ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಸುನಾಮಿ…..ಬೇನಾಮಿ…

ಕೆಂಪಿನೋಕುಳಿ ಆಡುತಲಿ
ಸಾಗರದಿ ಉದಯಿಸಿದ ಉದಯ,
ಆಟ ಸಾಕೆನಿಸಿ ಬಾನಿಗೇರಿದ ಬೇಗ
ಹೊನ್ನ ಕಿರಣಗಳ ತೇರು ಏರಿ..
ಮೂಡಿಹುದು ಇಂದ್ರಚಾಪ
ನೊರೆಯ ಹನಿಹನಿಗಳಲಿ
ಸೇರುತಿದೆ ಕಡಲ ದಡವ
ಮೆಲು ಮೆಲನೆ ಅಲೆಗಳಲಿ…
ನೀರತಟದಲಿ ಜೋಡಿ ಕಂಗಳು
ನೀಲಮಣಿಯಂದದಿ ಮಿನುಗಿ
ಕೇಳಿತಚ್ಚರಿಯಲಿ..
” ಅಮ್ಮ , ಎಷ್ಟೊಂದು ಸೋಪುನೊರೆ..? ಬಟ್ಟೆ ತೊಳೆದವರಾರಿಲ್ಲಿ…? “

ಮಗನ ಮಾತಿಗೆ ನಕ್ಕು
ಮೆಲ್ಲನುಲಿದಳು ತಾಯಿ…
” ಇಲ್ಲ ಮರಿ , ಸ್ನಾನ ಮಾಡಿಹ
ಸಮುದ್ರ ರಾಜ ಸೋಪು ಹಚ್ಚಿ…”
ತಾಯಿ-ಮಗನ ಮಾತಿಗೆ
ಪಕ್ಕನೆ ನಕ್ಕಿತು ಕಡಲು
ದೊಡ್ಡ ತೆರೆಯೊಂದಿಗೆ…..
ಮರಳ ಮೈಯನು ತುಳಿಯುತ
ಕುಣಿದು ಕುಪ್ಪಳಿಸುತಲಿ
ಖುಷಿಯಾಗಿ ನಲಿವ ಮಗು ;
ಮರ ಹಕ್ಕಿ ಹೂಗಂಧ
ನಗುತಲಿರೆ ಗೆಲುವಿನಲಿ,
ಮೈಮರೆತು ಸ್ವಚ್ಛಂದ
ಪ್ರಕೃತಿಯ ಮಡಿಲಿನಲಿ;
ಆಗಲೇ…
ಅದೆಲ್ಲೋ ದೂರದಲಿ ಭುವಿ
ನಿದ್ದೆಗಣ್ಣಲಿ ಅಂಜಿ , ಎಚ್ಚತ್ತು
ಮೈ ಒದರಿತು ಜೋರಾಗಿ…
ಕಡಲ ಅರಮನೆ ಅಲುಗಿತಾಗಲೇ
ಶೂನ್ಯದಾಳದಿ ಶಬ್ದದಾರ್ಭಟ..
ಮರುಗಳಿಗೆ ಹಾಜರು
ದೈತ್ಯ ‘ ಸುನಾಮಿ ದಂಡು…!
ದೂರದೂರಕೆ ಲಗ್ಗೆಯಿಡುತ
ಮುಂದೆ ಬಂದುದ ಕಬಳಿಸುತ
ರುದ್ರ ನರ್ತನ ಭೋರ್ಗರೆಯುತ
ಕೈ ಚಾಚಿತದು ಮಗುವಿನತ್ತ
ತಾಯ ಎದುರಿಗೇ….!
ಅರೆಗಳಿಗೆ ಕಣ್ಮುಚ್ಚಿ
ಕಣ್ತೆರೆದಾಗ…
ತಾಯಿ ಮಗು ಜನ ಎಲ್ಲರೂ,
ತರು ಮರ ಹಕ್ಕಿ ಹೂವು,
ಕಾರು ಬಂಗಲೆ ಎಲ್ಲವೂ..
ಸಾಗರದರಮನೆಗೆ ಕೊನೆಯ ಪಯಣ….
ತೂರುತಲಿ ಸುಡು ಸುಡು ಕಿರಣಗಳ
ಉರಿದು ಕೆಂಗಿಡಿಯ ಕಾರುತ
ಕ್ರುದ್ಧನಾಗಿಹ ಭಾನು ಬಾನಲಿ
ನಿಸ್ಸಹಾಯಕನಂತೆ…
ಅಟ್ಟಹಾಸದಿ ನಿರ್ದಯಿ ಸುನಾಮಿ
ಬರೆಯಿತೆಲ್ಲೆಡೆ….ಬೇನಾಮಿ….
ಹಮೀದಾಬೇಗಂ ದೇಸಾಯಿ..




