ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
“ಇಷ್ಟೇ ಸಾಕು….”


ಕೈಗೆ ಎಟುಕದ
ಮುಗಿಲ ಮಲ್ಲಿಗೆಯ ನಾನು
ಕೇಳುವುದಿಲ್ಲ ಗೆಳೆಯ….
ಒಂದಿಷ್ಟು ಒಲವಿನ ಧಾರೆ ಎರೆದು
ಪ್ರೀತಿಯ ದಾರದಲ್ಲಿ ಪೋಣಿಸಿದ
ದುಂಡು ಮಲ್ಲಿಗೆಯ ದಂಡೆ
ನನ್ನ ಮುಡಿಗೇರಿಸಿದರೆ ಸಾಕು ಇನಿಯ…..
ಎಲ್ಲೋ ಓದಿದ ಪುಸ್ತಕದ ನಗರಕ್ಕೆ
ನನ್ನನ್ನು ಕರೆದೊಗು ಎಂದು
ಕೇಳುವುದಿಲ್ಲ ಗೆಳೆಯ…
ಒಂದಿಷ್ಟು ಸಮಯವ
ನನ್ನೊಂದಿಗೆ ಕಳೆದು…
ಆ ಸಂಜೆ ತಂಪಲ್ಲಿ ಮನೆಯ ಅಂಗಳದಲ್ಲಿ…
ನನ್ನೊಡನೆ ಕೈ ಹಿಡಿದು
ಒಂದೆರಡು ಹೆಜ್ಜೆಯ ಹಾಕಿದರೆ
ಸಾಕು ಇನಿಯ……
ದುಬಾರಿ ಉಡುಗೊರೆಯ ನಡುವೆ
ಹುಟ್ಟುವ ಪ್ರೀತಿಯ ನಾನು
ಕೇಳಲಾರೆ ಗೆಳೆಯ….
ಭೂತಾಯಿಯ ಮಡಿಲಲ್ಲಿ ಹುದುಗಿದ್ದು…
ಮಳೆಯ ಮುತ್ತಿನ ಹನಿಗೆ
ಚಿಗುರೊಡೆದು ಮತ್ತೆ ನಸುನಗುವ
ಆ ಡೇರೆ ಹೂವಿನಂತೆ ನಿರ್ಮಲವಾದ ಒಲವಿನ ಧಾರೆಯಂತೆ ಜೊತೆಗಿದ್ದರೆ ಸಾಕು ಇನಿಯ…..
ಅಕ್ಷತಾ ಜಗದೀಶ.



