ಕಾವ್ಯ ಸಂಗಾತಿ
ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ
ಚುಟುಕುಗಳು

ಮಿತಿಗಳಿರದವು
ಭಾವಗಳು ಬಡಿವಾಗ ಏಳದಿರಲಾದೀತೆ
ಮಿಡಿತಗಳು ಮೆರೆವಾಗ ಬರದಿರಲಾದೀತೆ
ನುಡಿಗಳು ನೆನೆವಾಗ ಕೇಳದಿರಲಾದೀತೆ
ಆನಂದ ಬಾಷ್ಪಗಳಿಳಿವಾಗ ತಡೆಯಲಾದೀತೆ
ಅರಸದಿರು
ಅರಸದಿರು ನಿನ್ನ ಹಾರೈಸಲೆಂದು
ಬೇಡದಿರು ಬೇಡಿಕೆ ಬರಲೆಂದು
ಕಾಡದಿರು ಕೀರ್ತಿ ಹೆಚ್ಚಾಗಲೆಂದು
ಕರ್ಮವೇ ಸರ್ವೆವ ಎರೆಯುತಿರಲು…!
ಮೆರೆವೆಯೆಲ್ಲಿ
ಮನದಂಗಳದ ಮಧುವಲ್ಲಿ
ಕಣದಂಗಳದ ರಾಶಿಯಲ್ಲಿ
ಬೆಳದಿಂಗಳ ಇರುಳಲ್ಲಿ
ನಲಿದಿರೆ ನೀ ಮರೆವೆಯೆಲ್ಲಿ
ಸರಿ ದಾರಿ
ವಾಸ್ತವ ವರ್ಣನೆ ವಕ್ರವಲ್ಲ
ನೈತಿಕ ನಡೆಯು ನರಳಲ್ಲ
ಸತ್ಯವು ಸಂತಸಕ್ಕೆ ತೊಡಕಲ್ಲ
ಸರಿ ದಾರಿಯೇ ಸಾಧನೆಗೆ ಸೇತುವೆಯಲ್ಲಾ…
ಶ್ರೇಷ್ಠ-ಕನಿಷ್ಠರಿಲ್ಲ
ಸೋಲುವೆವೆಂಬ ಭಯ ಬೇಡ ಗೆಲುವಿಹುದು
ಗೆದ್ದೆನೆಂಬ ಬಿಗುಮಾನ ಬೇಡ ಸೋಲಿಹುದು
ಕಾಡುವರೆಂಬ ಆತಂಕ ಬೇಡ ಕರಗುವರವರೂ
ಕಾಲ ಚಕ್ರದೊಳು ಶ್ರೇಷ್ಠ-ಕನಿಷ್ಠರಿಲ್ಲ ಮರೆಯದೆಂದೂ..
ಡಾ. ಮಲ್ಲೇಕಾವು ಮುಕುಂದರಾಜು(ಮಮು)




