ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಣವೊಂದನ್ನು ಗಾಳಿಯಲ್ಲಿ
ತೂರಿ ಬಿಟ್ಟೆ ನಾನು,
ಧರಾಶಾಯಿಯಾಯಿತು, ಆದರದು ಎಲ್ಲೆಂದು ನನಗೆ ತಿಳಿಯಲಿಲ್ಲ;
ಏಕೆಂದರೆ ಅದೆಷ್ಟು ವೇಗವಾಗಿ
ಹಾರಿತು, ಅದರ ಗಮನವನ್ನು ಹಿಂಬಾಲಿಸಲು ದೃಷ್ಟಿಗೆ ಸಾಧ್ಯವಾಗಲಿಲ್ಲ,

ಹಾಡೊಂದನು ಗಾಳಿಯಲ್ಲಿ
ಉಸುರಿಬಿಟ್ಟೆ ನಾನು,
ಧರಾಶಾಯಿಯಾಯಿತು, ಆದರದು ಎಲ್ಲೆಂದು ನನಗೆ ತಿಳಿಯಲಿಲ್ಲ;
ಯಾರಿಗುಂಟು ಅಷ್ಚು ಸೂಕ್ಷ್ಮ ಹಾಗೂ ಬಲವಾದ ದೃಷ್ಟಿ, ಹಾಡಿನ ಹಾದಿಯ ಹಿಂಬಾಲಿಸುವಷ್ಟು?

ಬಹಳಷ್ಟು ಸಮಯದ ನಂತರ ಓಕ್ ಮರದಲ್ಲಿ ಬಾಣವು ನೆಟ್ಟಿರುವುದ ಕಂಡೆ, ಇನ್ನೂ ಮುರಿಯದೆ ಉಳಿದಿತ್ತದು
ಹಾಗು ಹಾಡನ್ನು ಮೊದಲಿನಿಂದ ಕಡೆಯವರೆಗೂ, ಸ್ನೇಹಿತನೊಬ್ಬನ ಹೃದಯದಲ್ಲಿ ಮತ್ತೊಮ್ಮೆ ಕಂಡೆ.

—ಟಿಪ್ಪಣಿ

  ಮಾನವ ಆವಿಷ್ಕಾರಗಳು ಎರಡು ಮುಖಗಳ ನಾಣ್ಯದಂತೆ. ಸರಿಯಾಗಿ ಬಳಸಿಕೊಂಡಾಗ ಉಪಯೋಗ, ದುರುಪಯೋಗಿಸಿಕೊಂಡಾಗ ವಿನಾಶ. ಬುದ್ಧಿಮತ್ತೆಯ ಬಲದಿಂದ ಪ್ರಾಣಿಯ ಸ್ಥರದಿಂದ ಮೇಲೇರಿದ ಮಾನವ ಸಂಕುಲ ಇಲ್ಲಿಯವರೆಗೂ ವಿಭಿನ್ನವಾಗಿರಲು ಮುಖ್ಯ ಕಾರಣ ಆವಿಷ್ಕಾರಗಳು. ಮಾನವರ ಪ್ರಮುಖ ಆವಿಷ್ಕಾರಗಳಲ್ಲಿ ತನ್ನ ಮನದ ಭಾವನೆಗಳನ್ನು ಹಾಗು ಆಲೋಚನೆಗಳನ್ನು ಪರರಿಗೆ ದಾಟಿಸುವ ತೀವ್ರ ಹಂಬಲದಿಂದ ಹುಟ್ಟಿದ ಮಾತು ಅತಿ ಮುಖ್ಯವಾದುದು. ಅನಾದಿ ಕಾಲದಿಂದಲೂ ಕವಿಗಳು, ವಚನಕಾರರು, ದಾಸರು, ಬರಹಗಾರರು, ತತ್ವಜ್ಞಾನಿಗಳು ಪ್ರಪಂಚದಾದ್ಯಂತ ಮಾತಿನ ಮಹತ್ವದ ಬಗ್ಗೆ ಮಾತನಾಡಿರುವವರೇ! ಭಾಷೆಯು ಜೀವಂತಿಕೆಯನ್ನು ಹೊಂದಿರುವುದರಿಂದಲೇ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತ ಹಲವು ಆಯಾಮಗಳಲ್ಲಿ ಮುಂದೆ ಸಾಗುತ್ತಿರುವುದು. ಭಾಷಾ ಪ್ರಪಂಚದಲ್ಲೂ ಡಾರ್ವಿನ್ನನ ‘ಸರ್ವೈವಲ್ ಆಫ್ ದ ಫಿಟೆಸ್ಟ್’ ಸೂತ್ರವೇ ಅನ್ವಯವಾಗಿರುವುದು. ಅದರಿಂದಲೇ ಭಾಷೆಗಳು ಬಲಗೊಳ್ಳುತ್ತಾ, ಪಸರಿಸುತ್ತಾ, ಬದಲಾಗುತ್ತಾ ಅಥವಾ ಕಣ್ಮರೆಯಾಗುತ್ತಾ, ಅಳಿವಿನಂಚಿಗೆ ಜಾರುತ್ತಾ ಸಾಗಿರುವುದು.
ಅಮೆರಿಕಾದ ಕವಿ ಹೆನ್ರಿ ವ್ಯಾಡ್ಸ್‌ವರ್ತ್ ಲಾಂಗ್‌ಫೆಲೋ (ಫೆಬ್ರವರಿ 27, 1807 – ಮಾರ್ಚ್ 24, 1882) ತನ್ನ ‘ಬಾಣ ಮತ್ತು ಹಾಡು’ (The Arrow and the Song) ಎಂಬ ಕವಿತೆಯಲ್ಲಿ ಮಾತಿಗಿರುವ ಮಹತ್ತಿನ ಬಗ್ಗೆ ಹೇಳಿದ್ದಾನೆ. ಮಾತಿನ ರೂಪಕವಾಗಿ ಬಾಣ ಹಾಗು ಹಾಡು ಇಲ್ಲಿ ಬಳಕೆಯಾಗಿದೆ. ಬಾಣದ ಕ್ರಿಯೆ ಹಾಗು ಪರಿಣಾಮಗಳಿಗನುಗುಣವಾಗಿ ಸಂದರ್ಭಕ್ಕೆ ತಕ್ಕಂತೆ ಅದನ್ನು ರೂಪಕವಾಗಿ ಬಳಸುವುದನ್ನು ಕಂಡಿದ್ದೇವೆ. ಬಾಣವು ನಿರ್ದಿಷ್ಟ ಗುರಿಯನ್ನು ತಲುಪುವ,  ಗುರಿಯ ಸಾಧಿಸುವ ಛಲದ ಸಂಕೇತವಾದರೆ ಕೆಲವೊಮ್ಮೆ ನೋವುಂಟು ಮಾಡುವ ವಿನಾಶದ ಸಂಕೇತವೂ ಹೌದು. ಈ ಕವಿತೆಯಲ್ಲಿ ಬಾಣವು ಕಟು ಮಾತಿನ ಪ್ರತಿನಿಧಿಯಾದರೆ ಹಾಡು ಮೃದು ಮಾತಿನ ಪ್ರತಿನಿಧಿ. ಇಲ್ಲಿ ಯಾವುದೇ ನಿರ್ದಿಷ್ಟ ಉದ್ದೇಶವಿಟ್ಟುಕೊಳ್ಳದೆ, ಹೆಚ್ಚು ಆಲೋಚಿಸದೆ ಆಡಿದ ಮಾತುಗಳಿವು. ಆಡಿದ ಕ್ಷಣದ ನಂತರ ಮಾತು ಕಣ್ಮರೆಯಾದರೂ ಅದರ ಪ್ರಭಾವ ಅಚ್ಚಳಿಯದೆ ಉಳಿಯುವ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ ಈ ಕವನ. ತಾನಾಡಿದ ಕಟು ಮಾತುಗಳು ಬಿಟ್ಟ ಬಾಣವಾಗಿ ಎಲ್ಲಿ ಬಿದ್ದಿತೆಂದು ಕವಿಗೆ ಗೊತ್ತಿರಲಿಲ್ಲ. ಆದರೆ ಬಹಳ ಕಾಲದ ನಂತರ ಸಿಕ್ಕ ಬಾಣ ಕಂಡಿದ್ದು ಸ್ವಲ್ಪವೂ ಮುಕ್ಕಾಗದೆ ಓಕ್ ಮರದಲ್ಲಿ ನೆಟ್ಟಿರುವಂತೆ! ಕೊಟ್ಟ ಏಟನ್ನು ಮರೆತರೂ ಆಡಿದ ಮಾತನ್ನು ಮರೆಯಲು ಸಾಧ್ಯವಿಲ್ಲ!
ಅದೇ ಕವಿಯ ಸ್ನೇಹಪೂರಿತ ಕರುಣೆ ಹಾಗು ಪ್ರೀತಿಯ ಮಾತು ಹಾಡಾಗಿ ಹೊಮ್ಮುತ್ತದೆ. ಅದರ ಗಮ್ಯವೂ ಕವಿಗೆ ತಿಳಿದಿಲ್ಲ ಆದರೆ ಎಷ್ಟೋ ಕಾಲದ ನಂತರ ಅದು ಸ್ವಲ್ಪವೂ ಮುಕ್ಕಾಗದೆ ಮೊದಲಿನಿಂದ ಕಡೆಯವರೆಗೂ ಸ್ನೇಹಿತನ ಹೃದಯದ ಹಾಡಾಗಿ ಅನುರಣಿಸುತ್ತಿದೆ. ಬಹುಶ: ಈ ಹಾಡು ಮುಂದೆ ಸಾಗುತ್ತಾ ಹಲವು ಹೃದಯಗಳ ಹಾಡಾಗುವ ಸಾಧ್ಯತೆಯೂ ಇದೆ.
 ಇಂದು ಮಾತು ಕೇವಲ ಸಂಪರ್ಕ ಸಾಧನವಾಗಷ್ಟೇ ಉಳಿದಿಲ್ಲ. ಅಳೆದು ತೂಗಿ ಮಾತನಾಡಬೇಕಾದ ಕಾಲದಲ್ಲಿ ಈಗ ನಾವಿದ್ದೇವೆ ಆದರೂ ವಾಕ್ಸ್ವಾತಂತ್ರವಿರುವ ನಾಡು ನಮ್ಮದು. ಬಾಣವನ್ನು ಬಿಡುವುದೋ ಅಥವಾ ಹಾಡನ್ನು ಗುನುಗುನಿಸುವುದೋ? ಆಯ್ಕೆ ನಮ್ಮದು…


About The Author

2 thoughts on “Henry Wadsworth Longfellow ಅವರ ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಡಾ. ಸುಮಾ ರಮೇಶ್ ಬೆಂಗಳೂರು”

Leave a Reply

You cannot copy content of this page

Scroll to Top