ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ
“ಮೆತ್ತಗಿನ ಹೃದಯ”

ಈಗೀಗ ಮತ್ತೂ
ಮೆತ್ತಗಾಗಿದೆ
ಒಲವುಂಡ ಈ ಹೃದಯ
ಹೂ ಭಾವದಿ ನಿಂತು
ಬೇರ ಚಿಗುರ ಕಂಡು
ಸಾವಿರ ಬಾರಿ
ಉಸಿರನ್ನು ಚೆಲ್ಲಿ.
ಅದೆಷ್ಟು ಸೋಜಿಗ
ಒಂದು ಉಸಿರಿನ
ಬದುಕು ನೋಟಕೆ
ಮನೆ ಮನಸಿನ
ಗೂಡಿಂದ ಆಚೆಗೆ
ನಾವೇ ಕಟ್ಟಿಕೊಂಡ
ತೇಲುವ ನಾವೆಗಳು
ಅನುಭವ ವಾಸ್ತವದ
ಗಡಿಗಳಲ್ಲಿ ನಿಂತು
ಗಿರಕಿ ಹೊಡೆದಂತೆ
ಒಂದೊಂದು ಭಾವವೂ
ಸುತ್ತ ಸುತ್ತುತ್ತಾ
ಜಗವ ಕುಣಿಸಿ
ಎತ್ತರಕ್ಕೆ ನಿಂತಂತೆ
ಕಾಲ ಸರಿದಂತೆ
ಹೃದಯ ಬಡಿತವೂ
ನಿಧಾನ ಸಾಗಿ
ಮೆತ್ತಗಾಗಿ ಮತ್ತೆ
ಬಡಿತ ಕೇಳುವುದು
ನಡೆದು ಸಾಗಿದ
ಉದಯದ ಮಾಗಿಗೆ
ನೆನಪಿನ ಸಾಲು
ಮೆರವಣಿಗೆ ಹೊರಡುವುದು
ಮಣ್ಣಿನ ಕಣದಿ
ಸಸಿಯಾಗಿ ಬೆಳೆದು
ಹಕ್ಕಿ ಹೇಳಿದ
I
ಹಸಿವೆ ಹಾಡಿಗೆ
ಒಳಿತನ್ನು ಅಂಟಿಸಿ
ನಿಶ್ಯಬ್ದ ಆಗುವುದು…….
ನಾಗರಾಜ ಬಿ.ನಾಯ್ಕ



