ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಈ ವರ್ಷವೂ ಕೂಡ ವಿಜೃಂಭಣೆಯಿಂದ ಆಚರಿಸಲು ಕಾತುರರಾಗಿದ್ದೇವೆ. ದಶಕಗಳ ಹಿಂದಿನ ಶಿಕ್ಷಕರ ದಿನಾಚರಣೆಗೂ ಇಂದಿನ ಶಿಕ್ಷಕರ ದಿನಾಚರಣೆಗೂ ತುಂಬಾನೇ ವ್ಯತ್ಯಾಸ ಇದೆ. ಹಿಂದೆ ಗುರುಗಳು ಆದವರನ್ನು ಅವರಿಂದ ಅಕ್ಷರ ಕಲಿತ ಶಿಷ್ಯಂದಿರು ಮನದಲ್ಲಿಟ್ಟುಕೊಂಡು ಪೂಜಿಸುತ್ತಿದ್ದರು. ಆದರೆ ಇಂದು ನಾವೆಲ್ಲ ಬದುಕುತ್ತಿರುವುದು ಆಂಡ್ರಾಯ್ಡ್ ಯುಗದಲ್ಲಿ. ತಮಗೆ ವಿದ್ಯೆ ಕೊಟ್ಟ ಗುರುಗಳ ಫೋಟೋವನ್ನು ಸ್ಟೇಟಸ್ ನಲ್ಲಿ ಹಾಕಿ ಅಲ್ಲೇ ಒಂದು ಶುಭಾಶಯವನ್ನು ಕೋರಿ ಅಂದಿನ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಾರೆ. ಅದೇನೇ ಇರಲಿ ಗುರು ಎಂದರೆ ಒಂದು ವಿಶೇಷ ಸ್ಥಾನಮಾನ ಈಗಲೂ ಇದ್ದೇ ಇದೆ. ಅಜ್ಞಾನದಿಂದ ಜ್ಞಾನದತ್ತ ಕರೆದೊಯ್ಯುವ ದೇವರು ಎಂದರೆ ಅದು ಗುರು. ಗುರು ಎಂದರೆ ಅದೊಂದು ಅದಮ್ಯ ಚೇತನ. ನಮ್ಮ ಶಿಷ್ಯಂದಿರು ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ನಮ್ಮನ್ನು ಹೋಲಿಸುತ್ತಾರೆ. ಇದೆಲ್ಲ ನಮಗೆ ತುಂಬಾ ಸಂತಸವನ್ನು ಉಂಟು ಮಾಡುವ ವಿಷಯ.

ಆದರೆ ಇಂದಿನ ನನ್ನ ಅವಲೋಕನ ಅಡಗಿರುವುದು ಶಿಕ್ಷಕರಾದ ನಮ್ಮನ್ನೆಲ್ಲ ದೇವರಿಗೆ ಹೋಲಿಸುವಷ್ಟು ಯೋಗ್ಯರೇ? ಎಂಬುದು. ಬನ್ನಿ… ನಾವು ನೀವೆಲ್ಲ ಮತ್ತೊಮ್ಮೆ ಶಿಕ್ಷಕರಾದವರು ಹೇಗಿದ್ದರೆ ಚೆಂದ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಬರೋಣ.

ಶಿಕ್ಷಕರಾದವರು ಹೇಗಿರಬೇಕು? ಅಂತ ಕೇಳಿದ ಕೂಡಲೇ ಅದೆಷ್ಟೋ ಗುಣಧರ್ಮಗಳನ್ನು ಪಟ ಪಟ ಅಂತ ನಮ್ಮ ಬಾಯಿಂದ ಹೇಳಿ ಬಿಡುತ್ತೇವೆ. ಶಿಸ್ತಿನ ಸಿಪಾಯಿ ಆಗಿರಬೇಕು, ಸಮಯ ಪಾಲಕನಾಗಿರಬೇಕು, ನಿರಂತರ ವಿದ್ಯಾರ್ಥಿ ಆಗಿರಬೇಕು, ಕೆಲಸದಲ್ಲಿ ಶ್ರದ್ಧೆಯನ್ನು ಹೊಂದಿರಬೇಕು, ಮಕ್ಕಳಲ್ಲಿ ಬೇಧ ಭಾವ ಮಾಡಬಾರದು, ವಿಷಯ ಪಾಂಡಿತ್ಯವನ್ನು ಹೊಂದಿರಬೇಕು, ಮಕ್ಕಳಿಗೆ ಮಾದರಿಯಾಗಿರಬೇಕು…..ಹೀಗೆ ಈ ಲಿಸ್ಟ್ ಗೆ ಕೊನೆ ಎಂಬುದೇ ಇಲ್ಲ. ಹೌದು. ಇವೆಲ್ಲ ಗುಣಲಕ್ಷಣಗಳು ಶಿಕ್ಷಕರಾದರಲ್ಲಿ ಖಂಡಿತ ಇರಲೇಬೇಕು. ಆದರೆ ಇವೆಲ್ಲ ಲಕ್ಷಣಗಳು ಇದ್ದ ಮಾತ್ರಕ್ಕೆ ಅವರು ಯಾವತ್ತಿಗೂ ಶಿಕ್ಷಕರಾಗುವುದಿಲ್ಲ. ಬೇರೆಲ್ಲೂ ಅವಕಾಶ ಸಿಗದೇ ಶಿಕ್ಷಕರಾದವರಿಗೂ ಹಾಗೂ ನಾನು ಶಿಕ್ಷಕನಾಗಲೇಬೇಕು ಎಂದು ಶಿಕ್ಷಕ ವೃತ್ತಿಗೆ ಬಂದವರಿಗೂ ತುಂಬಾನೇ ವ್ಯತ್ಯಾಸವಿದೆ. ಅದನ್ನೇ ನಾವು ಇಂದಿನ ಕಾಲಕ್ಕೆ ತಕ್ಕಂತೆ ಬೈ ಚಾನ್ಸ್ ಅಂತಾನೋ….ಅಥವಾ ಬೈ ಚಾಯ್ಸ್ ಅಂತಾನೋ ಹೇಳುತ್ತೇವೆ.

ಶಾಲಾ ಮಕ್ಕಳನ್ನು ದಂಡಿಸುವುದು ತಪ್ಪಲ್ಲ. ಆದರೆ ಅತಿಯಾಗಿ ದಂಡಿಸುವುದು ತಪ್ಪು. ಬೇರೆ ಮಕ್ಕಳಿಂದ ಕೆನ್ನೆಗೆ ಹೊಡಿಸಿದಾಗ ಮಕ್ಕಳಲ್ಲಿ ಸಹಜವಾಗಿ ಮುಜುಗರ ಉಂಟಾಗುತ್ತದೆ. ಆದರೂ ಕೂಡ ನಮ್ಮ ಮಕ್ಕಳು ಅದನ್ನು ತೋರಿಸಿಕೊಳ್ಳುವುದಿಲ್ಲ. ಕಾರಣ ಅವರು ನಮ್ಮ ಮೇಲೆ ಇಟ್ಟಿರುವ ಗೌರವ. ಊಟಕ್ಕೆ ಉಪ್ಪಿನಕಾಯಿ ಅನ್ನುವಂತೆ ಶಿಕ್ಷಕರ ಕೋಲು ಮಾತನಾಡಬೇಕು. ಕೋಲಿನ ಬಿಸಿಯನ್ನು ತಣ್ಣಗೆ ಮಾಡಲು ತರಗತಿಯ ಮಧ್ಯದಲ್ಲಿ ಆಗಾಗ ಹಾಸ್ಯ ಚಟಾಕಿಗಳನ್ನು ಹಾರಿಸಬೇಕು. ಹಾಸ್ಯವೆಂದರೆ ಮಕ್ಕಳನ್ನು ನಗುವಿನ ಲೋಕಕ್ಕೆ ಕರೆದೊಯ್ಯುವಂತೆ ಇರಬೇಕೇ ಹೊರತು ಮತ್ತೊಬ್ಬರನ್ನು ಅಪಹಾಸ್ಯಗೊಳಿಸುವುದಲ್ಲ. ಶಿಕ್ಷಕರಾದವರು ಪಕ್ಷಪಾತ ಮಾಡಬಾರದು, ಭೇದ-ಭಾವ ಮಾಡಬಾರದು ಎಂದು ಹೇಳುವುದೇನೋ ಸರಿ. ಆದರೆ ಅದೆಷ್ಟು ಶಿಕ್ಷಕರು ಎಲ್ಲಾ ಮಕ್ಕಳನ್ನು ಸ್ಪರ್ಶಿಸುತ್ತಾರೆ? ಇತ್ತೀಚೆಗಂತೂ ಇನ್ಫೆಕ್ಷನ್ ಗಳ ನೆಪ ಹೇಳಿ, ಮಕ್ಕಳನ್ನು ಮುಟ್ಟುವುದಿರಲಿ, ಅವರ ನೋಟ್ ಬುಕ್ ಗಳನ್ನು ಮುಟ್ಟಿದರೂ ಕೂಡ ಹೋಗಿ ಕೈ ತೊಳೆದುಕೊಳ್ಳುವ ಶಿಕ್ಷಕರಿದ್ದಾರೆ. ಎಲ್ಲಾ ಮಕ್ಕಳು ತಂದು ಕೊಡುವ ತಿಂಡಿಯನ್ನು ಅದೆಷ್ಟು ಶಿಕ್ಷಕರು ಬಾಯಿ ಚಪ್ಪರಿಸಿ ತಿನ್ನುತ್ತಾರೆ? ಒಂದು ಮಗು ಕೊಡುವ ತಿಂಡಿಯನ್ನು ಸ್ವೀಕರಿಸಿ, ಮತ್ತೊಂದು ಮಗು ಕೊಡುವ ತಿಂಡಿಯನ್ನು ನಿರಾಕರಿಸಿದರೆ ಆ ಮಗುವಿನ ಮನಸ್ಸಿನ ಮೇಲೆ ನಿಮ್ಮ ಬಗ್ಗೆ ಮೂಡುವ ಅಭಿಪ್ರಾಯದ ಬಗ್ಗೆ ಸ್ವಲ್ಪ ಗಮನವಿರಲಿ. ಶಿಕ್ಷಕರು ಹೀಗೆ ಇರಲು ಕಾರಣವೇನೆಂದು ತಿಳಿಯಲು ಅವಲೋಕನಕ್ಕೆ ನಿಂತರೆ ಪರಿಣಾಮವಂತೂ ಸಿಗೋದಿಲ್ಲ. ಅದು ಯಾವ ಮಗುನೇ ಇರಲಿ ಪ್ರೀತಿಯಿಂದ ತಂದು ಕೊಡುವ ವಸ್ತುಗಳನ್ನು ಸ್ವೀಕರಿಸಿ.

ಇನ್ನು ಕೆಲವು ಶಿಕ್ಷಕರಂತೂ ತಮ್ಮ ತರಗತಿಯ ಮಕ್ಕಳ ಮುಂದೆ ತಮ್ಮ ಮನೆಯಲ್ಲಿರುವ ಮಕ್ಕಳ ಸಾಧನೆಯನ್ನು ಗುಣಗಾನ ಮಾಡಿದ್ದೆ ಮಾಡಿದ್ದು. ಮನೆಯ ಮಕ್ಕಳು ಗ್ರೇಟ್ ಎನ್ನುವ ತರ ಬಿಂಬಿಸಲು ಹೋಗುತ್ತಾರೆ. ಇದು ತರಗತಿಯಲ್ಲಿ ಯಾವತ್ತು ಅವಶ್ಯವಿರುವುದಿಲ್ಲ. ಈ ತಪ್ಪನ್ನು ಎಂದಿಗೂ ಮಾಡದಿರಿ. ಏಕೆಂದರೆ ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಅನುಕೂಲ ಕೊಟ್ಟಷ್ಟು, ನಮ್ಮ ತರಗತಿಯಲ್ಲಿರುವ ಮಕ್ಕಳಿಗೆ ಆ ಅನುಕೂಲತೆಗಳು ಸಿಕ್ಕಿರುವುದಿಲ್ಲ. ಅನುಕೂಲತೆಗಳು ಇಲ್ಲದೆ ಹೋದರೂ ಅವರು ಈಗ ಕಲಿತಿರುವುದೇ ಗ್ರೇಟ್. ಬದಲಾಗಿ ಕಠಿಣ ಪರಿಸ್ಥಿತಿಗಳಲ್ಲೂ ಕೂಡ ಶಿಕ್ಷಣವನ್ನು ಪಡೆದು ಸಾಧಿಸಿದ ವ್ಯಕ್ತಿಗಳ ಯಶೋಗಾಥೆಗಳನ್ನು ಹೇಳಿರಿ. ಶಿಕ್ಷಕರಾದವರು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಬೇಕು. ನಿಜ. ಆದರೆ ತರಗತಿಗೆ ವರ್ಷಪೂರ್ತಿ ಒಬ್ಬ ವಿದ್ಯಾರ್ಥಿಯನ್ನೇ ನಾಯಕನನ್ನಾಗಿ ಮಾಡುವುದರಿಂದ ಅದು ಬಾಲ್ಯಾವಸ್ಥೆಯಲ್ಲಿಯೇ ಸರ್ವಾಧಿಕಾರ ಮನೋಭಾವವನ್ನು ಬೆಳೆಸುವಂತಹ ಒಂದು ಕೆಟ್ಟ ಪ್ರೇರಣೆ ಆಗುತ್ತದೆ.

ಶಾಲಾ ಮಕ್ಕಳು ಹೀಗೆ ಇರಬೇಕು, ನಾವು ಹೇಳುವಂತೆ ಶಾಲೆಗೆ ಬರಬೇಕು ಎಂದು ನಾವು ನಿರೀಕ್ಷಿಸುವಂತೆ, ಮಕ್ಕಳು ಕೂಡ ಅವರ ಶಿಕ್ಷಕರಿಂದ ಸಹಜವಾಗಿ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಟೀಚರ್ ನಮ್ಮ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕು, ಆಟ ಆಡಿಸಬೇಕು, ಕಥೆ ಹೇಳಬೇಕು, ನಗಬೇಕು, ಹಾಡಬೇಕು, ಕುಣಿಯಬೇಕು, ಪಾಠ ಹೇಳಿ ಕೊಡಬೇಕು…… ಹೀಗೆ. ಅವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಮಕ್ಕಳಿಗೆ ನಾವು ಹತ್ತಿರವಾಗಬಹುದು. ಪುಸ್ತಕಗಳನ್ನು ಓದಿಕೊಂಡು ಪಡೆಯುವ ಜ್ಞಾನ ಬಹುಮುಖ್ಯವಾದುದು. ಆದರೆ ಮಕ್ಕಳ ಮನಸ್ಥಿತಿಯನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ದೊಡ್ಡ ವರವೇ ಸರಿ. ಬೆಳಿಗ್ಗೆ ಸರಿಯಾದ ಸಮಯಕ್ಕೆ ಶಾಲೆಗೆ ಬಂದು ಸರಿಯಾದ ಸಮಯಕ್ಕೆ ಶಾಲೆಯಿಂದ ನಿರ್ಗಮಿಸಿದರೆ ಅದು ಖಂಡಿತ ಸಮಯ ಪಾಲನೆ ಅಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೂ ಸಿಗುವಂತಹ ಅವಧಿಯಲ್ಲಿ ಮಕ್ಕಳೊಂದಿಗೆ ಹೆಚ್ಚು ಬೆರೆತು, ಕಲಿಕೆಯಲ್ಲಿ ಧನಾತ್ಮಕವಾಗಿ ಪ್ರಗತಿಯನ್ನು ಕಂಡಾಗ ಮಾತ್ರ ಅದು ಸಮಯ ಪಾಲನೆ, ಶಿಸ್ತು ಎಂದೆನಿಸಿಕೊಳ್ಳುತ್ತದೆ. ಮಕ್ಕಳು ಕೋರುವ ಶುಭಾಶಯಗಳಿಗೆ ಪ್ರತಿ ಶುಭಾಶಯಗಳನ್ನು ತಿಳಿಸಿ. ಅದು ಮಕ್ಕಳ ಮನಸ್ಸಿನಲ್ಲಿ ಹೊಸ ಆಶಯಗಳನ್ನು ಹುಟ್ಟು ಹಾಕುತ್ತದೆ. ಒಂದೆರಡು ದಿನ ನೀವು ಏನು ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದು ನೋಡಿ, ಮೂರನೆಯ ದಿನ ನಿಮಗೆ ಬರುವಂತಹ ಶುಭಾಶಯಗಳ ಸಂಖ್ಯೆ ತನ್ನಿಂದ ತಾನೇ ಕಡಿಮೆಯಾಗಿರುತ್ತದೆ. ಇಲ್ಲಿ ತಪ್ಪು ಇರುವುದು ಮಕ್ಕಳಲ್ಲಿ ಅಲ್ಲ, ನಿಮ್ಮಲ್ಲಿ. ಯುನಿವರ್ಸಿಟಿಯಲ್ಲಿ ಬಂಗಾರದ ಪದಕ ಪಡೆದು ಶಾಲೆಯಲ್ಲಿ ಮಕ್ಕಳ ಮಟ್ಟಕ್ಕೆ ಇಳಿದು ಕಲಿಸಲು ಬಾರದಿದ್ದರೆ ನಾವು ಪಡೆದ ಜ್ಞಾನ ಬಳಕೆಯಾಗುವುದಾದರೂ ಎಲ್ಲಿ?

ಶಿಕ್ಷಕ-ವಿದ್ಯಾರ್ಥಿ ಎಂಬುದು ಒಂದು ದ್ವಿಮುಖ ಪ್ರಕ್ರಿಯೆ. ನಮ್ಮಲ್ಲಿ ಇರುವುದನ್ನು ಅವರಿಗೆ ಕೊಟ್ಟು ಅವರಲ್ಲಿರುವುದನ್ನು ನಾವು ತೆಗೆದುಕೊಳ್ಳುವುದು. ಬನ್ನಿ ಮಕ್ಕಳ ಮಟ್ಟಕ್ಕೆ ಇಳಿದು ಕಲಿಸೋಣ. ಅವರ ಜೊತೆಯಲ್ಲಿ ನಾವು ಕಲಿಯೋಣ. ಮಕ್ಕಳೊಂದಿಗೆ ಮಕ್ಕಳಾಗೋಣ. ಮಕ್ಕಳನ್ನು ದೇವರೆಂದು ಮೊದಲು ನೀವು ಪೂಜಿಸಿ, ಮಕ್ಕಳಿಗೆ ನೀವು ತಂತಾನೇ ದೇವರಾಗುತ್ತೀರಿ.


About The Author

Leave a Reply

You cannot copy content of this page

Scroll to Top