ಕಥಾ ಸಂಗಾತಿ
ಬನಸ
ಅವರ ಸಣ್ಣಕಥೆ
“ಮೋಹ ವ್ಯಾಮೋಹದ ಸುಳಿಯಲ್ಲಿ”


ಪ್ರೀತಿಯೋ ಪ್ರೇಮವೋ ಕಾಮವೋ ಹಣವೋ ಆಸ್ತಿಯೋ ಸೌಂದರ್ಯವೋ ಸಂಬಂಧವೋ
ವ್ಯಾಮೋಹವೋ…….. ಒಂದು ತಿಳಿಯದದಾಗ,…..
ದಿನಕರನುದಯದ ನೀರಿಕ್ಷೆಯಲ್ಲಿ ಭೂರಮೆಯು ಸ್ವಾಗತಕ್ಕಾಗಿ ಹಕ್ಕಿಪಕ್ಷಿಗಳ ಗಾನದೋಕುಳಿಚೆಲ್ಲಿ ಹಸಿವೆಯಿಂದ ಹಂಬಲಿಸಿದ್ದಾಳೆ. ಧ್ವನಿಕೇಳಿಯೇ ಕಾಗೆ ಕೋಗಿಲೆಗಳೆಂದು ಗುರುತಿಸುವಷ್ಟು ದಟ್ಟವಾಗಿ ಅವರಿಸಿದ ಮುಂಜಾನೆಯ ಮಂಜು,ಬೀದಿನಾಯಿಗಳು ಹಿಮಕರಡಿಗಳಂತೆ ಕಾಣುವಷ್ಟು,ವಾಯುವಿಹಾರಕ್ಕೆ ಬಂದಿರುವ ದೂರದ ವ್ಯಕ್ತಿಗಳು ಬಿಳಿವಸ್ತ್ರ ತೊಟ್ಟ ಮೋಹಿನಿಯರಂತೆ ಕಾಣುವಷ್ಟು, ಗಿಡಮರ ಹುಲ್ಲಿನ ಮೇಲಿನ ಮಂಜಿನಹನಿಗಳು ಭೂರಮೆಗೆ ತೊಡಿಸಿದ ಸಿರಿಮುತ್ತಿನ ಹವಳದಂತೆ ಬಿತ್ತರಗೊಂಡಿವೆ.ಹಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ಹಿರಿಯರು ವೃದ್ದರು ಯುವಕರು ಯುವತಿಯರು ದೈಹಿಕ ಕಸರತ್ತುಗಳಲ್ಲಿ ನಿರತರಗಿದ್ದಾರೆ. ಭದ್ರಾವತಿಯ ಹೃದಯಭಾಗದಲ್ಲಿರುವ ಗಾಂಧಿಪಾರ್ಕ್ ನ್ನು ಬಿಟ್ಟು ಅಹಾರವನ್ನರಸಿ ಹೋಗುತ್ತಿದ್ದ ಕಾಗೆಗಳು ಅಂದು ಎಲ್ಲಿಯೂ ಹೋಗದೆ ಒಂದೇ ಸಮನೆ ಕೂಗುತ್ತಿವೆ. ಬೆಳಕಾಗುತ್ತ ಬೆಳಕಾಗುತ್ತ ಪಾರ್ಕ್ ಲ್ಲಿ ಯಾರೋ ಇಬ್ಬರು ಮನುಷ್ಯರು ಬಿಳಿಬಟ್ಟೆ ಹೊದ್ದು ಮಲಗಿರುವಂತೆ ಕಾಣುತಿದೆ! ಹತ್ತಿರ ಬಂದು ನೋಡಿದರೆ ಯುವಪ್ರೇಮಿಗಳಿಬ್ಬರು ಬಿಡಿಸಲಾಗದ ಬಂಧನದ ಆಲಿಂಗನದಲ್ಲಿ ಅಂತ್ಯವಾಗಿದ್ದರು. ನೋಡುಗರಹೃದಯ ನುಚ್ಚುನುರಾಯಿತು. ಒಬ್ಬರಿಂದೊಬ್ಬರಿಗೆ ವಿಷಯ ತಿಳಿದು ಇಡೀ ನಗರವೇ ಕ್ಷಣಾರ್ದದಲ್ಲಿ ಪಾರ್ಕ್ ಸೇರಿತ್ತು, ಅಂದು ಭದ್ರಾವತಿ ನಗರದಲ್ಲಿ ಸೂತಕದ ಛಾಯೇ ಅವರಿಸಿತ್ತು. ಪೊಲೀಸ್ ರಿಗೆ ವಿಷಯ ತಿಳಿದು ಬಂದು ನೋಡಿದರೆ, ನಶ್ಯೆತುಂಬಿದ ಪ್ರೇಮದ ಲೇಖನಿಯಲ್ಲಿ ಬರೆದಿತ್ತು. “ಮುಂದಿನ ಜನ್ಮದಲ್ಲಿ ಒಂದಾಗೋಣ” ಮಿಸ್ ಯೂ ಸುಂದ್ರಿ, ಫ್ರಮ್ ಶಿವ……,
ದೊಡ್ಡಕೆರೆ ನೀರಿಗೆ ಅಡಿಕೆ ತೋಟಗಳ ವ್ಯಯ್ಯಾರ ಬಯಲಲ್ಲಿ ಈರುಳ್ಳಿ ಮೆಕ್ಕೆಜೋಳ ಜೋಳಗಳ ಚಿತ್ತಾರ ವಿವಿಧ ಫಲಪುಷ್ಪಗಳ ಬೆಟ್ಟಗುಡ್ಡಗಳು ಹೀಗೆ ನಿರಂತರ ಹಚ್ಚಹಸಿರಿಂದ ಕಂಗೋಗಿಳಿಸುವ ಊರು. ಸಿದ್ದಲಿಂಗ ಜಗದ್ಗುರುಗಳ ತಪೋನಿರತ ಪುಣ್ಯಭೂಮಿ ಬುಕ್ಕಾಂಬೂದಿ. ವರ್ಷಂಪೂರ್ತಿ ಒಂದಿಲ್ಲೊಂದು ಕೆಲಸಸಿಗುವ ಕಾರಣ ದಂಡು ದಂಡು ಕಾರ್ಮಿಕರು ಬರುತ್ತಿರುತ್ತಾರೆ. ಹೀಗೆ ವಲಸೆ ಬಂದ ಕಾರ್ಮಿಕರಾದ ಶಾರದಾಮ್ಮ ಮತ್ತು ತಂಬಿಯ ಮಗಳೇ ಈ ಸುನಂದ. ಹೊಸದಾಗಿ ಎಂಟನೇ ತರಗತಿಗೆ ಸೇರಿರುವ ಏನೂ ಅರಿಯದ ಮುಗ್ದ ಬಾಲೆ.ಪ್ರೀತಿಯಿಂದ ಎಲ್ಲರು ಸುಂದ್ರಿ ಸುಂದ್ರಿ ಅಂತಲೇ ಕರೆಯುತ್ತಿದ್ದರು ಕುಂಟೆಪಿಲ್ಲೆ ಆಡುತ್ತ ನೆಗೆಯುತ್ತಿದ್ದರೆ ಜಿಂಕೆಮರಿ ನೆಗೆದಂತೆ. ಸುಕೋಮಲ ಹರಿಣಾಕ್ಷಿ, ಸದಾಹಸನ್ಮುಖಿ ಬಾಯಿಬಿಟ್ಟರೆ ದಾಳಿಂಬೆಯಂತ ದಂತಪಂಕ್ತಿ. ನೀಡುದಾದ ಮೂಗಿಗೆ ಮೂಗುತಿ ಹಾಕಲು ತಂದೆ ತಾಯಿಗೆ ಬಡತನ, ಬೇವಿನ ಕಡ್ಡಿಗಳೇ ಕಿವಿಗಳಿಗೆ ಆಭರಣ ನೀಳವಾದ ಮುಂಗುರುಳಲ್ಲಿ ಇಪ್ಪತ್ತು ವರ್ಷದ ತರುಣಿಯಂತೆ ಕಂಗೊಳಿಸುತ್ತಿದ್ದಳು ಯಾವುದೇ ಪುರುಷ ಒಮ್ಮೆ ತಿರುಗಿ ನೋಡುವಂತ ಮೈಕಟ್ಟು, ಬಡತನದಲ್ಲಿ ಹರಿದುಹೋದ ಬಟ್ಟೆಗಳಿಗೂ ಮೆರಗು ಸುಂದ್ರಿಯ ಸೌಂದರ್ಯ.

ಅಂದು ಮುಂಜಾನೆ,ಏಳು ಮಗ ಏಳಮ್ಮ ಏಳು ಮಗಳೇ ಹೊತ್ತಾಯಿತು ನಾನು ಕೆಲಸಕ್ಕೆ ಹೋಗಬೇಕು ಏಳು ಮಗಳೇ ವಯಸ್ಸಿಗೆ ಬಂದ ಮಗಳು ಇಷ್ಟು ತಡವಾಗಿ ಎದ್ದರೆ ಹೇಗೆ? ಶಾಲೆಗೆ ಹೋಗಬೇಕು ತಾನೆ,ಅ ಅ ಅಪ್ಪ ನಾನು ನಾನು ಶಾಲೆಗೆ ಹೋಗಲ್ಲ ಅಮ್ಮ ಎಲ್ಲಿ,ಅಮ್ಮ ಹೊರಗೆ ಹೋಗವ್ಳೆ, ನೀನು ಏಳಮ್ಮ, ಅಮ್ಮ ಬರಲಿ ಇರು ಅಪ್ಪ ಇನ್ನು ನಿದ್ದೆ ಬರುತ್ತಿದೆ. ಚಾಪೆಯನ್ನು ಸುತ್ತಿಕೊಂಡು ಇನ್ನೂ ಮಲಗಿದ್ದ ಸುನಂದ ಮಾತಾಡುತ್ತಿದ್ದಾಳೆ. ಅಷ್ಟರಲ್ಲಿ, ಸುಂದ್ರಿ ಸುಂದ್ರಿ ಏ ಸುಂದ್ರಿ ಏಳೇ ಬೆಳಿಗ್ಗೆ ಎಂಟಾಯ್ತು,ಎಂಟನೇ ಕ್ಲಾಸ್ ಗೆ ಹೋಗೋ ಹುಡುಗಿ ಈಟೋತ್ತು ಮಲಗಿದರೆ ಹೇಗೆ ಈ ವರ್ಷನೋ ಮುಂದಿನ್ ವರ್ಷನೋ ಮದುವೆ ಮಾಡಬೇಕು ನಿಂಗೆ ಏಳೇ ಮೇಲೆ,ನಿಲ್ಲು ಬರ್ತೀನಿ ಮಿಂಡ್ರಿಬಡ್ಕಿ, ಬಾಗಿಲಿಗೆ ನೀರು ಹಾಕಿ ಪಾತ್ರೆ ತೊಳೆದು ನೀರ್ ಹಿಡಿದು ವಸಿ ಮುದ್ದೆ ಮಾಡು ಹಾಕು ಅಂದ್ರೆ ಇನ್ನು ಮಲ್ಕೊಂಡ್ಯಾ, ನಿಮ್ಮಪ್ಪ ನೆಲ ಕಡಿಯೋಕೆ ಹೋಗ್ತಾನೆ, ನಾನು ಮಣ್ಣೋರಕೆ ಹೋಗಬೇಕು ಕೂಲಿ ಇಲ್ಲ ಅಂದ್ರೆ ಸಂಜೆ ಮುದ್ದೆ ಹೇಗೆ ಬರುತ್ತೆ ಎಂದು ಸುನಂದಾಳ ತಾಯಿ ಒಂದೇ ಸಮನೆ ಒದರುತ್ತಿರುವುದನ್ನು ಕೇಳಿ,ನಾನು ಶಾಲೆಗೆ ಹೋಗಲ್ಲ ನಾನು ನಿನ್ ಜೊತೆ ಮಣ್ಣೋರಕೆ ಬರ್ತಿನಿ ಇಲ್ಲ ಅಪ್ಪನ ಜೊತೆ ನೆಲ ಕಡಿಯೋಕೆ ಹೋಗ್ತೀನಿ. ಹಾಗೆ ಅನ್ನಬಾರದು ಮಗಳೇ, ನಾನು ಓದಲಿಲ್ಲ ನಿಮ್ಮಮ್ಮ ಓದಲಿಲ್ಲ ನಮ್ಮ ಸ್ಥಿತಿ ನೋಡೀಗ ಕೆಲಸಕ್ಕೆ ಹೋದ್ರೆ ಊಟ,ಇಲ್ಲಅಂದ್ರೆ ಉಪವಾಸ ಅದಕ್ಕೆ ಓದಿ ಬುದ್ದಿವಂತೆಯಾಗಿ ನಮ್ಮನ್ನ ಕೊನೆ ಕಾಲದಲ್ಲಿ ಸಾಕು ಮಗಳೇ, ಅಪ್ಪ ಪ್ರೀತಿಯಿಂದ ಹೇಳುತ್ತಾನೆ.ಒಹೋಹೋಹೋ ಈ ಸುಂದ್ರಿ ಓದಿ ದಬಾಕಿದ್ದು ಅಷ್ಟರಲ್ಲೆ ಇದೆ ಈ ವರ್ಷನೋ ಮುಂದಿನ ವರ್ಷನೋ ಮದುವೆ ಮಾಡಯ್ಯ.ಮದುವೆ ಮಾಡಿಕೊಳ್ಳಕೆ ಯಾರು ಕಾಯ್ತ ಇದ್ದಾರೆ, ಈ ಮನೆ ನೋಡಿದ್ರೆ ಯಾವ ನಾಯಿನೂ ಬರಲ್ಲ ಹೋಗೆ ಮೊದಲು ಮಣ್ಣೋರಕೆ ಹೋಗೆ.ಅಷ್ಟರಲ್ಲಿ ಸುನಂದ ಚಾಪೆ ತೆಗೆದು ನಾಗಣ್ಣನ ಮನೆ ಹಟ್ಟಿಯಿಂದ ಸಗಣಿತಂದು ಬಾಗಿಲು ಸಾರಿಸಿ ರಂಗೋಲಿ ಹಾಕಿ,ಇದ್ದಿಲಿನಲ್ಲಿ ಹಲ್ಲುಉಜ್ಜಿ ಮುಖ ತೊಳೆದಳು,ತೀರ ಬಡತನದ ಗುಡಿಸಲಿನಲ್ಲಿ ಹುಟ್ಟಿ ಬೆಳೆದರು ರತಿಯಂತೆ ಸೌಂದರ್ಯ ಹೊಂದಿದ್ದ ಸುನಂದ ಶಾಲೆಗೆ ಹೋಗಲು ರೆಡಿ ಆದಳು.ನೆಲಕಡಿಯಲು ಚಲಕೆ ಬಾಯಿ ಹರಿತ ಮಾಡಿಕೊಳ್ಳಲು ಠಣ್ ಠಣ್ ಠಣ್ ಠಣಾರ್ ಎಂದು ಸುತ್ತಿಗೆಯಿಂದ ಕಲ್ಲಿನ ಮೇಲೆ ಚಲಕೆಯನ್ನು ಇಟ್ಟು ಅಪ್ಪ ಹೊಡೆಯಲಾರಂಬಿಸಿದ್ದ. ಶಾರದಮ್ಮ,ಸುಂದ್ರೀ ಸುಂದ್ರೀ ನಿಮ್ಮಪ್ಪನ ಕರಿಯೇ ಮುದ್ದೆ ಆಯಿತು, ಅಪ್ಪ ಅಪ್ಪೊಯ್ ಮುದ್ದೆ ಆಗಿದೆಯಂತೆ ಅಮ್ಮ ಕರಿತಾಳೆ. ಹಾ ಬಂದೆ ಮಗಳೇ, ನೀನು ಬಾ ಸ್ವಲ್ಪ ತಿಂದು ಇಸ್ಕೂಲಿಗೆ ಹೋಗು, ಎಂದ ಅಪ್ಪ.ತಂದೆ ಮಗಳು ಎರಡು ಮುದ್ದೆ ಹುರುಳಿಕಾಳು ಚಟ್ನಿ ತಿಂದು ಮುಗಿಸಿದರು, ಅಮ್ಮನು ಮುದ್ದೆ ತಿಂದು ಒಂದು ಬಾಕ್ಸ್ ನಲ್ಲಿ ಗಂಡನಿಗೂ ಮುದ್ದೆ ಹಾಕಿ ಕೊಟ್ಟು ತಾನು ಬುತ್ತಿ ಕಟ್ಟಿಕೊಂಡು ಕೆಲಸಕ್ಕೆ ಹೊರಟಳು.ಸುಂದ್ರಿ ಶಾಲೆಗೆ ಹೋಗ್ತಾ ಗುಡಿಸಲಿಗೆ ಬಾಗ್ಲು ಹಾಕೊಂಡು ಹೋಗವ್ವ ಇಲ್ಲಾಂದ್ರೆ ನಾಯಿಗಳು ಮುದ್ದೆ ತಿಂತಾವೆ. ಶಾಲೆಗೆ ಹೋಗ್ತಾ ದಾರಿಲಿ ಯಾವನಾದ್ರು ಏನಾದರೂ ಅಂದ್ರೆ ಸಂಜೆಗೆ ಅಪ್ಪಂಗೆ ನಂಗೆ ಹೇಳು ಅವರ ಕಾಲ್ ಮುರಿತೀವಿ, ಆಯ್ತಮ್ಮ ಹೋಗ್ ಬರ್ರೀ, ಸುಂದರಿ ಶಾಲೆಗೆ ಹೊರಡ್ತಾಳೆ.
ಶಾಲೆಗೆ ಹೋದದಿನ ಅವಳ ಸೌಂದರ್ಯಕ್ಕೆ ಶಾಲೆಯೇ ನಿಬ್ಬೆರಗಾಗಿ ನೋಡಿತ್ತು ಗೆಳತಿಯರೆಲ್ಲ ಸುಂದ್ರೀ ಸುಂದ್ರೀ ಎಂದೇ ಕರೆಯುತ್ತಿದ್ದರು. ಆ ಹೆಸರಿನಿಂದಲೇ ಆಕೆಗೆ ಇನ್ನಷ್ಟು ಸೌಂದರ್ಯ ಹೆಚ್ಚಾಯಿತು, ಬೆಟ್ಟದ ತಪ್ಪಲಿನಲ್ಲಿ ಇರುವ ಶಾಲೆಯ ಪಕ್ಕದಲ್ಲಿ ಹೂದೋಟದಿಂದ ಕೂಡಿದ ಪವಿತ್ರವನದಲ್ಲಿ ಸುಂದ್ರಿ ನಡೆದಾಡುತ್ತಿದ್ದರೆ ಪ್ರತಿ ಹೂ ನಾಚಿಕೊಳ್ಳುತಿದ್ದವು. ಅರಳಿದಪುಷ್ಪಗಳನ್ನು ಅರಸಿಬಂದ ದುಂಬಿಗಳು ಸುಂದ್ರಿ ಸೊಂದರ್ಯಕ್ಕೆ ಮನಸೋತು ಒಮ್ಮೆ ಅವಳನ್ನು ಸುತ್ತಿ ಹೋಗುತ್ತಿದ್ದವು. ನಿರಾಭರಣ ಸುಂದರಿ ಯಾದ ಆಕೆಗೆ ನಾನು ಸುಂದರಿ ಎಂಬ ಜ್ಞಾನವೂ ಇಲ್ಲ ಅಕ್ಷರ ಜ್ಞಾನವೂ ಸಾಕಷ್ಟಿಲ್ಲ ಅಧ್ಯಾಪಕರನ್ನು ಬಿಟ್ಟರೆ ಆಕೆಯನ್ನು ಯಾರು ಏಕವಚನದಲ್ಲಿ ಮಾತನಾಡುವಂತಿರಲಿಲ್ಲ ಬೇರೆ ಯಾರೇ ಆಕೆಯನ್ನು ಮಾತಾಡಿದರೂ ಮಾರಿಯಂತೆ ಆಗುತ್ತಿದಳು, ಶಾಲೆಗೆ ಹೋದ ದಿನವೇ ಅಧ್ಯಾಪಕರು ಆಟೋಟಗಳಿಗೆ ಒಳ್ಳೆ ಕಟ್ಟು ಮಸ್ತಾದ ಹುಡುಗಿಯೊಬ್ಬಳು ಸಿಕ್ಕಳೆಂದು ಉದ್ಘಾರ ತೆಗೆದಿದ್ದನ್ನು ಸುನಂದ ಕೇಳಿಸಿಕೊಂಡಿದ್ದಳು. ಶಾಲೆ ಮುಗಿಸಿ ಸಂಜೆ ಮನೆಗೆ ಬರುವಾಗ ರಸ್ತೆ ಅಕ್ಕಪಕ್ಕದ ಗಂಡಸರು ಪೋಲಿ ಹುಡುಗರು ಸುನಂದಾಳ ಚೆಲುವನ್ನು ಕಣ್ತುಂಬಿಸಿಕೊಳ್ಳುತ್ತಿದ್ದರು. ಶಾಲೆ ಮುಗಿಸಿ ಸುನಂದ ಮನೆಗೆ ಬಂದಳು ಅಪ್ಪ ಸರಾಯಿ ಬಾಟಲ್ ಉಪ್ಪಿನಕಾಯಿ ಲೋಟ ಮುಂದಿಟ್ಟುಕೊಂಡು ಅಮ್ಮನ ಬರುವಿಕೆಯನ್ನು ಕಾಯುತ್ತಿದ್ದ. ಈಗಾಗಲೇ ಕುಡಿದ ಅಮಲಿನದ್ದ ಅಪ್ಪ ಮಗಳೇ ಸುಂದರಿ ಸುನಂದಾ ಸುನೀ ಮಗಳೇ ಸ್ವಲ್ಪ ನೀರು ಕೊಡು ತಾಯಿ, ಆಯ್ತು ಅಮ್ಮ ಬರ್ಲಿಲ್ವಾ, ಈಗ ಬರೋ ಹೊತ್ತು, ನೀನು ಶಾಲೆಗೆ ಹೋಗಿ ಬಂದ್ಯಾ ಊಂ,ಅಂದು ನೀರು ಕೊಟ್ಟು ಪಾತ್ರೆ ತೊಳೆಯಲು ಹೊರಗೆ ಹಾಕಿಕೊಂಡ್ಲು ಒಂದೆರಡು ತಿಕ್ಕಿದಾಗ ಅಮ್ಮ ಸೌದೆ ಹೊರೆ ಹೊತ್ತು ದೂರ ಬರುತ್ತಿದ್ದಿದ್ದನ್ನು ಕಂಡು ಓಡಿ ಹೋಗಿ ಅಮ್ಮನಿಂದ ಸೌದೆ ಹೊರೆಯನ್ನು ತೆಗೆದುಕೊಂಡು ಬರುತ್ತಾಳೆ. ಮಗಳು ವಯಸ್ಸಿಗೆ ಬಂದದ್ದಕ್ಕೆ ಅಮ್ಮನಿಗೆ ಹೊರೆ ಕಡಿಮೆಯಾಯಿತು ಎಂದು ಅಕ್ಕ ಪಕ್ಕದವರು ಮಾತನಾಡಿಕೊಳ್ಳುತ್ತಾರೆ. ಮನೆಗೆ ಬಂದ ಅಮ್ಮ ಅಪ್ಪನ ಜೊತೆ ಕುಳಿತು ಸಾರಾಯಿ ಹೀರುತ್ತಾ ಉಪ್ಪಿನಕಾಯಿ ತಿಂದು ಮಗಳು ವಯಸ್ಸಿಗೆ ಬಂದ್ಲು ಎಲ್ಲಾದರೂ ಮದುವೆ ಏರ್ಪಾಟು ಮಾಡಬೇಕು ಎಂದು ಮಾತು ಆರಂಭಿಸಿದಾಗಲೇ ಸುನಂದ ಪಾತ್ರೆ ತೊಳೆದು ಮುದ್ದೆಗೆ ಹೆಸರಿಟ್ಟು ಅಮ್ಮ ಗೊಜ್ಜು ಮಾಡು, ಮುದ್ದೆಗೆ ಹೆಸರು ಇಟ್ಟಿದ್ದೀನಿ, ಆಯ್ತು ಮಗ ಮಾಡ್ತೀನಿ, ಅಷ್ಟರಲ್ಲಿ ಒಂದು ಕಟ್ಟು ಬೀಡಿ ತಗೊಂಡು ಬಾಮ್ಮ ಎರಡು ರೂಪಾಯಿ ತಗೋ…ಈಗ ಊಟ ಮಾಡಿ ಮಲ್ಕೋ ನಾಳೆ ಶಾಲೆಗೆ ಹೋಗಬೇಕು ಅಂದ ಅಪ್ಪ.
ಸುನಂದ ಎಂಟನೇ ತರಗತಿಗೆ ಹೋಗಿ ನಾಲ್ಕು ವಾರಗಳು ಕಳೆದಿದ್ದವು ಅಷ್ಟೇ ಶಾಲೆಗೆ ಸೇರಿದಾಗಲೇ ಆಟ ಆಡುವುದಕ್ಕೆ ಸರಿಯಾದ ವಿದ್ಯಾರ್ಥಿ ಸಿಕ್ಕಳೆಂದು ಯೋಚಿಸಿದ್ದ ಅಧ್ಯಾಪಕರು ಆಕೆಯನ್ನು ಕಬಡ್ಡಿ ಆಟಕ್ಕೆ ಆಯ್ಕೆಮಾಡಿದರು. ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳ ಕಬಡ್ಡಿ ಆಟದ ಗುಂಪಿಗೆ ಕಟ್ಟು ಮಸ್ತಾಗಿದ್ದ ಸುನಂದಳನ್ನು ಕರೆದು ಕಬಡ್ಡಿ ಆಡುತ್ತೀಯ ಎಂದು ಪಿಇ ಮೇಷ್ಟ್ರು ಕೇಳಿದಾಗ ಗೊಜ್ಜು ಮುದ್ದೆ ತಿಂದು ಬೆಳೆದ ಹಳ್ಳಿ ಹುಡುಗಿ ಇಲ್ಲ ಎನ್ನಲು ಸಾಧ್ಯವೇ? ಆಟದಲ್ಲಿ ಹಿರಿಯ ಯಾವ ವಿದ್ಯಾರ್ಥಿಗಳು ಆಕೆಯನ್ನು ಹಿಡಿಯುವ ಸಾಹಸ ಮಾಡಲಿಲ್ಲ, ಎದುರಾಳಿಗಳು ಹೆದರುವಂತೆ ರೈಡ್ ಮಾಡಿದಳು ಕ್ಯಾಚ್ ಹಿಡಿದಳು ಆಟ ಆಡುವಾಗ ಇದ್ದ ಒಂದು ಜೊತೆ ಬಟ್ಟೆಯು ಹರಿದು ಹೋಗಿತ್ತು. ಮನೆಗೆ ಹೋದರೆ ಅಮ್ಮ ಹೊಡೆಯುತ್ತಾಳೆ ಎಂದು ಶಾಲೆ ಮುಗಿಸಿ ಅಳುತ್ತಲೇ ಮನೆಗೆ ಬಂದಳು ಎಂದಿನಂತೆ ಜೊತೆಯಲ್ಲಿ ಸರಾಯಿ ಹೀರುತ್ತಾ ಕುಳಿತಿದ್ದ ಅಮ್ಮ ಅಪ್ಪನನ್ನು ನೋಡಿ ಕಬಡ್ಡಿ ಆಟದಲ್ಲಿ ಬಟ್ಟೆ ಹರಿಯಿತು,ಅಲ್ವೇ ಬೇವರ್ಸಿ ಕಬಡ್ಡಿ ಆಡಿದ್ಯೋ ಇಲ್ಲ ಎಲ್ಲಾದ್ರೂ ಬೇಲಿಗೀಲಿ ನುಸಿದು ಬಂದೇನೆ ಇದ್ದ ಒಂದು ಜೊತೆ ಬಟ್ಟೆನು ಹರಿದು ತಂದಲ್ಲೆ ತೆಗಿ ಅದನ್ನ ಹರಿದಾಕು ಒಂದು ಸೀರೆನೊ ಹಳೆ ರವಿಕೆನೋ ಸುತ್ಕೋ ನಿನ್ ಮಾನ ಮುಚ್ಕೋ ಎಂದು ಕುಡಿದ ಅಮಲಿನಲ್ಲಿದ್ದ ಅಮ್ಮ ರೇಗಾಡಿದಳು. ಮಗಳನ್ನು ಬೈದಿದ್ದಕ್ಕೆ ಅಪ್ಪ ತಂಬಿ ಯಿಂದ ಸರಿಯಾಗಿ ಹೊಡಿಸಿಕೊಂಡು ಮೂಲೆಯಲ್ಲಿ ಮರಿ ಮಾಡಲು ಕೂರಿಸಿದ್ದ ಕೋಳಿ
ಮೇಲೆ ಬಿದ್ದು ಕೋಳಿ ಸಾಯ್ತು ಮೊಟ್ಟೆಗಳು ಹೊಡೆದವು.ಮಗಳೇ ಸುನಂದ ಒಂದೆರಡು ಮುದ್ದೆ ಮಾಡು ಈ ಕೋಳಿನ ಸುಟ್ಕೊಳ್ತಿನಿ ನಾನು, ಆಯ್ತು ಅಪ್ಪ, ನೀನು ಅಳಬೇಡ, ಹೆದರಬೇಡ ಮಗಳೆ, ನಿನ್ನ ಸಮವಸ್ತ್ರ ರೆಡಿ ಆಗಿದೆಯಂತೆ ನಾಳೆ ತಂದು ಕೊಡ್ತೀನಿ, ನೀನು ಶಾಲೆಗೆ ಹೋಗು ಈಗ ಊಟ ಮಾಡಿ ಮಲ್ಕೋ. ನಾನ್ ಇಸ್ಕೂಲಿಗೆ ಹೊಗಲ್ಲ ನಂಗೆ ಓದು ಬರಲ್ಲ ಎಲ್ಲಾರು ಆಡ್ಕಳ್ತಾರೆ, ಎಲ್ಲಾರು ನಗ್ತರೆ, ಆಟ ಆಡಿದ್ರು ನಗ್ತಾರೆ,ಆಗ್ನಬಾರದು ಮಗ ಓದು ಬುದ್ಧಿವಂತೆ ಆಗಬೇಕು ನೋಡಲ್ಲಿ ಅಮೂಲೆನಲ್ಲಿ ಕೋಳಿ ಮೇಲೆ ಹೇಗೆ ಬಿದ್ಕೊಂಡವ್ಳೆ ನೀನಾದ್ರೂ ಓದಿ ಬುದ್ವಂತೆ ಆಗವ್ವ.ಮೂಲೆಯಲ್ಲಿ ಬಿದ್ದಿದ್ದ ಶಾರದಮ್ಮ ಏಳಲು ಆಗದೆ ಅಲ್ಲೇ ಮಲಗಿಕೊಂಡು ನಿದ್ದೆ ಮಾಡಿದಳು, ಬೆಳಿಗ್ಗೆ ತಂಬಿ ಮಗಳಿಗೆ ಸಮವಸ್ತ್ರ ತಂದುಕೊಟ್ಟು ಖುಷಿ ಪಟ್ಟ.

ಅಪ್ಪ ಅಮ್ಮ ಕೆಲಸಕ್ಕೆ ಹೋದರು ಸುನಂದ ಶಾಲೆಗೆ ಹೋದಳು. ಅಂದು ಶಾಲೆಯಲ್ಲಿ ವಾಲಿಬಾಲ್ ಆಟ ಮೇಷ್ಟ್ರು ವಾಲಿಬಾಲ್ ಆಡಲು ಸುಂದ್ರಿಗೆ ಹೇಳಿದಾಗ ವಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಸುಂದ್ರಿ ಸರ್ವಿಸ್ ಮಾಡಿದ್ರೆ ಯಾವ ಹುಡುಗನು ತಡಿಯಲು ಆಗುತ್ತಿರಲಿಲ್ಲ, ಕೋ ಕೋ ಆಟದಲ್ಲಿ ಆಕೆಯನ್ನು ಯಾರು ಔಟ್ ಮಾಡಿದ್ದೆ ಇಲ್ಲ ಹೀಗೆ ಎಲ್ಲಾ ಆಟಗಳಲ್ಲಿ ಭಾಗವಹಿಸಿ ಶಾಲೆಯ ಕ್ರೀಡಾ ವಿಭಾಗದಲ್ಲಿ ಸ್ಟಾರ್ ಆದಳು ಸುನಂದ. ಅದೇ ವರ್ಷ ತಾಲೂಕು ಮಟ್ಟದ ಕ್ರೀಡಾಕೂಟದ ಆತಿಥೇಯ ಶಾಲೆಯಲ್ಲಿ 100 ಮೀಟರ್ ಓಟದಲ್ಲಿ ಪ್ರಥಮ 800 ಮೀಟರ್ ಓಟದಲ್ಲಿ ಪ್ರಥಮ ಕೋ ಕೋ ಕಬಡ್ಡಿ ವಾಲಿಬಾಲ್ ನಲ್ಲಿ ಪ್ರಥಮ ಹೀಗೆ ಹುಡುಗಿಯರ ವಿಭಾಗದಲ್ಲಿ ಸರ್ವ ಶ್ರೇಷ್ಠ ಆಟಗಾರ್ತಿಯಾಗಿ ಸುನಂದ ಆಯ್ಕೆಯಾದಳು. ಜಿಲ್ಲಾ ಮಟ್ಟಕ್ಕೂ ಆಯ್ಕೆಯಾದಳು. ಅಪ್ಪನಿಗೆ ಎಲ್ಲಿಲ್ಲದ ಸಂಭ್ರಮವಾದರೆ ಅಮ್ಮನಿಗೆ ನನ್ನ ಮಗಳು ಮನೆ ಬಿಟ್ಟು ಆಚೆ ಹೋಗಬಾರದು ಎಂಬ ಮನಸ್ಸು.ನೀನು ಎಲ್ಲಿ ಹೋಗಬೇಡ ಕಣೆ ಸುಂದ್ರಿ ನಮ್ ಜೊತೆ ಮಣ್ಣು ಹೋರಕೋ ಇಲ್ಲ ಕಲ್ಲು ಹೊಡೆಯೋಕೊ ಬಾ,ಅಷ್ಟರಲ್ಲಿ ಮಧ್ಯಂತರ ರಜೆ, ಅಮ್ಮನ ಜೊತೆ ಕೂಲಿ ಕೆಲಸಕ್ಕೆ ಹೊರಟಳು ಸುಂದ್ರಿ.
**********************
“ಸೀಮೆ ಕೆಟ್ಟರು ಶಿವನಿ ಕೆಟ್ಟಿಲ್ಲ” ಎಂಬ ನಾಣ್ನುಡಿಯಂತೆ ಶಿವನಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ಅಕ್ಟೋಬರ್ ನಲ್ಲಿ ಈರುಳ್ಳಿ ಕೆಲಸ ಹೆಚ್ಚಾಗಿರುತ್ತದೆ. ಸಾಗರದೋಪಾದಿಯಲ್ಲಿ ಅಡಿಕೆ ತೋಟಗಳು ಅಲ್ಲಲಿ ಈರುಳ್ಳಿ ಹೊಲಗಳು, ಜೋಳದ ಭತ್ತದ ಹಾಲ್ದೆನೆ ಹೀರುವ ಹಕ್ಕಿಪಕ್ಷಿಗಳ ಇಂಚರ ಸುಂದ್ರಿಯನ್ನು ಹೊಸ ಪ್ರಪಂಚಂಚಕ್ಕೆ ಕರೆದೋಗಿತ್ತು. ಈರುಳ್ಳಿ ಕೆಲಸಕ್ಕೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಾವಿರಾರು ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ.ಎಂದಿನಂತೆ ಸುಂದ್ರಿಯ ಅಪ್ಪ ಅಮ್ಮ ಮುಂಜಾನೆಎದ್ದು ಕೆಲಸಕ್ಕೆ ಹೊರಟರು. ಕೆಲಸಕ್ಕೆ ಕರೆದುಕೊಂಡವರೆ ಊಟ ಕೊಡುತ್ತಿದ್ದ ಕಾರಣ ಅಡುಗೆ ಮಾಡಲಿಲ್ಲ ಸುಂದ್ರಿಗೆ ಅಮ್ಮನ ಜೊತೆ ಕೆಲಸಕ್ಕೆ ಹೋಗೋದು ತುಂಬಾ ಇಷ್ಟ ಅಪ್ಪ ಅಮ್ಮನಿಗಿಂತ ಮುಂಚೆಯೇ ಎದ್ದು ರೆಡಿಯಾದ್ಲು, ಸುಂದ್ರಿ ಸುಂದ್ರೀ ರೆಡಿಯಾದೆನೆ ಆ ಸ್ಕೂಲ್ ಬಟ್ಟೆ ಬಿಟ್ಟು ಒಂದು ಹಳೆ ಸೀರೆ ಹಾಕೊಳೇ ಬೇಡಮ್ಮ ನಾನಿದ್ರಲ್ಲೇ ಬರ್ತೀನಿ ಅಮ್ಮನ ಜೊತೆಯಲ್ಲಿ ಈರುಳ್ಳಿ ಕಳೆ ತೆಗಿಯಲು ಹೊರಟಳು. ಸುಂದ್ರಿಗೆ ಕೆಲಸ ಮಾಡಲು ಇಷ್ಟ ಮೈಕೈ ನೋವು ಕಾಣದು ಎಲ್ಲಾ ಕೆಲಸದಲ್ಲೂ ಅವಳು ಮುಂದು, ಕಳೆ ತೆಗೆಯಲು ಅನುಭವವಿಲ್ಲದ ಆ ಹುಡುಗಿಯನ್ನು ಅಕ್ಕಪಕ್ಕದವರು ಮಧ್ಯ ಕೂರಿಸಿಕೊಂಡು ಒಂದೆರಡು ದಿನ ಕಳೆ ತೆಗೆದರು. ನಂತರ ಸುಂದ್ರಿ, ಏ ಬನ್ರೆ ಅಕ್ಕ ಏನ್ ಕೆಲಸ ಮಾಡ್ತೀರಿ ಈ ಕಳೆ ತೆಗಿಯೋದು ಏನ್ಕಷ್ಟ ವಸಿ ಬನ್ರೇ ಜೋರಾಗೆ,ಅಂದ್ಲು ಅದಕ್ಕೆ ಹಿರಿಯ ಹೆಂಗಸೊಬ್ಬಳು ನೀನೇನು ಆರೆತ್ತಿದಿಯಾ ಮೂರಿಳಿಸಿದಿಯಾ ಹರೇದ ಹುಡುಗಿ ಕೈ ಕಾಲು ಸೊಂಟ ಬಿಗಿಯಾಗಿದೆ ನಮಗೆ ನಿನ್ನ ಪ್ರಾಯ ಬರಬೇಕಲ್ಲ, ಇದೇನು ಒಂದಿನದ್ದ, ಹಗಲು ಇಲ್ಲಿ ಹೊತ್ತಾರೆ, ರಾತ್ರಿ ಮನೆಗೆ ಯೇಗ್ಬೇಕು, ರಾತ್ರಿ ಕುಡಿದ ಗಂಡಂದ್ರ ಜೊತೆ ಹೆಣಗಬೇಕು,ನಿಂಗೆ ಈಗ ಗೊತ್ತಾಗಲ್ಲ ಸುಂದ್ರಿ ಒಂದು ಮದುವೆ ಆಗೂ ಗೊತ್ತಾಗುತ್ತೆ, ಅಂತ ಹಿರಿಯ ಹೆಂಗಸ್ರು ಹೇಳೋಷ್ಟ್ರಲ್ಲಿ ವಸಿ ಸುಮ್ಕಿರೆ ಅವಳು ಮದುವೆಯಾಗತ್ತಾಳೋ ಅಥವಾ ಯಾರ್ನಾದ್ರೂ ಕಟ್ಟಿಕೊಂಡು ಹೋಡೊಕ್ತಳೋ ಈ ಸುಂದ್ರಿ ಚೆಲುವ ನೋಡಿದ ಯಾವ ಗಂಡಸು ಬಿಡಾನು, ಅಷ್ಟರಲ್ಲಿ ಸುಂದ್ರಿ,ಯಾವನಾದ್ರು ಮುಟ್ಲಿ ನೋಡವ ಅವನ ಸಾಯಿಸಿಬಿಡ್ತೀನಿ. ಇದೆಲ್ಲ ಕೇಳಿಸಿ ಕೊಳ್ಳುತ್ತಿದ್ದ ಸುಂದ್ರಿ ಅಮ್ಮ ಯಾವನಾದರೂ ನನ್ನ ಹುಡುಗಿ ತಂಟೆಗೆ ಬಂದ್ರೆ ಅವನ ಬೀಜ ಕಿತ್ತಾಕ್ತಿನಿ ಹೀಗೆ ಮಾತಾಡುತ್ತಾ ಕಳೆ ಕೀಳುವಾಗಲೇ ಅ ಹೊಲದ ಯಜಮಾನನ ಮಗ ಶಿವಮೂರ್ತಿ ಊಟಕ್ಕೆ ಹೊತ್ತುಕೊಂಡು ಬಂದ.
ಹಸಿದ ಹೊಟ್ಟೆಯಲ್ಲಿದ್ದ ಹೆಂಗಸರು ಊಟ ಬಂತು ಕೈ ತೊಳಿರಿ ಅಂದರು ಸುಂದ್ರಿ ಹೋಗು ಹಳ್ಳದಲ್ಲಿ ಒಂದು ಕೂಡ ನೀರು ತಗೊಂಡು ಬಾ ಅಂದ್ರು ಹೆಂಗಸ್ರು,ನೀರು ತರುತ್ತಾಳೆ ಸುಂದ್ರಿ ಎಲ್ಲರೂ ಕೈ ತೊಳೆದು ಊಟಕ್ಕೆ ಕುಳಿತರು ಹೊಲದಲ್ಲಿ ಬೆಳೆದಿದ್ದ ಹರಳೆಲೆಯಲ್ಲಿ ಸುಂದ್ರಿಯೇ ಊಟ ಬಡಿಸಿದ್ಲು, ಜೋಳದ ಮುದ್ದೆ ಉಪ್ಪು ಸಾರು ಜವಳಿಕಾಯಿಪಲ್ಯ ಅನ್ನ ಮಜ್ಜಿಗೆ ಉಪ್ಪಿನಕಾಯಿ ಊಟ ಸೊಗಸಾಗಿತ್ತು.ಊಟದ ನಂತರ ಶಿವಮೂರ್ತಿ ಎಲೆ ಅಡಿಕೆ ತಂದಿದ್ದ ಎಲ್ಲಾ ಹೆಂಗಸರು ಎಲೆ ಅಡಿಕೆ ಮೆಲ್ಲುತ್ತಾ ಹೇಳ್ರೆ ಹೊತ್ತಾಯ್ತು ಎಂದಾಗ ಆ ಸುಂದ್ರಿ ಊಟ ಮಾಡಲಿ ಇರ್ರೆ ವಸಿ ಎಂದಳು ಇನ್ನೊಬ್ಬಾಕೆ.ಸುಂದ್ರಿಗೆ ಇದು ಮೃಷ್ಟಾನ್ನ ಭೋಜನಾಗಿತ್ತು, ಎಲ್ಲ ಹೆಂಗಸರ ಮಧ್ಯೆ ನಿಧಾನವಾಗಿ ತಿಂದಳು ಇದೆಲ್ಲ ಗಮನಿಸುತ್ತಿದ್ದ ಶಿವಮೂರ್ತಿಗೆ ಇವಳ ಮೇಲೆ ಏನೋ ಆಸೆ. ಸ್ಕೂಲ್ ಯೂನಿಫಾರ್ಮ್ ಹಾಕಿದ್ದೀಯಾ? ಸ್ಕೂಲ್ಗೆ ಹೋಗ್ತೀಯಾ ಕೇಳಿಯ ಬಿಟ್ಟ.ಊಂ ಹೋಗ್ತೀನಿ, ಎಷ್ಟನೇಕ್ಲಾಸು, ಯಾವ ಸ್ಕೂಲು, ಎಂಟು, ಗೊರ್ಮೆಂಟ್ ಸ್ಕೂಲ್, ಇವತ್ತು ಹೋಗಿಲ್ವಾ,ಹೇ ನಿನ್ ತಲೆ ನೆಟ್ಟಗೈತೇನು ಈಗ ರಜಾ ಅಲ್ವಾ ಓಕೆ ಓಕೆ ಸಾರಿ,ಹೆಂಗಸರಲ್ಲ ಎದ್ದು ಕಳೆ ತೆಗೆಯಲು ಹಣಿಯಾದರು, ಸುನಂದ ಊಟದ ಬಾಕ್ಸ್ ಕಟ್ಟಿಟ್ಟು ತಾನು ಕಳೆ ತೆಗೆಯಲು ಮುಂದಾದಳು ಅವಳನ್ನೇ ಗಮನಿಸುತ್ತಿದ್ದ ಶಿವಮೂರ್ತಿ ಅವಳ ಹಿಂದೆ ಹಿಂದೆಯೇ ನಡೆದು ಹೋಗುತ್ತಿದ್ದ ಕಳೆ ತೆಗೆಯುತ್ತಿದ್ದ ಹೆಂಗಸರ ಪಿಸು ಮಾತು ಆರಂಭವಾಯಿತು.ಈ ಸಾಹುಕಾರ ನಮ್ಮ ಸುಂದ್ರಿನೆ ನೋಡ್ತಾನೆ ನೋಡ್ರೆ ಅವಳ ಹಿಂದೇನೆ ಹೋಗ್ತಾನೆ ಅನ್ನುವಷ್ಟರಲ್ಲಿ ಮಳೆಬರಲು ಆರಂಭವಾಯಿತು. ಎಲ್ಲ ಹೆಂಗಸರು ಹರಳುಗಿಡದ ಕೆಳಗೆ ಹೋದರು ಪ್ರಾಯದ ಹುಡುಗಿಗೆ ಮಳೆಯಲ್ಲಿ ಆಡುವ ಆಸೆ. ಬಡತನದ ಜ್ವಾಲೆಯಲ್ಲಿ ಬೆಂದಿರುವ ಬಟ್ಟೆಗಳಲ್ಲಿದ್ದು, ಕಳೆತೆಗೆಯುವಾಗ ಮಣ್ಣಾಗಿದ್ದ ಸುಂದ್ರಿಯಮೇಲೆ ಮುತ್ತುಗಳ ಆಭರಣಗಳನ್ನಿಟ್ಟ ಮಳೆಹನಿಗಳು ಆಕೆಯ ಸೌಂದರ್ಯವನ್ನು ಇಮ್ಮಡಿ ಗೊಳಿಸಿದವು. ಇನ್ನೂ ಶಿವಮೂರ್ತಿ ಈ ಸೌಂಧರ್ಯಕ್ಕೆ ಬಲಿಯಾಗದಿರುತ್ತಾನೆಯೇ? ಶಿವಮೂರ್ತಿ ಕೊಡೆ ಹಿಡಿದು ಅಲ್ಲಿಗೆ ಬಂದ ಸುನಂದ ನಿಂತಿದ್ದ ಗಿಡದ ಬಳಿ ಬಂದು ಆಕೆಗೆ ಕೊಡೆ ಹಿಡಿದುನಿಂತ. ಸಂಜೆ ಐದುಗಂಟೆ ಹೆಂಗಸರು ಮಳೆಯಲ್ಲಿ ನೆಂದು ನಡುಗುತ್ತಿದ್ದರು ಕೆಲಸ ಬಿಡುವ ಸಮಯವಾಯಿತೆಂದು ಮನೆ ಕಡೆ ಹೊರಟರು. ಶಿವಮೂರ್ತಿ ಹೀರೋ ಹೋಂಡಾ ಬೈಕ್ ನಲ್ಲಿ ಹೊರಟ.
ಯಾರಾದ್ರೂ ಬರ್ತಿರ ಬರ್ರಿ ಕೂತ್ಕೋಳ್ರಿ ನಿಮ್ಮ ಮನೆಗೆ ಬಿಡ್ತಿನಿ ಬರ್ರಿ,ಅಲ್ಲಿಯ ಹೆಂಗಸರು ನಿನ್ ಹೋಗಮ್ಮಿ ಅಮ್ಮ ಬರೋಷ್ಟ್ರಲ್ಲಿ ಏನಾದ್ರು ಕೆಲಸ ಮಾಡು ನಾವು ಸ್ವಲ್ಪ ಸೌದೆ ತರ್ತೀವಿ ಅಂದ್ರು, ಸುಂದ್ರಿಗೆ ಅಮ್ಮನ ಬಿಟ್ಟು ಹೋಗೋದು ಇಷ್ಟ ಇರ್ಲಿಲ್ಲ, ಶಾರದಮ್ಮಳಿಗೂ ಮಗಳನ್ನು ಕಳಿಸೋದು ಇಷ್ಟ ಇರ್ಲಿಲ್ಲ,ಹೋಗು ಸುಂದ್ರಿ ನಾನು ಬರ್ತೀನಿ ನಿಮ್ಮಪ್ಪ ಬಂದಿರ್ತಾನೆ ಪಾತ್ರೆಗೀತ್ರೆ ತೊಳಿ ಸುಂದ್ರಿ ಬೈಕ್ ಮೇಲೆ ಕುಳಿತಳು, ಶಿವಮೂರ್ತಿ ನಾಳೆ ಎಲ್ಲಾ ಹೊತ್ತಾರೆ ಬನ್ರೀ ಕಳೆ ಮುಗಿಸಿ ಅಂದ, ಹಿರಿಯ ಹೆಂಗಸೊಬ್ಬಳು ಉಗ್ಗಿ ಮಾಡಿಸ್ತೀನಿ ಅಂದ್ರೆ ಸೌಕಾರ್ರೆ ಏಳುಗಂಟೆಗೆ ಬರ್ತಿವಿ.ಆಯ್ತು ಅಂದ ಬೈಕ್ ಹೊರಟಿತು, ಸುಂದ್ರಿಯನ್ನು ಮನೆಗೆ ಬಿಟ್ಟ ಶಿವಮೂರ್ತಿ ಅವಳ ಗುಡಿಸಲುಮನೆ ನೋಡಿ ತಬ್ಬಿಬಾದ, ಅವಳ ತಂದೆ ಸಾರಾಯಿ ಬಾಟಲ್ ಲೋಟ ಮುಂದಿಟ್ಟುಕೊಂಡು ಯಾರೊದೋ ನಿರೀಕ್ಷೆಯಲ್ಲಿದ್ದಂತೆ ಕಂಡನು, ದಿಗಿಲುಗೊಂಡು ಮೂರ್ತಿ ವಾಪಾಸ್ ಮನೆಗೆಹೋದ. ಸುಂದ್ರಿ ಮನೆಗೆ ಬಂದಾಗ ಅಪ್ಪಅಮ್ಮನ ಕುಡಿತ ನೋಡಿ ಅಸಹಾಯಕತೆಯಿಂದ ದಿಕ್ಕು ಕಾಣದಂತೆ ಬುಡ್ಡಿ ಬೆಳಕಲ್ಲಿ ಮೂಲೆ ಸೇರುತ್ತಿದ್ದಳು “ಸಾಗರದಷ್ಟು ಆಸೆಗಳಿದ್ದರು ಸಾಸಿವೆಯಷ್ಟು ಪ್ರಯೋಜನ” ವು ಯಾವ ದಿಕ್ಕಿನಿಂದಲೂ ಇರಲಿಲ್ಲ ಸುಂದ್ರಿಗೆ. ನನ್ನೆಲ್ಲ ಆಸೆಗಳ ಆಶ್ರಯತಾಣ ಶಿವಮೂರ್ತಿ ಹೃದಯ ಎಂದು ಭಾವಿಸಿದಳು.
ಹೊಸದಾಗಿ ಮದುವೆ ಆಗಿದ್ದ ಶಿವಮೂರ್ತಿ ಹೆಂಡತಿ ಊಟಕೊಟ್ಟರೆ ತಿನ್ನಲಿಲ್ಲ,ಅಪ್ಪ ಅಮ್ಮರನ್ನು ಮಾತಾಡಲಿಲ್ಲ ರಾತ್ರಿಯಿಡಿ ಕಣ್ಣು ಮುಚ್ಚಿದರೆ ಸುಂದ್ರಿ ಸೌಂದರ್ಯ ಅವಳ ಬಡತನ ಅವಳ ತುಂಟಮಾತು ಆಕೆತಂದೆಯ ಕುಡಿತ ತಾಯಿಯ ಅಸಹಾಯಕತೆಯ ನೆನಪುಗಳು ಅವನನ್ನು ಕಾಡಿದವು.ಬೆಳಗಿನ ನಾಲ್ಕು ಗಂಟೆಗೆ ಎದ್ದ,ಅಮ್ಮ ಇವತ್ತು ಕಳೆ ಮುಗಿತದೆ ಆ ಹೆಂಗಸರಿಗೆ ಪಾಯಸ ಮಾಡಬೇಕಂತೆ ಇಲ್ಲ ಅಂದ್ರೆ ಇನ್ನೊಂದು ದಿನ ಕೆಲಸಕ್ಕೆ ಬರಲ್ವಂತೆ.ತಾಯಿ ಮತ್ತು ಹೆಂಡತಿ ಅಡಿಗೆ ಮಾಡಿದ್ರು. ಶಿವಮೂರ್ತಿ ಏಳುಗಂಟೆಗೆ ಸುಂದ್ರಿ ಮನೆಹತ್ರ ಹೋಗಿ ಹಾರನ್ ಹೊಡೆದ ಆಗ ತಾನೇ ಎದಿದ್ದ ತಾಯಿಮಗಳು ಹೇಗೆ ಎದಿದ್ದರೋ ಹಾಗೆಯೇ ಬಂದು ಬೈಕ್ ಮೇಲೆ ಕುಳಿತು ಹೊಲಕ್ಕೆ ಬಂದರು. ಬೇರೆ ಹೆಂಗಸರು ನಿದಾನಕ್ಕೆ ಬಂದರು, ಶಿವಮೂರ್ತಿ ಊಟಕ್ಕೆ ತರಲು ಮನೆಗೆ ಹೋದ. ಕಳೆ ತೆಗೆಯುತ್ತ ನಿಮಗೇನು ಬೈಕ್ ಇದೆ ಸುಂದ್ರಿ ನಮಗೆ ಕಾಲೇಗತಿ,ಏನೋ ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ ಎಂದು ಸುಂದ್ರಿಯ ಕಾಲೆಳೆಯುತ್ತ ಕೆಲಸ ಮಾಡುತಿದ್ದರು. ಶಿವಮೂರ್ತಿ ಊಟಕ್ಕೆ ತಂದ ಹೆಂಗಸರು ಸುಂದ್ರಿಯನ್ನು ನೀರಿಗೆ ಕಳಿಸಿದರು ಅವನು ಜೊತೆ ಹೋಗಿ ಆ ದಿನ ಅವನೇ ನೀರು ಹೊತ್ತು ತಂದ. ಎಲ್ಲರು ಊಟಕ್ಕೆ ಕುಳಿತರು ಹೆಸ್ರುಬೇಳೆ ಪಾಯಸ ಅನ್ನ ಸಾಂಬಾರ್ ಅವತ್ತು ಹೆಂಗಸರಿಗೆ ಹಬ್ಬ ಸುಂದ್ರಿನೆ ಊಟ ಬಡಿಸಿದ್ಲು ನಂಗೆ ಊಟ ಬಡಿಸಲ್ವಾ ಅಂದ ಮೂರ್ತಿ ತಗೋ ತಿನ್ನು ಅಂದ್ಲು. ಕೆಲಸ ಮುಗಿದು ಸಂಜೆ ತಾಯಿ ಮಗಳನ್ನು ಮನೆಗೆ ಬಿಟ್ಟ ಶಿವಮೂರ್ತಿ.
*******************************
ಶಿವಮೂರ್ತಿ ಚಿಗುರುಮಿಸೆಯಚಲುವ ಜಾತಿಯಲ್ಲಿ ವೀರಶೈವ, ಶ್ರೀಮಂತ ತಂದೆತಾಯಿಗೆ ಒಬ್ಬನೇ ಮಗ ಅವನಿಗೆ ಒಬ್ಬಳು ತಂಗಿ, ಎರೆದೊರೆ ಎಂಬಂತೆ ಹತ್ತಾರುಎಕರೆ ಜಮೀನು ಇದ್ದು ಶ್ರೀಮಂತನಾದ್ರೂ ನಿರಹಂಕಾರಿ, ಸಾದು, ಬಡವರನ್ನು ಕಂಡರೆ ಮನಸ್ಸು ಕರಗುವ ವ್ಯಕ್ತಿತ್ವ ಬಿಎ ಪದವಿ ಪಡೆದು ಅಪ್ಪನಿಗೆ ವಯಸ್ಸಾದ ಕಾರಣ ಜಮೀನು ತೋಟ ನೋಡಿಕೊಳ್ಳುತ್ತಿದ್ದ. ಮಗಳಿಗೆ ಮದುವೆ ವಯಸ್ಸಾಯ್ತು ಎಂದು ಮದುವೆ ಮಾಡುಲು ಹೊರಟರು. ಮಗಳಿಗೆ ಮದುವೆಯಾದರೆ ಮನೆಯಲ್ಲಿ ಕೆಲಸ ಮಾಡಲು ಯಾರುಇಲ್ಲವೆಂದು ಶಿವಮೂರ್ತಿಗೂ ಮದುವೆ ಮಾಡಲು ಕಡೂರಿನಲ್ಲಿ ಒಂದು ಸಂಬಂಧ ನೋಡಿದರು.ಅಪ್ಪ, ಲೇ ಮಗ ನಿನಗೊಂದು ಹುಡುಗಿ ನೋಡಿದಿವಿ ಹೋಗಿ ನೋಡಿಕೊಂಡು ಬಾರೋ. ಮೌನವಾಗಿದ್ದ ಶಿವಮೂರ್ತಿ, ಮಗ ಮೂರ್ತಿ ನಿಮ್ಮಪ್ಪ ಹೇಳಿದ್ದು ಕೇಳ್ತೇನೋ,ಮೊದಲು ತಂಗಿದು ಆಗ್ಲಿ ಇರಮ್ಮ ಆಮೇಲೆ ನೋಡೋಣಂತೆ,ಆ ಮನೆಯಲ್ಲಿ ಅಣ್ಣ ತಂಗಿ ಇದಾರೆ ಕಣೋ ಹೆಣ್ಣು ಕೊಟ್ಟು ಹೆಣ್ಣುತರೋದು ಒಳ್ಳೆ ಸಂಬಂಧ ನೋಡಿ ಬಾರೋ ಹೋಗಿ. ಆಯ್ತು ಅಮ್ಮ ನಾಳೆ ಹೋಗ್ತೀನಿ,ಮಾರನೇ ದಿನ ಸೋಮವಾರ ಸ್ನೇಹಿತನ ಜೋತೆ ಕಾರಲ್ಲಿ ಹೋಗಿ ನೋಡಿದ ನನ್ನ ಮದ್ವೆ ಗಿಂತ ನನ್ ತಂಗೀನ ಈ ಮನೆಗೆ ಕೊಟ್ರೆ ಸುಖವಾಗಿ ಇರ್ತಾಳೆ ಅಂತ ಮನಸಿನಲ್ಲಿ ಅಂದುಕೊಂಡ. ಮನೆಗೆ ಬಂದ,ಏನಾಯಿತು ಶಿವ, ಓಕೆ ಅಪ್ಪ ಮಾತಾಡಿ,ಮಾತಾಡೋದು ಏನಿದೆ ಆ ಹುಡುಗ ನಮ್ ಹುಡ್ಗಿಗೆ ಒಳ್ಳೆ ಜೋಡಿ ನಿಂಗೆ ಆ ಹುಡುಗಿ ಒಳ್ಳೆ ಜೋಡಿ ಅಲ್ದೆ ಮನೆ ಕಡೆ ಚನ್ನಾಗಿ ಇದ್ದಾರೆ ನಾವಿನ್ನೇನು ಬಿದ್ದು ಹೋಗೋ ಮರಗಳು ಮದ್ವೆ ಮಾಡ್ಕೊಂಡು ಸುಖವಾಗಿ ಬದುಕಿ ಅದೇ ನಮ್ ಆಸೆ.ಮಾತುಕತೆ ಆಯ್ತು ಹೋಳಿಗೆ ಊಟ ಮಾಡಿಸಿದ್ರು ಮತ್ತೆ ಇವರು ಬೀಗರ ಮನೆಗೆ ಹೋಗಿ ಹೋಳಿಗೆ ಊಟ ಮಾಡಿ ಬಂದರು. ಮದುವೆ ದಿನ ನಿಗದಿ ಮಾಡಿ ಕಲ್ಯಾಣಮಂಟಪದಲ್ಲಿ ಮದುವೆ ಆಯ್ತು ಎರಡು ಕುಟುಂಬಗಳು ಸುಖಸಂಸಾರ ಮಾಡುವಾಗಲೇ ಕೆಲಸಕ್ಕೆ ಬಂದಿದ್ದ ಸುನಂದಳನ್ನು ನೋಡಿದ್ದು ಶಿವಮೂರ್ತಿ, ಅವಳ ಸೌಂದರ್ಯ, ಮಾತು, ತುಂಟಾಟ ಆ ಬಡತನದ ಬಟ್ಟೆಯಲ್ಲಿ ಆ ರೂಪಕ್ಕೆ ಮನಸೋತ. ಹೊಸದಾಗಿ ಮದುವೆ ಆಗಿದ್ದ ಹೆಂಡತಿಯನ್ನು ಹಂತ ಹಂತವಾಗಿ ಮರೆಯುತ್ತಾ ಬಂದ ಅಷ್ಟರಲ್ಲಿ ಅವನ ಹೆಂಡತಿ ಗರ್ಭಿಣಿ ಆಗಿದ್ದಳು. ಶಿವಮೂರ್ತಿಗೂ ವಿಷಯ ಗೊತ್ತಿತ್ತು. ತಂಗಿಯೂ ಗರ್ಭಿಣಿ ಆದ ಕಾರಣ ಮೂರ್ತಿಗೆ ಜವಾಬ್ದಾರಿಗಳು ಹೆಚ್ಚಾಗಿದ್ದವು. ತಂಗಿಗೆ ಬಸಿರು ಅಡಿಗೆ ಮಾಡಿದರು ಅಂದು ಮನೆ ಕೆಲಸ ಮಾಡಲು ಸುನಂದಳನ್ನು ಕರೆಸಿದ್ದ. ಎಲ್ಲ ಕೆಲಸವು ಅವಳದ್ದೆ ಮನೆ ಕೆಲಸ ಮುಗಿದ ಮೇಲೆ ಅವಳನ್ನು ಬೈಕ್ ನಲ್ಲಿ ಬಿಟ್ಟಾಗ ಊರ ಅಕ್ಕಪಕ್ಕದ ಸುತ್ತ ಬೈಕ್ ನಲ್ಲಿ ಸುತ್ತಿಸಿ, ತಂಗಿಗೆ ತಂದಿದ್ದ ಹೊಸ ಡ್ರೆಸ್ ಮತ್ತು ಸ್ವೀಟ್ ಕೊಟ್ಟು ಮಾತಾಡಿ ಬಿಟ್ಟು ಬಂದ.
ಪ್ರತಿದಿನ ಸುನಂದಳ ಮನೆ ಕಡೆ ಹೋಗಿ ಬರುತಿದ್ದ. ಬೈಕ್ ಹಾರನ್ ಹೊಡೆದಾಗ ಸುಂದ್ರಿ ಹೊರಗೆ ಬಂದು ಮುದ್ದಾದ ನಗೆ ಚೆಲ್ಲಿ ಹೋಗುತ್ತಿದ್ದಳು.ಒಂದು ವಾರದಲ್ಲಿ ತೋಟದಲ್ಲಿ ಅಡಿಕೆ ಆಯಲು ಜನ ಬೇಕು ಬರ್ತೀರಾ ಸುನಂದ, ಆಯ್ತು ಬರ್ತೀವಿ ನಡಿಯಪ್ಪ ಎಲ್ಲಾದ್ರೂ ಕೂಲಿನೇ ಮಾಡಬೇಕು ಅಲ್ವ ಅಂದಳು ಶಾರದಮ್ಮ, ಇಲ್ಲಮ್ಮ ನೀವು ತೋಟ ನೋಡಿಲ್ಲ ನನ್ ಜೊತೆ ಬರ್ರಿ ನಾನೆ ಊಟ ತಂದು ಕೊಡ್ತಿನಿ, ಆಯ್ತು ಬರ್ತೀವಿ ಇರಪ್ಪ, ಅಂದಳು ತಾಯಿ. ಸುಂದ್ರಿ ಹೊರಟೆ ಬಿಟ್ಲು, ಇಬ್ಬರನ್ನು ಕರ್ಕೊಂಡು ಹೊರಟ. ಜನ ಅಡಿಕೆ ಕೊಯಿತಾ ಇದ್ರೂ ಇವರು ಅಡಿಕೆ ಆರಿಸತೊಡಗಿದರು. ಮೂರ್ತಿ,ನಾನು ಊಟಕ್ಕೆ ತರ್ತೀನಿ, ಕಾಣ್ಸನ್ನೆಯಲ್ಲೇ ಉತ್ತರ ಸುಂದ್ರಿ ಕಡೆಯಿಂದ. ಊಟ ತಂದ ನಂತರ ಒಟ್ಟಿಗೆ ಕುಳಿತು ಊಟ ಮಾಡಿದ್ರು. ಅವಳ ಜೊತೆಯಲ್ಲೇ ಅಡಿಕೆ ಆರಿಸಿದ ಒಂದೊಂದು ಅಡಿಕೆಯಿಂದ ಆಕೆಗೆ ಆಗಾಗ ಹೊಡೆದಾಗ ಆಕೆ ಮುತ್ತುಗಳನ್ನು ಚಲ್ಲಿದ ಹಾಗೆ ನಗೆಚಲ್ಲುತಿದ್ದಳು.ಮಧ್ಯಾಹ್ನಕ್ಕೆ ಕೆಲಸ ಮುಗಿತು ಬೈಕ್ ನಲ್ಲಿ ತಾಯಿಮಗಳನ್ನು ಕೂರಿಸಿಕೊಂಡು ಮನೆಗೆ ಬಿಟ್ಟು ಬಂದ. ತಾಯಿಗೆ ಗೊತ್ತಿಲ್ಲದೇ ಸುಂದ್ರಿಗೆ ಒಂದು ಸಾವಿರ ಹಣ ಕೊಟ್ಟ. ಅವರ ಮನೆ ಮುಂದೆ ಬೈಕ್ ನಿಲ್ಲಿಸಿ ಬಾಯ್ ಮಾಡಿದ ಅವಳು ಬಾಯ್ ಮಾಡಿದಳು.
ಶಿವಮೂರ್ತಿ ಪ್ರತಿದಿನ ಒಂದಿಲ್ಲೊಂದು ಕೆಲಸ ಹೇಳಿಕೊಂಡು ಸುಂದ್ರಿ ಮತ್ತು ಆಕೆ ತಾಯಿಯನ್ನು ಕರೆದುಕೊಂಡು ಹೋಗುತ್ತಿದುದು ಊರಿನ ಜನಗಳಿಗೆಲ್ಲ ಗೊತ್ತಿರುವ ವಿಷಯವೇ ಸುನಂದಳ ತಾಯಿಗೆ ಬೇರೆಯವರು ಕೊಡುದಕ್ಕಿಂತ ನೂರು ರೂ ಹೆಚ್ಚು ಕೊಡುತಿದ್ದ. ಯಾಕಪ್ಪ ನಿಮ್ಮ ದುಡ್ಡು ಬೇಡ, ನಾಳೆ ಇನ್ನೊಂದು ಕೆಲಸ ಇದೆ ತಗೋಳಮ್ಮ ನಿಮಗೆ ಕಷ್ಟ ಇದೆ ಬಳಸಿಕೊಳ್ಳಿ ಎಂದು ಹೇಳುತ್ತಿದ್ದ. ಇಷ್ಟರಲ್ಲಿ ಈರುಳ್ಳಿ ಕೀಳುವ ಕೆಲಸ ಬಂತು ಈರುಳ್ಳಿ ಕೀಳಲು ಕಟ್ ಮಾಡಲು ಶಾಶ್ವತ ಕೆಲಸ ಕೊಟ್ಟ ಶಿವಮೂರ್ತಿ, ಅವರು ಹಂತ ಹಂತ ವಾಗಿ ನಮ್ ಮನೆ ಕೆಲಸ ಎಂದು ಭಾವಿಸಿಕೊಂಡರು.ತಡವಾಗಿ ಮನೆಗೆ ಬಂದಾಗ ಅಪ್ಪ ಕೂಗಾಡಿ ಹೊಡಿಯಲು ಹೋದಾಗ ತಂಬಿಮಾಮ ಎಂದೇ ಹೆಸರಾದ ಸುನಂದಳ ತಂದೆಗೆ ಖರ್ಚಿಗೆ ಹಣ ಬೇಕಾ ಮಮಾ ತಗೋ ಎಂದು ಐನೂರೂ ಕೊಟ್ಟು ಬಾಯಿ ಮುಚ್ಚಿಸುತ್ತಿದ್ದ ಶಿವಮೂರ್ತಿ.ಈರುಳ್ಳಿ ಹೊಲದಲ್ಲಿ ಶಿವಮೂರ್ತಿ ತಂದೆ ತಾಯಿ ಅಲ್ಲೇ ಕಾಯುತಿದ್ದರು ಅಡಿಗೆ ಮಾಡಲು ಶಿವಮೂರ್ತಿ ತಂಗಿ ಮನೆಯಲ್ಲಿ ಇತ್ತಾದರೂ ತುಂಬು ಬಸುರಿ ಅಡಿಗೆ ಕೆಲಸ ಮನೆ ಕೆಲಸ ಆಗುತ್ತಿಲ್ಲ ಅದಕ್ಕೆ ಸುಂದ್ರಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಮನೆಗೆ ಹೋಗಿ ಅಡಿಗೆ ಕೆಲಸ ಮಾಡಿಸಿ ಇಬ್ಬರು ಊಟಕ್ಕೆ ತೆಗೆದುಕೊಂಡು ಹೊಲಕ್ಕೆ ಬರುತ್ತಿದ್ದರು.
ದಿನಕಳೆದಂತೆ ಸುಂದ್ರಿ ಮೂರ್ತಿಯ ಮನಸ್ಸುಗಳು ಒಂದೇ ದಿಕ್ಕಿಗೆ ಸಾಗತೊಡಗಿದವು, ಮನೆಯಲ್ಲಿ ಅಡಿಗೆ ಮಾಡ್ವಾಗ ಆಕೆಯ ಮೈ ಮುಟ್ಟುತಿದ್ದ,ಆಕೆ ನಾಚಿಕೊಂಡಾಗ ಬಿಗಿದಪ್ಪಿ ಮುತ್ತು ಕೊಡುತ್ತಿದ್ದ,ಸುಂದ್ರಿ ತಂದೆ ತಾಯಿ ಮೂರ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟರಲ್ಲಿ ಮೂರ್ತಿ ತಂಗಿಗೆ ಗಂಡು ಮಗುಜನಿಸಿದ. ಆಸ್ಪತ್ರೆಯಲ್ಲಿ ತಾಯಿ ಮಗುವನ್ನು ನೋಡಿಕೊಂಡು ಮೂರ್ತಿ ತಂದೆ ತಾಯಿ ಇದ್ದರು. ಮನೆಯಲ್ಲಿ ಯಾರು ಇಲ್ಲದಿರುವಾಗ ಸುಂದ್ರಿ ತಂಗಿಗೆ ಗಂಡು ಮಗು ಆಗಿದೆ.ಅಪ್ಪ ಅಮ್ಮ ಆಸ್ಪತ್ರೆಲಿ ಇದಾರೆ ಸ್ವಲ್ಪ ಕೆಲಸ ಇದೆ ಅಮ್ಮ ನೀನು ಬಂದು ಮನೆ ಕೆಲಸ ಮಾಡ್ರಿ,ಅಯ್ಯೋ ನಾನ್ಯಾಕಪ್ಪ ಸುಂದ್ರಿನೆ ಕರ್ಕೊಂಡು ಹೋಗು ಬಗಿನಾಗೆ ವಸಿ ಬೇಗ ಕರೆದುಕೊಂಡು ಬಾ ಮಗ,ಅಂದ್ಲು ಸುಂದ್ರಿ ಅಮ್ಮ. ಮನೆಗೆ ಕರ್ಕೊಂಡು ಬಂದ ಯಾರೂ ಇಲ್ಲದ ಮನೆಯಲ್ಲಿ ಟಿವಿ ನೋಡುತ್ತಾ ಸುಂದ್ರಿಯ ಮನಸ್ಸು ಬಡತನ ಗುಡಿಸಲು ತಂದೆ ತಾಯಿ ಎಲ್ಲವನ್ನು ಮರೆತು ಮೂರ್ತಿಯ ಪ್ರೀತಿ ಎಂಬ ಬಲೆಗೆ ಬಲಿಯಾಯಿತು. ಆಸ್ಪತ್ರೆಯಲ್ಲಿದ್ದ ತಂಗಿಮಗುವನ್ನು ನೋಡಲು ಸುಂದ್ರಿಯನ್ನು ಕರೆದು ಕೊಂಡುಕೊಂಡು ಹೋಗಿ ಬಟ್ಟೆ ಓಲೆ, ಊಂಗುರ ಕೊಡಿಸಿ ಮಸಾಲೆ ದೋಸೆ ಕೊಡಿಸಿದ ಇದೆಲ್ಲದರ ಮದ್ಯೆ ಸುಂದ್ರಿ ಶಾಲೆ ಮರೆತಳು.ಕೆಲವೇ ದಿನಗಳಲ್ಲಿ ತನ್ನ ಹಳೆಯ ಬಟ್ಟೆ ಗಳನ್ನು ಬಿಟ್ಟು ಹೊಸ ಉಡುಪುಗಳಲ್ಲಿ ಜನತಿರುಗಿ ನೋಡುವಂತಾದಳು ಕಡೂರಿನಲ್ಲಿ ಶಿವಮೂರ್ತಿ ಹೆಂಡತಿ ಗಂಡು ಮಗುವಿಗೆ ಜನ್ಮವಿತ್ತಳು. ಮೂರ್ತಿ ಒಂದೇ ಬಾರಿ ಮಗನ ಮುಖ ನೋಡಿದ್ದು ಮತ್ತೆ ಹೋಗಲೇ ಇಲ್ಲ. ಅವನು ಸುಂದ್ರಿಯಲ್ಲಿ ಅನುರಕ್ತನಾಗಿ ಬಿಟ್ಟಿದ್ದ. ಸುಂದ್ರಿಯ ನೆನಪಲ್ಲಿ ತೋಟ ಮನೆ ಹೊಲ ಇವುಗಳ ಜವಾಬ್ದಾರಿ ಬಿಟ್ಟ. ಹೊರಗೆ ಹೋದರೆ ಎಲ್ಲಿಗೆ ಎಂದು ಹೇಳದಾದ ಮನೆಗೆ ಬಂದರೆ ಊಟ ಮಾಡುತಿರಲಿಲ್ಲ ಕರೆದರೆ ನೀವು ತಿನ್ನಿ ಎಂದು ಬಾಗಿಲು ಹಾಕಿಕೊಂಡು ಮಲಗುತಿದ್ದ. ವಯಸ್ಸಾದ ತಂದೆ ತಾಯಿನೇ ದನಕರುಗಳಿಗೆ ನೀರು ಮೇವು ನೋಡಿಕೊಳ್ಳುತಿದ್ದರು.
ಒಂದು ಮಧ್ಯಾಹ್ನ ಶಿವಮೂರ್ತಿ ತಂದೆ ತಾಯಿ ತಮ್ಮ ಮಗಳು ಮೊಮ್ಮಗಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಏನೋ ಯೋಚಿಸುತ್ತಾ ರೂಮಲ್ಲಿ ಕುಳಿತಿದ್ದ ಶಿವಮೂರ್ತಿ ಪ್ಯಾಂಟ್ ಶರ್ಟ್ ಹಾಕಿದ ಗಾಡ್ರೆಜ್ ಬಾಗಿಲು ತೆರೆದು ಅಡಿಕೆ ಮಾರಿ ತಂದಿಟ್ಟಿದ್ದ ನಾಲ್ಕು ಲಕ್ಷ ರೂಗಳನ್ನು, ಈರುಳ್ಳಿ ಮಾರಿ ತಂದಿಟ್ಟಿದ್ದ ಒಂದು ಲಕ್ಷ ರೂಗಳನ್ನು ಬ್ಯಾಗಿಗೆ ಹಾಕಿಕೊಂಡ ಅಮ್ಮನ ಚಿನ್ನದ ಒಡವೆಗಳು ನೆಕ್ಲೇಸ್ ತಂಗಿಗಾಗಿ ತಂದಿಟ್ಟಿದ್ದ ಉಂಗುರ ತೆಗೆದುಕೊಂಡು ಬೈಕ್ ನಲ್ಲಿ ಕುಳಿತು ಸುಂದ್ರಿ ಮನೆಗೆ ಹೋದ, ಸುನಂದ ಸುನಂದಾ ಬಾ ಬೇಗ ಬಾ, ಎಲ್ಲಿಗೆ ಯಾಕೆ,ಅದೆಲ್ಲಾ ಹೇಳಕ್ ಟೈಮ್ ಇಲ್ಲ ಈಗ ಬಾ ಬೇಗ,ಅಪ್ಪ ಅಮ್ಮ ಕೆಲಸಕ್ಕೆ ಹೋಗಿದ್ದಾರೆ,ಒಳ್ಳೆದಾಯ್ತು ಬಾ ಬೇಗ,ಆಯ್ತು ಬಂದೆ,ಇಬ್ಬರು ಬೈಕ್ ನಲ್ಲಿಹೊರಟರು.ಎಲ್ಲಿಗೆ ಹೋಗ್ತಿರೋದು,ಗೊತ್ತಿಲ್ಲ.ಸಂಜೆಯಾಯಿತು ಕೆಲಸಕ್ಕೆ ಹೋಗಿದ್ದ ಅಪ್ಪ ಅಮ್ಮ ಬಂದ್ರು ಸುಂದ್ರಿ ಎಲ್ಲಿ ಎಂದು ಅಕ್ಕಪಕ್ಕದವರನ್ನು ಕೇಳಿದರು ಗೊತ್ತಿಲ್ಲ ಎಂಬ ಸುದ್ದಿ ಬಂತು. ತಂಬಿ ಶಿವಮೂರ್ತಿ ಮನೆಯಲ್ಲಿ ವಿಚಾರಿಸಿದ ಆಸ್ಪತ್ರೆಗೆ ಹೋಗಿ ಬಂದಿದ್ದ ತಂದೆ ತಾಯಿ ಮನೆಯಲ್ಲಿ ಆಗಿದ್ದ ಅವ್ಯವಸ್ಥೆ ಕಂಡು ಶಿವ ಇಲ್ಲ ಎಂದು ಹೇಳಿದರು. ಸುಂದ್ರಿಯು ಇಲ್ಲ ವೆಂದರೆ ಇಬ್ಬರು ಎಲ್ಲೋ ಹೋಗಿದ್ದಾರೆ ಎಂದು ಮಾನವರಿಕೆ ಆಯ್ತು. ಶಿವಮೂರ್ತಿ ತಂದೆಗೆ ಹಣ ಒಡವೆಗಿಂತ ಜಾತಿಪ್ರತಿಷ್ಠೆ ಮಾನದ ಪ್ರಶ್ನೆಹೆಚ್ಚು. ಒಂದು ವಾರ ಎರಡು ವಾರ ಕಳೆಯಿತು ಸುಂದ್ರಿ ಮೂರ್ತಿಯ ಸುಳಿವಿಲ್ಲ,
ಶಿವಮೂರ್ತಿ ಮೂಡಿಗೆರೆಯ ಎಸ್ಟೇಟ್ ನಲ್ಲಿ ಸೇರಿಕೊಂಡಿದ್ದಾನೆ ಸುಂದ್ರಿ ಕೆಲಸಕ್ಕೆ ಹೋದ್ರೆ ಇವನು ಮನೆಯಲ್ಲಿರ್ತಾನೆ. ದಟ್ಟವಾದ ಮಲೆನಾಡಿನ ಹೃದಯಭಾಗ ಮೂಡಿಗೆರೆ, ಇಲ್ಲಿನ ಕಾಫಿ ತೋಟಗಳನ್ನು ನೋಡಿರದ ಸುಂದ್ರಿಗೆ ಸ್ವರ್ಗದ ಅನುಭವವಾಯಿತು. ಸುಂದ್ರಿಗೆ ತಂದೆತಾಯಿ ಗುಡಿಸಲು ಬಡತನ ಎಲ್ಲವೂ ಕಾಫಿತೋಟಗಳು ಮತ್ತು ಶಿವಮೂರ್ತಿಯ ಪ್ರೀತಿಯಲ್ಲಿ ಗೌಣವಾದವು.ಹೀಗೆ ಒಂದು ತಿಂಗಳು ಕಳೆಯಿತು. ಮೂರ್ತಿಗೆ ತಾಯಿ ಅಂದರೆ ತುಂಬಾ ಇಷ್ಟ ತಾಯಿಯ ನೆನಪಾಗಿ ನಾನು ಊರಿಗೆ ಹೋಗಿಬರುತ್ತೇನೆ ಸುಂದ್ರಿ, ಊರಿಗೆ ಹೊರಟ, ಸುಂದ್ರಿ ನೀನು ಕೆಲಸಕ್ಕೆ ಹೋಗು ಬಂದು ರೂಮಲ್ಲಿ ಇರು ನಾನು ಹೋಗಿ ಬರುತ್ತೇನೆ. ನಾನು ಒಬ್ಬಳೇ ಇರಬೇಕಾ, ಒಂದೇ ದಿನ ಅಲ್ವ ರಾತ್ರಿ ಹೋಗಿ ರಾತ್ರಿನೇ ಬರ್ತೀನಿ, ಆಯ್ತು ಮದ್ಯಾಹ್ನ ಹೊರಟ ರಾತ್ರಿ ಮನೆಗೆ ಬಂದ ಗಂಟೆ ಹನ್ನೊಂದು ಬಾಗಿಲ ಬಳಿ ನಿಂತು, ಅಮ್ಮ ಅಮ್ಮ ಅಮ್ಮ ಅಮ್ಮ ಅಪ್ಪ ಅಪ್ಪ ಅಪ್ಪಾಜಿ ಬಾಗಿಲು ತೇಗಿ.ಊಟ ಬಿಟ್ಟು ಮಗನ ಯೋಚನೆಯಲ್ಲಿ ಕುಗ್ಗಿದ್ದ ತಂದೆ ತಾಯಿಗೆ ಭ್ರಮೆ ಎಂಬಂತೆ ಬಾಸವಾಯಿತು. ಟಣ್ ಟಣ್ ಬಾಗಿಲು ಬಡಿದಾಗ, ಯಾರು ಯಾರದು, ನಾನಮ್ಮ ಮೂರ್ತಿ,ಅವನೇ ಹೋಗೆ ಬಾಗಿಲು ತೆಗೆ ನಿನ್ನ ಕುಲಪುತ್ರ ಬಂದಿದ್ದಾನೆ. ಬಾಗಿಲು ತೆಗೆದ ಅಮ್ಮ ಥು ದರಿದ್ರ ನೀನು ಸತ್ತೇ ಅಂದುಕೊಂಡು ಇದ್ದೆವು ಮತ್ತೆ ಜೀವಂತ ಬಂದ್ಯಾ ಹೀನ ಜಾತಿ ಹೆಣ್ಣು ಜೊತೆ ಸಂಬಂಧ ಬೆಳೆಸಿ ಮತ್ತೆ ಮುಖ ತೋರಿಸುವೆಯ ತೊಲಗಾಚೆ ಎಂದು ಒಂದು ಕೈಲಿ ಚಪ್ಪಲಿ ಇನ್ನೊಂದು ಕೈಲಿ ಕಸಪೊರಕೆ ಹಿಡಿದು ತಲೆಯಿನ್ದ ಕಾಲಿನವರೆಗೂ ಹೊಡೆದಳು.ನೀನು ನನ್ನ ಪಾಲಿಗೆ ಸತ್ತೇ ಎಂದು ತಲೆಮೇಲೆ ಒಂದು ಕೊಡ ನೀರು ಹಾಕಿಕೊಂಡ ಅಪ್ಪ.ತಂಗಿ ಒಂದು ಮಾತಾಡದೆ ಇದೆಲ್ಲ ನೋಡುತಿದ್ದಳು.
ಬಂದ ದಾರಿಗೆ ಸುಂಕವಿಲ್ಲದಂತೆ ಶಿವಮೂರ್ತಿ ವಾಪಾಸ್ ಮೂಡಿಗೆರೆಗೆ ಹೋದ.ಸುಂದ್ರಿ ಸುಂದ್ರಿ,ಎದ್ದು ಬಾಗಿಲು ತೆಗೆದಳು.ಭಯ ಆಯ್ತಾ,ಇಲ್ಲ ನಿಮ್ಮನೆನಪಲ್ಲಿ ಭಯ ಎಲ್ಲಿ ಬರುತ್ತೆ, ಊಟ ಮಾಡಿದ್ಯಾ, ಹಾ ಅಮ್ಮ ಒಳ್ಳೆ ಅಡಿಗೆ ಮಾಡಿಬಡಿಸಿದ್ಲು ನೀನು,ಇಲ್ಲ ಮಾಡಿಲ್ಲ ಹಾಗಾದ್ರೆ ಇಡ್ಲಿ ತರ್ತೀನಿ ತಿನ್ನೋಣ. ಇಡ್ಲಿ ತಂದು ತಿನ್ನುತ್ತಾ, ಅಪ್ಪ ಅಮ್ಮ ಚನ್ನಾಗಿದ್ದಾರಾ, ಊಂ, ತಂಗಿ ತಂಗಿ ಮಗ,ಅವರು ಚೆನ್ನಾಗಿದ್ದರೆ. ನಾಳೆ ನಿನ್ನ ಕರ್ಕೊಂಡು ಬಾ ಅಂತ ಹೇಳಿದರೆ ನಾವು ತೋಟದ ಮನೆಯಲ್ಲಿ ಇರಬೇಕಂತೆ ಹೌದ,ಇವತ್ತು ಕೆಲಸಕ್ಕೆ ಹೋಗಬೇಡ ಬ್ಯಾಗಿಗೆ ಬಟ್ಟೆ ತುಂಬು. ಸ್ನಾನ ಮಾಡು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಮಾಡಿ ಬಂದು ಊರಿಗೆ ಹೋಗೋಣ.
ಹೊರನಾಡಿಗೆ ಹೋಗಿ ದರ್ಶನ ಮಾಡಿದ ನಂತರ ಪ್ರಸಾದ ತಿಂದು,ರೀ ನಿಮಗೆ ಒಂದು ವಿಷಯ ಗೊತ್ತ,ಏನದು, ನಾನು ನಾನೂ ಮೂರು ತಿಂಗಳು ಬಸ್ರಿ. ಬಿಗಿದಪ್ಪುತ್ತಾನೆ ಕಣ್ಣಂಚಲ್ಲಿ ನೀರು.ಯಾಕ್ರೀ ಕಣ್ಣೀರು,ಯಾಕಿಲ್ಲ, ಸುಮ್ನೆ ಖುಷಿಗೆ ಸುಂದ್ರಿ, ನನ್ ಮುದ್ದು ಸುಂದ್ರಿ ಅಲ್ವ ಎನ್ ಬೇಕು ನಿಂಗೆ, ಏನೂ ಬೇಡ ನೀವು ಜೊತೆ ಇದ್ರೆ ಅಷ್ಟೇ ಸಾಕು. ಮೂಡಿಗೆರೆಗೆ ವಾಪಾಸ್ ಬಂದು ಊರಿಗೆ ಹೊರಟರು. ಊರಿಗೆ ಹೋಗದೆ ಭದ್ರಾವತಿಗೆ ಬಂದು ಒಂದು ಹೋಟೆಲ್ನಲ್ಲಿ ರೂಮ್ ಮಾಡಿ ಉಳಿದರು. ಯಾಕಿಲ್ಲಿ, ಇಲ್ಲಿ ಸ್ವಲ್ಪ ದಿನ ಇರೋಣ ನಾನು ಹೋಗಿ ತೋಟದ ಮನೆ ಕ್ಲೀನ್ ಮಾಡಿ ಬರ್ತೀನಿ ಅಲ್ಲಿವರೆಗೂ ಇಲ್ಲೇ ಇರೋಣ.ತಗೋ ನಿನ್ ಖರ್ಚಿಗೆ ದುಡ್ಡು ನಾನು ಊರಿಗೆ ಹೋಗಿ ಬರುತ್ತೇನೆ. ರೀ ನಮ್ಮಪ್ಪ ನಮ್ಮಮ್ಮನ ಮಾತಾಡಿ ಬನ್ರೀ ನಾನು ಬಸುರಿ ಅಂತ ಹೇಳ್ರಿ ಅಮ್ಮ ಬಂದ್ರೆ ಕರ್ಕೊಂಡು ಬರ್ರಿ. ಆಯ್ತು ನೀನು ಏನ್ ಬೇಕೋ ಅದನ್ನ ತಂದು ತಿನ್ನು ಉಪವಾಸ ಇರ್ಬೇಡ ನಾನು ನಾಳೆ ಬರ್ತೀನಿ, ಉಮ್, ಶಿವಮೂರ್ತಿ ಅಪ್ಪನ ಮನೆಯಿಂದ ತಂದಿದ್ದ ಹಣ ಒಡವೆಯಲ್ಲ ಒಂದು ಬಿಡಿಕಾಸು ಖರ್ಚು ಮಾಡಿರಲಿಲ್ಲ ರಾತ್ರಿ ಹನ್ನೆರಡಕ್ಕೆ ಮನೆಗೆ ಹೋದ ಹಣ ಚಿನ್ನ ಎಲ್ಲವನ್ನು ಸರಳಿನಬಾಗಿಲಿನಲ್ಲಿ ಹೊಳಗೆ ಹಾಕಿದ ಬೈಕ್ ಹೊರಗಡೆ ನಿಲ್ಲಿಸಿ ವಾಪಾಸ್ ಬಸ್ಸಲ್ಲಿ ಭದ್ರಾವತಿಗೆ ಬಂದ.ಸುಂದ್ರಿ ಸುಂದ್ರಿ,ನಿದ್ರೆ ಮಾಡದೆ ಯೋಚಿಸುತಿದ್ದ ಸುಂದ್ರಿ ಜೀವ ಬಂದಂತಾಗಿ ಬಾಗಿಲು ತೆರೆದಳು.ನಮಪ್ಪ ಅಮ್ಮ ಹೇಗಿದಾರೆ, ಚನ್ನಗಿದ್ದಾರೆ,ನಿಮ್ಮಪ್ಪ,ಮಗಳು,ಮಗಳು ಅಂತ ಕುಡಿದು ಬಿದ್ಕೊಳ್ತಾನೆ ಅಮ್ಮ ಕೆಲ್ಸಕ್ಕೆ ಹೋಗ್ತಾಳೆ, ಬರಲ್ವಾ, ನಾನೆ ಕರೀಲಿಲ್ಲ ನಾಳೇನೇ ನಾವು ಹೋಗ್ತಿವಿ ಅಲ್ವ ಅದಕ್ಕೆ,ಹೌದ, ಬಸುರಿ ಅಂತ ಹೇಳಿದ್ಯಾ, ಹಾ ಹೇಳಿದೆ ಖುಷಿ ಆದ್ರೂ. ಏಳು ಸ್ನಾನ ಮಾಡು ತಿಂಡಿಗೆ ಹೋಗೋಣ, ಇಲ್ಲಿಗೆ ತರ್ರಿ, ಏನ್ ಬೇಕು, ಏನೋ ತಗೋ ಬಾ, ಮಸಾಲೆ ದೋಸೆ, ಆಯ್ತು. ಉಪಹಾರ ತಿನ್ನುತ್ತಾ ಕುಳಿತರು.
ಶಿವಮೂರ್ತಿ ಊರಲ್ಲಿ ಮುಂಜಾನೆ ಶಿವಬಂದಿದ್ದಾನೆ ಅವನ ಬೈಕ್ ಇದೆ.ಅಮ್ಮೊ ಅಮ್ಮ ಶಿವ ಎಲ್ಲಿ ಎಂದು ಊರಿನ ಜನ ಮೂರ್ತಿ ತಾಯಿಯನ್ನು ಕೇಳಿದರು. ಬಾಗಿಲು ತೆಗೆಯುವಾಗ ಅವಳ ಕಾಲಿಗೆ ಶಿವ ಹಾಕಿದ್ದ ಬ್ಯಾಗ್ ಸಿಕ್ಕಿ ಒಡವೆಗಳ ಸದ್ದಾಯಿತು ನೋಡಿದರೆ ಹಣ ಒಡವೆ ಎಲ್ಲವು ಹಾಗೆಯೇ ಇದ್ದವು ರೀ ಇಲ್ಲಿ ನೋಡ್ರಿ ನಮ್ಮೂರ್ತಿ ಬಂದು ಎಲ್ಲ ಹಾಕಿಹೊಗಿದಾನೆ. ಅವನೆಲ್ಲಿ ಶಿವ ಶಿವ ಮೂರ್ತಿ ಬಾಗಿಲುತೆಗೆದಳು ಅವನ ಗೆಳೆಯರು ಹೊರಗೆ ಕಾಯುತಿದ್ದರು.ಎಲ್ಲಮ್ಮ ಶಿವ,ಅವನಿಲ್ಲಪ್ಪ ಬೈಕ್ ಮಾತ್ರ ಇದೆ ಎಂದಳು ಏಯ್ ನಡಿರೋ ಇದೊಳ್ಳೆ ಕತೆಯಾಯ್ತು ಎಂದು ಹೊರಟರು ಶಿವಮೂರ್ತಿ ತಾಯಿ ಬಾಗಿಲು ಹಾಕುತ್ತಾಳೆ.
ಮುಂಜಾನೆ ತಿಂಡಿತಿಂದು ಮಲಗಿದ್ದ ಸುಂದ್ರಿಗೆ, ಮದ್ಯಾಹ್ನ ಊಟಕ್ಕೆ ಏನ್ ಬೇಕೇ, ನಂಗೆ ಮಟ್ಟನ್ ಕೊಡಿಸ್ತೀರಾ,ನಿಮಗೆ ನಾನ್ ತಿನಲ್ಲ ನಂಗೆ ದೋಸೆ ಸಾಕು. ಹೋಟೆಲ್ ಗೆ ಹೋಗಿ ಊಟ ಮಾಡಿ, ಸುಂದ್ರಿ ರೂಮ್ಗೆ ಹೋಗಿ ಏನ್ ಮಾಡೋದು ಇಲ್ಲೇ ಗಾಂಧಿಪಾರ್ಕ್ ಇದೆ ಸ್ವಲ್ಪ ಕುಳಿತು ಮಾತಾಡಿ ಹೋಗೋಣ, ಆಯ್ತು, ಸುಂದ್ರಿ ಕುಳಿತಳು ನಿನ್ನ ತೊಡೆ ಮೇಲೆ ಮಲಗ್ತೀನಿ ಸುಂದ್ರಿ ಉಮ್, ಶಿವಮೂರ್ತಿ ಕಣ್ಣಲ್ಲಿ ನೀರು,ಯಾಕೆ ಏನಾಯಿತು, ಏನಿಲ್ಲ ಸಮ್ನೆ, ರೀ ನಂಗೆ ನೀರು ಬೇಕು,ನೀರೇನು ಜ್ಯೂಸ್ ತರ್ತೀನಿ ಇರು, ಹೊರಗೆ ಹೋದ ಜ್ಯೂಸ್ ತೆಗೆದುಕೊಂಡ ಕೀಟನಾಶಕ ಅಂಗಡಿಗೆ ಹೋಗಿ ಯಾವುದೋ ಕೀಟನಾಶಕ ತೆಗೆದುಕೊಂಡು ಜ್ಯೂಸ್ ಗೆ ಮಿಕ್ಸ್ ಮಾಡಿದ ಜೋರಾಗಿ ಬಂದು ತಡ ಆಯ್ತು ಸಾರೀ ಅಂದ, ಪಸ್ಟ್ ಕೊಡು ಎಂದು,ಅರ್ಧ ಕುಡಿಯುವಾಗಲೇ ಸಾಕು ನಂಗುಸ್ವಲ್ಪ ಕೊಡು ಕುಡಿಬೇಕು ಅಂದು ಇನ್ನರ್ದ ಶಿವಮೂರ್ತಿ ಕುಡಿದ. ಸುಂದ್ರಿ ನಾನು ಮಲಗತೀನಿ, ಬಾ,ನಾನು ನಿನ್ನ ಮೇಲೆ ಮಲಗತೀನಿ ಉಮ್, ವಾಂತಿ ಬರ್ತಿದೆ,ನಂಗು ಬರ್ತಿದೆ, ಇಲ್ಲಿ ನೋಡಿ ಮಗು ಅಳ್ತಿದೆ, ಛೆ ಅಳ್ತಿಲ್ಲ ಕಣೆ ಕಾಲಲ್ಲಿ ಹೊಡಿತಿದೆ ನಂಗೆ, ಈ ಪ್ರಪಂಚಕ್ಕೆ ಬರುವ ಮೊದಲೇ ವಿಷ ಕೊಟ್ಟು ಕೊಂದೆಲ್ಲೋ ಪಾಪಿ ಎಂದು,ಅಂದ್ರೆ ನೀನು ತಂದಿದ್ದು… ಹೌದು ಕಣೆ ನಾವಿಬ್ರು ವಿಷ ಕುಡಿದಿದೀವಿ. ಅಯ್ಯೋ ದೇವರೇ ಅಯ್ಯೋ ಇಬ್ಬರು ಅಳುತ್ತಾರೆ ಕಿರಿಚುತ್ತಾರೆ. ಒಬ್ಬರಿಗೊಬ್ಬರು ಬಿಗಿಯಾಗಿ ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡು ಅಳುತ್ತಾರೆ. ಕತ್ತಲಾಗುತ್ತೆ. ಸುಂದ್ರಿಯ ಬಾಳು ಕತ್ತಲಾಯಿತು. ಮುಂಜಾನೆ ಪಾರ್ಕ್ನಲ್ಲಿ ಬಿಡಿಸಲಾರದ ಆಲಿಂಗನದಲ್ಲಿ ಸೆಟೆದುಕೊಂಡ ಎರಡು ದೇಹಗಳು. ಜನಗಳು ಸೇರುತ್ತಾರೆ ಪೊಲೀಸ್ರಿಗೆ ವಿಷಯ ತಿಳಿಸುತ್ತಾರೆ.
*************************
ಭದ್ರಾವತಿ ಪೊಲೀಸ್ ಯಿಂದ ಅಜ್ಜಂಪುರ ಪೊಲೀಸ್ ಗೆ ವಿಷಯ ತಿಯುತ್ತೆ ಶಿವಮೂರ್ತಿ ಸುನಂದ ತಂದೆ ತಾಯಿ ಯಾರಿಗೆ ವಿಷಯತಿಳಿಯುತ್ತೆ. ಇಬ್ಬರ ಊರುಗಳಲ್ಲಿ ವಿಷಯ ಕಾಳ್ಗಿಚ್ಚಿನಂತೆ ಅಕ್ಕಪಕ್ಕದ ಊರಿನ ಜನ ಬಸ್ಗಳಲ್ಲಿ ಬೈಕ್ಗಳಲ್ಲಿ ಭದ್ರಾವತಿ ಬರುತ್ತಾರೆ, ಆಲಿಂಗನದಲ್ಲಿ ಸತ್ತು ಸೆಟೆದುಕೊಂಡ ಎರಡು ದೇಹಗಳನ್ನು ಪ್ರತ್ಯೇಕಿಸಲು ಪೊಲೀಸರು ಪಡುತ್ತಿರುವ ಪ್ರಯತ್ನಗಳು ನೋಡಲಾಗದು. ಸುಂದ್ರಿಯ ತಾಯಿ ನಾನೆ ನನ್ನ ಮಗಳ ಜೇವನ ಹಾಳು ಮಾಡಿದ್ದೂ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾಳೆ. ಅವರಪ್ಪ ಎಣ್ಣೆ ಅಂಗಡಿಗೆ ಹೋಗಿ ಕುಡಿದು ಶಿವಮೂರ್ತಿ ಅಪ್ಪ ಅಮ್ಮನಿಗೆ ಹೊಡೆಯಲು ದೊಣ್ಣೆ ತಂದ ಪೊಲೀಸರು ತಡೆದರು.ಅಯ್ಯೋ ಅಯ್ಯೋ ಈ ಬಣ್ಣ ಸಾಯೋಕಾಗಿಯೇ ಬಂತೇನೆ ಮಗಳೇ ಅವನ್ಯಾರು ಶಿವಮೂರ್ತಿ ಲಯಕರ್ತನಾಗಿ ಬಂದನೆ ಸುಂದ್ರಿ ತಂದೆ ಅಳುತ್ತಾನೆ.
ಶಿವಮೂರ್ತಿ ಅಮ್ಮ, ಅಯ್ಯೋ ನನ್ ಸೌತಿ ನನ್ ಮಗನ್ ಬಲಿ ತೆಗೆದುಕೊಂಡೆ ಅಲ್ವೇ.ಮೂರ್ತಿ ಅಪ್ಪ ಮೌನ. ಶಿವಮೂರ್ತಿ ಹೆಂಡತಿ ತನ್ನ ಎಳೆಮಗುವಿಗೆ ಇಗೋ ನಿನಪ್ಪ ಮಾತಾಡು ಪಾ ಪಾ ಅನ್ನು.ತಂಗಿ ತನ್ನ ಮಗನಿಗೆ ನಿನ್ ಮಾಮ ನೋಡು ಮಾಮ ಅನ್ನು ಮತ್ತೆ ಬರಲ್ಲ ನೋಡೋಕು ಆಗಲ್ಲ ಮಾತಾಡು, ಅಲ್ಲಿ ನೆರೆದಜನಗಳ ದುಃಖ್ಖ ಹೇಳತೀರದು, ಅಷ್ಟರಲ್ಲಿ ಪೊಲೀಸರು ಎರಡುದೇಹಗಳನ್ನು ಪೋಸ್ಟ್ ಮೋರಟಮ್ ಗೆ ಕಳಿಸ್ತಾರೆ. ಪೋಸ್ಟ್ ಮೋರಟಮ್ ನಲ್ಲಿ ಎರಡು ದೇಹಗಳನ್ನು ಬೇರೆ ಮಾಡಿ ಕಳಿಸ್ತಾರೆ. ಸುನಂದಳ ಊರಲ್ಲಿ ಜನತೋಮ ಸೌಂದರ್ಯ ಆಕೆಗೆ ಶತ್ರು ಆದದ್ದು, ಇಲ್ಲ ಬಡತನವೇ ಆಕೆಗೆ ಮುಳುವಾದದ್ದು, ಇಲ್ಲ ಇಲ್ಲ ತಂದೆ ತಾಯಿ ಕುಡಿತ, ಅಲ್ಲ ಹಣದ ಆಸೆಗೆ ಬಲಿಯಾದ್ಲು, ಯಾವುದು ಅಲ್ಲ ಬಿಡ್ರೋ ಕಾಮಕ್ಕೆ ಬಲಿಯಾದ್ಲು, ಹೀಗೆ ನೂರಾರು ಜನ ನೂರಾರು ಮಾತಾಡ್ತಾರೆ. ರಾತ್ರಿ ಏಳು ಗಂಟೆ ಸ್ಮಶಾನದಲ್ಲಿ ಸಾವಿರಾರು ಜನ ಪ್ರತಿಯೊಬ್ಬರ ಕಣ್ಣಂಚಲ್ಲಿ ಕಾರ್ಮೋಡ ಸುಂದ್ರಿ ತಂದೆ ತಾಯಿ ಎರಡು ದಿನ ಊಟ ಮಾಡದೇ ಕುಡಿದು ಪ್ರಜ್ಞೆ ಇಲ್ಲ. ಅಂತ್ಯಸಂಸ್ಕಾರ ಮಾಡಿದ ಜನಗಳು ಅವರನ್ನು ಹೊತ್ತುಕೊಂಡು ಹೋಗಿ ಮನೆ ಹತ್ರ ಬಿಟ್ರು. ಮದ್ಯ ರಾತ್ರಿ ಎದ್ದ ತಂಬಿ ಮಗಳು ಮಗಳು ಸುಂದ್ರಿಬೇಕೆಂದು ಸ್ಮಶಾನಕ್ಕೆ ಹೋದ ಕಿರುಚಿದ ಹರಚಿದ ಹಣೆ ಎದೆ ಹೊಡೆದುಕೊಂಡ ಅಲ್ಲೇ ಮಲಗಿದ. ಬೆಳಿಗ್ಗೆ ಶಾರದಮ್ಮ ಗಂಡನನ್ನು ಹುಡುಕಿಕೊಂಡು ಸ್ಮಶಾನಕ್ಕೆ ಹೋದ್ಲು. ಕೈಗೆಸಿಕ್ಕ ವಸ್ತುಗಳಿಂದ ತಂಬಿ ಹೆಂಡತಿಯನ್ನು ಹೊಡೆಯುತ್ತಾನೆ. ಜನ ಇವ್ರನ್ನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಣ್ಣೆ ಅಂಗಡಿಗೆ ಹೋಗಿ ಕುಡಿದು ಮತ್ತೆ ಸ್ಮಶಾನದ ದಾರಿ ಇಡಿಯುತ್ತಾನೆ. ಹೆಂಡತಿ ಊಟ ತಗೊಂಡು ಹೋದರೆ ಎರಡು ಕೈಯಲ್ಲಿ ಮಗಳಿಗೆ ತಿನ್ನಿಸಲು ಪ್ರಯತ್ನಿಸುತ್ತಾನೆ ಮಣ್ಣಿನೊಳಗೆ ಅನ್ನದ ಕೈ ಇಡುತ್ತಾನೆ. ಅನ್ನ ಮೈಮೇಲೆ ಹಾಕಿಕೊಳ್ಳುತ್ತಾನೆ ಮನೆಗೆ ಕರೆದರೆ, ಇಲ್ಲ ಮಗಳೋಬ್ಬಳೇ ನಾನು ಇಲ್ಲೇ ಇಲ್ಲೇ ಅವಳನ್ನ ಕಾಯಬೇಕೂ ಇಲ್ಲಾಂದ್ರೆ ಕರ್ಕಂಡುತ್ಹೋಗಿ ಸಾಯಿಸ್ತಾರೆ ಹಾಳ್ಮಾಡತಾರೆ ನಾನ್ ಬರಲ್ಲ.ನನ್ ಮಗಳಿಗೆ ಯಾವನ್ ಜೊತೆ ಹೋಗಿದ್ದೆ ಲೌಡಿ ಅಂತ ಹೇಳ್ತಿದ್ದೆ ಈಗ ಕಳಿಸೇಬಿಟ್ಟಯಲ್ಲೇ.ಅಂತ ಗೋಗರೆದು ಅಳುತ್ತಾನೆ ತಂಬಿ. ಒಂದು ವಾರ ಅಲ್ಲೇ ಮಲಗುತ್ತಾನೆ ಏಳನೇ ದಿನ ರಾತ್ರಿ ಭಾರಿ ಮಳೆ ಬರುತ್ತದೆ.
ಬೆಳಿಗ್ಗೆ ಸುಂದ್ರಿ ತಾಯಿ ಗಂಡಂಗೆ ಊಟ ತಗೊಂಡು ಹೋದ್ಲು ಸಮಾಧಿ ಮೇಲಿದ್ದ ಗಂಡಂಗೆ ತಗೋ ಊಟ ತಿನ್ನು ಅಂದ್ಲು ಏ ಎದ್ದು ತಿನ್ನು, ತಂಬಿ ಮಾತಾಡಲಿಲ್ಲ ತಲೆ ಅಲ್ಲಾಡಿಸಿದ್ಲು ಕೆಳಗೆ ಬಿದ್ದ ತಂಬಿ.ಅವನ ಮೈ ಕೆಸರಾಗಿತ್ತು ಸತ್ತುಹೋಗಿದ್ದ ಜೋರಾಗಿ ಗಟ್ಟಿಯಾಗಿ ಸ್ಮಶಾನವೆಲ್ಲ ಕೇಳುವ ಹಾಗೆ ನಗುತ್ತಾಳೆ! ಹೋದ್ಯಾ ನೀನು ಹೋದ್ಯಾ ಸುಂದ್ರಿ ಜೊತೆಗೆ ಹೋದ್ಯಾ, ಕಿರುಚಿದಳು, ಮನೆಗೆ ಬಂದು ಆರೆ ಚಲಕೆ ತೆಗೆದುಕೊಂಡು ಹೋದ್ಲು, ಜನ ಕೇಳಿದ್ರೆ,ತಂಬಿ ಸುಂದ್ರಿ ಅತ್ರ ಹೋಗ್ಯಾನೇ ನಾನು ಅಲ್ಲೇ ಮನೆ ಕಟ್ಕೊಳ್ತಿನಿ ಅಂದ್ಲು.ಜನಬಂದು ತಂಬಿ ದೇಹವನ್ನು ಅಂತ್ಯಸಂಸ್ಕಾರ ಮಾಡಿದರು.ಅವಳಿಗೆ ಹುಚ್ಚು ಹಿಡಿದು ಒಂದು ತಿಂಗಳು ಸ್ಮಶಾನದಲ್ಲಿ ಸಮಾಧಿ ಕಾದಳು ಆಗಾಗ ಊರೊಳಗೆ ಬಂದು ಭಿಕ್ಷೆಬೇಡಿ ತಿಂದಳು. ಕೊನೆಗೆ ದನಕಾಯುವ ನರಬಕ್ಷಕರ ಕಾಮಕ್ಕೆ ಬಲಿ ಆದಳು.ಶಿವಮೂರ್ತಿ ದೇಹವನ್ನು ಅವನ ತೋಟದಲ್ಲಿ ಅಂತ್ಯಸಂಸ್ಕಾರ ಮಾಡಿದರು. ಅವನ ತಂಗಿಯನ್ನು ನಿನ್ನಣ್ಣ ಮಾಡಿದ ಅಲ್ಕಟ್ ಕೆಲಸಕ್ಕೆ ನೀನು ಗಂಡನ ಮನೆ ಸೇರಬೇಡ ಎಂದು ತವರಿಗೆ ಕಳಿಸಿದರು. ಅವನ ಹೆಂಡತಿಯನ್ನು ಗಂಡನಮನೆಗೆ ಕಲಿಸಲಿಲ್ಲ. ಇದೆಲ್ಲ ನೋಡಿದ ಶಿವಮೂರ್ತಿ ವೃದ್ದತಂದೆತಾಯಿ ಇದೇ ಯೋಚನೆಯಲ್ಲಿ ಊಟ ಬಿಟ್ಟು ಕೊರಗಿದರು. ಒಂದೇ ದಿನ ಮೃತರಾದರೂ ಸಾವಿನಲ್ಲೂ ಒಂದಾದ ದಂಪತಿಗಳೆಂದು ಪತ್ರಕೆ ವರದಿ ಮಾಡಿತು.
ಪ್ರೀತಿಯೋ ಪ್ರೇಮವೋ ಕಾಮವೋ ಸೌಂದರ್ಯವೋ ಸಂಬಂಧವೋ ಹಣವೋ ಆಸ್ತಿಯೋ ಮೋಹ ವ್ಯಾಮೋಹದ ಸುಳಿಯೋ ಈ ಜೀವನ. ಯುವ ಮನಸ್ಸುಗಳಿಗೆ……………!
ಬನಸ
ಬನಸ
ಬರಮನಹಳ್ಳಿ ನಾಗಪ್ಪ ಸತೀಶ
ಉಪನ್ಯಾಸಕರು
ಸರಕಾರಿ ಪ್ರಥಮ ದರ್ಜೆ ಕಾಲೇಜು
ರಥಬೀದಿ, ಮಂಗಳೂರು
ಮೊ : 8722081826



