ಕಾವ್ಯಸಂಗಾತಿ
ʼಮಧು ವಸ್ತ್ರದ ಮುಂಬಯಿ
ʼಗಜಲ್ʼ

ಅಸ್ಮಿತಾ ಫೌಂಡೇಶನ್ ಸಂಸ್ಥೆಯ ವಿಶೇಷಚೇತನ ಮಕ್ಕಳನ್ನು ಮೊದಲಬಾರಿ ಭೇಟಿಯಾದಾಗ ನನ್ನ ಮನದಲ್ಲಿ ಮೂಡಿದ ಭಾವಗಳಿಗೆ ಗಝಲ್ ನ ರೂಪ ಇತ್ತಿರುವೆ…
ಗಝಲ್
ದೇವಾ ಒಮ್ಮೆ ಅವರೊಡನೆ ಬೆರೆತು ಕುಣಿದು ನಲಿದು ಆಟ ಆಡಲು ಬಂದುಬಿಡು
ನೋವುಂಡರೂ ಮರು ನುಡಿಯದವರಿಗಾಗಿ ಸ್ನೇಹಗೀತೆ ಹಾಡಲು ಬಂದುಬಿಡು
ಅವರನ್ನೇಕೆ ಹೀಗೆ ಎಲ್ಲರಿಗಿಂತ ಭಿನ್ನವಾಗಿಸಿ ವಿಕಲ ಚೇತನರನ್ನಾಗಿ ಮಾಡಿದೆ
ಅವರೊಡನೆ ಜೀವನದ ಓಟದ ಸ್ಪರ್ಧೆಯಲಿ ಭಾಗವಹಿಸಿ ಓಡಲು ಬಂದುಬಿಡು
ಕಾಯದ ಕುಂದುಗಳನೆಲ್ಲ ಹಿಂದಕ್ಕೆ ಸರಿಸುತ ಕಾಯಕ ಭಂಟರಾಗಿ ನಿಂತಿಹರು
ಆಯ ತಪ್ಪದಂತೆ ಸಧೃಡವಾಗಿ ನಿಲ್ಲಲಿಕ್ಕಾಗಿ ಆಸರೆ ನೀಡಲು ಬಂದುಬಿಡು
ಕಣ್ಣ ಬೆಳಕು ಕಿತ್ತು ಈ ಭುವಿಗವರನು ಕಳಿಸಿ ನೋಡುತ ಕುಳಿತಿಹೆಯಲ್ಲ ನೀನು
ಬಣ್ಣ ಲೋಕದ ಸೊಬಗು ಸೌಂದರ್ಯವನು ಅವರೊಡನೆ ನೋಡಲು ಬಂದುಬಿಡು
ಮಧುಪರ್ಕವನು ಬೇಡದ ಮಧುರ ನುಡಿಗಳ ಬಯಸುವ ಸುಮನರು ಅವರು
ಅಧರದಿ ನಗೆ ಹೂವ ಮೂಡಿಸಿ ನೇಹ, ಪ್ರೀತಿ ಮಮತೆ ಕೊಡಲು ಬಂದುಬಿಡು.
ಮಧು ವಸ್ತ್ರದ ಮುಂಬಯಿ





ತುಂಬಾ ತುಂಬಾ ಚೆನ್ನಾಗಿ ಭಾವನೆ ಮೂಡಿ ಬಂದಿದೆ ಕವನದಲ್ಲಿ ಮೇಡಂ ….
ಸವಿತಾ ದೇಶಮುಖ
ಮೆಚ್ಚುಗೆಗೆ ಮನಪೂರ್ವಕ ಧನ್ಯವಾದಗಳು ಸವಿತಾ ಜೀ..