ಕಾವ್ಯ ಸಂಗಾತಿ
ಡಾ.ಮೀನಾಕ್ಷಿಪಾಟೀಲ್
ಮನದನ್ನೆಯ ಸ್ವಗತ

ನಾನಂದುಕೊಂಡಿರಲಿಲ್ಲ
ರಾತ್ರಿಗಳು ನನಗೆ ಇರಿಯುತ್ತವೆ ಎಂದು
ಕಂಡ ಕನಸುಗಳು
ಹೂ ಮಳೆಯಂತೆ
ಸುರಿಯಬಹುದೆಂಬ ಭ್ರಮೆ
ಮರುಭೂಮಿಯ ಮರಳುಗಾಡಿಗೆ
ಬಂದದ್ದು ಅಂತನಿಸಿದ್ದು ನಿಜ
ಮೊದಲ ಸುಳ್ಳು ನಕ್ಷತ್ರದೆಡೆಗೆ
ಬೆರಳು ತೋರಿ
ಉರಿಯುವ ಸೂರ್ಯನನ್ನು
ಕಣ್ಣಲ್ಲಿರಿಸಿದ್ದು
ಸೂರ್ಯನಂಗಳದಲ್ಲಿ ಸುತ್ತಾಡಿಸಿ
ಚಂದಿರನ ತಂಪನ್ನು
ಸುರಿವೆನೆಂದರೆ ನಂಬಲಾದೀತೆ
ದೇಹಕ್ಕೆ ಮಣಭಾರ
ಚಿನ್ನದೊಡವೆಯ ಹೇರಿದರೇನು?
ಬಂಗಾರದಂತ ಮನಸನು
ಘಾಸಿಗೊಳಿಸಿದೆ ನೀನು
ಸುಕ್ಕುಗಟ್ಟಿವೆ ಕಣ್ಣುಗಳು
ಸಾಗರದಂತಹ ಕಣ್ಣೊಳಗೆ
ಬತ್ತಿ ಹೋಗಿವೆ ಕಣ್ಣೀರ ಹನಿ

ಜೊತೆಗೆ ನಿನ್ನ ಪ್ರೀತಿಯ ಸಿಂಚನ
ಕೆನ್ನೆಗಳು ಕೇಳುತ್ತವೆ
ಮುತ್ತಿನ ಹನಿ ಸುರಿಸಲಿಲ್ಲವೇಕೆ
ಕಂಬನಿಯ ಮುತ್ತನು
ಹಿಡಿದಿಟ್ಟುಕೊಳ್ಳುವ ಹಂಬಲ ಅವಕ್ಕೆ
ಹೃದಯ ಖಾಲಿಯಾಗಿದೆ
ಬೆಸೆದ ಹೃದಯಗಳು
ಬಿರುಕು ಬಿಟ್ಟಿವೆ
ಎಲ್ಲಿಯವರೆಗೆ ಹೀಗೆ…,
ಕೊನೆಗೆ ತೇಪೆಯನ್ನಾದರೂ
ಹಾಕಿ ಕೂಡಿಸು ಬೆಸುಗೆಯಾಗಲಿ ತುಸು
ಸ್ವಲ್ಪ ದಿನವಾದರೂ
ಮೈ ಮರೆಯುವೆ
ಆ ಸುಖದಲ್ಲಿ….
ಡಾ. ಮೀನಾಕ್ಷಿ ಪಾಟೀಲ




