ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್

ಕಿನ್ನೂರಿ ಮರೆತು ಹೋದ ಜೋಗಿನ ಎಲ್ಲಿ ಹುಡುಕಲಿ ಗೆಳತಿ
ತಪ್ಪಡಿ ಹಿಡಿದು ಸಾಗಿದ ಫಕೀರನ ಎಲ್ಲಿ ಹುಡುಕಲಿ ಗೆಳತಿ
ಹೆಗಲ ಜೋಳಿಗೆ ತುಂಬ ಒಲವ ಶ್ರೀಗಂಧ ಹಂಚುತ್ತಾ ನಡೆದ
ಸಂತೆಯಲಿ ಕಳೆದು ಹೋದ ಸಂತನ ಎಲ್ಲಿ ಹುಡುಕಲಿ ಗೆಳತಿ
ಬತ್ತಿದೆದೆಯಲಿ ಪ್ರೀತಿ ಹೂ ಅರಳಿಸಿ ಮುಂದೆ ಹೋಗುವನು
ಸಂಚಾರಿ ಸ್ಥಾವರವಲ್ಲ ಜಂಗಮನ ಎಲ್ಲಿ ಹುಡುಕಲಿ ಗೆಳತಿ
ಊರ ಗಲ್ಲಿ ಗಲ್ಲಿಯಲಿ ತಿರುಗಿ ತಂಬೂರಿ ನುಡಿಸಿದವನು
ಮೌನವೇ ಮಾತಾದ ಮಹಾಂತನ ಎಲ್ಲಿ ಹುಡುಕಲಿ ಗೆಳತಿ
ಅರುಣಾಳ ಎದೆಯ ಏಕತಾರಿ ನುಡಿಸಿ ಪದ ಹಾಡುವ ಜಾಣ
ಮೋಹಿಸಿ ಮದ್ದಳೆ ಬಾರಿಸುವ ನಲ್ಲನ ಎಲ್ಲಿ ಹುಡುಕಲಿ ಗೆಳತಿ
ಅರುಣಾ ನರೇಂದ್ರ




