ಕಾವ್ಯ ಸಂಗಾತಿ
ಹನಿಬಿಂದು
ಆರದ ಗಾಯ


ನೀ ನನ್ನ ದೇಹವನ್ನು ಮನಸನ್ನು ಮುಟ್ಟಿದ್ದು ಮಾತ್ರವಲ್ಲ
ತಟ್ಟಿದ್ದೆ, ಸೋಲಿಸಿದ್ದೆ, ಗೆದ್ದಿದ್ದೆ, ತುಂಬಿದ್ದೆ, ಹೀರಿದ್ದೆ
ಬೆಳೆಸಿದ್ದೆ, ಗೆಲ್ಲುವ ಆಸೆ ಹುಟ್ಟಿಸಿದ್ದೆ ಆನಂದ ಕೊಟ್ಟಿದ್ದೆ
ಬಳಸಿದ್ದೆ, ಬಯಸಿದ್ದೆ, ನಡೆಸಿದ್ದೆ, ನೋವುಣಿಸಿದ್ದೆ, ಕಾಡಿದ್ದೆ
ಕಾದಿದ್ದೆ ನುಡಿದಿದ್ದೆ ನಡೆದಿದ್ದೆ ಮನಸು ಕದ್ದಿದ್ದೆ ನಗಿಸಿದ್ದೆ
ಬಳಿಕ ತಿಳಿಯಿತು ನೀನೇಕೆ ನನ್ನ ಬಾಳಿಗೆ ಬಂದಿದ್ದೆ
ಪರೀಕ್ಷಿಸಲು, ನೋಯಿಸಲು, ಪರರ ಕಟ್ಟಿ ಕೊಡಲು
ಹಲವರ ನನಗೆ ಆಗಾಗ ಜೋಡಿಸಿಡಲು ಕಲಿತಿದ್ದೆ
ಮಾತಿನಲ್ಲೇ ನೋಯಿಸಲು ಬಹಳಷ್ಟು ತಿಳಿದೇ ಇದ್ದೆ
ಹಲವಾರು ಬಾರಿ ಪದಗಳಿಂದಲೇ ನನ್ನ ಸಾಯಿಸಿದ್ದೆ
ಇಲ್ಲಗಳ ನಡುವೆ ಬದುಕುವ ಧೈರ್ಯ ಮರೆಸಿದ್ದೆ
ಪಲ್ಲವಿಯನ್ನೇ ತುಂಡರಿಸಿ ಹೊಸ ಹಾಡು ಮುರಿದಿದ್ದೆ
ಇನ್ನೆಲ್ಲಿಯ ಹಾಡು ರಾಗ ಭಾವ ಲಯ ಸಮ್ಮಿಲನ
ಬೆಣ್ಣೆಯ ತೆರದ ಬದುಕು ಕನ್ನಡಿಯಂತೆ ಒಡೆದಿರಲು
ಸುಣ್ಣವನ್ನೇ ಹಾಲೆಂದು ನಂಬಿ ನಿತ್ಯ ಕುಡಿದಿರಲು
ಸಣ್ಣ ಸಣ್ಣ ಗಾಯಕ್ಕೂ ಉಪ್ಪಿಟ್ಟು ನೋಯಿಸಿರಲು
ಮತ್ತೆಲ್ಲಿಯ ಒಡನಾಟ ಜೊತೆಯಾಗುವ ಅವಕಾಶ
ಕತ್ತೆಯಂತಿದ್ದರೂ ಇನ್ನಾದರೂ ಬುದ್ಧಿ ಕಲಿವಾಸೆ
ಮೆತ್ತಗೆ ಜಾರಿ ಅಲ್ಲೆಲ್ಲೋ ಒಂಟಿಯಾಗಿ ಹಾರುವಾಸೆ
ಸುತ್ತಲೂ ಸ್ವಾತಂತ್ರ್ಯ ಕಟ್ಟಿ ಮೆಟ್ಟಿ ಬದುಕುವ ದುರಾಸೆ
ಹನಿಬಿಂದು



