ಕಾವ್ಯ ಸಂಗಾತಿ
ಸುಮಾ ಗಾಜರೆ
“ಒಲವ ಕಾಣಿಕೆ”


ಕಾತರಿಸಿ ಕಾದು
ಕಾಪಿಟ್ಟ ಬದುಕು
ನೋವು ನಲಿವಲಿ
ಸಾರ್ಥಕವಾಗಲು ಸಾಕು
ಕಾಲದ ಕೌತುಕವದು
ಕಾಯದೇ ಓಡುತಿದೆ
ಮನಸಿನ ಮೌನವದು
ಸೋಲದೇ ಮಿಡಿಯುತಿದೆ
ಬದುಕಿದು ನೀರ ಮೇಲಣ
ಗುಳ್ಳೆಯದು ನಿಜ
ಬದುಕಬೇಕು ಅನುದಿನ
ತಿರುವುಗಳು ಸಹಜ
ಪ್ರೀತಿಯದು ಬಾಳಲಿ
ಬತ್ತದಂತ ಒರತೆ
ಭಾವಗಳ ಭವ್ಯತೆಯಲಿ
ಒಲುಮೆಯ ಧನ್ಯತೆ
ಸಾಗಬೇಕು ನದಿಯಂತೆ
ನಾದದೊಳು ಮಿಂದು
ಸೇರಬೇಕು ಶರಧಿಯನು
ತಾಮಸವ ಕೊಂದು
ಹೃದಯ ಅಲ್ಲ ಬರಡು
ಪ್ರೀತಿ ಚಿಗುರುವ ಕೊರಡು
ಹೂವು ಮಿಡಿ ತೊಟ್ಟು
ಹಬ್ಬಲಿ ಹಸಿರನುಟ್ಟು
ಸಾಗುತಿರಲಿ ಬಾಳನೌಕೆ
ಗುರಿಯ ಗಮ್ಯಕೆ
ಕರುನಾಳು ಕಾರುಣ್ಯಕೆ
ಒಪ್ಪಿಸಿ ಒಲವ ಕಾಣಿಕೆ
ಸುಮಾ ಗಾಜರೆ



