆ, ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ಅಶ್ಲೀಲ ಹಾಡು, ಸಾಹಿತ್ಯ, ಸಂಗೀತ ಹೀಗೆ ನೂರಾರು ಅನೈತಿಕತೆಯ ಪರಮಾವಧಿಯನ್ನು ತಲೆಯಲ್ಲಿಟ್ಟುಕೊಂಡು ಶಾಲೆಗೆ ಬರುವ ವಿದ್ಯಾರ್ಥಿ ಶಿಕ್ಷಕರಿಗೆ ತಲೆನೋವಾಗಿದ್ದಾರೆ.

 ಶಿಕ್ಷಕರಿಗೂ ವೈಯಕ್ತಿಕ ಬದುಕಿದೆ.ಬೇರೆ ಇಲಾಖೆಯಂತೆ ಇದು ಯಂತ್ರಗಳ ಆಧಾರಿತ ಇಲಾಖೆಯಲ್ಲ.
 ಮುಂದಿನ ಪ್ರಜೆಗಳ ನಿರ್ಮಾಣ ಇಲ್ಲಿಯ ಮುಖ್ಯ ಉದ್ದೇಶ.ಕೇವಲ ಶಿಕ್ಷಕರಷ್ಟೇ ಅಲ್ಲ ಸಮಾಜದ ಪ್ರತಿ ಹಂತದ ವ್ಯಕ್ತಿಯೂ ಮಗುವಿಗೆ ಮಾದರಿಯಾಗಿರಬೇಕಾಗಿರುತ್ತದೆ.
 ಭ್ರಷ್ಟ ,ರೌಡಿ, ಕಳ್ಳ, ದರೋಡೆಕೋರ, ಜೈಲುವಾಸಿ, ಹೀಗೆ ಇಂಥವರೇ ಈಗ ಸಮಾಜದ ಉನ್ನತ ಸ್ಥಾನದಲ್ಲಿದ್ದನ್ನು ಹಾಗೂ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿರುವುದನ್ನು ನೋಡುವ ಮಕ್ಕಳು ಅದನ್ನೇ ನಿಜವೆಂದು ನಂಬಿರುವುದು ದೊಡ್ಡ ದುರಂತವೇ ಸರಿ. ಇಂತಹ ಕೆಟ್ಟ ಸಂಸ್ಕೃತಿಯನ್ನೇ ವೈಭವೀಕರಿಸುವ ಮಾಧ್ಯಮಗಳು ಕೂಡ ಇದಕ್ಕೆ ಕಾರಣವಾಗಿವೆ.
 ನೈತಿಕ ಮೌಲ್ಯಗಳು, ಆದರ್ಶಗಳು ಕೇವಲ ಮಾತಿಗೆ ಸೀಮಿತ ಎಂಬರ್ಥ ಬರುವಂತೆ ಬದುಕುತ್ತಿರುವ ಇಂದಿನ ಜನರು ಮಕ್ಕಳಿಗೆ ಹೇಗೆ ಉತ್ತಮ ಜೀವನ ಕಲ್ಪಿಸಲು ಸಾಧ್ಯ?ಇಂಥ ಅಸಹ್ಯಕರ, ಅನಾಚಾರ,
  ನೀತಿಗೆಟ್ಟ ವ್ಯಕ್ತಿಗಳನ್ನು ಅನುಕರಿಸುವ ಮಕ್ಕಳು ಶಿಕ್ಷೆ ಇಲ್ಲದ ಶಿಕ್ಷಣ ವ್ಯವಸ್ಥೆಯಲ್ಲಿ ಹೆದರುವರೆ?

  ನೈತಿಕತೆಯೇ ಇಲ್ಲದ ಸಮಾಜವನ್ನು ಸದಾ ನೋಡುತ್ತಿರುವ ಮಕ್ಕಳು ಕೇವಲ ಶಾಲಾ ಬೋಧನೆಯಿಂದ ಒಳ್ಳೆಯವರು ಹೇಗಾದರು? ಕುಟುಂಬ, ಸಮಾಜ, ಶಾಲೆ ಹೀಗೆ ಈ ಮೂರು ವ್ಯವಸ್ಥೆಗಳು ಚೆನ್ನಾಗಿ ಉತ್ತಮ ಸಂಸ್ಕಾರ, ಸನ್ನಡತೆಯಿಂದ ಕೂಡಿದರೆ ಮಾತ್ರ ಮಕ್ಕಳು ಉತ್ತಮರಾಗುತ್ತಾರೆ.

 ಇಲ್ಲವಾದರೆ..

 ಶಿಕ್ಷಕ ಮೌನವಾಗುತ್ತಾನೆ,
ಸಮಾಜ ಮಸಣವಾಗುತ್ತದೆ…..
ಏನಂತೀರಿ???

“ಶಿಕ್ಷಕ ಸಮಾಜದ ಶ್ರೇಷ್ಠ ಶಿಲ್ಪಿ
ಅವರನ್ನು ಗೌರವಿಸಿ…”


About The Author

Leave a Reply

You cannot copy content of this page

Scroll to Top