ಕಾವ್ಯ ಸಂಗಾತಿ
ಶರಣು.ಪಾಟೀಲ್ ಚಂದಾಪೂರ
“ನಿನ್ನದೆ ತೋರಣ”

ಹೊಡೆದುಬಿಡು ಒಡೆದು ಹೋಗಲಿ
ಇದುವರೆಗೂ ನನ್ನ ಮನಸಲ್ಲಿ ಕಡೆದ ನಂಬಿಕೆಯ ಶಿಲೆ
ಗರಡಿಯಲ್ಲಿ ನಡೆದ ನುಡಿ ಒಡನಾಟ ಚನ್ನಾಗಿ ಸುಡುವ ಕಲೆ
ದಾನ ಕೊಟ್ಟು ಪ್ರಾಣ ಬಿಟ್ಟ
ಕರ್ಣನ ಹುಟ್ಟು ಸಾವಿಗೆ ಕಾರಣ
ನಾಡ ಬಿಟ್ಟು ಕಾಡು ಸೇರಿದ
ರಾಮನ ವನವಾಸಕ್ಕೆ ನಿನ್ನದೆ ತೋರಣ
ಮೊದಲು ನೆಲದ ಸುಮವೆಲ್ಲ ಬಿಳುಪೆ
ಮಾಯೆ ಪಡೆವ ಕದನ ಕಂಡ ಸಾಕ್ಷಿ ಹೂವೆಲ್ಲ ಕೆಂಪೆ
ನೆತ್ತರುಂಡ ನೆಲದಲ್ಲಿ ಇನ್ನು ಪತ್ರ ಸಾರುತ್ತಿವೆ
ನೀ ಉತ್ತರ ಪ್ರಶ್ನೆ ಹೊತ್ತವಳೆಂದು ಹೆತ್ತವಳೆಂದು
ಸೆರಗ ತುದಿಯ ಗಂಟಲ್ಲಿ ಎಷ್ಟೊಂದು ಭಾರ
ಭೂಮಿ ತೂಕ ಹೊರುವ ಹುನ್ನಾರ
ಉಸಿರು ನಿಂತರು ಮಿಸುಕದ ಘೋರ
ಅದು ಹಾಗೆಯೇ ತನ್ನತನದ ನಿಗೂಢತೆ ಹಾರ
ಧ್ವನಿ ವರ್ಧಕವೆ ಬೇಡ ನಿನಗೆ ಎಷ್ಟು ಜಗ ಜಾಹಿರು
ಇದ್ದದ್ದು ಇರದೆ ಇದ್ದದ್ದು ಮೇಲೆ ಕಲೆಗಾರಿಕೆ ನವಿರು
ಉಸುರಿ ಹಗುರಾಗದ ಹೊರತು ತಳಮಳ ಹೊಟ್ಟೆಯಲ್ಲಿ ಢಮರು
ಅದು ಹಾಗೆಯೇ ಪರರ ಗುಟ್ಟೆಂದರೆ ಸರಿ ಸುಮಾರು
ಶರಣು.ಪಾಟೀಲ್ ಚಂದಾಪೂರ




