ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ತಾಯ್ನಾಡಿನ ರಕ್ಷಣೆಗಾಗಿ ಆಕೆಯ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಜನ ಪ್ರಾಣ ತೆತ್ತಿರುವ ಸ್ವಾತಂತ್ರ್ಯ ಸೇನಾನಿಗಳ ಉಗ್ರ ಹೋರಾಟ ಮತ್ತು ಹಲವಾರು ಶಾಂತಿಯುತ ಹೋರಾಟಗಳ ಚಳುವಳಿಗಳ ಫಲವಾಗಿ
ನಾವು ಗಳಿಸಿಕೊಂಡ ಸ್ವಾತಂತ್ರ್ಯಕ್ಕೆ ಇದೀಗ 78ರ ಹರಯ.

ಇಷ್ಟು ವರ್ಷಗಳ ಸ್ವತಂತ್ರ ಭಾರತದಲ್ಲಿ ನಾವು ಗಳಿಸಿದ್ದೇನು?.ಉಳಿಸಿದ್ದೇನು? ದೇಶಕ್ಕೆ ಕೊಟ್ಟದ್ದೇನು? ದೇಶದಿಂದ ಪಡೆದುಕೊಂಡದ್ದು ಏನನ್ನು ಎಂದು ಯೋಚಿಸಿದಾಗ ಒಂದೆಡೆ ಹೆಮ್ಮೆಯ ಭಾವ ಸ್ಫುರಿಸಿದರೆ ಮತ್ತೊಂದೆಡೆ ವಿಷಾದ ಮಡುಗಟ್ಟುತ್ತದೆ.

‘ದೇ ದೀ ಹಮೆ ಆಜಾದಿ.. ಬಿನಾ ಖಡ್ಗ ಬಿನಾ ಡಾಲ್: ಎಂಬ ಹಾಡನ್ನು ಹಾಡುವ ಮೂಲಕ ನಮ್ಮ ರಾಷ್ಟ್ರಪಿತನನ್ನು ನೆನೆಸಿಕೊಳ್ಳುವ ನಾವುಗಳು ಗಾಂಧೀಜಿಯವರು ಹಾಕಿಕೊಟ್ಟ ಸತ್ಯ ಅಹಿಂಸೆ ಮತ್ತು ಶಾಂತಿಯ ಮಾರ್ಗದಲ್ಲಿ ನಡೆದು ಸರ್ವಧರ್ಮ ಸಾಮರಸ್ಯವನ್ನು, ಬಂಧುತ್ವವನ್ನು ತೋರುವ ಅಖಂಡ ಭಾರತವನ್ನು ಸೃಷ್ಟಿಸಿದ್ದೇವೆಯೇ?! ಅವರು ಕಂಡ  ರಾಮ ರಾಜ್ಯದ ಕನಸನ್ನು ನನಸು ಮಾಡಿದ್ದೇವೆಯೇ ಎಂದರೆ… ಉಹೂಂ ಕನಸಿನಲ್ಲಿಯೂ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು.

ವಿಶ್ವದ ನೂರಾರು ದೇಶಗಳ ರಾಜ್ಯ ನೀತಿಗಳನ್ನು ಅರಿತು ಅರಗಿಸಿಕೊಂಡು  ಭಾರತದಂತಹ ಬಹುದೊಡ್ಡ ಪ್ರಜಾತಂತ್ರ ದೇಶಕ್ಕೆ ಅತ್ಯವಶ್ಯಕವಾದ ಸಂವಿಧಾನವನ್ನು ರೂಪಿಸಿಕೊಟ್ಟ ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣಗೊಂಡಿದೆಯೇ ಎಂದರೆ…. ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು.

 ನಿಜ, ಭಾರತ ಹಿಂದೆಂದಿಗಿಂತಲೂ ಹೆಚ್ಚು ಆರ್ಥಿಕವಾಗಿ  ಬಲಿಷ್ಠವಾಗಿದೆ…. ಆದರೆ ಬಡತನ, ನಿರುದ್ಯೋಗ, ಸುಸ್ಥಿರ ಬದುಕು ಇನ್ನೂ ಕನಸಾಗಿದೆ. ಮೂರು ಹೊತ್ತಿನ ಊಟ ಬಿಡಿ…ಒಪ್ಪತ್ತಿನ ಊಟಕ್ಕೂ ತತ್ವಾರವಾದ ಜನರ ಬವಣೆಗಳು ನಮ್ಮ ಕಣ್ಣ ಮುಂದೆ ಇವೆ. ತಲೆಯ ಮೇಲೆ ಸೂರಿಲ್ಲದ, ಇದ್ದರೂ ಜೋರಾದ ಗಾಳಿ, ಬಿರುಸಾದ ಮಳೆಗೆ ಯಾವಾಗ ಬೀಳುತ್ತದೆ ಎಂಬ ಆತಂಕವನ್ನು ಉಂಟು ಮಾಡುವ, ಹಾಗೊಂದು ವೇಳೆ ಬಿದ್ದರೆ ಮುಂದೇನು? ಎಂದು ಭವಿಷ್ಯದ ಕುರಿತು ಚಿಂತಿಸುವ ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಕೆಲವಷ್ಟು ವಲಯಗಳಲ್ಲಿ ಆರ್ಥಿಕತೆ ತನ್ನ ಛಾಪನ್ನು ಮೂಡಿಸಿದ್ದರೂ ಕೂಡ ನಾವಿನ್ನೂ ಮೂಲಭೂತ ಸೌಕರ್ಯಗಳನ್ನು ಹೊಂದಲು ಒದ್ದಾಡುತ್ತಿದ್ದೇವೆ.

ಜನಸಂಖ್ಯೆಯ ದೃಷ್ಟಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿಯೇ ನಿಲ್ಲುವ ನಾವು ಕಾರ್ಯಶೀಲತೆಯ ದೃಷ್ಟಿಯಲ್ಲಿ ನೋಡಿದಾಗ ಬಹಳಷ್ಟು ಹಿಂದೆ ಉಳಿದಿದ್ದೇವೆ. ನಮ್ಮನ್ನು ಬೃಹದಾಕಾರವಾಗಿ ಕಾಡುವ ಸಮಸ್ಯೆಗಳು ಹತ್ತು ಹಲವು. ಯುವಕರು, ಮಧ್ಯಮ ವಯಸ್ಸಿನವರು, ಮುದುಕರು ಎನ್ನದೆ ಎಲ್ಲರೂ ಕೂಡ ತಮ್ಮ ಕೈಯನ್ನು ಕೋಳವನ್ನಾಗಿಸಿಕೊಂಡು ದಿನದ ಹಲವಾರು ಗಂಟೆ ಮೊಬೈಲ್ನ ಮಾಯೆಯಲ್ಲಿ ಸಿಲುಕಿದ್ದಾರೆ.
ಪರಿಣಾಮವಾಗಿ ನೀರ್ವೀರ್ಯತೆ ನಮ್ಮನ್ನು ಆಳುತ್ತಿದೆ.

ಶೈಕ್ಷಣಿಕವಾಗಿ ನಾವು ಸಾಕ್ಷರರಾಗುತ್ತಿದ್ದೇವೆ ನಿಜ…. ಆದರೆ ವಿದ್ಯೆ?. ಸಾವಿರಾರು ವರ್ಷಗಳಿಂದ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮೌಲ್ಯಗಳು ನಶಿಸುತ್ತಿವೆ. ಹಲವಾರು ಮನೆಗಳು ಸಿರಿವಂತಿಕೆಯಿಂದ, ಪೀಠೋಪಕರಣಗಳಿಂದ ತುಂಬಿ ತುಳುಕುತ್ತಿದ್ದರೂ ಮನಸ್ಸು ದ್ವೇಷ ಅಸೂಯೆ ಅಸಹನೆಗಳನ್ನು ಹೊಂದಿ ಪ್ರೀತಿ ವಿಶ್ವಾಸ ಬಾಂಧವ್ಯ ಬಂಧುತ್ವ ಗಳನ್ನು ಹೊರಹಾಕಿವೆ. “ವಸುದೈವ ಕುಟುಂಬಕಂ” ಎಂದು ಜಗತ್ತಿಗೆ ಸಾರಿದ ನಮ್ಮ ದೇಶದಲ್ಲಿ ಕೌಟುಂಬಿಕ ಸಾಮರಸ್ಯ ನಶಿಸುತ್ತಿದೆ. ನೆರೆಹೊರೆಯವರನ್ನು ಬಂಧು ಬಾಂಧವರಂತೆ ಕಾಣುತ್ತಿದ್ದ ನಾವೀಗ ಮನೆಯ ಸದಸ್ಯರನ್ನೇ ನೀವ್ಯಾರು? ಎಂಬಂತೆ ಬದುಕುತ್ತಿದ್ದೇವೆ.ಮನೆ ಮನಗಳು ಛಿದ್ರವಾಗುತ್ತಿವೆ.

 ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ’ ಎಂದು ಪಶು ಪಕ್ಷಿಗಳು  ಕೂಡ ಹಾಡಿ ಹೊಗಳಿರುವ ನಮ್ಮ ದೇಶದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಸಾಮಾಜಿಕವಾಗಿ ಒಂದಾಗಿ ಬಾಳಬೇಕಿರುವ, ಸರ್ವಧರ್ಮ ಸಮನ್ವಯದ ನಾಡು ಇದೀಗ ಜಾತಿಯ ವಿಷ ಬೀಜಗಳನ್ನು ಬಿತ್ತುವ, ಧರ್ಮಾಂಧತೆಯನ್ನು  ತುಂಬುವ ನಾಡಾಗಿ ಪರಿವರ್ತನೆಯಾಗಿದೆ.

ಸಾಮಾಜಿಕ ಸಮಾನತೆ ಎನ್ನುವುದನ್ನು ಪುಸ್ತಕಗಳಲ್ಲಿ ಮಾತ್ರ ಕಾಣಬಹುದು…. ಉಳ್ಳವರು ಮತ್ತಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು ಬಡವರಾಗುವ ದೈನೇಸಿ ಸ್ಥಿತಿ ನಮ್ಮದಾಗಿದೆ. ಕೆಲವರಿಗೆ ತಿನ್ನಲು ಸಾಧ್ಯವಾಗದಷ್ಟು ಆಹಾರ ಮಿಕ್ಕಿ ತಿಪ್ಪೆ ಸೇರಿದರೆ ಆ ತಿಪ್ಪೆಯಲ್ಲಿ ಕುಳಿತು ಚೆಲ್ಲಿದ ಆಹಾರವನ್ನು ತಿನ್ನಲು ಬರುವ ನಾಯಿಗಳನ್ನು ಓಡಿಸಿ ತಾವು ತಿನ್ನುವ ಸ್ಥಿತಿಯಲ್ಲಿರುವ ಜನರು ನಮ್ಮಲ್ಲಿದ್ದಾರೆ.

ಬಡ ಜನರ ಅನುಕೂಲಕ್ಕಾಗಿ ಸರಕಾರಗಳು ಕೊಡ ಮಾಡುವ ಯೋಜನೆಗಳು ನಿಜವಾಗಿಯೂ ಅವಶ್ಯಕತೆ ಉಳ್ಳವರನ್ನು ತಲುಪುವ ಮುನ್ನವೇ ಮಧ್ಯವರ್ತಿಗಳ ಮತ್ತು ಖೊಟ್ಟಿ ಬಡವರ ಕೈ ಸೇರುತ್ತಿದ್ದು  ಬಹಳಷ್ಟು ಬಾರಿ ಈ ಯೋಜನೆಯ ಫಲಾನುಭವಿಗಳು ಕನ್ನಡಿಯಲ್ಲಿನ ಗಂಟಿನಂತೆ ಈ ಸೌಲಭ್ಯಗಳಿಗಾಗಿ ಎದುರು ನೋಡುವುದೇ ಆಗಿದ್ದು ನೀರಿನಲ್ಲಿ ಹೋಮ ಮಾಡಿದಂತೆ ನಿಷ್ಪ್ರಯೋಜಕವಾಗಿವೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವ್ಯವಸ್ಥೆಯು  ಸಾಕಷ್ಟು ಹೆಣಗಾಡುತ್ತಿದ್ದರೂ ಕೂಡ ಆಗಾಗ ಅಲ್ಲಲ್ಲಿ ಜಾತಿ, ಮತ, ಪಂಥ, ಗುಂಪುಗಾರಿಕೆಗಳ ಕಾರಣ ಜನರ ಮಾನ, ಜೀವ ಹಾನಿ ಆಗುತ್ತಿದೆ. ಸರ್ವಧರ್ಮ ಸಮಭಾವದಿಂದ ನೋಡುತ್ತಿದ್ದ ದೇಶದಲ್ಲಿ ಇಂದು ಪ್ರತಿಯೊಂದು ಜಾತಿಗಳಲ್ಲಿನ  ಒಳ ರಾಜಕೀಯಗಳು ಭಾವೈಕ್ಯತೆಯ ಬದುಕನ್ನು ಶಿಥಿಲಗೊಳಿಸಿವೆ. ಹೆಣ್ಣನ್ನು ದೇವತೆ ಎಂದು ಪೂಜಿಸುತ್ತಿದ್ದ ನಾಡಿನಲ್ಲಿ ಇಂದು ಹಾಡು ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆಗೈಯುತ್ತಿದ್ದಾರೆ.

ಬಹುತೇಕ ಶಿಕ್ಷಣವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದ ಪರಿಣಾಮವಾಗಿ ಉನ್ನತ ಶಿಕ್ಷಣ ಎಂಬುದು ಉಳ್ಳವರ ಸ್ವತ್ತಾಗಿದ್ದು, ಬಡವರಿಗೆ ಗಗನ ಕುಸುಮವಾಗಿದೆ. ಉದ್ಯೋಗಾಧಾರಿತ ಶಿಕ್ಷಣಗಳು ದೊರೆಯದೆ ಇರುವ ಕಾರಣ ನಮ್ಮಲ್ಲಿ ಪದವೀಧರರು ಇದ್ದರೂ ಅವರಲ್ಲಿ ಇರಬೇಕಾದ ಅವಶ್ಯಕ ಜಾಣ್ಮೆ, ಕಾರ್ಯಶೀಲತೆ ಕಣ್ಮರೆಯಾಗಿದ್ದು ಒಬ್ಬರೇ ಮಾಡಬಹುದಾದ ಕೆಲಸವನ್ನು ಹತ್ತಾರು ಜನರು ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಗುಲಾಮಿ ಪ್ರವೃತ್ತಿಯನ್ನು ಹೊಂದಿರುವ ಜನರು ಉದ್ಯೋಗಕ್ಕಾಗಿ ಅಲೆಯುತ್ತಾರೆಯೇ ಹೊರತು ಉದ್ಯೋಗವನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದ್ದಾರೆ.

ಐತಿಹಾಸಿಕವಾಗಿ ಸಮೃದ್ಧವಾಗಿರುವ ನಮ್ಮ ಇತಿಹಾಸವನ್ನು, ಶೈಕ್ಷಣಿಕ ಜ್ಞಾನದ ವ್ಯವಸ್ಥೆಯನ್ನು ಹಿಂದಿಕ್ಕೆ  ಆಂಗ್ಲರು ಜಾರಿಗೆ ತಂದಂತಹ ಶೈಕ್ಷಣಿಕ ಪದ್ಧತಿಗೆ ಜೋತು ಬಿದ್ದಿರುವ ನಾವುಗಳು ಸೀಡ್ ಲೆಸ್ ಶಿಕ್ಷಕರನ್ನು  ಸೃಷ್ಟಿಸುತ್ತಿದ್ದೇವೆ.

ಜನರು ಶಿಕ್ಷಿತರಾಗಿದ್ದಾರೆ ನಿಜ, ಆದರೆ ಸುಶಿಕ್ಷಿತರಾಗಿಲ್ಲ. ನ್ಯಾಯ, ಧರ್ಮ, ಸತ್ಯ, ನಿಷ್ಠೆ, ಪ್ರೀತಿ, ಮಮತೆ ಮುಂತಾದ ಮೌಲ್ಯಗಳು ಇಂದಿನ ಜನತೆಯ ಪಾಲಿಗೆ ಹಳೆಯ ಸವಕಲು ನಾಣ್ಯದಂತಾಗಿದ್ದು ಆ ಜಾಗದಲ್ಲಿ ದ್ವೇಷ ಅಸೂಯೆ, ಮತ್ಸರಗಳು ತುಂಬಿ ಮೌಲ್ಯಗಳ ಅಪಮೌಲೀಕರಣವಾಗುತ್ತಿದೆ.

ರಾಮಾಯಣ ಮಹಾಭಾರತ, ಭಗವದ್ಗೀತೆಯಂತಹ ಮಹಾನ್ ಗ್ರಂಥಗಳನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದ
ದೇಶದಲ್ಲಿ ಕವಿ, ಸಾಹಿತಿ, ಕಲೆ ಮತ್ತು ಕಲಾವಿದರನ್ನು ಕೆಲಸಕ್ಕೆ ಬಾರದವರು ಎಂಬಂತೆ ಕಾಣಲಾಗುತ್ತಿದೆ. ಹೊಡಿ ಬಡಿ ಲಾಂಗು ಮಚ್ಚು ಹಿಂಸೆಯನ್ನು ವೈಭವೀಕರಿಸುವ  ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಂಡು ಅದರ ಹೀರೋಗಳು ಜನನಾಯಕರಾಗಿ ಮೆರೆದರೆ, ಸಮಾಜವನ್ನು ಕಟ್ಟುವ ಶಿಕ್ಷಕರು, ದೇಶವನ್ನು ಕಾಯುವ ಯೋಧರನ್ನು ಅಸಡ್ಡೆಯಿಂದ ಕಾಣಲಾಗುತ್ತದೆ.

ಶೈಕ್ಷಣಿಕ ಸೇವೆ ಮತ್ತು ವೈದ್ಯಕೀಯ ಸೇವೆಗಳು ಇದೀಗ ಕಾರ್ಪೊರೇಟ್ ರೂಪವನ್ನು ಪಡೆದುಕೊಂಡಿದ್ದು ಸೇವೆಯ ಬದಲಾಗಿ ದಂಧೆಗಳಾಗಿ ಪರಿವರ್ತನೆ ಹೊಂದಿವೆ. ರಕ್ತ ಬೀಜಾಸುರನ ಸಂತತಿಯಂತೆ ದೇಶವನ್ನೆಲ್ಲಾ ವ್ಯಾಪಿಸಿರುವ ಇವರ ಜಾಲವು ಜನರ ಶೈಕ್ಷಣಿಕ ಗುಣಮಟ್ಟವನ್ನು, ಆರೋಗ್ಯವನ್ನು ಕಟ್ಟಿಕೊಡುವ ಭರವಸೆಯನ್ನು ನೀಡುತ್ತವೆ, ನಿಜ ಆದರೆ ಅದರ ಜೊತೆಗೆ ಆರ್ಥಿಕ ದಿವಾಳಿತನಕ್ಕೆ ಕಾರಣವಾಗುತ್ತದೆ.

ಇನ್ನು ಕೃಷಿ ಪ್ರಧಾನವಾದ ಭಾರತ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ನಮ್ಮ ದೇಶದಲ್ಲಿ ರೈತನ ಬದುಕು ಮೂರಾಬಟ್ಟೆಯಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಮಳೆ, ಸಿಗದ ಬಿತ್ತನೆ ಬೀಜಗಳು ಗೊಬ್ಬರಗಳು ಬಿತ್ತಿದ್ದು ಬೆಳೆಯಾಗದೆ, ಬೆಳೆದದ್ದು ಸರಿಯಾಗಿ ಕೈಗೆ ಬರದೆ
 ಕೈಗೆ ಬಂದರೂ ದಲ್ಲಾಳಿಗಳ ಮಧ್ಯವರ್ತಿಗಳ ನಡುವೆ ಸಿಲುಕಿ ಮಾರಾಟ ಮಾಡಿದಾಗ ಹಿಡಿಯಷ್ಟು ಹಣವನ್ನು ಕೈಯಲ್ಲಿ ಮನೆಗೆ ಹಿಡಿದು ಬರುವ ರೈತ ತನ್ನ ಮನೆಯವರ ಕಣ್ಣಿನಲ್ಲಿಯೇ ಸಸಾರವಾಗುತ್ತಾನೆ. ದೇಶದ ಬೆನ್ನೆಲುಬು ರೈತ ಎಂದು ನಮ್ಮ ಜನ ಹಾಡಿ ಹೊಗಳುವರು ….ಆದರೆ ಆ ರೈತನ ಬೆನ್ನೆಲುಬೇ ಮುರಿದುಹೋಗಿದೆ.

 ಓಟು ಪಡೆಯುವ ಮುನ್ನ ಮತದಾರ ಪ್ರಭುವಿನ ಎದುರು ಶಿರಬಾಗಿ ನಮಿಸುವ ಮತ ಯಾಚಿಸುವ ನಾನು ನಿಮ್ಮವನು ಎಂದು ಹೇಳುವ ರಾಜಕಾರಣಿಗಳು ಒಂದೊಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದಾಗ ಇವನ್ಯಾರವ ಎಂದು ಕೇಳುವ, ಅಧಿಕಾರ ಚಲಾಯಿಸುವ, ತಮ್ಮ ಮುಂದಿನ ಮೂರು ತಲೆಮಾರಿನ ಜನರು ಕುಳಿತು ತಿನ್ನುವಷ್ಟು ಹಣವನ್ನು ಆಸ್ತಿಯನ್ನು ಸಂಗ್ರಹಿಸುವುದನ್ನು ನೋಡಿದರೆ ಅಸಹ್ಯವೆನಿಸುತ್ತದೆ.

‘ಶ್ವಾಸ ಬಿಟ್ಟರೂ ಆಶ್ವಾಸನೆ ಕೊಡುವುದನ್ನು ಬಿಡುವುದಿಲ್ಲ ಎಂಬಂತೆ ವರ್ತಿಸುವ ಜನ ಸೇವಕರು ಮುಂದೆ ಜನ ನಾಯಕರಾಗಿ ಪ್ರಜಾಪ್ರಭುತ್ವವನ್ನೇ ತಮ್ಮ ಕಾಲಡಿಯಲ್ಲಿ ತುಳಿದು ಅಟ್ಟಹಾಸಗೈಯುವುದನ್ನು ನಾವು ನೋಡುತ್ತೇವೆ.

 ನಿಜ! ರಸ್ತೆಗಳ ಅಗಲೀಕರಣ ಮಾಡುವುದರಿಂದ ಫ್ಲೈ ಓವರ್ ಗಳನ್ನು ನಿರ್ಮಿಸುವುದರಿಂದ, ಬೃಹದಾಕಾರದ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಿಂದ ನಮ್ಮ ದೇಶ ಅಭಿವೃದ್ಧಿಯಾಗುವುದಿಲ್ಲ. ದೇಶದ ಅಭಿವೃದ್ಧಿಯನ್ನು 360° ಕೋನದಲ್ಲಿ ನೋಡಬೇಕು. ದೇಶದ ಅಭಿವೃದ್ಧಿಯನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಅತ್ಯವಶ್ಯಕವಾದ ಮಾರ್ಗಗಳನ್ನು ಅನುಸರಿಸಲು ಸರಕಾರಗಳು ಹೆಣಗಾಡುತ್ತಿವೆ ನಿಜ…. ಆದರೆ ಪ್ರಯತ್ನ ಮತ್ತು ಕಾರ್ಯಶೀಲತೆ ಒಂದೇ ನಾಣ್ಯದ ಎರಡು ಮುಖಗಳು.

ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಲೇಬೇಕು. ಮುಖ್ಯವಾಗಿ ಯುವ ಜನತೆಯಲ್ಲಿ ಮೌಲ್ಯಗಳ ಪುನರುತ್ಥಾನವಾಗಬೇಕು. ಬದುಕಿನಲ್ಲಿ ಭರವಸೆಯ ಜೊತೆಗೆ ಭದ್ರ ಭವಿಷ್ಯದ ಕನಸುಗಳು ಸಾಕಾರಗೊಳ್ಳುವ ನಿಶ್ಚಯಗಳು ಇರಬೇಕು.

ಬಹಳಷ್ಟು ಇಲ್ಲಗಳ ನಡುವೆಯೂ ಕೂಡ ಸತತ ಪ್ರಯತ್ನಕ್ಕೆ ಜಯವಿದೆ ಎಂಬ ಮಾತಿನಂತೆ ದೇಶದ ನಾಲ್ಕು ಅಂಗಗಳು ಸಂವಿಧಾನವು ನಮಗೆ ನೀಡಿರುವ ಅಧಿಸೂಚನೆಗಳಂತೆ ಕಾರ್ಯನಿರ್ವಹಿಸಿದರೆ ಮುಂದಿನ ಕೆಲವೇ ದಶಕಗಳಲ್ಲಿ ನಾವು ಸುಸ್ಥಿರವಾದ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವ ಯುವ ಪೀಳಿಗೆಯನ್ನು ನೋಡಬಹುದು.

 ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಅಂಕಿ ಅಂಶಗಳ ಆಧಾರದಿಂದ ನೋಡದೆ ಆ ದೇಶದ ಜನರ ಬದುಕಿನ ಸ್ಥಿತಿಗತಿಗಳು, ಆರ್ಥಿಕ ಸ್ಥಿರತೆ, ಸಾಮಾಜಿಕ ಭದ್ರತೆ, ಸಾಂಸ್ಕೃತಿಕ ಮೌಲ್ಯಗಳ ಅಳವಡಿಸಿಕೊಳ್ಳುವಿಕೆ,
 ಉತ್ತಮ ನಾಯಕತ್ವದ ಸಜ್ಜನಿಕೆಯ ದೂರ ದೃಷ್ಟಿಯುಳ್ಳ  ವೈಯುಕ್ತಿಕ ಹಿತಾಸಕ್ತಿಯನ್ನು ಮೀರಿದ ರಾಜಕಾರಣ,
ಸರ್ವಧರ್ಮ ಸಮಾನತೆಯ ಸಂಘಟನಾತ್ಮಕವಾದ ಜಾತ್ಯತೀತ, ಧರ್ಮಾತೀತ ಸಮಾಜ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಾಜವನ್ನು, ಮಹಿಳೆಯರ ಸಬ ಲೀಕರಣವನ್ನು ಹೊಂದಿರುವ  ನಿಟ್ಟಿನಲ್ಲಿ ನಾವು ನೋಡುವುದು. ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ,ನಾವೆಲ್ಲರೂ ನೀಡಬೇಕಾಗಿರುವ ನಮ್ಮ ನಮ್ಮ ಸಾಲಿನ ಕಾಣಿಕೆ.ಇನ್ನಾದರೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ…. ಸುಸ್ಥಿರ ಸಮಾಜದ ಭದ್ರಬುನಾದಿಗೆ ಅಸ್ತಿ ಭಾರವನ್ನು ಹಾಕೋಣ ಎಂಬ ಆಶಯದೊಂದಿಗೆ-ಎಲ್ಲರಿಗೂ  ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು


About The Author

Leave a Reply

You cannot copy content of this page

Scroll to Top