ಕಾವ್ಯ ಸಂಗಾತಿ
ಭಾರತ ಬರೀ ದೇಶವಲ್ಲ-ಎಮ್ಮಾರ್ಕೆ

ಭಾರತ ಬರೀ ದೇಶವಲ್ಲ
ನಮ್ಮ ನಿಮ್ಮ ದೈವ
ಇಲ್ಲಿ ಹುಟ್ಟಿ ಬಂದಿಹುದೇ
ನಮ್ಮೆಲ್ಲರ ಸುದೈವ
ವೇಷ ಬೇರೆ ಭಾಷೆ ಬೇರೆ
ಭಾರತೀಯರು ಒಂದೇ
ಸಹಿಸೆವು ಎಂದೆಂದಿಗೂ
ಅವರಿವರುಗಳ ನಿಂದೆ
ಒಗ್ಗಟ್ಟೇ ನಮ್ಮ ಬಲವು
ಎಂದು ಬದುಕುವಾ
ನಮ್ಮ ತಪ್ಪು ಒಪ್ಪುಗಳ
ನಾವೇ ಹುಡುಕುವಾ
ಕೇಸರಿ ಬಿಳಿ ಹಸಿರು ಬಣ್ಣ
ನಡುವೆ ನೀಲಿ ಚಕ್ರವು
ಬಾನೆತ್ತರ ಹಾರುತಿರಲಿ
ನಮ್ಮ ಈ ಬಾವುಟವು
ಜೈ ಹಿಂದ್ ಎಂಬ ಮಂತ್ರ
ಘೋಷ ಮೊಳಗಲಿ
ಭಾರತಾಂಬೆಯ ಕೀರ್ತಿ
ಜಗವೆಲ್ಲ ಬೆಳಗಲಿ
ನೂರು ಮತಗಳಿದ್ದರೂ
ಎಲ್ಲರೊಂದೇ ಒಮ್ಮತ
ಸ್ನೇಹ ಸಹಬಾಳ್ವೆಗೆ
ಎಂದೆಂದಿಗೂ ಸಮ್ಮತ
ಈ ದೇಶಕ್ಕಾಗಿ ನಾವು
ನೀವು ದುಡಿಯುವಾ
ಈ ಪುಣ್ಯಭೂಮಿಯಲ್ಲೇ
ನಾವು ಮಡಿಯುವಾ
ಹೊಗಳಿದಷ್ಟು ಹೊಳಪು
ನೋಡು ನನ್ನ ಮಣ್ಣಿಗೆ
ಮಣ್ಣನೆತ್ತಿ ಒತ್ತಿಕೊಳುವೆ
ನನ್ನ ಎರಡೂ ಕಣ್ಣಿಗೆ
ಈ ಮಣ್ಣ ಘನತೆಯು
ಎಂದೂ ಹೀಗೆ ಹೆಚ್ಚಲಿ
ಈ ಮಣ್ಣಲೇ ನನ್ನಯ
ಎರಡು ಕಣ್ಣು ಮುಚ್ಚಲಿ
ಎಮ್ಮಾರ್ಕೆ




ಚೆನ್ನಾಗಿದೆ ಕವನ… ನೂರು ನಮನ..!