ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ದುದು
ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ದುದು
ಕುರುಡ ಕಣ್ಣು ಕಾಣಲರಿಯದೆ ಕನ್ನಡಿಯ ಬಯ್ವನು
ಇವರ ಮಾತೆಲ್ಲವೂ ಸಹಜವೇ ನರಕ ಸಂಸಾರದಲ್ಲಿ ಹೊದಕುಳಿಗೊಳ್ಳುತ್ತಾ ಶಿವನಿಲ್ಲ ಮುಕ್ತಿಯಿಲ್ಲ
ಹುಸಿಯೆಂದಡೆ ನರಕದಲ್ಲಿಕ್ಕದೆ ಬಿಡುವನೇ ಚೆನ್ನಮಲ್ಲಿಕಾರ್ಜುನಯ್ಯ
ಸಾಮಾನ್ಯವಾಗಿ ವ್ಯಕ್ತಿಗಳು ತಾವು ಮಾಡುವ ಅಥವಾ ಮಾಡಿದ ತಪ್ಪು ಗಳನ್ನು ಹೇಳಿದಾಗ ಸಹಜವಾಗಿ ಕೋಪಿಸಿಕೊಂಡು, ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದೇ ದೂಷಿಸುವ ಮನೋ ನಿರ್ಧಾರ ಮಾಡಿ ಬಿಡುತ್ತಾರೆ.ಇದೆಲ್ಲವೂ ಪ್ರತಿಯೊಬ್ಬರಿಗೂ ಗಮನಕ್ಕೂ ಬಂದೇ ಬಂದಿರುತ್ತದೆ.
12 ನೇ ಶತಮಾನದಿಂದ ಇಂದಿನವರೆಗೂ ವ್ಯಕ್ತಿಗಳ ಸಹಜ ಗುಣ ಸ್ವಭಾವವನ್ನು ನಾವು ನೀವುಗಳೆಲ್ಲಾ ತಿಳಿದೇ ತಿಳಿದುಕೊಂಡಿರುತ್ತೇವೆ .
ವ್ಯಕ್ತಿಯು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರೆ ದೊಡ್ಡ ಮನುಷ್ಯನಾಗುತ್ತಾನೆ .ತನ್ನ ತನ್ನಲ್ಲೇ ಪಶ್ಚಾತ್ತಾಪ ಪಟ್ಟು ಕೊಂಡು ಮರುಗಿ ,ವೀರಾಗಿಯಾಗುತ್ತಾರೆ , ಮಹಾತ್ಮರಾಗುತ್ತಾರೆ ,ಮಹಾಮಹೀಮ ಪುರುಷರಾಗುತ್ತಾರೆ ಇದು ಸಾಮಾನ್ಯ ವಿಷಯ.
ಅಕ್ಕಮಹಾದೇವಿಯವರ ವಚನಗಳು ಅಂದಿನ ಕಾಲಕ್ಕೂ ಮತ್ತು ಇಂದಿನ ಕಾಲಕ್ಕೂ ಅನ್ವಹಿಸುವ ವಚನಗಳಾಗಿವೆ .
ಇಲ್ಲಿ ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವದು
ಕತ್ತಲಿನಲ್ಲಿ ಬದುಕುವ ಗೂಬೆಯು ಬೆಳಕಿಗೆ ಅಂಜಿ ಬೆಳಕನ್ನು ನೀಡುವ ಸೂರ್ಯನನ್ನೇ, ದೂಷಿಸುವುದು .
ಅಂದರೆ ತನ್ನಲ್ಲಿರುವ ಅಜ್ಞಾನ ಮತ್ತು ತನ್ನಲ್ಲಿರುವ ದೌರ್ಬಲ್ಯಗಳನ್ನು ಮರೆಮಾಚಲು ಬೇರೆಯವರನ್ನು ದೂಷಿಸುವುದು.ದೂಷಿಸಿ ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡುವುದು ಎಂದರ್ಥ.
ಇಲ್ಲಿ ಗೂಗೆ ಅಥವಾ ಗೂಬೆ ಅಜ್ಞಾನದ ಸಂಕೇತವಾದರೆ . ಸೂರ್ಯ ಜ್ಞಾನದ ಸಂಕೇತ.ಗೂಬೆಗೆ ಸೂರ್ಯನನ್ನು ನೋಡಲಾಗುವುದಿಲ್ಲ.ಇದರಿಂದಾಗಿ ಗೂಬೆಯು ಸೂರ್ಯನ ಮೇಲೆಯೇ ಅಪರಾಧ ಹೊರಿಸುತ್ತದೆ .
ಇಲ್ಲಿ ತಾವು ಮಾಡುವ ಅಥವಾ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಮನುಷ್ಯರು ಕಡಿಮೆ.
ಆ ತಪ್ಪುಗಳನ್ನು ಒಪ್ಪಿಕೊಳ್ಳದೇ ಮತ್ತೊಬ್ಬರ ಮೇಲೆ ಆರೋಪ ಹೊರಿಸಿ ದೂರ ತಳ್ಳುವವರ ಬಗ್ಗೆ ತನ್ನ ದೋಷವನ್ನು ಅರಿಯದೆ ಬೇರೆ ಯವರ ಮೇಲೆ ದೂರುವುದು ಅಜ್ಞಾನ ಅಥವಾ ತಪ್ಪಾದ ದೃಷ್ಟಿಕೋನದಿಂದಾಗಿ ಇತರರನ್ನು ದೂಷಿಸುವುದನ್ನು ಅಕ್ಕಳ ವಚನವು ನಮಗೆ ಸ್ಪಷ್ಟಪಡಿಸುತ್ತದೆ .
ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ದುದು
ಕಾಗೆಯು ತನ್ನ ಕಣ್ಣಿನ ದೋಷದಿಂದಾಗಿ ಇರುಳು ಬೆಳಗುವ ಚಂದ್ರನನ್ನು ಬಯ್ಯುತ್ತದೆ. ತನ್ನ ತಪ್ಪನ್ನು ಅರಿಯದೆ ಮತ್ತೊಬ್ಬರ ತಪ್ಪನ್ನು ತಾನು ಮಾಡಿದ ತಪ್ಪಿಗೆ ಕಾರಣವೆಂದು ಹೇಳುವುದು ಸರಿಯಲ್ಲ ಎನ್ನುವುದು ಈ ವಚನದ ಅರ್ಥ.
ಕುರುಡ ಕಣ್ಣು ಕಾಣಲರಿಯದೆ ಕನ್ನಡಿಯ ಬಯ್ವನು
ಕುರುಡನಾದವನು ತನ್ನ ಕಣ್ಣಿನ ದೋಷವನ್ನು ಅರಿಯದೆ ಕನ್ನಡಿಯ ಮೇಲೆ ದೋಷ ಇದೆಯೆಂದು ಬಯ್ಯುವನು.ತನ್ನಲ್ಲಿರುವ ತಪ್ಪು ತನ್ನ ಅರಿವಿಗೆ ಬಾರದೆ ಬೇರೆಯವರ ಮೇಲೆ ದೂಷಿಸುವುದು.
ಇವರ ಮಾತೆಲ್ಲವೂ ಸಹಜವೇ.
ನರಕ ಸಂಸಾರದಲ್ಲಿ ಹೊದಕುಳಿಗೊಳುತ್ತ ಶಿವನಿಲ್ಲ ಮುಕ್ತಿಯಿಲ್ಲ
ಹುಸಿಯೆಂದ ನರಕದಲ್ಲಿಕ್ಕದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯ
ಇಂಥವರ ಮಾತುಗಳು ಸಹಜ ತಾನೆ ಇಂಥಹ ಭವ ಬಂಧನದಲ್ಲಿ ಹೊರಳಾಡಿ ಕೊನೆಗೆ ಮುಕ್ತಿ ಕಾಣದೆ ಶಿವನನ್ನೇ ಬಯ್ಯುವವರನ್ನು ಹುಸಿಯ ನರಕದಲ್ಲಿ ಚೆಲ್ಲದೆ ಬಿಡುವನೇ ಎನ್ನ ಚೆನ್ನಮಲ್ಲಿಕಾರ್ಜುನಯ್ಯ ಎನ್ನುವರು ಅಕ್ಕ.
ಶರಣ ಸಿದ್ಧಾಂತದಲ್ಲಿ ಪಾಪ, ಪುಣ್ಯ,ನರಕ ಇವಾವೂ ಇಲ್ಲ .
ಆದರೆ ಅಕ್ಕನವರ ದೃಷ್ಟಿಯಲ್ಲಿ ಪಾಪ ನರಕ ಇವೆಲ್ಲವೂ ನಾವು ಇನ್ನೊಬ್ಬರ ಮೇಲೆ ದೋಷಾರೋಪ ಮಾಡುವುದು ಒಂದು ದೃಷ್ಟಿಯಲ್ಲಿ ಪಾಪದ ಕೆಲಸವೇ ಸರಿ .
ಒಟ್ಟಿನಲ್ಲಿ ಈ ಭವ ಬಂಧನದಲ್ಲಿ ಸಿಲುಕಿ ಕೊಂಡ ಮಾನವ ,
ಭಯ ಹಾಗೂ ಭಕ್ತಿಯಿಂದ, ಆಂತರಿಕ ಹಾಗೂ ಬಾಹ್ಯವಾಗಿ ಎರಡೂ ಮನಸ್ಸುಗಳು ಒಂದಾಗಿ, ಶುದ್ಧರಾದಾಗ ಮಾತ್ರ ನಾವೇ ದೇವರಾಗುತ್ತೇವೆ. ನಾವೇ ಪರಮಾತ್ಮರಾಗುತ್ತೇವೆ ಎಂಬ ಅರಿವು ನಮಗಾಗಬೇಕು.
ಸಾವಿತ್ರಿ ಕಮಲಾಪೂರ




