ಕಾವ್ಯ ಸಂಗಾತಿ
ವರದೇಂದ್ರ ಕೆ ಮಸ್ಕಿ
ʼಇರಲಿ ನಿನ್ನದೇನಿಲ್ಲ ತಪ್ಪು!ʼ

ಅದೊಂದು ಸುದಿನ
ಹೃದಯ ಕನವರಿಸಿತ್ತು, ನಿರ್ವಿಘ್ನ
ಮಾತು ಮಾತಿಗೂ ಮೌನದುತ್ತರ ನಿನದು
ನನ್ನ ಪ್ರಶ್ನೆಗಳೋ ಉತ್ತರೋತ್ತರ,
ನಗ್ನ, ಮನದ ಬನ, ದಿನ?? ತಡವರಿಕೆ
ಇರಲಿ ನಿನ್ನದೇನಿಲ್ಲ ತಪ್ಪು!
ಎಲ್ಲಾ ನನ್ನಕಡೆಯಿಂದನೇ
ಪ್ರೇಮಾಲಾಪ, ವ್ಯರ್ಥ ಕಲಾಪ
ಕಾರುಣ್ಯ ಹರಣ ಅಂತರಂಗ
ಮನವೇನೋ ಬಯಸಿ ಬಂತು
ಔಪಚಾರಿಕ ಸ್ಪಂದನೆಯಿಲ್ಲ, ಸೌಜನ್ಯಕ್ಕೂ!
ಇರಲಿ ನಿನ್ನದೇನಿಲ್ಲ ತಪ್ಪು!
ಬುದ್ಧಿ ಹೇಳುತ್ತಲೇ ಇತ್ತು
ಬಾಂಧವ್ಯ ಮುಳ್ಳಾಗುವುದು,
ಹೃದಯವದನು ತಿರಸ್ಕರಿಸಿತ್ತು
ಆದಿಯಲಿ ಮೈ ಮರೆಸೋ ಹೂ
ಮುಡಿದು ಕೊಳ್ಳಲೇನಿರಲಿಲ್ಲ ತಡೆ
ಅಂತ್ಯಕ್ಕೆ ಮುದುಡಿತು, ಅಂತ್ಯಕ್ರಿಯೆ
ಇರಲಿ ನಿನ್ನದೇನಿಲ್ಲ ತಪ್ಪು
ಭಿಂಕವೆನ್ನಲೇ! ಅಲ್ಲ
ಮುಗ್ಧತೆ! ಹೋಲಿಕೆ ಸಲ್ಲ
ಹಿಂಜರಿಕೆ! ಊಹೂಂ ಇರಲಿಕ್ಕಿಲ್ಲ
ಕಾರಣವೇನು ಮತ್ತೆ ??
ಇರಬಹುದು ನಂಬಿಕೆ, ಅಸ್ಥಿರತೆ
ನನ್ನ ಅಸ್ಮಿತೆಯ ಪ್ರಶ್ನೆ, ಅಸ್ತಿಯಾದೆ
ಇರಲಿ ನಿನ್ನದೇನಿಲ್ಲ ತಪ್ಪು
ಉಸಿರು ಕಟ್ಟುತ್ತಿರಬಹುದು
ಹಸಿರಾಗಿರಲೆಂದು ಹರಿಸಿದ
ಪ್ರೇಮ ಪಾನಕ ಕಹಿಯಾಯಿತು!
ಉಮ್ಮಳಿಸುವಂತ ಆರಾಧನೆ
ನನ್ನ ಅಪಸವ್ಯದ ನಡೆ, ಅಸಹ್ಯವಾದೆ!
ಇರಲಿ ನಿನ್ನದೇನಿಲ್ಲ ತಪ್ಪು
ನಾ ಹಿಮಾಲಯದಂತೆ ಹಿಗ್ಗಿದೆ
ಮಾತು ಮಾತಿಗೂ ಕರಗಿದೆ
ಘನವಾಗಿದ್ದ ಮನವೀಗ ದ್ರವ
ಹಿಮದಿಂದ ಇಂದು ನಾ ದೂರ
ನಿರಾಕಾರಿ, ನಿಲ್ಲದಾದೆ
ನೀನೋ ಕದಲದ ಪರ್ವತ, ವಿಲೋಮ!
ಇರಲಿ ನಿನ್ನದೇನಿಲ್ಲ ತಪ್ಪು
ನಾ ಕರಗಿದ್ದು ಅಪರಾಧ, ಸ್ವಯಂಕೃತ
ಈ ಕೊರಗಿನ ನೈತಿಕ ಹೊಣೆ
ನನ್ನ ಸ್ವಯಂ ಘೋಷಣೆ, ಜೀವಾವಧಿ
ಒಪ್ಪುವೆ, ನನ್ನ ರೋದನೆ
ನಿನಗೆ ಒಪ್ಪವೇ ???
ಹೃದಯ ಪೋಷಣೆಗೆ ಕಡೆಗೂ
ಬರಲಿಲ್ಲ ನೀ, ನಾ ನತದೃಷ್ಟ
ಇರಲಿ ನಿನ್ನದೇನಿಲ್ಲ ತಪ್ಪು
ವರದೇಂದ್ರ ಕೆ ಮಸ್ಕಿ





ನಿವೇದನೆ, ತಿರಸ್ಕಾರ, ವೇದನೆ… ಚಂದದ ಕಾವ್ಯಲಹರಿ..
ಧನ್ಯವಾದಗಳು ರಿ