ಸಂಗೀತ ಸಂಗಾತಿ
ಗೊರೂರು ಅನಂತರಾಜು.
“ನಮ್ಮ ಊರು ಹಾಸನ
ಶಿಲ್ಪಕಲೆಯ ಶಾಸನ
ಗಾಯಕ ಆರ್. ರಾಮಶಂಕರಬಾಬು”

ಮಾತನಾಡುವಾಗ ಉಗ್ಗುವಿಕೆಯ ತೊಂದರೆಯಿಂದ ತೊದಲುವ ವ್ಯಕ್ತಿ ಹಾಡುವಾಗ ಸುಲಲಿತವಾಗಿ ಹಾಡುತ್ತಾರೆ ಎಂದರೆ ಈ ಸಾಧನೆಯ ಹಿಂದೆ ದೃಢ ಸಂಕಲ್ಪ ಮೇಳೈಸಿದೆ ಎನ್ನಬಹುದು. ತನ್ನ ಉಗ್ಗುವಿಕೆಯ ತೊಂದರೆಗೆ ಹಾಡುಗಾರಿಕೆಯಿಂದ ಪರಿಹಾರ ಕಂಡುಕೊಂಡ ಹಾಸನದ ಆರ್. ರಾಮಶಂಕರಬಾಬು ಜಿಲ್ಲೆಯ ಪ್ರತಿಭಾನ್ವಿತ ಗಾಯಕರು. ಉಗ್ಗು ಇದ್ದರೂ ಹಾಡಿ ಹಿಗ್ಗುವ ಮುಖೇನ ತಮ್ಮ ಬಾಳಿನ ನೋವು ಮರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಉಗ್ಗುವಿಕೆ ತೊಂದರೆಯಿಂದ ಮಾತನಾಡಲು ಕಷ್ಟಪಡುತ್ತಿದ್ದ ಬಾಬು ಛಲ ಮತ್ತು ದೃಢಚಿತ್ತದಿಂದ ಹಾಡುವುದನ್ನು ಅಭ್ಯಾಸ ಮಾಡಿಕೊಂಡವರಾಗಿದ್ದರು. ಜಾನಪದ ಹಾಡುಗಳನ್ನು ಹಾಡುವುದರ ಜೊತೆಗೆ ಕಂಜರ ಬಾರಿಸುವುದನ್ನು ರೂಢಿಸಿಕೊಂಡಿದ್ದರು. ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಗಾನ ಸೌರಭ, ಸಂಗೀತ ಗಂಗಾ ಎಂಬ ಹೆಸರಿನಲ್ಲಿ ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಗಣೇಶೋತ್ಸವ, ರಾಜ್ಯೋತ್ಸವ, ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಾಸನ ಆಕಾಶವಾಣಿಯಲ್ಲಿ ತತ್ವಪದ ಗಾಯಕರಾಗಿ ಹಾಡಿದ್ದರು. ಸಾಮಾಜಿಕ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಾಗ ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ಭಾಗವಹಿಸುತ್ತಿದ್ದರು. ಸರ್ಕಾರಿ ಪ್ರಾಯೋಜಿತ ಜನಜಾಗೃತಿ ಕಾರ್ಯಕ್ರಮ ಅದು ಆರೋಗ್ಯ ನೈರ್ಮಲ್ಯ ವಿಚಾರವಿರಲಿ, ಕುಡಿತದ ವ್ಯಸನ, ರಸ್ತೆ ಸುರಕ್ಷತೆ ಕೌಟುಂಬಿಕ ಸಾಮರಸ್ಯ ಹೀಗೆ ಎಂತಹದೇ ವಿಷಯದ ವಿಚಾರ ಇರಲಿ ಅದಕ್ಕೆ ಸ್ಥಳದಲ್ಲೇ ರಾಗ ತಾಳ ಮೇಳೈಸಿ ಹಾಡುವ ಸಾಮಾರ್ಥ್ಯ ಅವರಲ್ಲಿತ್ತು. ಅಂದಿನ ದಿನಗಳಲ್ಲಿ ನಾನು ಗೊರೂರಿನಲ್ಲಿ ಕಟ್ಟಿ ಬೆಳೆಸಿದ್ದ ಕನ್ನಡ ಕಲಾ ಸಾಹಿತ್ಯ ವೇದಿಕೆ ವೃಂದ ಜಿಲ್ಲೆಯ ನಾಟಕ ಸ್ಫರ್ಧೆಗಳಲ್ಲಿ ಹಾಸನ ಜಾತ್ರೆ, ಹೊಳೆನರಸೀಪುರ ಸಕಲೇಶಪುರ ಜಾತ್ರೆ, ಗಣೇಶೋತ್ಸವಗಳಲ್ಲಿ ನಮ್ಮ ನಾಟಕ ತಂಡದ ಹಿನ್ನೆಲೆ ಗಾಯಕರಾಗಿ ಬರುತ್ತಿದ್ದರು, ಹಾಡುತ್ತಿದ್ದರು. ನಾಟಕಕ್ಕೆ ಜನ ಸೇರಿಸಲು ಮೊದಲಿಗೆ ಬಾಬು ಅವರಿಗೆ ಹಾಡಲು ಅವಕಾಶ ನೀಡುತ್ತಿದ್ದೆ. ಅವರು ನನ್ನ ಊರು ಹಾಸನ ಶಿಲ್ಪಕಲೆಯ ಶಾಸನ ತಾವೇ ರಚಿಸಿದ್ದ ಈ ಹಾಡನ್ನು ಸಾವಿರಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಈ ಗೀತೆ ನಮ್ಮ ನಾಟಕಕ್ಕೂ ಮೊದಲು ನಾವು ಮೇಕಪ್ ಮಾಡಿಕೊಳ್ಳಲು ಸಮಯ ಸಿಗಲು ಅನುಕೂಲವಾಗುತ್ತಿತ್ತು. ಮತ್ತು ನಾಟಕ ಆರಂಭಗೊಂಡಿರಬೇಕು ಎಂದು ಭಾವಿಸಿ ಜನ ಧಾವಿಸಿ
ಬರುತ್ತಿದ್ದರು. ಇನ್ನು ನಮ್ಮ ಹುಡುಗರು ಬಸ್ಸಿನಿಂದ ಇಳಿದ ಕೂಡಲೇ ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಜಾತ್ರೆ ಮಾಳ ಸುತ್ತುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದರು. ಆಗ ಬಾಬು ಅವರ ಕಂಚಿನ ಕಂಠದಿoದ ಬಾಬು ಮೈಕಿನಲ್ಲಿ ಹಾಡುತ್ತಿದ್ದನ್ನು ಕೇಳಿಸಿಕೊಂಡು ಆಗ ಕಲಾವಿದರು ನಿಧಾನವಾಗಿ ಬಂದು ಸಾರಿ ಸಾರ್,. ಎಂದು ಪರದೆ ಹಿಂದೆ ಸರಿಯುತ್ತಿದ್ದರು. ಈ ಅನುಭವ ಹಿನ್ನಲೆಯಲ್ಲೇ ನಾನು ತೋಳ ಬಂತು ತೋಳ ಬರೆದು ನಾಟಕವಾಡಿಸಿ ಅದೀಗ ಪುಸ್ತಕವಾಗಿ ಓದುಗರ ಕ್ಕೆ ಸೇರಿದೆ. ಇಂದು ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿರುವ ಕೆ.ಆರ್.ಪೇಟೆ ಶಿವರಾಜ್ ಅಂದು ನಮ್ಮ ತಂಡದ ನಟನಾಗಿ ರಂಗದ ಮೇಲೆ ಬಂದಾಗ ಆಗಿನ್ನು ಕಾಲೇಜು ವಿದ್ಯಾರ್ಥಿ. ಬಾಬು ಅವರು ನನ್ನ ಕವನಗಳಿಗೆ ರಾಗ ಕಟ್ಟಿ ವೇದಿಕೆಗಳಲ್ಲಿ ಹಾಡಿದ್ದಾರೆ. ಇವರು ವೇದಿಕೆಯಲ್ಲಿ ಏಕಪಾತ್ರಾಭಿನಯವನ್ನು ಮಾಡಿ ಜನರನ್ನು ರಂಜಿಸಿದ್ದಾರೆ. ಅನೇಕ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಇವರಿಗೆ ಕುಂಟುನಾಯಿ, ವ್ಯವಸ್ಥೆ, ಆತ್ಮ ಯಾವ ಕುಲ ಜೀವ ಕುಲ ನಾಟಕಗಳು ಹೆಸರು ತಂದಿದ್ದವು.
ವಾರ್ತಾ ಇಲಾಖೆ ಆರೋಗ್ಯ ಇಲಾಖೆಗಳು ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಆಂದೋಲನದ ಕಲಾಜಾಥದಲ್ಲಿ ಪಾಲ್ಗೊಂಡು ಬಾಬು ದಮಡಿ ಬಾರಿಸಿಕೊಂಡು ಹಾಡಿದ್ದಾರೆ. ಇವರ ಕಲಾ ಪ್ರತಿಭೆ ಗುರುತಿಸಿ ಜಿಲ್ಲೆಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಆದರೆ ಇಂತಹ ಮಹಾನ್ ಕಲಾವಿದನಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಡೆಗೂ ಸಿಗದೇ ಇದ್ದಿದ್ದು ವಿಷಾದನೀಯ. ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ಬಾಬು ಮುಂದಿನ ವರ್ಷ ನೋಡೋಣ ಬಿಡಿ ಅನಂತರಾಜು ಎಂದು ನಿರಾಸೆಯಿಂದಲೇ ಹೇಳುತ್ತಿದ್ದರು. ಎರಡು ವರ್ಷದ ಹಿಂದೆ ಅರ್ಜಿ ಹಾಕಿದ್ದರು. ಪ್ರಶಸ್ತಿ ಸಿಗದೆ ನಿರಾಶರಾಗಿದ್ದರು. ಕಲಾವಿದರ ಮಾಶಸನಕ್ಕೂ ಅರ್ಜಿ ಹಾಕಲಾಗಲಿಲ್ಲ. ಜನ್ಮ ದಿನಾಂಕ ಪ್ರಮಾಣ ಪತ್ರ (ಡೇಟ್ ಆಫ್ ಬರ್ತ್ ಫಿಕೇಟ್ ) ಬೇಕಾಗಿತ್ತು ಎ೦ದು ಕಾಣುತ್ತದೆ. ಅದು ಅವರಲ್ಲಿ ಇರಲಿಲ್ಲವೇನೋ. ಅದಕ್ಕಾಗಿ ಅವರು ಅನಂತರಾಜು, ನೀವು ನನ್ನ ಪರಿಚಯ ಲೇಖನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದಿದ್ದಿರಲ್ಲಾ ಅದರ ಕಟಿಂಗ್ಸ್ ನಿಮ್ಮ ಫೈಲ್ ನಲ್ಲಿ ಇದ್ದರೆ ಹುಡುಕಿಕೊಡಿ ಎಂದರು. ನಾನು ಸಾಮಾನ್ಯವಾಗಿ ಕಲಾವಿದರ ಪರಿಚಯ ಲೇಖನ ಬರೆಯುವಾಗ ಅವರ ಜನ್ಮ ದಿನಾಂಕ ಕೇಳಿ ದಾಖಲಿಸುತ್ತಿದ್ದೆ. ಕೆಲವರಿಗೆ ಅವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ. ಈಗಿನಂತೆ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಆಸ್ಪತ್ರೆ, ನಗರಸಭೆಯಿಂದ ಪಡೆದ ಜನನ ಪ್ರಮಾಣ ಕೂಡಲೇಬೇಕೆಂಬ ಕಡ್ಡಾಯವಿರಲಿಲ್ಲ. ಇದಕ್ಕೆ ಉದಾಹರಣೆ ಹೇಳಬೇಕೆಂದರೆ ಸಾಹಿತಿಗಳು ನಮ್ಮ ಚಿಕ್ಕಪ್ಪನವರು ಆದ ಗೊರೂರು ಸೋಮಶೇಖರ್ ತಮ್ಮ ಆತ್ಮಕಥೆ ಪುಸ್ತಕ ಗೊರೂರು ನೆನಪುಗಳಲ್ಲಿ ಬರೆದಿದ್ದಾರೆ.
ಮಹಾಲಯ ಅಮಾವಾಸೆಯ ದಿನ ಹಬ್ಬ ಮುಗಿಸಿ ನಾನು ನನ್ನ ಸಹೋದರ ಲೇಖಕ ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಸಂಜೆ ಎಲೆ ಅಡಿಕೆ ತಿನ್ನುತ್ತಾ ಸಾಹಿತ್ಯ ಪರಿಷತ್ತು ಚುನಾವಣೆ, ನಾಟಕ ವಿಚಾರವಾಗಿ ಮಾತನಾಡುತ್ತಾ ಬಾಬು ವಿಷಯ ಮಧ್ಯೆ ಬಂತು. ಆಗಲೇ ನಾನು ಬಾಬು ಅವರಿಗೆ ಈ ಬಾರಿ ಅರ್ಜಿ ಹಾಕಿ ಬಾಬು ಎಂದು ಮೆಸೇಜ್ ಮಾಡಿದ್ದೆ. ಮಾರನೇ ದಿನ ಬೆಳಿಗ್ಗೆ ಕಾದಂಬರಿಗಾರ್ತಿ ಶ್ರೀಮತಿ ಶೈಲಜಾ ಸುರೇಶ್ ಮೇಡಂ ಬಾಬು ನಿಧನ ಸುದ್ಧಿ ವ್ಯಾಟ್ಸಪ್ ಮಾಡಿದ್ದರು. ಇದು ಆ ಕ್ಷಣಕ್ಕೆ ನನಗೆ ಶಾಕಿಂಗ್ ನ್ಯೂಸ್. ಆಗ ನಮ್ಮ ವಾರ್ಡಿನ ಕಸದ ಗಾಡಿ ನಮ್ಮ ಮನೆ ಕಡೆ ಬರುತ್ತಿರಲು ಆ ಗಾಡಿಯ ಮೈಕಿನಿಂದ ಬಾಬು ಅವರ ಜನಪ್ರಿಯ ಹಾಡು ನನ್ನ ಊರು ಹಾಸನ ಶಿಲ್ಪ ಕಲೆಯ ಶಾಸನ ಕೇಳಿ ಬರುತ್ತಿತ್ತು. ಈ ಹಾಡು ಮಲಗಿದ್ದ ನಮ್ಮನ್ನು ಹಿಂದೆಲ್ಲಾ ಬಡಿದೆಬ್ಬಿಸುತ್ತಿತ್ತು. ಬಾಬು ಈ ಆಡಿಯೋ ಎಲ್ಲಿ ಮಾಡಿಸಿದ್ದೀರಿ ಎಂದು ಹಿಂದೊಮ್ಮೆ ಕೇಳಿದ್ದೆ. ಅನಂತರಾಜು, ನಿಜವಾಗಿಯೂ ಈ ಹಾಡು ನಾನು ಹಾಡಿದ್ದಲ್ಲ ಗಾಯಕ ಭಾನುಮೋಶ್ರೀಯವರು ಹಾಡಿದ್ದು ಎಂದಿದ್ದರು. ಬಾಬು ಅವರದೇ ಸ್ವರ ಸಾಮಾರ್ಥ್ಯದಲ್ಲಿ ಈ ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು.
ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.





ಚೆನ್ನಾಗಿದೆ ಕವಿಗಳೆ… ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು..!