ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾರಣವು ನೀ ಕೇಳೆ ಓ ಜಾಣೆ……
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಎಂಬ ಹಾಡು ರೇಡಿಯೋದಲ್ಲಿ ಕೇಳಿಬರುವಾಗ ಮನಸ್ಸಿನ ತುಂಬ ನಿನ್ನ ಬಿಂಬ ಹರಡಿ ನೀನೆ ನಕ್ಕಂತಾದದ್ದು ಸತ್ಯ ಕಣೋ.ನಿನ್ನಲೆ ಈ ಜೀವ ಬಂಧಿಯಾಗಿದೆ.
ನಿನ್ನ ಪ್ರೀತಿಗೆ ಅದೆಂತ ಶಕ್ತಿಯಿದೆ ಕನಸುಗಾರನೆ. ಎಲ್ಲಿಯೋ ಇದ್ದ ನೀನು ಅದೆಲ್ಲಿಯೋ ಇದ್ದ ನಾನು ಕಾಲೇಜಿನ ನೆಪದಲ್ಲಿ ಸಂಧಿಸಿದ್ದು ಅದ್ಯಾವ ಗಳಿಗೆಯಲ್ಲಿ ಅಂತ ಆಗಾಗ ನೆನಪಿಸಿಕೊಳ್ಳತೆನೆ. ಕಾರಣ ಮೊದಲ ನೋಟದಲ್ಲಿಯೆ ನಾವಿಬ್ಬರು ಬಿಡಿಸಲಾರದ ಬಂಧನದ ಬಂಧಿಗಳಾದೆವು.
ಆ ಸುಂದರವಾದ ಕಾಲೇಜ ಕ್ಯಾಂಪಸ ನಮ್ಮ ಮನದ ಮಾತುಗಳಿಗೆ ಮುನ್ನುಡಿ ಬರೆಯಿತು. ಸರಳ ಸ್ನಿಗ್ಧಮುಖದ ಅಂದಗಾರ ನೀ ಬಳಿಬಂದರೆ ಅದೇಕೊ ಮನ ಹಕ್ಕಿಯಾಗಿ ಆಗಸಕ್ಕೆ ಹಾರುತ್ತಿತ್ತು.ಹೃದಯ ಸಂಚಲನದಲ್ಲಿ ಏರುಪೇರಾಗಿ ನಿಂತಲ್ಲೆ ನಿಲ್ಲದ ಜಲಪಾತವಾಗುತ್ತಿದ್ದೆ. ದಿನನಿತ್ಯದ ಪಾಠಗಳಿಂದ ಕೊಂಚ ವಿರಾಮ ಬಯಸಿ ಹೊರಬಂದಾಗ ಮಾತುಗಳಿಗೆ ಪೀಠಿಕೆಯಾಗುತ್ತಿತ್ತು.ಮನವೆಲ್ಲ ಭಯವಿಲ್ಲದೆ ಹರಟುವ ನನಗೆ ನಿನ್ನ ಸಂಕೋಚ ಸ್ವಭಾವ ಕಂಡಾಗ ಬೇಸರವೆನಿಸುತ್ತಿತ್ತು.ಕಾಲೇಜಿನ ಒಳಗೂ-ಹೊರಗೂ ಸಂಕೋಚ ಸ್ವಭಾವದವ ಅಂತ ನಿನಗೆ ಹಣೆಪಟ್ಟಿ ಕಟ್ಟಿಯಾಗಿತ್ತು. ಹೇಗಾದರೂ ನಿನ್ನ ನಿಸ್ಸಂಕೋಚದವನನ್ನಾಗಿ ಮಾಡಬೇಕೆಂಬ ಹಠ ನನ್ನದಾಗಿತ್ತು.ಆದರೆ ನೀ ನಿನ್ನ ಸ್ವಭಾವ ಬಿಡಲಿಲ್ಲ.ಕೊನೆಗೆ ನಾನೇ ನಿನ್ನ ಈ ಸ್ವಭಾವಕ್ಕೆ ಏನು ಕಾರಣ ಅಂತ ಕೇಳಿದಾಗ” ಮುಗುಳ್ನಕ್ಕು ಮೋಹಕವಾಗಿ ಮುಂಗುರುಳಿಗೆ ಮುದ್ದಿಸಿ ಹೇಳಿದೆ…ಈ ನಿನ್ನ ಕಪ್ಪುಕಂಗಳ ನೋಡಿದಾಗ ಮಾತುಗಳು ಬರದೇ ತದೇಕನಾಗಿ ನಿನ್ನ ನೋಡಬೇಕೆನಿಸುತ್ತೆ ಅಂದೆ.ಆದರೆ ನನಗ ಇದರ ಹಿಂದೆ ಅದೇನೋ ರಹಸ್ಯ ಇದೆ ಅನ್ನಿಸಿ ಪದೇ ಪದೇ ಪೀಡಿಸಿ ಕೇಳಿದಾಗ ನಿನ್ನ ಬಾಲ್ಯ ಬಿಚ್ಚಿಟ್ಟೆ. ನನ್ನ ತಂದೆ ದೂರದ ನಗರದಲ್ಲಿ ಕೆಲಸ ಮಾಡ್ತಾರೆ.ನನ್ನ ತಾಯಿ ನಾನು ಮಾತ್ರ ಹಳ್ಳಿಯಲ್ಲಿ ಇದ್ದದ್ದು ಹೊಲಕೆಲಸ ಮಾಡಿಸಲು ಆಳುಗಳಿದ್ದರು.ಯಾರ ಜೊತೆ ಬೆರೆಯುತ್ತಿರಲಿಲ್ಲ.ಹುಡುಗಿಯರ ಕಂಡರೆ ಹೆದರುತ್ತಿದ್ದೆ.ಶಾಲೆಯಲ್ಲೂ ಒಬ್ಬನೆ ಕೂತು ಓದ್ತಿದ್ದೆ.ಶಾಲೆ ಬಿಟ್ಟತಕ್ಷಣ ಮನೆಗೆ ಓಡ್ತಿದ್ದೆ. ಆಟಕೂಡ ಅಷ್ಟಕ್ಕಷ್ಟೆ.ಹೆಣ್ಣಾಗೋದು ತಪ್ಪಿ ಗಂಡಾಗೆದ ಅಂತ ನೆರೆಯವರೆಲ್ಲ ನನ್ನ ತಾಯಿಗೆ ತಮಾಷೆ ಮಾಡ್ತಿದ್ದರು.ಊಟ ಕೂಡ ಓಬ್ಬನೇ ಮಾಡ್ತಿದ್ದೆ.

ಊಟ ಕೂಡ ಓಬ್ಬನೇ ಮಾಡ್ತಿದ್ದೆ.ಯಾರೂ ಹತ್ತಿರ ಬರುವಂತಿರಲಿಲ್ಲ ಬಂದರ ನನ್ನ ತಾಯಿ ಮರೆಮಾಚಿ ಉಣಸ್ತಿದ್ದರು. ತೋಟಗದ್ದೆಗಳಲ್ಲಿ ಯಾರ ಜೊತೆ ಬೆರೆಯಲೇ ಇಲ್ಲ. ಹೀಗೆ ನೀ ನಿನ್ನ ಬಾಲ್ಯದ ಕುರಿತು ಹೇಳಿದಾಗ ಆಶ್ಚರ್ಯವಾಯಿತು.
> ಏನೇ ಇರಲಿ ಚಿನ್ನದಂತ ನಿನ್ನ ಗುಣ ಕಂಡು ಖುಷಿಪಟ್ಟೆ.ನಿನ್ನ ಜೊತೆ ಅದ್ಹೇಗೆ ಇಷ್ಟ ಫ್ರೀಯಾಗಿ ಮಾತಾಡ್ತೆನೆ ನನಗ ಸೋಜಿಗವಾಗಿದೆ.ಬಹುಶಃ ಅದಾವದೋ ಋಣಾನುಬಂಧ ಇರಬಹುದು ಕಣೆ ಅದಕ್ಕೆ ನಿನ್ನ ಕಂಡಾಗ ಹೃದಯ ಹರುಷದ ಹೊನಲಾಗುತ್ತದೆ ನನ್ನಿ ಸಂಕೋಚದ ಸಂಕೋಲೆ ಬಿಡಿಸಿದ ಮಾಯಗಾತಿ ನೀ ಸದಾ ನನ್ನವಳಾಗಿರು.
> ಭಾವಿಬದುಕಿನ ಅಮೃತಧಾರೆ ಯಾಗು ಎನ್ನುತ ಮನದ ಮಾತಿಗೆ ವಿರಾಮ ನೀಡಿದೆ. ನನಗೋ ಒಳಗೋಳಗೆ ಅನಿರ್ವಚನೀಯ ಆನಂದ.ಯಾರಿಗೂ ದಕ್ಕದ ಚಿನ್ನದಗುಣದವ ನನಗೆ ಆ ದೇವರೆ ಕಳಿಸಿದ ಚಂದನದ ಚಂದದ ಕಾಣಿಕೆ ಅಂತ ಖುಷಿಪಟ್ಟೆ. ನಮ್ಮ ಓದು ಮುಗಿದು ಒಂದು ಹಂತ ತಲುಪಿದ ಮೇಲೆ ನಾನೇ ನಿಮ್ಮ ಮನೆಯವರಿಗೆ ವಿಷಯ ಪ್ರಸ್ತಾಪಿಸುವೆ ಎನ್ನುವ ಮಧುರ ಮಾತು ಮೆಲುಕು ಹಾಕುತ್ತ ಮನೆಗೆ ಬಂದೆ. ಈ ಪ್ರೀತಿಯ ಪರಿಗೆ ಬೆರಗಾದೆ. ಸದಾ ನಿನ್ನ ಮಧುರ ಮಾತುಗಳನ್ನೆ ಕೇಳಬೇಕು ಎಂದು ಹಠ ಮಾಡುವ ಈ ಮನಕೆ ಹೇಗೆ ಸಂತೈಸಲಿ ಗೆಳೆಯನೆ.ಪ್ರೀತಿಯ ಅಗಾಧ ಸೆಳೆತದಲ್ಲಿ ಸಿಲುಕಿದ ನನಗೆ ಜಗತ್ತೆ ಸುಂದರ ನಂದನವೆನಿಸುತ್ತಿದೆ. ಕನಸುಗಳಿಗೆ ಜೀವತುಂಬಿ ಜೀವತಂತಿ ಮೀಟಿದ ವೈಣಿಕ ನೀನು. ನೀ ಬರುವ ದಾರಿಯಲ್ಲಿ ಹೂಗಳ ಹಾಸಿ ಕಾಯುವೆ ಸಖನೆ.ಬೇಗ ಬಂದು ಬಿಡು ಈ ಮನಸು ಸಾವಿರಕುದುರೆಗಳ ನಾಗಾಲೋಟದಲ್ಲಿ ಓಡುತ್ತಿದೆ ಕಡಿವಾಣ ಹಾಕು ಬಾ.


About The Author

2 thoughts on ““ಕಾರಣವು ನೀ ಕೇಳೆ ಓ ಜಾಣೆ”ಜಯಶ್ರೀ ಭಂಡಾರಿ ಅವರ ಲಹರಿ”

  1. ಪ್ರೀತಿ ಪ್ರೇಮದ ಸವಿ ನೆನಪುಗಳ ಸರಮಾಲೆ ಲೇಖನ ಬರಹ ಚೆನ್ನಾಗಿ ಮೂಡಿದೆ ಮೇಡಂ ಸುಪರ್ ರಬ್ ಹೀಗೆ ನಿಮ್ಮ ಲೇಖನ ಓದುಗರ ಮನ ಸೆಳೆಯಲಿ
    ಶುಭಾಶಯಗಳು

Leave a Reply

You cannot copy content of this page

Scroll to Top