ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಕವನದ ಘಮ”

ಬರೆಯುವ ಬಯಕೆ
ಸುಖ ಪ್ರಸವದ ಹಾಗಲ್ಲ
ಇಂತಿಷ್ಟು ನಿಮಿಷ ಗಂಟೆ ದಿನಕ್ಕೆ
ಇದೇ ಡೆಲಿವರಿ ತಾರೀಕು ಸಿದ್ಧ
ಎಂದು ಹೇಳಿ ಗೊತ್ತಿಲ್ಲ
ಕವಿತೆಗೆ ಆಕೆಯದೇ ಭಾವ ಭಂಗಿ
ಬರೆಯುವವನ ಬರವಿಗೆ ಕಾದ ಅಸಹನೆಗಳ ಆಹ್ಲಾದಕ್ಕೆ
ನಿರೂಪದ ಅಂಗಿ
ಪ್ರಯಾಸವಲ್ಲದ ಪ್ರಸವದ ಚಿಂತೆ ಕಾವ್ಯಳಿಗಿಲ್ಲ
ಆದರಿವಳಿಗೂ ಬೇಕಾಗಬಹುದು ಇಕ್ಕಳ ಕತ್ತರಿಗಳ ವೇಗ
ಬರೆದು ಬಿಡು ಕವಿ ಹಾಡಿ ಜೀವನಾನುಭವಗಳ ಸವಿ ಮೋಡಿ
ಬರೆದು ಬಿಡು
ಅವಳ ಸಂಗೀತಗಳ ಹಾಡಿ
ಮಾತಿಲ್ಲ ಕಥೆಯಿಲ್ಲ ಬರೆ ಮೌನ
ಸುಸ್ವರ ಮನದೊಳಗಿಂದ ಚಿಮ್ಮಿ ತರಂಗಗಳಾಗಿ ಹೊಮ್ಮಿ ಪಸರಿಸಲಿ ಪ್ರವಾಹವಾಗಿ ಮಿಗಿಲಾಗಿ!
ಕೊನೆಯ ಕ್ಷಣ ಗುರುತು ಕಲ್ಲಾಗಿ
ದನಿಸ ಬೇಕು
ಅನುಕ್ಷಣವೂ ಗುನುಗುನಿಸಿ
ಘಮಿಸ ಬೇಕು ದವನವಾಗಿ.
ಡಾ ಡೋ ನಾ ವೆಂಕಟೇಶ





Excellent Bhavoji
Very nice