ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೈಸೂರು ಪ್ರಾಂತ್ಯದ ಅತ್ಯಂತ ಹಿರಿಯ ಮೂಲ ಜನಪದ ಕಲಾವಿದರು ಮಳವಳ್ಳಿಯ ಗುರುಬಸವಯ್ಯನವರು. ಇವರಿಗೆ ಈಗ 90ವರ್ಷ ವಯಸ್ಸು. ಯಳಂದೂರು ತಾಲ್ಲೂಕು ಅಂಬಳೆಯ ತುಪಾಕಿರಾಚಯ್ಯನ ವಂಶೀಕರಾದ ಇವರು ಮಂಟೇಸ್ವಾಮಿಯ ವರದವರಾಗಿರುತ್ತಾರೆ. ತುಪಾಕಿರಾಚಯ್ಯನವರು ಆ ಕಾಲಕ್ಕೆ ಅಂಬಳೆಯಲ್ಲಿ 100 ಎಕರೆ ಜಮೀನುದಾರಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಮಂಟೇಸ್ವಾಮಿಯವರು ಸಂಚಾರಕ್ಕೆ ಹೋಗಿದ್ದಾಗ ಅಂಬಳೆಯ ಜಗಲಿಯಲ್ಲಿ ಕೂರುತ್ತಾರೆ. ನಮಗೆ ಇಲ್ಲಿ ಉತ್ಸವವಾಗಬೇಕು ಎಂದಾಗ ಊರಿನ ಯಜಮಾನರಾದ ತುಪಾಕಿರಾಚಯ್ಯನಿಗೆ ತಿಳಿಸಲಾಗಿ ಅವರು ಸ್ವಾಮಿಗಳ ಉತ್ಸವ ಮಾಡಿ ಮುಗಿಸಿದ ನಂತರ ಸ್ವಾಮಿಗಳು ತುಪಾಕಿರಾಚಯ್ಯನಿಗೆ ನಿಮ್ಮ ಮಕ್ಕಳೆಲ್ಲಿ ಬರಲಿಲ್ಲ ಎಂದಾಗ ತುಪಾಕಿರಾಚಯ್ಯ ‘ಅಯ್ಯೋ ಸ್ವಾಮಿ, ನಮಗೆ ಮಕ್ಕಳಿಲ್ಲ ಎನ್ನುತ್ತಾರೆ. ನಿಮಗೆ ಮಕ್ಕಳು ಕೊಟ್ಟರೆ ನನಗೆ ಒಕ್ಕಲಾಗುತ್ತೀರ ಎಂದು ಕೇಳುತ್ತಾರೆ. ಅದಕ್ಕೆ ಸ್ವಾಮಿ ನನಗೆ 70ವರ್ಷ. ನನ್ನ ಹೆಂಡತಿಗೆ 60ವರ್ಷ  ಈ ವಯಸ್ಸಿನಲ್ಲಿ ನಮಗೆ ಮಕ್ಕಳಾಗುವುದು ಇದು ಅದದ ಸ್ವಾಮಿ ಎನ್ನುತ್ತಾರೆ. ಅದಕ್ಕೆ ಸ್ವಾಮಿಗಳು ನಕ್ಕು ನಾಳೆ ಇದೇ ಜಗಲಿ ಬಳಿ ಗಂಡಹೆಂಡಿರಿಬ್ಬರು ಮಡಿಯಾಗಿ ಬನ್ನಿ ಎನ್ನುತ್ತಾರೆ ಬಂದವರಿಗೆ ಬಾಳೆಹಣ್ಣಿನ ಭಿ(ಪಿ)ನ್ನಪ್ರಸಾದ ಕೊಡುತ್ತಾರೆ. ಅವರಿಗೆ ಒಂಬತ್ತು ತಿಂಗಳಿಗೆ ಒಂದು ಗಂಡುಮಗು ಹುಟ್ಟುತ್ತದೆ. ಜನ ಇದೇನು ಈ ವಯಸ್ಸಿನಲ್ಲಿ ಈ ಕೊಸಕೋಳಿ ಎಂದು ಜರಿಯುತ್ತಾರೆ. ಅದೇ ಮಗುವನ್ನು ಎತ್ತಿಕೊಂಡು ಮತ್ತೆ ಸ್ವಾಮೀಜಿ ಬಳಿ ಬರುತ್ತಾರೆ. ‘ಸ್ವಾಮಿ,ಈ ವಯಸ್ಸಿನಲ್ಲಿ ನಮಗೆ ಮಕ್ಕಳಾಗಿರುವುದರಿಂದ ಜನ ಇದೇನು ಕೊಸಕೋಳಿ ಎಂದು ಆಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಬೇಸರ ಹೇಳಿಕೊಳ್ಳುತ್ತಾರೆ. ಆಗ ಮಗುವಿಗೆ ನಾಮಕರಣವೇನಿಟ್ಟಿರಿ ಎಂದು ಸ್ವಾಮಿಜಿ ಕೇಳಲು ಇನ್ನು ಹೆಸರಿಟ್ಟಿಲ್ಲ, ತಾವೇ ಒಂದು ಹೆಸರಿಟ್ಟು ಬಿಡಿ ಎಂದಾಗ ಜನ ಇದೇನು ಕೊಸಕೋಳಿ ಎಂದದಕ್ಕಾಗಿ ಈ ಮಗುವಿನ ಹೆಸರು ಕೊಸಕೋಳಿಸಿದ್ದ ಎಂದು ಹೆಸರಿಟ್ಟುಬಿಡಿ ಎನ್ನುತ್ತಾರೆ. ಆ ಹೆಸರೇ ಅವರ ಮಗುವಿನ ಹೆಸರಾಗುತ್ತದೆ. ಜನರ ನಿಂದನೆ, ಮಗುವಿನ ಪೋಷಣೆ ಇದೆಲ್ಲ ಅರಿತ ದಂಪತಿಗಳು ನಮಗೆ ಆಸ್ತಿಪಾಸ್ತಿ ಏನು ಬೇಡ ಮಗು ಒಂದೇ ಸಾಕು ಎಂದು ಅಂಬಳೆ ಬಿಟ್ಟು ಮಳವಳ್ಳಿಯ ಮಂಟೇಸ್ವಾಮಿ ಮಠಕ್ಕೆ ಬಂದು ಸೇರುತ್ತಾರೆ. ಮೂಲತಃ ದಾಸರಾದ ಇವರು ನೀಲಗಾರರಾಗುತ್ತಾರೆ. ಇದು ಧರೆಗೆದೊಡ್ಡವರ ಪವಾಡವೇ ಸರಿ. ಮಠದಲ್ಲಿಯೇ ಪರಿಚಾರಕರಾಗಿದ್ದುಕೊಂಡು  ಮಠದ ಸೇವೆ ಮಾಡುತ್ತಿರುತ್ತಾರೆ. ನಂತರ ಇವರಿಗೆ ಒಂದು ಮನೆ ಮಾಡಬೇಕು ಎಂದು ಮನೆ ಮಾಡಿಕೊಡುತ್ತಾರೆ. ಕೊಸಕೋಳಿ ಸಿದ್ದನಿಗೆ ಮದುವೆಯಾಗಿ ವಂಶ ಬೆಳೆಯುತ್ತದೆ. ಅವರ ಏಳನೇ ತಲೆಮಾರೇ ಗುರುಬಸವಯ್ಯ. ಇವರ ವಂಶೀಕರು ಮಂಟೇಸ್ವಾಮಿ ಕತೆಯಾದ ಧರಗದೊಡ್ಡವರ ವಚನವನ್ನು ಹಾಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಅದರಂತೆ ಇವರು ನೀಲಗಾರರಾಗಿ ಪರಂಪರೆಯ ಕಾವ್ಯ ಹಾಡಿಕೊಂಡು ಬರುತ್ತಿದ್ದಾರೆ. ಇವರ ತಂದೆ, ದೊಡ್ಡಪ್ಪ ಇವರುಗಳು ತಂಬೂರಿ ಹಿಡಿದು ನಾಡಿನ ಮೇಲೆ ಹೊರಟರೆ ಇವರ ಪದ್ಯ ಕೇಳಲು ಜನ ಸೇರುತ್ತಿದ್ದರಂತೆ. ನಾನು ಚಿಕ್ಕವಳಿದ್ದಾಗ ಗುರುಬಸವಯ್ಯನವರೇ ಯುಗಾದಿ ಹಬ್ಬದ ಮಾರನೇ ದಿನ ಮನೆಮನೆಗೆ ಬಂದು ಭಿಕ್ಷಸಾರಿ ಹಾಡುತ್ತಿದ್ದರೆ ಅದು ಬೀದಿಯ ತುದಿಯವರೆಗೆಗೂ ಕೇಳಿಸುತ್ತಿತ್ತು. ಕೇಳಿದವರ ಮನೆಯ ಮುಂದೆ ಹೊಗಳಿಸುತ್ತಿದ್ದರು. ಅಂದರೆ ಹಿರಿಯರ ಆತ್ಮಗಳನ್ನು ಕೊಂಡಾಡುವರು.
ಗುರುಬಸವಯ್ಯನವರು ಬಿಳಿ ಅಂಗಿ ಬಿಳಿಪಂಚೆ ಕೆಂಪು ಚುಕ್ಕಿ ರುಮಾಲು  ಹಾಕಿಕೊಂಡು ಎಡದ ಕೈಲಿ ಗಗ್ಗರ, ಎದೆ ಮೇಲೆ ತಂಬೂರಿ  ಬೆರಳಲ್ಲಿ ಲಕ್ ಧರಿಸುತ್ತಾರೆ. ತಂಬೂರಿಯನ್ನು ನುಡಿಸುವ ನಾದಕ್ಕೆ ತಕ್ಕಂತೆ ಗಗ್ಗರ ಡಕ್ಕಿ ನುಡಿಸಿದರೆ ಆ ಆನಂದವೇ ಬೇರೆ. ತಂಬೂರಿ ಶೃತಿ ಮಾಡುವುದರಲ್ಲಿ ನಿಸ್ಸಿಮರು. ಗುರುಬಸವಯ್ಯನವರು ಧರೆಗೆದೊಡ್ಡವರ ಕತೆ, ಚನ್ನಿಗರಾಮನ ಕತೆ, ಗಣಪತರಾಜನ ಕತೆ ಬಾಲನಾಗಮ್ಮನ ಕತೆ, ಬಸವಣ್ಣನವರ ವಚನ (ದೊಡ್ಡಬಸವಣ್ಣನ ಕತೆ), ಮೈದಾಳರಾಮನ ಕತೆ, ಕತ್ತಲರಾಜನ ಕತೆ, ಅರ್ಜುನಜೋಗಿ ಕತೆ ಹಾಡುತ್ತಾರೆ. ಇವರು ಹೆಚ್ಚಾಗಿ ಧರಗದೊಡ್ಡವರ ವಚನ ಹಾಡುವುದು ನೋಡಿದ್ದೇನೆ. ಇವರೇ ಹಾಡಿರುವ ಗಣಪತರಾಜ (ಘನಕೋಟರಾಜ)ನ ಕತೆ, ಧರಗದೊಡ್ಡವರ ವಚನ, ಚನ್ನಿಗರಾಮನ ಕತೆಯನ್ನು ಮಳವಳ್ಳಿಯ ಪಿ.ನಾಗರತ್ನಮ್ಮನವರು ಬರೆದಿದ್ದಾರೆ. ಪುಸ್ತಕ ಮುದ್ರಣದ ಹಂತದಲ್ಲಿದೆ.  ಗುರುಬಸವಯ್ಯನವರು ಬಳಿ ಇರುವ ತಂಬೂರಿ ತಲತಲಾಂತರದ ತಂಬೂರಿ. ಈ ತಂಬೂರಿಯಲ್ಲಿ ನುಡಿಸುವಂತೆ ಬೇರೆ ಯಾರಿಂದಲು ನಾನು ಆ ನಾದವನ್ನು ಕೇಳಿಲ್ಲ. ಹೆಚ್ಚಿನದಾಗಿ ಗುರುಬಸವಯ್ಯನವರಂತೆ ಯಾರು ತಂಬೂರಿ ನುಡಿಸಿದ್ದನ್ನು ನಾನು ಈವರೆವಿಗು ಕೇಳಿಲ್ಲ  ಮತ್ತು ಭಿನ್ನವಾಗಿರುತ್ತದೆ ಎನ್ನುತ್ತಾರೆ ಪಿ.ನಾಗರತ್ನಮ್ಮ ಮೇಡಂ. ಇವರ ಕಲಾ ಸೇವೆಗೆ ಮೆಚ್ಚಿ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇತ್ತೀಚೆಗೆ 2024ನೇ ಸಾಲಿನ ಅಕಾಡಮಿ ಪ್ರಶಸ್ತಿ ಲಭಿಸಿದೆ. ಪತ್ನಿ ಪುತ್ರರು ಪುತ್ರಿಯರನ್ನು ಹೊಂದಿರುವ ಇವರು ಸಣ್ಣ ಮನೆಯಲ್ಲಿ ವಾಸವಾಗಿದ್ದರು ಜನಪದದ ಅರಮನೆಯನ್ನೆ ತಮ್ಮ ಹೃದಯದಲ್ಲಿ ಇರಿಸಿಕೊಂಡಿದ್ದಾರೆ.


About The Author

Leave a Reply

You cannot copy content of this page

Scroll to Top