ಕಾವ್ಯ ಸಂಗಾತಿ
ಸ್ವಾತಂತ್ರ್ಯೋತ್ಸವದ ಸಂಭ್ರಮ
ಕಾವ್ಯದ ವಿವಿಧ ಪ್ರಕಾರಗಳಲ್ಲಿ …….
ಸುಜಾತಾ ರವೀಶ್

ಆಗಸ್ಟ್ ೧೫ ಕ್ಕಾಗಿ ೧೫ ತರಹದ ಕಾವ್ಯ ಪ್ರಕಾರಗಳಲ್ಲಿ
೧. ಕವಿತೆ
*ಅಸ್ಮಿತೆಯ ಹಣತೆ*
ಇತಿಹಾಸದುದ್ದಕ್ಕೂ ಆಗಿರುವುದು ಅಮರ
ಸ್ವಾಭಿಮಾನ ದೇಶಭಕ್ತಿಗಾಗಿ ನಡೆದು ಸಮರ
ಅಂದಿಗೂ ಇಂದಿಗೂ ಎಂದಿಗೂ ಅಜರಾಮರ
ಅಸ್ಮಿತೆ ಉಳಿಸಿಕೊಳ್ವ ನಮ್ಮ ಯತ್ನ ನಿರಂತರ
ಪರಕೀಯರ ಆಕ್ರಮಣದೆದುರಲಿ ವೀರತೆ
ನಮ್ಮತನದ ಗೆಲುವಿಗಾಗಿ ಮೆರೆವ ಘನತೆ
ಉರಿಸುತ್ತಲೇ ಇದ್ದೇವೆ ಅಭಿಮಾನದ ಹಣತೆ
ಸ್ವಾತಂತ್ರ್ಯದ ಉಳಿವಿಗಾಗಿ ಸತತ ಕ್ಷಮತೆ
ಸ್ವರಾಜ್ಯ ಪಡೆದಾಗಿನ ನಮ್ಮ ನಿಜ ಗೆಲುವು
ಪ್ರಜಾಪ್ರಭುತ್ವದ ದಾರಿಯಲ್ಲಿನ ಪಯಣವು
ಸುಗಮವೆನಿಸಿರೆ ಕಾರಣ ನಮ್ಮ ಸ್ವಾಭಿಮಾನ
ಪ್ರಜ್ವಲಿಸಿ ಬೆಳಗುತ್ತಲಿರುವೀ ದೇಶಾಭಿಮಾನ
ಭವ್ಯ ಸಂಸ್ಕೃತಿ ಪರಂಪರೆಗಳ ನಮ್ಮ ನಾಡು
ಶೌರ್ಯ ಸಾಕಾರವಾದ ರಾಷ್ಟ್ರಪ್ರೇಮದ ಬೀಡು
ಜಾತಿಧರ್ಮ ಪಂಥಗಳು ಭಿನ್ನವಿದ್ದರೂ ಪರಸ್ಪರ
ತಾಯಿ ಭಾರತಿಯ ಆರಾಧನೆಯಿದು ನಿರಂತರ
*೨. ಸುನೀತ (ಸಾನೆಟ್)*
*ಸ್ವಾತಂತ್ರ್ಯ ಸಂಭ್ರಮ*
ಶ್ರಾವಣದ ಸಿರಿ ವರ್ಷದ ಸಂಭ್ರಮ
ಜೊತೆಗೆ ಸ್ವಾತಂತ್ರ್ಯ ಹಬ್ಬದ ವಿಭ್ರಮ
ಚಳಿ ಮಳೆಯ ಲೆಕ್ಕಿಸದಲೆ ಜನಸಮೂಹ
ರಾಷ್ಟ್ರಧ್ವಜವ ಹಾರಿಸುತಿಹ ಉತ್ಸಾಹ
ಮನದೊಳಗೆ ಬೆಳಗುತಲಿದೆ ದೇಶಭಕ್ತಿ
ಮೈಯ ತುಂಬೆಲ್ಲಾ ತಿರಂಗದ ಸ್ಫೂರ್ತಿ
ಬೆಳಗುತಿದೆ ರಾಷ್ಟ್ರಪ್ರೇಮದ ಜ್ಯೋತಿ
ಹರ್ಷದಲಿ ಎದೆತುಂಬಿ ತಂದಿದೆ ನವಶಕ್ತಿ
ಹಿರಿಯ ನಾಗರಿಕರಲ್ಲಿ ತುಂಬಿರುವೀ ಕೆಚ್ಚು
ಮೂಡಬೇಕಿದೆ ಕಿರಿಯರಲೂ ಅಂಥದ್ದೇ ಕಿಚ್ಚು
ಹೊಸಚಿಗುರು ಹಳೆಬೇರಿನ ಮರ ಸೊಗಸು
ಎಲ್ಲರೂ ಕೈಜೋಡಿಸೆ ಪ್ರಗತಿಗಮ್ಯ ಸಲೀಸು
ದೇಶಪ್ರಗತಿಯೆಡೆ ನೆಡುತಲಿರಲಿ ನೋಟ
ಮೆರೆಸುತಲಿ ಭರವಸೆಯ ಹೊಸ ಹೂಟ
*೩. ಗಝಲ್*
*ಗಝಲ್*
ಸನಾತನ ಪರಂಪರೆಯ ದೈದೀಪ್ಯತೆಯ ಪ್ರತಿರೂಪ ನಮ್ಮ ದೇಶ
ವಿನೂತನ ಆಲೋಚನೆಯ ಅನ್ವೇಷಣೆಗಳ ನಿಜರೂಪ ನಮ್ಮ ದೇಶ
ಸಂಸ್ಕೃತಿ ಹಾದಿಗೆ ಸೇರಿಸು ಹೆಜ್ಜೆ ವಿಶ್ವಗುರು ಆಗಲಿ ಭಾರತ
ಸಂಪ್ರದಾಯ ಸನ್ಮಾರ್ಗದಲಿ ಅಡಿಯಿಡುವ ಅಪರೂಪ ನಮ್ಮ ದೇಶ
ವಿಜ್ಞಾನದ ಹೊಂಬೆಳಕಲಿ ಮಿನುಗುವ ಜ್ಞಾನ ಭೂಮಿ ಅನವರತ
ವೇದಾಂತದ ಸಂಸರ್ಗತೆಯಲಿ ಬೆಳಗುವ ಅಗ್ನಿ ರೂಪ ನಮ್ಮ ದೇಶ
ಗೀತಾಚಾರ್ಯ ಬೋಧನೆಯ ಸಾರಾಂಶದ ಕರ್ಮಭೂಮಿ ನಮ್ಮದು
ಆಧ್ಯಾತ್ಮಿಕತೆ ತೇಜದಲಿ ಪ್ರಜ್ವಲಿಸುವ ದಿವ್ಯ ರೂಪ ನಮ್ಮ ದೇಶ
ಶತಮಾನಗಳ ಚರಿತೆಯ ವೈಭವದ ಪುಣ್ಯಭೂಮಿ ಯಿದು
ಸುಜಿಯ ಜೀವನದ ಅವಿಭಾಜ್ಯ ಭವ್ಯತೆಯ ಸುಸ್ವರೂಪ ನಮ್ಮ ದೇಶ
*೪. ಚುಟುಕ*
*ಹೋರಾಟ*
ಪರಕೀಯರು ನಡೆಸಿದರು ಕುತಂತ್ರ
ಹಾಳುಗೆಡವಿ ರಾಷ್ಟ್ರವಾಯ್ತು ಅತಂತ್ರ
ಮೊಳಗಿತು ವಂದೇ ಮಾತರಂ ಮಂತ್ರ
ಹೋರಾಟ ನಡೆಸಿ ನಾವಾದೆವು ಸ್ವತಂತ್ರ
*೫.ರುಬಾಯಿ*
*ರುಬಾಯಿ*
ಮೂಡಿಸುತಿದೆ ಮನದಿ ಹೊಸ ಚೇತನ
ಬಾನಿನಲಿ ಮೆರೆದಿದೆ ತ್ರಿವರ್ಣ ಕೇತನ
ಗೌರವದಿ ತಲೆಬಾಗಿ ಸಲ್ಲಿಸಿರಿ ನಮನವನು
ಕಾಣಬೇಕು ಇದರಲ್ಲಿ ತಾನೆ ನಮ್ಮತನ?
*೬. ಮುಕ್ತಕ*
ಬಿಡುಗಡೆಯ ಬಯಸುತಲಿ ಪರರ ದಾಸ್ಯವ ನೀಗೆ
ಉಡದ ಬಿಗಿ ಹಿಡಿತದಿಂ ಪಾರಾಗಲೋಸುಗವೆ
ನಡೆಸಿದರು ಚಳುವಳಿಯ ಶಾಂತಿಪಥ ಹಿಡಿಯುತಲಿ
ಕೊಡಿಸಿದರು ಸ್ವಾತಂತ್ರ್ಯ_ ನರಹರಿಸುತೆ
*೭. ತ್ರಿಪದಿ ಮುಕ್ತಕ*
ಭಾರತಾಂಬೆಯ ದಿವ್ಯ ಚರಿತೆಯನು ಪಾಡೋಣ
ಪಾರತಂತ್ರ್ಯದ ದಾಸ್ಯ ಸಂಕೋಲೆ ಬಿಡಿಸಿರುವ
ವೀರಮಂದಿಗೆ ನಮಿಸಿ_ ಮೂಢಾತ್ಮ
*೮ ಪಂಚದಳ ಮುಕ್ತಕ*
ಒಮ್ಮತದಿ ಎಲ್ಲರೂ ಒಂದುಗೂಡುತಲಿ ನೀವು
ಹೆಮ್ಮೆಯಲಿ ರಾಷ್ಟ್ರದಾ ಕೇತನವ ಹಾರಿಸಿರಿ
ಅಮ್ಮ ಭಾರತಿಗೀಗ ನಮನವನು ಸಲಿಸುತಲಿ
ನಮ್ಮ ದೇಶದ ಮಾನ ಕಾಪಾಡಿ ಮೆರೆಸುತಲಿ
ನಿಮ್ಮತನ ಉಳಿಸಿಕೊಳಿ_ ನರಹರಿ ಸುತೆ
*ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್
ಬಲ್ಲುದೇ ಸ್ವಾತಂತ್ರ್ಯದ
ನೆಲೆ ಬೆಲೆಯ?
*೧೦_ ಟಂಕಾ*
*ಧ್ವಜಾರೋಹಣ*
ತ್ರಿವರ್ಣ ಧ್ವಜ
ಹಾರುತಿರೆ ಬಾನಲಿ
ಬಲು ಸುಂದರ
ನೋಡಲು ಕಂಗಳಿಗೆ
ಮನಕೆ ಆನಂದವು
*೧೧.ಸೆಡೋಕಾ*
ಬನ್ನಿ ಮಿತ್ರರೇ
ಎಲ್ಲಾ ಒಂದುಗೂಡುವ
ಧರ್ಮ ಭಾಷೆ ಭೇದವ
ಮೀರಿ ಸಾಗುವ
ಜಾತಿ ವರ್ಗ ಎಲ್ಲೆಯ
ನಾವೊಂದೇ ಎಂದೆನ್ನುವ
*೧೨. ತನಗ*
ಮನದೆ ದೇಶಭಕ್ತಿ
ತಂದಿದೆ ನವಶಕ್ತಿ
ರಾಷ್ಟ್ರಪ್ರೇಮದ ಜ್ಯೋತಿ
ತುಂಬಿದೆ ಹೊಸ ಸ್ಫೂರ್ತಿ
*೧೩ ಹನಿಗವನ*
ಇಂದಿನ ದಿನ
ನಮ್ಮ ದೇಶ
ನಮ್ಮ ಧ್ವಜ
ನಮ್ಮತನ ಮೆರೆಸುವ
ಪುಣ್ಯದಿನವಿಂದು
ಹಾಡಿ ನಲಿಯಿರೆಲ್ಲ
*೧೪.ಫಿಬೋನಾಚಿ*
*ಸ್ವಾತಂತ್ರ್ಯೋತ್ಸವ*
ಓ
ಹೋ
ಬಂತು
ಸುದಿನ
ಸಂಭ್ರಮೋತ್ಸಾಹ
ತಂದಿದೆ ಮಹದುತ್ಸವ
ಸ್ವಾತಂತ್ರ್ಯ ಅಮೃತೋತ್ಸವ ಆಚರಿಸುವ
ದೇಶಭಕ್ತಿ ಮೆರೆದು ಪ್ರಗತಿ ಪಥದಿ ಮುಂದೆ ನಾವ್ ನಡೆಯುವ
*೧೫_ ಗಿಣಿ ಕವನ*
*ಸ್ವಾತಂತ್ರ್ಯ*
ಇನ್ನಿಲ್ಲವಾಯ್ತು ಪರತಂತ್ರ
ಮೊಳಗಿ ವಂದೇಮಾತರಂ ಮಂತ್ರ
ಸುಜಾತಾ ರವೀಶ್



