ಶಿಕ್ಷಕ ಸಂಗಾತಿ
ಸುಮಾ ಗಾಜರೆ
ಗುರು ಎಂಬ ದೀವಿಗೆಯ ಬೆಳಕು

*ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ…ಗುರು ತೋರಿಸದಲ್ಲದೆ ಕಾಣಿಸದಣ್ಣ…..*ಎಂಬ ದಾರ್ಶನಿಕರ ಮಾತಿನಂತೆ ಗುರುವಿನ ಮಹತ್ವವನ್ನು ನೋಡಿದಾಗ ಅಜ್ಞಾನದ ಕತ್ತಲನ್ನು ತೆಗೆದು ಜ್ಞಾನದ ಬೆಳಕನ್ನು ನೀಡುವ ಗುರುವಿನ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ಇಂತಹ ಗುರುವನ್ನು ಮನದಲ್ಲಿ ನೆನೆಯುವ ದಿನ ಈ ಸಪ್ಟೆಂಬರ್ 5 ಶಿಕ್ಷಕರ ದಿನ. ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ ಪ್ರತಿಯೊಬ್ಬರೂ ಇಂದು ತಮ್ಮ ಗುರುವನ್ನು ನೆನೆದೇ ನೆನೆಯುತ್ತಾರೆ. ಒಬ್ಬ ಗುರು ಒಬ್ಬ ವಿದ್ಯಾರ್ಥಿಯ ಜೀವನವನ್ನು ಬದಲಾಯಿಸಬಲ್ಲರು.ಇಂದು ಕಾಲ ಎಷ್ಟೇ ಮುಂದುವರೆದಿದ್ದರೂ ಆಧುನಿಕತೆಯ ತಂತ್ರಜ್ಞಾನದ ಕಾಲದಲ್ಲೂ ಕೂಡ ಗುರು ಎಂಬ ಪಾತ್ರ ತನ್ನ ಮಹತ್ವವನ್ನು ಕಾಯ್ದುಕೊಂಡಿದೆ. ಅದಕ್ಕೆ *ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ* ಎಂಬ ಮಾತು ಇಂದಿಗೂ ದೈವ ಸಮಾನವಾಗಿದೆ. ಜೀವನದಲ್ಲಿ ಸರಿ ತಪ್ಪು ತಿಳಿದುಕೊಳ್ಳಲು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ಬದುಕಿನ ಅರ್ಥವನ್ನು ಕಂಡುಕೊಳ್ಳಲು ಅಂದುಕೊಂಡ ಗುರಿಯನ್ನು ಸಾಧಿಸಲು ದಾರಿ ತೋರುವ ಮಾರ್ಗದರ್ಶಕನೇ ಗುರು. ಹೀಗಾಗಿ ‘*ಮುಂದೆ ಗುರಿ ಹಿಂದೆ ಗುರು*’ ಇದ್ದರೆ ಗುರಿಯ ಸಾಧನೆ ಸಾಧ್ಯ. ವೀರ ಸನ್ಯಾಸಿ ಗುರು ಸ್ವಾಮಿ ವಿವೇಕಾನಂದರು ಹೇಳುವ ಹಾಗೆ ‘*ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು* ‘. ಹೀಗೆ ಪ್ರತಿಯೊಬ್ಬರ ಬದುಕಿನಲ್ಲಿ ಗುರುವಿನ ಪಾತ್ರ ಇದ್ದೇ ಇರುತ್ತದೆ.ನಮ್ಮ ಸಂಸ್ಕೃತಿಯಲ್ಲಿ ತಾಯಿ ತಂದೆಗೂ ಮೀರಿದ ಮಟ್ಟಕ್ಕೆ ಗುರುವನ್ನು ಇರಿಸಲಾಗಿದೆ. ಮಾತೃದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ… ಎಂದು ವೇದಗಳೇ ಹೇಳಿವೆ. ಇಂದಿನ ಕಾಲದಲ್ಲೂ ಕೂಡ ಗುರುಗಳ ಮಾರ್ಗದರ್ಶನ ಇಲ್ಲದೆ ವಿಜ್ಞಾನ, ಕಲೆ,ಕ್ರೀಡೆ,ಆಧ್ಯಾತ್ಮ ಯಾವುದೇ ಕ್ಷೇತ್ರದಲ್ಲೂ ಕೂಡ ಉತ್ತಮ ವ್ಯಕ್ತಿ ಆಗಲಾರ. ಗುರು ಬಾಳಿನ ಬದುಕಿನ ಶಿಲ್ಪಿ.ಆದ್ದರಿಂದ ಪ್ರತಿಯೊಬ್ಬ ಶಿಷ್ಯ ಗುರುವನ್ನು ಗೌರವಿಸಬೇಕು ಅವರ ಮಾತನ್ನು ಪಾಲಿಸಬೇಕು. ನಾವು ಜೀವನದಲ್ಲಿ ಒಂದು ಸಣ್ಣ ಯಶಸ್ಸು ಗಳಿಸಿದ್ದೇವೆಂದರೆ, ಅದರ ಹಿಂದೆ ಗುರುವಿನ ಪಾತ್ರ ಇದ್ದೇ ಇರುತ್ತದೆ. ಜ್ಞಾನವಿಲ್ಲದೆ ಸಾಧನೆ ಅಸಾಧ್ಯ.ಆ ಜ್ಞಾನದ ಅರಿವು ಬೆಳಕು ನೀಡಿದವರೇ ಗುರು. ನಾವು ಜೀವನದಲ್ಲಿ ಏನೆಲ್ಲಾ ಆಗಿದ್ದೇವೆಯೋ ಅದಕ್ಕೆ ಕಾರಣ ಗುರು. ಅಂತಹ ಗುರುವನ್ನು ಇಂದು ಅಷ್ಟೇ ಅಲ್ಲ ನಮ್ಮ ಜೀವನದುದ್ದಕ್ಕೂ ನೆನೆಯಬೇಕು. ನಾವು ಇಂದು ಉತ್ತಮ ಭವಿಷ್ಯವನ್ನು ಕಟ್ಟಿಕೊಂಡಿದ್ದೇವೆ ಅಂದರೆ ಅದು ಗುರುವಿನ ಪ್ರೇರಣೆಯಿಂದ ಮಾರ್ಗದರ್ಶನದಿಂದ. ಶಿಕ್ಷಣದಲ್ಲಿ / ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಅಪಾರ. ಒಬ್ಬ ಉತ್ತಮ ಗುರು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕುತೂಹಲ ಹುಟ್ಟಿಸಿ ಜ್ಞಾನದ ಕಡೆಗೆ ದಾರಿ ತೋರಿಸುತ್ತಾನೆ.ಪ್ರೀತಿ, ಸಹಾನುಭೂತಿ,ಸಹನೆ,ಕಾಳಜಿ ಹೊಂದಿದ ಗುರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಒಳ್ಳೆಯ ನಾಗರಿಕರನ್ನು ರೂಪಿಸುವ ಸಮಾಜದ ಶಿಲ್ಪಿಯಾಗಿ ಕಂಗೊಳಿಸುತ್ತಾರೆ. ಜೀವನದ ಮೌಲ್ಯಗಳನ್ನು ಬೋಧಿಸಿ ಧೈರ್ಯ ಶ್ರದ್ದೆ ಆತ್ಮವಿಶ್ವಾಸವನ್ನು ಬೆಳೆಸಿ ಒಳ್ಳೆಯ ಬಾಳನ್ನು ಕಟ್ಟಿಕೊಡುವ ದೀವಿಗೆಯಾಗುತ್ತಾರೆ. ಇಂತಹ ಉತ್ತಮ ಭವಿಷ್ಯಕ್ಕೆ ದಾರಿದೀಪವಾದ ಗುರು ಎಂಬ ಮಹಾನ್ ಚೇತನವನ್ನು ಮನದಲ್ಲಿ ನೆನೆದು ಸಾವಿರ ಸಾವಿರ ಪ್ರಣಾಮಗಳನ್ನು ಸಲ್ಲಿಸೋಣ.
ಸುಮಾ ಗಾಜರೆ




