ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ದೂರ ಬಲು ದೂರದ ಪಡುವಣ  ದಿಕ್ಕಿನಲ್ಲಿ ಸೂರ್ಯನು ಭೂಮಿಯಲ್ಲಿ ಲೀನವಾಗುತ್ತಿದ್ದ. ಅವನ ಸುತ್ತಲೂ ಝಳಝಳಿಸುವ ಕಿರಣಗಳು ತಂಪಾಗಿ- ಕೆಂಪಾಗಿ ತಂಪನ್ನೀಯುತ್ತಿದ್ದವು ಹಕ್ಕಿಗಳು ತಮ್ಮ ತಮ್ಮ ಗೂಡನ್ನು ಸೇರುವ ತವಕದಲ್ಲಿದ್ದವು. ಸೂರ್ಯನು ಭೂಮಿಯಲ್ಲಿ ಲೀನವಾಗುವ ದೃಶ್ಯ  ಮನ   ಮುದಗೊಳಿಸುತ್ತಿವಂತಿತ್ತು.!!
ಈ ದೃಶ್ಯವನ್ನು ನೋಡಲು ಆಚಾರ್ಯರು ತಮ್ಮ ಮನೆಯ ಎದುರುಗಡೆ ಇದ್ದ ಪಾರ್ಕಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು.  ಆದರೆ ಇಂದಿದೇಕೊ ಸೂರ್ಯಾಸ್ತವೂ ಮನಸ್ಸಿಗೆ ನೋವುಂಟು ಮಾಡಿದೆ. ಮುಳುಗುತ್ತಿದ್ದ ಸೂರ್ಯನು ಅದೇನನ್ನೋ ಹೊತ್ತು ಕಸಿದುಕೊಂಡು ದೂರ ಹೋಗುತ್ತಿದ್ದಾನೆ ಅನಿಸಿತು… ಕಣ್ಣು ಮುಚ್ಚಿಕೊಂಡು ಅಂತರ್ಮುಖಿಯಾಗಿ ಕುಳಿತುಕೊಂಡರು. ಚಿಂತಿಯ ಅಲೆಗಳು ಭುಗಿಲೆದ್ದವು ಯಾವ ಪ್ರಶ್ನೆಗಳಿಗೂ ಉತ್ತರ ಸಿಗದೇ ತತ್ತರಿಸಿದರು .,…..
 “ಅಪ್ಪಾಜಿ” ……ಆಚಾರ್ಯರ ಮಗಳು ವಿನಯ  ಹಿಂದಿನಿಂದ ಕರೆದಳು. ಕಣ್ಣು ತೆರೆದು ಮಗಳನ್ನು  ನಿರ್ಲಿಪ್ತತೆಯಿಂದ ನೋಡಿದರು. ತಂದೆಯ ಬಾಡಿದ ಕಂಗಳನ್ನು ನೋಡಿ ವಿನಯ ಏನನ್ನೂ ಪ್ರಶ್ನಿಸದೆ  ತಡವಾಯಿತು ನಡೆಯಿರಿ ಮನೆಗೆ” ಎಂದಳು .
ಪ್ರಖಾಂಡ ಪಂಡಿತರು ಜ್ಞಾನಿಗಳು ಆದ ತಂದೆ ವಿನಯಗಳಿಗೆ ಆದರ್ಶಪ್ರಾಯರಾಗಿದ್ದರು. ಪರಮ  ಗುರುಗಳೂ ಆಗಿದ್ದರು. ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು  ಅತ್ಯಂತ ಪ್ರಾಮಾಣಿಕತೆಯಿಂದ ಸೇವೆಯನ್ನು ಸಲ್ಲಿಸಿ ನಿವೃತ್ತಿ  ಹೊಂದಿದ್ದರು. ಸಾಹಿತ್ಯದ ಹುಚ್ಚು ಕೆಚ್ಚು ಅವರಲ್ಲಿ ತುಂಬಿ ತುಳಕುತ್ತಿತ್ತು. ಸಾಹಿತ್ಯ ಬರೆಯುತ್ತಲೇ ಕಾಲ ಕಳೆಯುತ್ತಿದ್ದರು. ಹೀಗಾಗಿ ಮನೆಯಲ್ಲಿ ಚರ್ಚೆಗಳು ಕವಿಗೋಷ್ಠಿಗಳು ದಿನಾ ಸಾಯಂಕಾಲ ನಡೆಯುತಿತ್ತು. ಶಿಷ್ಯ ವೃಂದವು  ಬಂದು ಅವರಿಂದ ವಿದ್ಯೆಯನ್ನು ಪಡೆದುಕೊಂಡು ಹೋಗುತ್ತಿದ್ದರು . ಇತ್ತಿತ್ತಲಾಗಿ ಆರೋಗ್ಯವು ದಿನೇ ದಿನೇ ಕ್ಷೀಣಿಸಲಾರಂಭಿಸಿತ್ತು . ಚರ್ಚೆ ಬೋಧನೆ ಮಾಡಲಾಗುತ್ತಿರಲಿಲ್ಲ. ಮನೆಗೆ ಬಂದವರನ್ನು  ಮರಳಿ ಕಳಿಸುತ್ತಿದ್ದರು. ಹೀಗಾಗಿ ಬರುವ ಜನರ ಸಂಖ್ಯೆ ಕಡಿಮೆ ಆಗಲಾರಂಭಿಸಿತ್ತು. ಅವರ ಪತ್ನಿ ಶಾಂತಮ್ಮನವರಿಗೆ ಗಂಡನ ಮೇಲೆ ತಾತ್ಸಾರ. ಇತ್ತಿತ್ತಲಾಗಿ ಕೋಪವುಗೊಳ್ಳುತ್ತಿದ್ದರು….. “ಅತ್ಯಂತ ಪ್ರಾಮಾಣಿಕರಾಗಿ ತಮ್ಮ ಜೀವನದಲ್ಲಿ ಹೆಂಡತಿ ಮಕ್ಕಳಿಗೆ ಏನನ್ನೂ ಮಾಡಲಿಲ್ಲ. ಈ ಮಾತುಗಳು ಎಷ್ಟು ಜನರ ಉದ್ಧಾರ ಮಾಡಿಯಾವು ಆ ದೇವರಿಗೇ ಗೊತ್ತು” ಎಂದು ಕೂಗಾಡುತ್ತಿದ್ದರು .
ಶಾಂತಮ್ಮನಿಗೆ ಬೆಳೆದು ನಿಂತ ಮಗಳ ಮದುವೆಯ ಚಿಂತೆ. ಯಾರಾದರೂ ಸರಿ ಮೊದಲು ಮದುವೆ ಮಾಡಿ ಮುಗಿಸೋಣವೆಂದರೆ ವರದಕ್ಷಣೆಯ ಭೂತ ಎಲ್ಲೆಲ್ಲೂ ತಾಂಡವಾಡುತ್ತಿತ್ತು. ಇನ್ನು ಆಚಾರ್ಯರು ವರದಕ್ಷಣೆಯ ಕಠೋರ ವಿರೋಧಿ, ಹೀಗಾಗಿ ವರಗಳನ್ನು ಹಿಂದಕ್ಕೆ ಕಳುಹಿಸುವುದೇ ಒಂದು ಕೆಲಸವಾಗಿ ಬಿಟ್ಟಿತ್ತು .”ಯಾವುದಕ್ಕೂ ಚಿಂತೆಯನ್ನು ಮಾಡದೆ ಆ ದೇವರ ಮೇಲೆ ಎಲ್ಲ ಭಾರ ಹಾಕಿ ಅವುಗಳ ಉತ್ತರಕ್ಕಾಗಿ ಕಾಯಬೇಕೇ ಹೊರತು ಚಿಂತಿಸಬಾರದು” ಎಂದು ಹೇಳುತ್ತಿದ್ದರು. ಅವರಿಗೆ ಮಗಳ ಮದುವೆಯ ಚಿಂತೆ ಇತ್ತಿತ್ತಲಾಗಿ  ಅರಿವಿಲ್ಲದಂತೆ ಆಕ್ರಮಿಸತೊಡಗಿತ್ತು. ಮುಂಜಾನೆಯ ಪೂಜೆಯಲ್ಲಿ ಮಗ್ನರಾಗಿದ್ದ ಆಚಾರ್ಯರಿಗೆ ಪಕ್ಕದ ಮನೆಯ ನೀಲಮ್ಮಳ ಮಾತುಗಳು ಕಿವಿಗೆ ಬಿದ್ದವು. “ನಿಮ್ಮ ಮಗಳು ಏನು ಸುಂದರಿಯೇ ಅಥವಾ ಆಗರ್ಭ ಶ್ರೀಮಂತನ ಏಕೈಕ ಮೊಮ್ಮಗಳೇ? ವರದಕ್ಷಣೆ ಕೊಡಲ್ಲ ಅಂತ ಹೇಳ್ತಾ ಕುಳಿತರೆ ಅವಳ ಮದುವೆಯಾದಂತೆಯೇ…
“ಈಗ ಕಾಲ ಬದಲಾಗಿದೆ  ಎನಾದರೂ ಮಾಡಿ ವರದಕ್ಷಣೆ ವ್ಯವಸ್ಥೆ ಮಾಡಿ ಮದುವೆ ಮಾಡಿ ಕೊಟ್ಟುಬಿಡಿ”. ಹೀಗೆ ಮುಂದುವರೆದರೆ ನೀವಿಬ್ಬರೂ ಕೂಡಿ ಮಗಳ ಮದುವೆ ಮಾಡದೆ ಅವಳನ್ನು ಒಬ್ಬಳೇ ಬಿಟ್ಟು ಹೋಗ್ತೀರಾ ಹೇಗೆ? “ಅಂತ  ಗೊಣಗಿದಳು. ಅವಳ ಮಾತಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಡವಾಗಲಿಲ್ಲ
“ಹೌದು ಕಾಲ ಬದಲಾಗಿದೆ “…….

ಪೂಜೆ ಮುಗಿಸಿ ಹೊರಗೆ ಬಂದರು …ಮಗಳು  ಹಾಲಿನ ಬಟ್ಟಲು ಹಿಡಿದುಕೊಂಡು ಬಂದಳು. ಮಗಳ ಮುಖವನ್ನು ಸ್ಪಷ್ಟವಾಗಿ ನೋಡಿದರು. ಮೊದಲ ಬಾರಿಗೆ ತನ್ನ ಮಗಳು ಸುಂದರಿಯಲ್ಲ ಅಂತ ಅನ್ನಿಸಿಯಿತು. “ನಾನು ಅಮ್ಮನಂತೆ ಬೆಳ್ಳಗೆ ಸುಂದರವಾಗಿ ಯಾಕೆ ಇಲ್ಲ ಅಪ್ಪಾಜಿ “ಎಂದು ವಿನಯ
ಚಿಕ್ಕವಳಿರುವಾಗ ತಂದೆಯನ್ನು ಹಲವಾರು ಬಾರಿ ಕೇಳಿದ್ದು ನೆನಪಾಯಿತು.
“ಮನುಷ್ಯನ ಬಾಹ್ಯ ಸೌಂದರ್ಯಕ್ಕಿಂತ ಅವನ ಸದ್ಗುಣಗಳು, ಅವನ ವ್ಯಕ್ತಿತ್ವವು ಅವನನ್ನು ಸುಂದರಗೊಳಿಸುತ್ತದೆ.  ಅರಿಸ್ಟಾಟಲ್, ಅಬ್ದುಲ್ ಕಲಾಮರು ,.ಗಾಂಧೀಜಿ ಮುಂತಾದವರೆಲ್ಲರೂ ಸುಂದರವಾಗಿದ್ದರೇ? ಜನ ಮನವನ್ನು ಗೆಲ್ಲಲಿಲ್ಲವೇ?” ಅಂತ ತನ್ನ ಮಗಳಿಗೆ ಹೇಳಿದ್ದು ನೆನಪಾಯಿತು.  ಆದರೆ ಈಗ ವ್ಯಕ್ತಿತ್ವಕ್ಕೆ ಬೆಲೆಯಲ್ಲಿದೆ ಎನಿಸಿತು.
“ಹೌದು ಕಾಲ ಬದಲಾಗಿದೆ “…….
ಸಂಜೆ ಐದು ಗಂಟೆ, ಇನ್ನೇನು ತನ್ನ ಶಿಷ್ಯರು ಬರಬಹುದೇನೋ ಎಂದು ಅನಾರೋಗ್ಯದಲ್ಲೂ ಎದ್ದು ಸಜ್ಜಾಗಿ ತಮ್ಮ ದಿನದ ಆಸನದ ಮೇಲೆ ಕುಳಿತರು. ಅದೇ ಆಸನ, ಅದೇ ಮನೆ, ಮಾಸಿದ ಗೋಡೆಗಳು, ಗೋಡೆಯ ಮೇಲೆ ಒಂದೇ ಸಮನೆ ಟಿಕ್ ಟಿಕ್ ಅಂತ ಹೊಡೆದುಕೊಳ್ಳುವ ಹಳೆಯ ಗಡಿಯಾರ.  ಮನೆಯ ಎಲ್ಲ ವಸ್ತುಗಳೂ ಇದ್ದಲ್ಲಿಯೇ ಇವೆ. ಗಡಿಯಾರವನೊಮ್ಮೆ ನೋಡಿದರು. ಅದು ಯಾರ ಪರಿವೆಯಿಲ್ಲದೆ ತನ್ನಷ್ಟಕ್ಕೆ ತಾನು ಯಾರ ಭಯವಿಲ್ಲದೆ ಒಂದೊಂದು ನಿಮಿಷಗಳನ್ನು ತನ್ನ ಜೋಳಿಗೆಯಲ್ಲಿ ತುಂಬಿಸಿಕೊಳ್ಳುತ್ತಾ ಮುಂದೆ ನಡೆದಿದೆ. ಸಮಯದೊಡನೆ ಹೋರಾಡಲಾದೀತೇ?  ಎನಿಸಿತು…., ಹಿಂದಿನ ಕಾಲಕ್ಕೂ ಈಗಿನ ಮೌಲ್ಯಗಳ ಅತಿಶ ವ್ಯತ್ಯಾಸವಾಗಿದೆ. ಯಾರು ಯಾರ ಭಾವನೆಗಳಿಗೂ ಸ್ಪಂದಿಸಲು ಸಮಯವಿಲ್ಲದ ಕಾಲ …!!

“ಹೌದು ಕಾಲ ಬದಲಾಗಿದೆ”…….
ಆಚಾರ್ಯರು ಒಬ್ಬ ಆದರ್ಶ ಪ್ರಾಯರಾದ ಅಧಿಕಾರಿ, ಪ್ರಭುದ್ಧ ಸಾಹಿತಿಗಳು, ಅವರ ಭಾಷಣಗಳನ್ನು ಕೇಳಲು ಸಾವಿರ ಸಾವಿರ ಜನರು ಸೇರುತ್ತಿದ್ದರು. ಅವರ ಅಭಿಮಾನಿಗಳಿಗೆ ಇವರ ಮಾತುಗಳೆಂದರೆ ವೇದವಾಕ್ಯ.  ಇವರು ಯಾವ ಮಾತುಗಳನ್ನು ಮೀರಿದವರಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ, ನಾಡಿನ ಏಕೀಕರಣದಲ್ಲಿ ಕಳೆದ ಒಂದೊಂದು ಘಟನೆಗಳನ್ನು ನೆನೆದರು. ಆಗಿನ ವಿದ್ಯಾರ್ಥಿಗಳಲಿದ್ದ ಆಚಾರ ವಿಚಾರಗಳು, ನೈತಿಕತೆ ಎಂಥ ಉತ್ತುಂಗಕೇರಿದ್ದವು. ಎಂಥ ರೋಮಾಂಚಕಾರಿ ಕಾಲವದು… ಆದರೆ
 ಈಗ” ಕಾಲ ಬದಲಾಗಿದೆ “…….

ಹೌದು ಅಹಿಂಸೆ ಏಕತೆಯನ್ನು ಪ್ರತಿಪಾದಿಸುವ ಮೌಲ್ಯಗಳು ಅವಹೇಳನಕ್ಕೆ ಒಳಗಾಗಿವೆ. ಅಶಕ್ತಗೊಂಡಿವೆ…… ಈ ಹಳೆಯ ಮಾತುಗಳನ್ನು ಕೇಳುವುದೇ ಬೇಸರವಾಗಿದೆ…!!!!

ಇಂಥ ಅನೇಕ ವಿಚಾರದಿಂದ ಹೊರಬರಲಾಗಲಿಲ್ಲ…  ಮನೆಯಲ್ಲಿ ಕಂಗೆಟ್ಟ ಬಡೆತನ. ಬೆಳೆದು ನಿಂತ ಮಗಳು.  ಅನಾರೋಗ್ಯದ ಹೆಂಡತಿ ಎಲ್ಲವೂ ಅಸಹನೀಯವಾಗಹತ್ತಿತ್ತು.”ಸ್ವಲ್ಪ ದುಡ್ಡನ್ನು ಕೂಡಿಸಿ ಇಡರಿ, ಕೊನೆಯ ಕಾಲಕ ಕೆಲಸಕ್ಕೆ ಬರಬಹುದು ಅಂತ ಯಾವಾಗಲೂ ಒತ್ತಾಯಿಸುತಿದ್ದರು ಇವರ ಹೆಂಡತಿ. ಆದರೆ ಆಚಾರ್ಯರು ಶರಣರು ಹೇಳಿದಂತೆ ಇಂದಿನದು ಇಂದಿಗೆ ನಾಳಿನದು ನಾಳಿಗೆ ಎಂದು ನಾಳಿನ ಬಗ್ಗೆ ಯೋಚಿಸದೆ ತನ್ನಲ್ಲಿ ಹೆಚ್ಚಾಗಿ ಉಳಿದಿದ್ದನ್ನು ತನ್ನಲ್ಲಿ ಬೇಡಿ ಬಂದವರಿಗೆ ಕೊಟ್ಟುಬಿಡುತ್ತಿದ್ದರು.”One who preaches he cannot practice ”  ಅನ್ನುವ ಮಾತು ನಿಜವಾಗಿತ್ತು .

ಗಡಿಯಾರದ ಮೇಲಿನ ದೃಷ್ಟಿ ತೆಗೆದು…
“ವಿನಿಯಾ ವಿನಯಾ” ಅಂತ ಮಗಳನ್ನು ಮೇಲ್ದನಿಯಲ್ಲಿ ಕರೆದರು. ವಿನಯಾ ಕೆಲಸ ಬಿಟ್ಟು ಓಡಿ ಬಂದಳು….. ಮಗಳ ಮುಖವನ್ನು ದೀರ್ಘವಾಗಿ ನೋಡಿದರು ಮಗಳಿಗೆ ಏನೂ ತಿಳಿಯದಾಯಿತು “ಏಕೆ ಅಪ್ಪಾಜಿ “…..ಅಂತ ಮಮತೆಯಿಂದ ಕೇಳಿದಳು. ಅನ್ಯವಯಸ್ಕರರಾಗಿ ತಪ್ಪಿತಸ್ತರಂತೆ”ಏನಿಲ್ಲ”… ಎಂದು ಮುಖ ಬಗ್ಗಿಸಿ ” ಇಲ್ಲಿ ಕುಳಿತುಕೋ”… ಎಂದರು. ಅವಳ ನಿಸ್ತೇಜಗೊಂಡ ಮುಖವನ್ನು ಆಚಾರ್ಯರು ನೋಡಿದರು.  ವಿನಯಳ ಕಂದು ಬಣ್ಣದ ಮುಖದ ಮೇಲೆ ಅನುಭವದ ಗೆರೆಗಳು ಹೆಚ್ಚಿದಂತೆ ಕಂಡವು. ಮೊದಲಿನಂತೆ ಅವಳ ಮುಖದ ಮೇಲೆ ನಗುವಿಲ್ಲ. ಅವಳ ವಯಸ್ಸಿಗಿಂತ ಎರಡರಷ್ಟು ದೊಡ್ಡವಳಂತೆ ಕಂಡಳು. ಇನ್ನೂ ನೊಂದುಕೊಂಡರು…. ಅವಳ ತಲೆಯ ಮೇಲೆ ಕೈ ಆಡಿಸಿದರು.  … ವಿನಯ ಕಳವಳಗೊಂಡು “ಯಾಕೆ ನಿಮಗೆ ಹುಷಾರಿಲ್ವೇ? ಇವತ್ತು ಹೊಟ್ಟೆ ನೋವು ಜಾಸ್ತಿಯಾಗಿದೆಯೇ?” ಎಂದು ಕೇಳಿದಳು ಏನನ್ನೂ ಉತ್ತರಿಸದೆ ಎದುರು ಕುಳಿತ ಮಗಳನ್ನು ಕೇಳಿದರು “
ನಿನ್ನ ಅಮ್ಮ ಎಲ್ಲಿ”…. ಅಂದರು “ಅವಳು ನಿದ್ದೆ ಹೋಗಿದ್ದಾಳೆ ಮಧ್ಯಾಹ್ನವೆಲ್ಲ ಜ್ವರ ಜಾಸ್ತಿ. ಈಗ ಸ್ವಲ್ಪ ಕಡಿಮೆಯಾಗಿದೆ “ಅಂತ ಉತ್ತರಿಸಿದಳು.  ಆಚಾರ್ಯರು ಮತ್ತೆ ಮಗಳನ್ನು ದೀನ ಕಂಗಳಿಂದ ನೋಡಿದರು…. ವಿನಯಳು ಸ್ವಲ್ಪ ಗಾಬರಿಗೊಂಡಳು ” ವಿನಯ ಇನ್ನು ನಿನಗೆ ಮದುವೆ ಮಾಡಲಿಲ್ಲವೆಂದು ನನ್ನ ಮೇಲೆ ಕೋಪವೇ”.. ‌..? ಎಂದರು” ಇದೇನೋ ಅಪ್ಪಾಜಿ, ಹೀಗೆ ಅಂತೀರಿ… ಅದು ನನ್ನ ದುರ್ವಿಧಿ ನೀವೆಲ್ಲ ಏನು ಮಾಡಲು ಸಾಧ್ಯ? ಇದೇಕೆ ಇದಕ್ಕಿದ್ದಂತೆ ವಿಚಿತ್ರವಾಗಿ ಮಾತನಾಡುತ್ತಿದ್ದೀರಿ?” ಎಂದು
ಮುಜುಗರಗೊಂಡು ಕೇಳಿದಳು.  ಸ್ವಲ್ಪ ಕೋಪವುಗೊಂಡಳು” ನಡೀರಿ ಕಾಫಿ ಕುಡಿಯುವಿರಂತೆ ..ಹ್ಹಾ….ಎಳ್ರಿ ಅಂತ ಕೈ ಹಿಡಿದು ಎಬ್ಬಿಸಲು ಹೋದಳು ಆಚಾರ್ಯರು ಅವಳನ್ನು ಎಬ್ಬಿಸಲು ಬಿಡಲಿಲ್ಲ. ಅವಳ ಕೈ ಹಿಡಿದು ಕೂಡಿಸಿದರು.  ವಿನಯ ಗಂಭೀರವಾದಳು..” ಮಗ ನೀನೊಬ್ಬಳೇ ನನಗೆ ಮಗಳು ಆದರೂ ನಿನ್ನ ತಂದೆಯಾಗಿ ಎಲ್ಲ ಕರ್ತವ್ಯವನ್ನು ಮಾಡಲಾಗಲಿಲ್ಲ ನಿನಗಾಗಿ ನಾನು ಯಾವ ಆಸ್ತಿ ಮಾಡಲಿಲ್ಲ. ನಾನು ಬಿಟ್ಟು ಹೋಗುತ್ತಿರುವುದು ಬರಿ ಈ ನನ್ನ ಭಂಡಾರವೆಂದು ತಮ್ಮ ಅಪ್ರಕಟಿತಗೊಂಡ ಸಾಹಿತ್ಯದ ಹಳೆಯ ಪೆಟ್ಟಿಗೆಯತ್ತ ಕೈ ಮಾಡಿ ತೋರಿದರು. ಇಷ್ಟು ಹೇಳುವಷ್ಟರಲ್ಲಿ ಆಚಾರ್ಯರ ಕಣ್ಣಿನಲ್ಲಿ ಕಂಬನಿ ಹರಿಯಲಾರಂಭಿಸಿತು. ಎಂಥ ಕಷ್ಟ ಬಂದರೂ ಅವರ ದುಃಖಿಸಿದವರಲ್ಲ. ಎರಡು ಮೂರು ದಿವಸ ಉಪವಾಸವಿದ್ದರೂ ಸಂಕಟಪಟ್ಟಿರಲಿಲ್ಲ. ಇಂದು ಕಣ್ಣೀರು ನೋಡಿ ವಿನಯ ಕರುಳು ಚುರ್ರ್ ಎನಿಸಿತು. “ಇನ್ನೊಂದು ಮಾತು *ನಿನಗೆ* ಹೇಳಬೇಕಾಗಿದೆ ಮಗಳೇ………”  ಸ್ವಲ್ಪವೂ ವಿಚಲಿತಗೊಳ್ಳದೆ ಹೇಳಿದರು” ನಾನು ಹೇಳುವ ಮಾತು ಅತ್ಯಂತ ಕಠೋರವಾದರೂ ಅದನ್ನು ನೀನು ಎದುರಿಸಲೇಬೇಕು. ಇನ್ನು ಈ ದೊಡ್ಡ ಜಗತ್ತಿನಲ್ಲಿ ದಿಟ್ಟ ಧೈರ್ಯದಿಂದ ನೀನೊಬ್ಬಳೇ ಕಳೆಯಬೇಕು”…….  ವಿನಯ ಹೌಹಾರಿದಳು!!
“ಏನಾಗಿದೆ ಅಪ್ಪಾಜಿ”…… ಅಂತ ತಂದೆಯ ಕೈಗಳನ್ನು ಗಟ್ಟಿಯಾಗಿ ಹಿಡಿದಳು. ವಿನಯಳ ಕೈಗಳು ಹಸುಳೆಯಂತೆ ಕಂಡವು “…ಹೌದು ಈ ಕೈಗಳ ಆಧಾರ ನಿಮಗಿರಲಾರವು. ನನಗೆ ಕರಳು ಕ್ಯಾನ್ಸರ್”…….. ತಡವರಿಸಿದರು…..ಮಗಳಿಗೆ  ಹೃದಯ ಕತ್ತರಿಸಿದಂತಾಯಿತು. ಕಣ್ಣಿಗೆ ಕತ್ತಲೆ ಕವಿತು…. ಮಾತುಗಳು ಬರದಾದವು….ಸುಧಾರಿಸಿಕೊಂಡು “ಯಾಕೆ ಹೀಗೆ ಮಾತನಾಡುತ್ತಿದ್ದೀರಿ…..” ದುಃಖದಿಂದ ಕೇಳಿದಳು. ಆಚಾರ್ಯರು ಮಾತ್ರ ನಿರ್ಲಿಪ್ತರಾಗಿ ತಟಸ್ಥರಾಗಿ ಕುಳಿತಿದ್ದರು. ವಿನಯ ತಳಮಳ ತಡೆಯಲಾರದೆ ಅಳಲಾರಂಭಿಸಿದಳು.
 “ನೀವು ಯಾಕೆ ಹೇಳಿಲ್ಲ ಔಷಧವನ್ನು ತೆಗೆದುಕೊಳ್ಳಲಿಲ್ಲ ಯಾಕೆ ….ಆಗಲೇ ನಡಿರಿ  ಡಾಕ್ಟರ್ ಹತ್ರ ಹೋಗೋಣ …”ಅಂತ ಚಿಕ್ಕ ಮಗುವಿನಂತೆ ಅಂಗಲಾಚಿದಳು.
ಆಚಾರ್ಯರು ಮಾತ್ರ ಅದಾವುದೋ ದೊಡ್ಡ ಕೆಲಸವನ್ನು ಮುಗಿಸಿ ಸುಧಾರಿಸಿಕೊಳ್ಳುತ್ತಿದ್ದವರಂತೆ ಕುಳಿತುಕೊಂಡರು .”ಏನೂ ಪ್ರಯೋಜನವಿಲ್ಲಮ್ಮ ಇದು ಕೊನೆಯ ಹಂತದಲ್ಲಿದೆ. ನಿನಗೆ .sssss……ಅಂತ ಏನನ್ನೋ ಹೇಳಲು ಹೋದವರಿಗೆ  ಕೆಮ್ಮು ಜಾಸ್ತಿ ಆಯ್ತು ತಂದೆಯ ಬೆನ್ನು ನೇವರಿಸಿದಳು. ಕೆಮ್ಮು ಸ್ವಲ್ಪ ನಿಂತಿತು. ಅಲ್ಲಿಯೇ ಹಾಸಿಗೆ ಹಾಸಿ ಮಲಗಿಸಿದಳು. ಮನೆಯೆಲ್ಲ ಹೊಗೆಯಾದಂತೆ ಕಾಣಿಸಿತು. ಹೊತ್ತಿದ ವಾಸನೆ ಒಲೆಯ ಮೇಲೆ ಇಟ್ಟ ದೋಸೆ ಸುಟ್ಟು ಕರಕಲಾಗಿದೆ. ಓಡಿಹೋಗಿ ಹಂಚನ್ನು ಕೆಳಗಿಳಿಸಿ, ಒಲೆಯನ್ನು ಆರಿಸಿ, ಮತ್ತೆ ತಂದೆಯ ಹತ್ತಿರ ಓಡಿ ಬಂದಳು.
ಮಗಳು ಬಂದದ್ದು ನೋಡಿ “ಮಗು ನಾನು ಹೋದ ಮೇಲೆ ಬರುವ ಪೆನ್ಷನ್ ನಿಂತು ಹೋಗುವುದು.  ಜಗತ್ತಿನಲ್ಲಿ ಬಾಳಬೇಕು ಬದುಕಬೇಕು ಎನ್ನುತ್ತಾ ಮತ್ತೆ ಬಿಕ್ಕೆ ಬಿಕ್ಕಿ ಅತ್ತರು. ತಂದೆಯ ಅಳುವನ್ನು ನೋಡಿದ ವಿನಯಳಿಗೆ ಆಕಾಶವೇ ಕಳಚಿದಂತಾಯಿತು. “ನೀವ್ಯಾಕೆ ದುಃಖಿಸುತ್ತೀರಿ? ನೀವು ನನ್ನನ್ನು ಕಲಿಸಿದ್ದು ಸಾಲದೆ ಈ ಜಗತ್ತಿನಲ್ಲಿ ನಾನು ಒಬ್ಬಳೇ ನಿಲ್ಲಬಲ್ಲೆನೆಂಬ ಧೈರ್ಯ ತುಂಬಿದಿರಿ. ಇದಕ್ಕಿಂತ ದೊಡ್ಡ ಆಸ್ತಿ ನನಗೇನು ಬೇಕು ಹೇಳಿ “…….ಅಂತ ಸ್ವಾಂತ್ವನಗೊಳಿಸಿದಳು.
“ನೀವು ಹೆದರಬೇಡಿ ಅಪ್ಪ ನಾನಿದ್ದೇನೆ ಅಂತ ತಂದೆಯ ಕೈಗಳಿಗೆ ತನ್ನ ಕೈ ಆಸರೆ ನೀಡುತ್ತಾ ಹೇಳಿದಳು. ಮಗಳ ಮಾತು ಮನಕ್ಕೆ ಸ್ವಲ್ಪ ಸಮಾಧಾನ ತಂದಿತು .ಈ ದುಷ್ಟ ಸಮಾಜದಲ್ಲಿ ಒಬ್ಬಳನ್ನೆ ಬರಿಗೈಯಲ್ಲಿ ಬಿಟ್ಟು ಹೋಗುತ್ತಿರುವುದು ದುಃಖವೆನಿಸಿತು ….”ಮುಂದಿನ ಜನುಮದಲ್ಲಾದರೂ ಸಿರಿವಂತರ ಮನೆಯಲ್ಲಿ ಜನಿಸು ಮಗ ssss….” ಎಂದು ನಿಸ್ಸಾಯಕರಾಗಿ ಮಗಳನ್ನು ಆಶೀರ್ವದಿಸಿದರು. ವಿನಯ “ಏನಿದು ನನ್ನ ತಂದೆ ಇಂಥ ಮಾತುಗಳನ್ನು ಹೇಳುತ್ತಿರುವರೇ? ನನಗೆ ಜನ್ಮಜನ್ಮಾಂತರದಲ್ಲಿಯೂ ನೀವೇ ತಂದೆಯಾಗಿ ಬರಬೇಕು” ಅಂತ ಹೇಳಿದಳು.
ಆಚಾರ್ಯರ….. ಕಣ್ಣು ಕಂಗೊಳಿಸಿದವು… ಸಾರ್ಥಕತೆಯ ಭಾವ ಮೂಡಿತು. ಹೋದ ಜೀವ ಮರಳಿದಂತಾಯಿತು. ಮಗಳನ್ನು ತಬ್ಬಿಕೊಂಡರು… “ನಿನ್ನ ತಾಯಿಯ ಭಾರ ನಿನ್ನದೆಂದು……..” ಹೇಳುವಷ್ಟರಲ್ಲಿಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
 ತಂದೆಯ ಮೃತ ದೇಹವನ್ನು ನೋಡಿ ವಿನಯಳ ಅಂತಃಕರಣದ ಕಟ್ಟೆ ಒಡೆದುಹೋಯಿತು. ಮಾನವ ಸಂಬಂಧದ ಕರಳು ಕಿತ್ತು ಹರಿದು ಹಾಕಿದಂತೆ ಭಾಸವಾಯಿತು …..ಆದರೂ ತಂದೆಗೆ ಕೊಟ್ಟ ಮಾತು ಉಳಿಸಬೇಕು ಜೀವನ ನಡೆಯಲೇ ಬೇಕು ….
 ಕಣ್ಣುಗಳನ್ನು ಮುಚ್ಚಿ ಪಾದಗಳನ್ನು ಮುಟ್ಟಿದಳು. ಅದಾವುದೋ ಅದಮ್ಯವಾದ ಶಕ್ತಿಯು ಅವಳಲ್ಲಿ ಸಂಚರಿಸಿದಂತಾಯಿತು. ಗಂಭೀರವಾದ ಶಾಂತತೆಯ ಭಾವ ಅರಳಿತು. ಈ ಭೀಕರ ಬಿರುಗಾಳಿಯಲ್ಲಿ ಮತ್ತೆ ಬಲಿಷ್ಠವಾಗಿ ಇನ್ನು ಮುಂದೆ ಸಾಗು ಅನ್ನುವ ತಂದೆಯ ಮಾತುಗಳು ಕಿವಿಯಲ್ಲಿ ಕೇಳಿತು. ದುಃಖದ ಭಾರವನ್ನು ಸರಿಸಿ ಕಣ್ಣು ಒರೆಸಿಕೊಂಡು ಎದ್ದಳು. ತಾಯಿಯತ್ತ ನಡೆದಳು………..
ತಂದೆ ಬಿಟ್ಟು ಹೋದ ಹಣ ಆಸ್ತಿಗಿಂತ ಪ್ರಾಮಾಣಿಕತೆ ಔದಾರ್ಯತೆ.. ಪ್ರಬುದ್ಧತೆಯ ಪಾಠ ದೊಡ್ಡದಾಗಿತ್ತು. “ಹೌದು ಕಾಲ ಬದಲಾಗಿದೆ .”…..
ಹ್ಹಾ ಓದುಗರೆ……….ssss
ಈ ಬದಲಾದ ಕಾಲದಲ್ಲಿ ಆಚಾರ್ಯರು ಕಲಿಸಿದ ಪ್ರಾಮಾಣಿಕತೆಯ ಪಾಠ, ಅವರು ಬಿಟ್ಟು ಹೋದ ಸಾಹಿತ್ಯದ ಹೊತ್ತಿಗೆಯು ವಿನಯಳ ಮುಂದಿನ ಜೀವನಕ್ಕೆ ನಾಂದಿ ಹಾಡು ಬಹುದು ಅಂತೀರಾ ನಿಮ್ಮ ಅನಿಸಿಕೆ ತಿಳಿಸಬಹುದಾ….. ?!!!


About The Author

1 thought on “ “ಅಸ್ತಂಗತ” ಸವಿತಾ ದೇಶಮುಖ ಅವರ ಸಣ್ಣ ಕಥೆ”

Leave a Reply

You cannot copy content of this page

Scroll to Top