ಕಾವ್ಯಸಂಗಾತಿ
ಪರವಿನ ಬಾನು ಯಲಿಗಾರ
ಶ್ರಾವಣ

ಬರುತಿರೆ ಶ್ರಾವಣ ,
ಹೊತ್ತು ತರುತಿರೆ ಹರುಷದ ದಿಬ್ಬಣ ,
ಹಬ್ಬಗಳ ಸರದಿ ಸಾಲು ,
ಹೊತ್ತಂತಿವೆ ದಿಬ್ಬಗಳು ಹಸುರಿನ ಶಾಲು …..
ಬರುತಿರೆ ಶ್ರಾವಣ ,
ಎತ್ತೆತ್ತ ನೋಡಿದರತ್ತ ಪ್ರಕೃತಿಯ ಕುಸುರಿಯ ಹೊಲಿಗೆ ,
ಊರಲೆಲ್ಲ ಘಮಿಸುವ ಪಾಯಸ , ಹೋಳಿಗೆ ,
ಈ ಮಾಸಕಿಲ್ಲ ಬೇರೆ ಹೋಲಿಕೆ…..
ಬರುತಿರೆ ಶ್ರಾವಣ ,
ಮೃಗ , ಖಗಗಳ ಸಂತಸೋತ್ಸವ ,
ನವ ಜೋಡಿಗೆ ಮಿಲನ ಮಹೋತ್ಸವ ,
ಕಳೆಯಿತು ಬಿಸಿಲಿನ ಧಗೆಯ ಬೇಗೆ
ಶುರುವಾಯಿತು ಜಿನುಜಿನುಗುವ ಮಳೆ …..
ಬರುತಿರೆ ಶ್ರಾವಣ ,
ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..
ಬರುತಿರೆ ಶ್ರಾವಣ ,
ನವ ವಧುವಿನಂತೆ ಸಿಂಗಾರಗೊಂಡ ಭೂ ಸಿರಿ ,
ಮನೆ , ಮನಕೆ ಮುದ ನೀಡುತ,
ನಿಸರ್ಗದಾತೆ ಹೊತ್ತು ತಂದಿಹಳು ,
ನಮಗೆಲ್ಲ ಐಸಿರಿ….

ಬರುತಿರೆ ಶ್ರಾವಣ ,
ಕುಣಿದಾಡಿತು ಸಕಲ ಜೀವ ಸಂಕುಲ ,
ನರನಾಡಿಯಲಿ ಸಂತಸದ ವಿದ್ಯುತ್ ಸಂಚಾರ ,
ಎಲ್ಲೆಲ್ಲೂ ಸಂಭ್ರಮದ ಸಿಂಚನ ,
ಸರ್ವರಿಗೂ ಒಳಿತು ಬಯಸುವುದೇ ,
ನಮ್ಮ ಸಂಸ್ಕಾರ..
ಪರವಿನ ಬಾನು ಯಲಿಗಾರ




