ಗಜಲ್ ಸಂಗಾತಿ
ಶಶಿಕಾಂತೆ,
ವಾಣಿ ಯಡಹಳ್ಳಿಮಠ
“ಜುಗಲ್ ಬಂದಿ”

ಗಜಲ್(ಜುಲ್ ಕಾಫಿಯಾ)
ನನ್ನ ಕನಸಲಿ ಚಂದದ ಶಶಿಮೊಗವಿದೆ ನಿನ್ನಿಂದದು.
ಮನದಲಿ ಅಚ್ಚೊತ್ತಿದ ಚಿತ್ರಣವಿದೆ ನಿನ್ನಿಂದದು.
ಇಂಥ ಸುಂದರ ಮುಗುಳ್ನಗುವ ನಾನೆಲ್ಲೂ ಕಂಡಿಲ್ಲ.
ಮೈಮನದಿ ತಂಪಾದ ತಂಗಾಳಿಯಿದೆ ನಿನ್ನಿಂದದು
ಸ್ವಚ್ಛ ಕ್ಷೀರದಂತೆಯೇ ಅಚ್ಚ ಬಿಳುಪು ನಿನ್ನಂತರಂಗ.
ಎದೆಯಲಿ ನವಿರಾದ ಭಾವವಿದೆ ನಿನ್ನಿಂದದು
ನಿನ್ನ ನೆನಪ ಸ್ಮೃತಿಯಲಿ ನೂರು ನವಿಲ ನರ್ತನ.
ನಾ ಕರೆದರೂ ಬರಲಾಗದ ಸ್ಥಿತಿಯಿದೆ ನಿನ್ನಂದದು.
ನಿನ್ನ ಪ್ರೀತಿಗೆ ಮೌಲ್ಯಮಾಪನ ನಾ ಮಾಡಲಾರೆ
ಆತ್ಮದೊಳಗೆ ಪ್ರತೀಕ್ಷಣದ ನೆನಪಿದೆ ನಿನ್ನಿಂದದು
ಸಂಗಾತಿ ಜೊತೆಗಿರಬೇಕೆಂಬ ಬಯಕೆ ತಪ್ಪಲ್ಲ.
ಉಸಿರಲಿ ಹೇಳಲಾಗದ ಆತಂಕವಿದೆ ನಿನ್ನಿಂದದು.
ಬಳಿ ಇಲ್ಲದಿದ್ದರೂ ಹೃದಯದಲಿ ಪವಡಿಸಿರುವೆ.
ನನ್ನಲೀಗ ತೀರಿಸಲಾಗದ ಋಣವಿದೆ ನಿನ್ನಿಂದದು
ಶಶಿಕಾಂತೆ
ನನ್ನ ನಗುವಿನಲಿ ನೋವಿನ ಛಾಯೆಯಿದೆ ನಿನ್ನಿಂದದು
ಮನವನು ಹಿಂಡುವ ಹುಣ್ಣಿನ ಬೇನೆಯಿದೆ ನಿನ್ನಿಂದದು
ಮೊಗದ ಸುಂದರ ಮುಗುಳ್ನಗೆಯದು ಮುಕ್ಕಾಯಿತು
ಹೃದಯದಿ ಸುಡುವ ಸೊಗಡಿನ ಬೆಂಕಿಯಿದೆ ನಿನ್ನಿಂದದು
ಕಡುಗಪ್ಪಾದ ನಿನ್ನ ಅಂತರಂಗ ಕಣ್ಣಿಗೆ ಕಾಣಿಸಲಿಲ್ಲ
ಕೋಮಲ ನಯನದಿ ಕಣ್ಣೀರಿನ ಹೊಳೆಯಿದೆ ನಿನ್ನಿಂದದು
ನಿನ್ನ ನೆನಪಿನ ಸ್ಮೃತಿಗೆ ನೂರು ಬಾರಿ ಇರಿಯುವಾಸೆ
ಪ್ರತಿ ರಾತ್ರಿಗೂ ಕೆಟ್ಟ ಕನಸಿನ ಕಾಣಿಕೆಯಿದೆ ನಿನ್ನಿಂದದು
ದೂರವಿದ್ದರೂ ದಿನವೂ ಘಾಸಿಗೊಳಿಸುವೆ ವಾಣಿಯನು
ಬದುಕಲಿ ಮರುಭೂಮಿ ಮರಳಿನ ಸೆಕೆಯಿದೆ ನಿನ್ನಿಂದದು
ವಾಣಿ ಯಡಹಳ್ಳಿಮಠ



