ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ.
ಹನಿಗಳು

ಕೃತಘ್ನತೆಗೆ ಕೃತಜ್ಞತೆ.!
ನನ್ನಯ ಕಂಗಳಲಿ ಜಿನುಗುತಿರುವುದು
ನಿಮ್ಮ ವಂಚನೆಗೆ ಉಕ್ಕಿದ ಕಂಬನಿಯಲ್ಲ
ನೀವು ಕಲಿಸಿದ ಪಾಠಕ್ಕೆ್ ಕೃತಜ್ಞತೆಯಲಿ
ಮೂಡಿದ ಸಂತಸದ ಆನಂದಭಾಷ್ಪ..!
ಜನಧರ್ಮ.!
ಬಿಕ್ಕಿ ಕಂಬನಿ ಸುರಿಸುತ್ತಾ
ಬಾಗಿ ಬೇಡುವುದಕಿಂತ
ನಕ್ಕು ಬೆವರು ಹರಿಸುತ್ತಾ
ಬೀಗುತ್ತಾ ನಿಂತು ಬಿಡಿ.!
ನಿಂದಿಸಿದವರೆ ವಂದಿಸಲು
ಸಾಲು ನಿಲ್ಲುವರು ನೋಡಿ.!
ಅಭಿನಂದನೆಗಳು.!
ನೀವು ಮಾಡಿದ ಅನ್ಯಾಯ
ನನ್ನೆದೆಗೆ ಮಾಡಿದ ಗಾಯ..
ನನ್ನಯ ನಾಳಿನ ಬದುಕಿಗೆ
ಹಾಕಿದ ಭದ್ರ ಅಡಿಪಾಯ.!
ಭ್ರಾಂತು.!
ಬಿಂದಿಗೆ ನೆತ್ತರಿಗೇ ಮರುಗದವರು
ತಂಬಿಗೆ ಕಂಬನಿಗೆ ಕರಗುವರೆ.?
ಪಾಶ ಹಿಡಿದ ಪಾಶಾಣ ಮನಸಿಗರು
ಕರುಣೆ ತೋರಿ ಕಾಪಿಡುವರೆ..??
ಗಾರುಡಿ.!
ಅಬ್ಬಾ.. ವೇದನೆ ರೋಧನೆಗಿಂತ
ಸಾಧನೆಗೆ ಇಲ್ಲಿ ಅದೆಷ್ಟು ಬೆಲೆ.?!
ಅಂದು ಜಗ್ಗಿ ಕಾಲೆಳೆದವರೆಲ್ಲರು
ಇಂದು ಬಗ್ಗಿ ಕೈಕಟ್ಟಿ ನಿಂತಿಹರು.!
ಘೋರ.!
ನಂಬಿಕೆಗಳಿಲ್ಲದ ಮನಸು
ಜೀವಕೆ ಸದಾ ಭಾರ.!
ಭರವಸೆಗಳಿಲ್ಲದ ಕನಸು
ಶವದ ಮೇಲಿನ ಹಾರ.!
ಯಶಸ್ಸು.!
ಸುದ್ದಿ ಸದ್ದಾಗಬೇಕೇ ವಿನಹ
ಸದ್ದೇ ಸುದ್ದಿಯಾಗಬಾರದು.!
ಎದ್ದು ಬೆಳಕಾಗಬೇಕೇ ವಿನಹ
ಬಿದ್ದು ಬೆಂಕಿಯಾಗಬಾರದು.!
ಎ.ಎನ್.ರಮೇಶ್. ಗುಬ್ಬಿ.




