ಸ್ಫೂರ್ತಿ ಸಂಗಾತಿ
ಮೇಘ ರಾಮದಾಸ್ ಜಿ
“ಸ್ವ ಸಾಮರ್ಥ್ಯದ ಅರಿವು ಬಹುಮುಖ್ಯ”

ಸ್ವ ಸಾಮರ್ಥ್ಯದ ಅರಿವು ಬಹುಮುಖ್ಯ
ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶೇಷ ಸಾಮರ್ಥ್ಯಗಳು ಇರುತ್ತವೆ. ಒಬ್ಬರು ವೇಗವಾಗಿ ಓಡಿದರೆ, ಮತ್ತೊಬ್ಬರು ಬಣ್ಣಗಳಲ್ಲಿ ಚಿತ್ತಾರ ಬಿಡಿಸುತ್ತಾರೆ, ಮಗದೊಬ್ಬರು ಸುಶ್ರಾವ್ಯವಾಗಿ ಹಾಡಿದರೆ, ಇನ್ನೊಬ್ಬರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಎಲ್ಲರಿಗೂ ಎಲ್ಲಾ ಕಲೆಯೂ ಒಲಿದಿರುವುದಿಲ್ಲ ಆದರೆ ಎಲ್ಲರಲ್ಲಿಯೂ ಒಂದಲ್ಲ ಒಂದು ಸಾಮರ್ಥ್ಯ ಇರುವುದಂತೂ ನಿಶ್ಚಿತ. ಈ ಸಾಮರ್ಥ್ಯಗಳೇ ಭವಿಷ್ಯವನ್ನು ಕಟ್ಟಿಕೊಡುತ್ತವೆ ಎಂಬುದು ಸುಳ್ಳಲ್ಲ. ಆದರೆ ಇಂತಹ ಸಮಸ್ಯೆಗಳನ್ನು ಗುರುತಿಸಿಕೊಳ್ಳುವುದು ನಮ್ಮ ವಯಕ್ತಿಕ ಜವಾಬ್ದಾರಿಯಾಗಿದೆ. ನಮ್ಮ ಆಸಕ್ತಿಗಳು ಕನಸುಗಳು ಗುರಿಗಳು ಈ ಸಾಮರ್ಥ್ಯಗಳಿಗೆ ಅನುಗುಣವಾಗಿರುತ್ತದೆ.
ಮುಖ್ಯವಾಗಿ ಯುವಜನತೆ ತಮ್ಮ ಸಾಮರ್ಥ್ಯಗಳನ್ನು ಗುರುತಿಸಿಕೊಂಡಾಗ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಎಷ್ಟೋ ಬಾರಿ ಯುವ ಜನತೆ ತಾವು ಓದುತ್ತಿರುವ ಓದನ್ನು ಯಾಕೆ ಓದುತ್ತಿದ್ದೇವೆ ಎಂಬ ಸ್ಪಷ್ಟತೆಯೇ ಇರುವುದಿಲ್ಲ. ಯಾಕೆ ಇಂಜಿನಿಯರಿಂಗ್ ಎಂದರೆ ಮೆಡಿಕಲ್ ಸಿಗಲಿಲ್ಲ ಎನ್ನುತ್ತಾರೆ, ಬಿಕಾಂ ಯಾಕೆ ಎಂದರೆ ಪಿಯುಸಿಯಲ್ಲಿ ಕಾಮರ್ಸ್ ಅದಕ್ಕೆ ಎನ್ನುತ್ತಾರೆ, ಆಡ್ಸೆಕೆ ಓದ್ತಾ ಇದ್ದೀರಾ ಅಂದ್ರೆ ಸೈನ್ಸ್ ಮತ್ತು ಕಾಮರ್ಸ್ ಕಷ್ಟ ಅದಕ್ಕೆ ಎನ್ನುತ್ತಾರೆ, ಡಿಪ್ಲೋಮಾ ಯಾಕೆ ಅಂದ್ರೆ, ಪಿಯುಸಿ ಬೇಡ ಅದಕ್ಕೇನುತ್ತಾರೆ, ನಿಜವಾಗಿಯೂ ತಾವು ಓದುತ್ತಿರುವ ಓದು ನಮಗೆ ಸೂಕ್ತವಾಗಿದೆಯೇ ಇಲ್ಲವೇ ಎನ್ನುವ ಯೋಚನೆಯನ್ನು ಸಹ ಅವರು ಮಾಡಿರುವುದಿಲ್ಲ. ನಮ್ಮ ಗುರಿಗೆ ತಕ್ಕನಾದ ಓದನ್ನು ನಾವು ಓದಿದಾಗ ಬೇಗ ಗುರಿ ತಲುಪಲು ಸಾಧ್ಯ ಎಂಬುದನ್ನು ಯೋಚಿಸುವುದಿಲ್ಲ.
ಯುವಜನರು ಮನೆಯವರ ಒತ್ತಾಯಕ್ಕೊ, ಸ್ನೇಹಿತರ ಪ್ರಭಾವದಿಂದಲೋ, ಸಮಾಜದಲ್ಲಿರುವ ಕೆಲವು ನಿಯಮಗಳಿಗೆ ಸೋತು ತಮಗೆ ಇಷ್ಟವಿಲ್ಲದ ಅಥವಾ ಇಷ್ಟವಿದೆ ಎನ್ನುವ ಭ್ರಮೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಆದರೆ ಇವರಿಗೆ ನಿಜವಾದ ಕಷ್ಟ ತಿಳಿಯುವುದು ಕಾಲೇಜಿನಿಂದ ಹೊರ ಬಿದ್ದು ಉದ್ಯೋಗ ಹುಡುಕಲು ಆರಂಭಿಸಿದಾಗ. ಇತ್ತೀಚಿನ ದಿನಗಳಲ್ಲಿ ಪದವಿ ಪ್ರಮಾಣ ಪತ್ರದಲ್ಲಿನ ಅಂಕಗಳಿಗಿಂತ ತಮ್ಮಲ್ಲಿರುವ ಕೌಶಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈಗಿನ ಕಂಪನಿಗಳಿಗೆ ಅಥವಾ ಉದ್ಯೋಗಗಳಿಗೆ ಎಜುಕೇಟೆಡ್ ಉದ್ಯೋಗಿಗಳಿಗಿಂತ ಸ್ಕಿಲ್ಡ್ ಪಾರ್ಟ್ನರ್ಸ್ಗಳ ಅಗತ್ಯ ಇದೆ. ಶಾಲೆಗಳಲ್ಲಿಯೂ ಸಹ ಪುಸ್ತಕದಲ್ಲಿನ ಪಾಠ ಹೇಳುವ ಶಿಕ್ಷಕ ಶಿಕ್ಷಕಿಯರಿಗಿಂತ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಡಿಪಾಯ ಹಾಕಿ ಕೊಡುವ ಮಾರ್ಗದರ್ಶಕರ ಅವಶ್ಯಕತೆ ಹೆಚ್ಚಿದೆ.

ಆಧುನಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯುವಜನತೆ ತಮ್ಮ ಸಾಮರ್ಥ್ಯಗಳನ್ನು ಅರಿತು ಅದಕ್ಕೆ ಸೂಕ್ತವಾದ ಜ್ಞಾನ ಪಡೆಯಬೇಕಿದೆ. ಓದಿನ ವಿಷಯದಲ್ಲಿ ಮಾತ್ರವಲ್ಲದೆ ಕ್ರೀಡೆ ಕಲೆ ರಂಗಭೂಮಿಗಳಲ್ಲಿ ಅವರಿಗೆ ಆಸಕ್ತಿ ಇದ್ದರೆ ಅದನ್ನು ಕೂಡ ಕಲಿತು ಸಾಧನೆ ಮಾಡುವ ಹಲವು ಅವಕಾಶಗಳಿವೆ. ತಮ್ಮಲ್ಲಿ ಕೌಶಲ್ಯಗಳನ್ನು ಗುರುತಿಸಿಕೊಳ್ಳುವುದು ಯುವಜನತೆಯ ಜವಾಬ್ದಾರಿ ಮಾತ್ರವಲ್ಲ ಪೋಷಕರ ಕರ್ತವ್ಯವೂ ಕೂಡ ಹೌದು. ತಮ್ಮ ಮಕ್ಕಳ ಸಾಮರ್ಥ್ಯ ಆಸಕ್ತಿ ಇಷ್ಟಗಳನ್ನು ಗುರುತಿಸಿ ಅದಕ್ಕೆ ನೀಡಿರದು ಪೋಷಿಸಿದರೆ ಎಲ್ಲಾ ಮಕ್ಕಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ.
ಆದ್ದರಿಂದ ಯುವ ಜನತೆ ಸರಿ ಹಾದಿಯಲ್ಲಿ ಸಾಗಿ ತಮ್ಮ ಗುರಿ ಮುಟ್ಟಬೇಕಾದರೆ ಮೊದಲು ತಮ್ಮ ಸಾಮರ್ಥ್ಯ ಕೌಶಲ್ಯ ಆಸಕ್ತಿ ಗುರಿಯ ಸ್ಪಷ್ಟತೆ ಪಡೆಯುವುದು ಬಹಳ ಮುಖ್ಯವಾಗಿದೆ. ಈ ಹುಡುಕಾಟದಲ್ಲಿ ಪೋಷಕರು ಸ್ನೇಹಿತರು ಮಾರ್ಗದರ್ಶಕರು ಅವರಿಗೆ ಬೆಂಬಲ ನೀಡುವುದು ಅವರ ಆದ್ಯ ಕರ್ತವ್ಯ. ಆಗ ಮಾತ್ರ ಸಬಲ ಯೋಜನೆಯನ್ನು ನಾವು ನೋಡಬಹುದಾಗಿರುತ್ತದೆ. ಇಲ್ಲದಿದ್ದರೆ ಯುವ ಜನತೆ ರಾಜಕೀಯ ದಾಳಗಳಾಗಿ ಬಳಸಿಕೊಳ್ಳಲ್ಪಡುತ್ತಾರೆ. ಕುವೆಂಪುರವರ ಮಾತಿನಂತೆ ಮಕ್ಕಳು ಹುಟ್ಟುತ್ತಾ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ, ಸಮಾಜ ಅವರನ್ನು ಅಲ್ಪಮಾನವರನ್ನಾಗಿ ಮಾಡುತ್ತದೆ.ಇದು ಆಗಬಾರದು ಎಂದರೆ ಸ್ಪ ಸಾಮರ್ಥ್ಯದ ಅರಿವು ಮುಖ್ಯ.
ಮೇಘ ರಾಮದಾಸ್ ಜಿ




