ಶಿಕ್ಷಕ ಸಂಗಾತಿ
ಟಿ. ಪಿ. ಉಮೇಶ್
ಕಂಠಪಾಠದ ಕಲಿಕೆಯಿಂದ
ಮಕ್ಕಳನ್ನು ಹೊರತರಬೇಕು

ಶಿಕ್ಷಣ ಯಾವತ್ತು ನಿರಂತರವಾದ ಪ್ರಕ್ರಿಯೆ. ಅದು ನಿಂತ ನೀರಲ್ಲ ಹರಿವ ತೊರೆ. ಅನವರತ ಬೀಸುವ ಗಾಳಿ. ನಿತ್ಯ ಹೊಸತಾಗುವ ಚಿಗುರು. ಕಾಲಕ್ಕೆ ತಕ್ಕಂತೆ ಮಾನವನ ಬೆಳೆಯುವ ಬುದ್ಧಿಶಕ್ತಿ ಹಾಗು ಬದಲಾಗುವ ಮನೋಭಾವಕ್ಕೆ ತಕ್ಕಂತೆ ನವ ನಾಗರೀಕತೆಯ ಅವಶ್ಯಕತೆಗಳಿಗೆ ತಕ್ಕಂತೆ ಶಿಕ್ಷಣವು ಬದಲಾಗಲೇಬೇಕು. ಒಂದು ದೃಷ್ಟಿಯಿಂದ ಶಿಕ್ಷಣದಿಂದಲೇ ಸಮಾಜ ಮತ್ತು ನಾಗರೀಕತೆಯ ಪ್ರಗತಿಯುತ ಬದಲಾವಣೆಯೂ ಸಾಧ್ಯವಾಗಿದೆ!
ಶಿಕ್ಷಣದಿಂದ ಬದಲಾವಣೆಯೆಷ್ಟು ಆಗುವುದೋ ಹಾಗೆಯೇ ಬದಲಾವಣೆಗಾಗಿ ಶಿಕ್ಷಣದ ಸ್ಪಂದನೆಯೂ ಅವಶ್ಯಕವಾಗಿದೆ. ತರಗತಿ ಬೋಧನೆಯಲ್ಲಿ ನಾವಿನ್ಯಯುತ ವಿಧಾನಗಳ ಕಂಡುಕೊಂಡು ಮಕ್ಕಳ ಮನೋ ದೈಹಿಕ ಭಾವನಾತ್ಮಕ ಜ್ಞಾನಾತ್ಮಕ ವಿಕಾಸಕ್ಕೆ ಪ್ರಾಥಮಿಕ ಹಂತದಿಂದ ಸ್ನಾತಕ, ತಾಂತ್ತಿಕ, ವೈದ್ಯಕೀಯ, ಕೌಶಲಾಧಾರಿತ, ವೃತ್ತಿಪರ ಎಂಬ ಭೇದವಿಲ್ಲದೆ ಎಲ್ಲ ಹಂತದ ಬೋಧಕರು ಶ್ರಮಿಸಬೇಕಾಗಿದೆ.
ಇಂದಿನ ನಾಗಲೋಟದಿ ಬೆಳೆಯುತ್ತಿರುವ ತಾಂತ್ರಿಕತೆ, ನಗರೀಕರಣ, ಕೈಗಾರೀಕರಣ, ಯಂತ್ರೋಪಕರಣಗಳ ಕ್ರಾಂತಿ, ಸಂವಹನ ಸಂಪರ್ಕ ಮಾಧ್ಯಮಗಳಲ್ಲಾಗುತ್ತಿರುವ ವೇಗ, ಆರ್ಥಿಕತೆಯ ವೃದ್ಧಿ, ಸೈನಿಕ ಬಲವನ್ನೇ ಅವಲಂಬಿಸಿದ ದೇಶಗಳ ಬಲಾಬಲಗಳ ಲೆಕ್ಕಾಚಾರ, ಎಲ್ಲ ಕ್ಷೇತ್ರಗಳ ಹರಡಿಕೊಂಡಿರುವ ವ್ಯಾವಹಾರಿಕತೆ, ಪ್ರಮುಖವಾಗಿರುವ ವಾಣಿಜ್ಯಿಕ ಚಟುವಟಿಕೆಗಳು, ಕೌಟುಂಬಿಕ ಗೌರವ ಘನತೆಗಳಲ್ಲಿ ಕಾಣುತ್ತಿರುವ ಅತೀವ ವಿಘಟನೆ ಹಾಗು ದುರ್ಬಲತೆ, ಮಾನವೀಯ ಸಂಬಂಧಗಳಲ್ಲಿನ ಶಿಥಿಲತೆ, ಧರ್ಮ ರಾಜಕಾರಣದ ಬಲಿಷ್ಟತೆ, ಸಮಾಜವಾದಿ ಜಾತ್ಯಾತೀತ ಸಮಸಮಾಜದ ಆದರ್ಶಗಳ ಕಲುಷಿತತೆ, ಮಾನವ ಮೌಲ್ಯಯುತ ಜೀವನಕ್ಕಿಂತ ಕೋಮುವಾದಿ ಅಂಧಾಭಿನಗಳ ವಿಜೃಂಭಣೆ ಮುಂತಾದ ದೇಶದ ಮತ್ತು ವಿಶ್ವದ ಪ್ರಸ್ತುತ ಜೀವನದ ಚಲನೆಯಲ್ಲಿ ಆಗುತ್ತಿರುವ ಬದಲಾವಣೆಯಲ್ಲಿ ಶಿಕ್ಷಣವು ತನ್ನ ಮೂಲಭೂತ ಪರಿಕಲ್ಪನೆಯಲ್ಲಿ ಪರಿವರ್ತನೆ ಹೊಂದಲೇಬೇಕಿದೆ.
ಈ ತರಹದ ಗುರುತರ ಜವಾಬ್ದಾರಿಗಳ ನಿಭಾವಣೆಯಲ್ಲಿ ಬೋಧಕರಾಗಿರುವವರು ಪ್ರಾಥಮಿಕ ಕಲಿಕಾ ಹಂತದಿಂದಲೇ ಕೇವಲ ಪಠ್ಯಗಳ ಕಂಠಪಾಠದ ಕಲಿಕೆಯಿಂದ ಮಕ್ಕಳನ್ನು ಮೊದಲು ಹೊರ ತರಬೇಕು. ಅನುಭವಾತ್ಮಕ ಚಟುವಟಿಕೆಗಳ ಮೂಲಕ ಕಲಿಯುವ ಪ್ರಕ್ರಿಯೆಗೆ ಮೊದಲ ಆದ್ಯತೆ ನೀಡಬೇಕು.
ಪ್ರಯೋಗಶೀಲ ಅಧ್ಯಯನ, ಸಂಶೋಧನೆಯಲ್ಲಿ ಹಾಗು ಸುತ್ತಲ ಪರಿಸರದಿ ಕುತೂಹಲ ಗುಣ ಬೆಳೆಸಲು ಆರಂಭಿಕ ತರಗತಿಯಿಂದಲೇ ಕಿರು ಪ್ರಯೋಗಾಲಯಗಳ ಲಭ್ಯತೆಯನ್ನು ಎಲ್ಲ ಮಾದರಿಯ ಶಾಲೆಗಳು ಖಾತರಿ ಪಡಿಸಬೇಕು.
ಪ್ರಾಥಮಿಕ ಕಲಿಕಾ ಹಂತದಿಂದಲೇ ಓದುವಿಕೆ ಕೇವಲ ಪಠ್ಯಗಳಿಗೆ ಸೀಮಿತವಾಗದೆ ವಿಭಿನ್ನ ಪಠ್ಯೇತರ, ಮಾನವ ಜೀವನ ಸ್ಪೂರ್ತಿಯ ವಿವಿಧ ಆಯಾಮಗಳ ಓದಿಗೆ, ಸಂಪನ್ಮೂಲ ಕೃತಿಗಳ ಅವಲೋಕನಕ್ಕೆ ಕಿರು ಗ್ರಂಥಾಲಯಗಳ ಸ್ಥಾಪನೆಗೆ ಒತ್ತು ನೀಡಬೇಕು.
ಸುಸಂಬದ್ಧ ಸಾಮಾಜಿಕ ಗುಣಗಳ ಬೆಳೆಸಲು ವಿವಿಧ ಜನಸಮುದಾಯಗಳ ಭೇಟಿ ಹಾಗು ಅವರಲ್ಲಿ ಕೊಂಚ ಸಮಯ ವಾಸ ಮಾಡುವ ಪರಿಕಲ್ಪನೆ ಜೊತೆಗೆ ಅವರ ರೀತಿ ರಿವಾಜುಗಳ ಅಭ್ಯಾಸ ರೂಢಿಸಬೇಕು. ಪ್ರತಿ ಜನ ಸಮುದಾಯ ಮತ್ತು ಜನಾಂಗವೂ ತನ್ನದೇ ಆದ ಘನತರ ಇತಿಹಾಸ ಜೀವನ ಪದ್ಧತಿ ಹೊಂದಿವೆ. ಅವುಗಳ ಸ್ವಲ್ಪ ಓದಿನಿಂದಷ್ಟೆ ಅರಿವು ಮತ್ತು ಸ್ಪಂದನೆ ಬೆಳೆಯದು. ಅವರಲ್ಲಿದ್ದು ಬದುಕುವ ನಿಜವಾದ ಸಹನೆಯನ್ನು ಪ್ರಸ್ತುತ ಶಿಕ್ಷಣ ಪದ್ಧತಿ ಆರಂಭಿಕ ಹಂತದಿಂದಲೇ ಬೆಳೆಸಬೇಕು.
ಹಣ ಬದುಕಿಗೆ ಬೇಕು. ಹಣವೇ ಎಲ್ಲ ಅಲ್ಲ. ಮನುಷ್ಯ ಮನುಷ್ಯರ ನಡುವೆ ಪರಸ್ಪರ ಪ್ರೀತಿ ಗೌರವ ವಿಶ್ವಾಸ ಮೂಡಿಸುವ ಸಾಂಸ್ಕೃತಿಕ ಸಾಹಿತ್ಯಿಕ ಸಂಘಟನಾತ್ಮಕ ಕಾರ್ಯಗಳ ಕಾಲಾನುಕಾಲ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿರಬೇಕು. ಪರಸ್ಪರ ಕೊಡು ಕೊಳುವಿಕೆಯನ್ನು ಹಣದ ಹೊರತಾಗಿಯು ಇರುವಂತೆ ರೂಢಿಸಬೇಕು.
ರೈತ ಸೈನಿಕ ವಿಜ್ಞಾನಿ ಶಿಕ್ಷಕ ದೇಶದ ನಾಲ್ಕು ದಿಕ್ಕುಗಳು.
ಶ್ರಮಸಂಸ್ಕೃತಿ ಜೀವನ ಪದ್ಧತಿಯನ್ನು ವಿದ್ಯಾರ್ಥಿಗಳಲ್ಲಿ ಪಾಠದ ಜೊತೆ ಹಾಗು ಕರಕೌಶಲ ಚಟುವಟಿಕೆಗಳು ಸಾಮಾಜಿಕ ಉತ್ಪಾದನಾ ಚಟುವಟಿಕೆಗಳ ಮೂಲಕ ಬೆಳೆಸಬೇಕು.
ಆರ್ಥಿಕ ಸಬಲತೆ ಜೊತೆ ಸಮಾಜದಿ ಮಾನವೀಯ ಮೌಲ್ಯಗಳ ಉಳಿಸಲು ಬೆಳೆಸಲು ಅಬಲ ದುರ್ಬಲ ವರ್ಗಗಳ ಉದ್ಧಾರಕ್ಕೆ ಅಗತ್ಯ ನೆರವು ನೀಡುವ ಸೃಜನಶೀಲ ಉದಾರತೆಯನ್ನು ಶಿಕ್ಷಣ ಹೊಂದಬೇಕು.
ನೌಕರಿ ಗಳಿಕೆಯೊಂದೆ ಓದಿನ ಅಥವಾ ಶಿಕ್ಷಣದ ಗುರಿಯಲ್ಲ. ಡಾಕ್ಟರ್, ಲಾಯರ್, ಪ್ರೊಫೆಸರ್, ಇಂಜಿನಿಯರ್, ಪತ್ರಕರ್ತ, ಶಾಸಕ ಮಂತ್ರಿ ರಾಜಕಾರಣಿ ಜೊತೆ ಜೊತೆಗೆ ಉತ್ತಮ ಅಣ್ಣ ತಮ್ಮ, ಅಕ್ಕ ತಂಗಿ, ಬಂಧು ಬಳಗ, ನೆರೆಹೊರೆ, ಪ್ರಬುದ್ಧ ಗಂಡು ಹೆಣ್ಣುಗಳ ನಿರ್ಮಾಣವೂ ಶಿಕ್ಷಣದ ಅವಿಭಾಜ್ಯ ಗುರಿಯಾಗಬೇಕು.
ಮಾನವ ಕಲ್ಯಾಣಕ್ಕಾಗಿಯೇ ಶಿಕ್ಷಣ. ಆಧುನಿಕ ಕಾಲದ ಬಹು ಆಯಾಮದ ಬೇಡಿಕೆಗಳಿಗೆ ಶಿಕ್ಷಣವು ಸಕಾಲಿಕ ಸ್ಪಂದಿಸಲು ಸರ್ಕಾರಿ ಖಾಸಗಿ ಶಿಕ್ಷಣದ ಮೇಲು ಕೀಳು ದೂರ ಮಾಡಲು ಏಕರೂಪದ ಶಿಕ್ಷಣ ಹಾಗು ಪಠ್ಯಕ್ರಮ ಜಾರಿಯಾಗಬೇಕು.
ಭಾಷೆಗಳ ಕಲಿಕೆಯಲ್ಲಿ ಮುಕ್ತ ಅವಕಾಶ ಸ್ವತಂತ್ರತೆ ಅಳವಡಿಸಬೇಕು. ಮಕ್ಕಳಿಂದ ಮಾನವ ಹಾಗಾಗಿ ಇಂದಿನ ಮಕ್ಕಳ ಬಹುಮುಖ ಪ್ರತಿಭೆಯ ವಿಕಾಸಕ್ಕೆ ಶಿಕ್ಷಕರು ಮತ್ತು ಅವರ ಬೋಧನೆಯೇ ದಾರಿದೀಪ. ಶಿಕ್ಷಕರುಗಳಿಗೆ ಮಕ್ಕಳೆ ಅನ್ನದಾತರು. ಅವರ ಪ್ರಗತಿಗಾಗಿ ಶ್ರಮಿಸುವುದೇ ಶಿಕ್ಷಕರ ಧರ್ಮ.
ಸಮಾಜ ಸರ್ಕಾರ ಶಿಕ್ಷಕರಿಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಶಿಕ್ಷಕರಾದವರು ಈ ಸಮಾಜದ ಸುಸ್ಥಿರತೆಗೆ ಸರ್ಕಾರದ ಸುಭದ್ರತೆಗೆ ಮಾನವ ಕುಲದ ಏಳ್ಗೆಗೆ ಏನು ನೀಡುತ್ತಿದ್ದೇವೆ ಎಂದು ಸದಾ ಚಿಂತಿಸುತ್ತ ಮುನ್ನಡೆಯಬೇಕು. ಹೀಗಾದರೆ ಮಾತ್ರ ಎಂಥ ಜಟಿಲ ಸಮಸ್ಯೆ ಸವಾಲುಗಳನ್ನು ನಿರಾತಂಕವಾಗಿ ಎದುರಿಸುವ ಚೈತನ್ಯ ಮೈಗೂಡುವುದು.
ಬಡವನಾಗಿ ಹುಟ್ಟಬಹುದು ಬಡವನಾಗಿ ಸಾಯಬಾರದು. ಬಡತನ ನಿರ್ಮೂಲನೆಗೆ ಶಿಕ್ಷಣವೇ ದಾರಿ. ಆದ್ದರಿಂದ ಗ್ರಾಮಗಳ ಹಿಂದುಳಿದ ನಗರ ಪ್ರದೇಶಗಳ, ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬೋಧಕ ವರ್ಗ ತಮ್ಮ ವೃತ್ತಿ ಜೀವನ ಮುಡಿಪಾಗಿಡಬೇಕು.
ಟಿ.ಪಿ.ಉಮೇಶ್
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಹಶಿಕ್ಷಕರು
ತುಪ್ಪದಹಳ್ಳಿ, ಹೊಳಲ್ಕೆರೆ




