ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಮಳೆ…ಮಳೆ… ಮಳೆ…
ಛೇ! ಸಾಕಪ್ಪಾ ಸಾಕು

ಮಳೆ…ಮಳೆ… ಮಳೆ…ಛೇ ಸಾಕಪ್ಪಾ ಸಾಕು
ಮಳೆ…ಮಳೆ… ಮಳೆ…ಛೇ ಸಾಕಪ್ಪಾ ಸಾಕು! ಮೊದಲೇ ಹೇಳಿ ಕೇಳಿ ಮಲೆನಾಡು..ಉತ್ತರ ಕರ್ನಾಟಕದ ಮಳೆಗೆ ಹೋಲಿಸಿದಾಗ,ಕರಾವಳಿ ಪ್ರದೇಶ ಮತ್ತು ಮಲೆನಾಡೆಂದೆ ಹೆಸರುವಾಸಿಯಾದ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಗೆ ಬರವಿಲ್ಲ.ಪ್ರತಿ ವರ್ಷ ಬೀಳುವ ಮಳೆ ಪ್ರಮಾಣದಲ್ಲಿ ಏರುಪೇರಾದರೂ,ಮುಂಗಾರು,ಹಿಂಗಾರು, ರೈತನ ಬದುಕಲ್ಲಿ ಒಮ್ಮೆ ಹರುಷತಂದರೆ,ಇನ್ನೊಮ್ಮೆ ದುಃಖ ತರಿಸಿದ್ದು ಇದೆ.ಮಳೆಗೆ ಮೈನಡುಕ ಬರುವಷ್ಟು ಮಟ್ಟಿಗೆ ಶಿರೂರ ಗುಡ್ಡ ಕುಸಿತದ ಅವಶೇಷಗಳು ಇಂದಿಗೂ ಪ್ರಸ್ತುತ.ಅರಬೈಲ್ ದಲ್ಲಿಯ ಮಳೆಯ ಸ್ವರೂಪ ಕಂಡಾಗೆಲ್ಲ ಭಯ!ಗಂಜಿ ಕೇಂದ್ರಗಳು ನಿರಾಶ್ರಿತರಿಗೆ ಆಶ್ರಯ ನೀಡುವುದು.ಕೊಡಗಿನಲ್ಲಾದ ಅನಾಹುತ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಸಾವು ನೋವು ಅನಿರೀಕ್ಷಿತವಾಗಿ ಎದುರಾದಾಗ ಆಗುವ ವೇದನೆ ನೆನೆದರೆ ಮನಸ್ಸು ಅಲ್ಲೋಲ ಕಲ್ಲೋಲ ಅಷ್ಟೇ.ಗಾಳಿ,ಮಳೆ,ಸಿಡಿಲು,ಗುಡುಗು ಇವೆಲ್ಲ ಒಂದೇ ಸಮನೆ ಹೆಚ್ಚುತ್ತಿರುವ ಸನ್ನಿವೇಶ ಏನನ್ನು ನಿರೀಕ್ಷಿಸಬೇಕು?
ಜಲಾವೃತ ಪ್ರದೇಶಗಳಲ್ಲಿ ಸಿಕ್ಕು ನಲುಗುವ ಜೀವಸಂಕುಲ.ಅಯ್ಯೋ ದೇವರೆ ನಮಗ್ಯಾಕೆ ಈ ಶಿಕ್ಷೆ? ನಾವೇನು ತಪ್ಪು ಮಾಡಿದಿವಿ? ಕರುಳು ಬಳ್ಳಿಗಳು ಕಣ್ಮುಂದೆ ತೇಲಿ ಹೋದದ್ದು, ಮರಳಿ ಸಿಗಬಹುದೆಂಬ ಉಹೆಗಳು ಎಲ್ಲವೂ ಸುಳ್ಳಾದಾಗ ಅತ್ತು ಕರೆವ ಸಮುದಾಯಕ್ಕೆ ಸಾಂತ್ವನ ಹೇಳುವವರಾರು?..ಧುಮುಕುವ ಜಲಧಾರೆಗಳನ್ನು ಸೆರೆಹಿಡಿವ ಹುಚ್ಚಾಟಕ್ಕೆ ಯುವಕರು ಬಲಿಯಾಗುತ್ತಿರುವುದು; ಹೆತ್ತವರ ಒಡಲು ಬರಿದಾಗುತ್ತಿದೆ.ಇದಕ್ಕೆ ಪ್ರಕೃತಿ ಹೊಣೆಯಾ? ಹಣೆ ಬರಹವೆಂದು ಗೋಳಾಡುವ ದೃಶ್ಯ ಮಾಧ್ಯಮದ ಮೂಲಕ ಕಂಡಾಗಂತೂ ಮಳೆ ಎಷ್ಟು ದಿನ ಸುರಿಯುತ್ತೆ? ನದಿಗಳು ತುಂಬಿ ಹರಿಯುತ್ತಿರುವುದು ಅಪಾಯದ ಅಂಚಿನಲ್ಲಿರುವ ಜನಜೀವನ ಮಳೆಗೆ ಸೋತು ಸಣ್ಣಾಗಿದೆ.ಜೀವನ ಹಸನು ಮಾಡಬೇಕಾದ ಮಳೆ,ರುದ್ರನರ್ತನ ಮಾಡುತ್ತಿದೆ.

ಕೊಡಗು,ಕಲಬುರಗಿ, ಕರಾವಳಿ ಪ್ರದೇಶಗಳು,ಬೆಳಗಾವಿ, ಗುಜುರಾತ, ಓಡಿಸ್ಸಾ,ಚತ್ತಿಸಗಡ್,ಬಿಹಾರ ಹೀಗೆ ದೇಶಾದ್ಯಂತ ಅಷ್ಟೇ ಯ್ಯಾಕೆ ವಿಶ್ವದಾದ್ಯಂತ ಮಳೆಗೆ ತತ್ತರಿಸಿದ ಪ್ರಪಂಚವನ್ನು ಗಮನಿಸುವಾಗೆಲ್ಲ, ನಮ್ಮ ಮನೆಯ ಗೋಡೆಗಳು ಯಾವಾಗ ಬೇಕಾದರೂ ಕುಸಿಯಬಹುದೆಂಬ ಆತಂಕ ಮನೆಮಾಡಿದ್ದಂತೂ ಸತ್ಯ. ಬಹುಮಹಡಿ ಕಟ್ಟಡಗಳು ನೆಲಕುಸಿಯುವುದನ್ನು ನೋಡಿದ ಮೇಲೆ… ಸಾವು ಯಾವ ರೂಪದಿಂದ ಬರುತ್ತದೆಂದು ಉಹಿಸಲು ಸಾಧ್ಯವಿಲ್ಲ. ನೀರಿನಿಂದ ಎಂದರೆ “ಜಲಕಂಟಕ” ಎಷ್ಟು ಭಯಾನಕ ಕಣ್ಮುಂದಿದೆ.ಸಮುದ್ರ, ಬೆಟ್ಟಗುಡ್ಡ, ನದಿ,ಹಳ್ಳಗಳು,ಪರ್ವತಗಳು ನಯನಕ್ಕೆ ಉಲ್ಲಾಸ ನೀಡಿದಷ್ಟು ಬೇರೊಂದಿಲ್ಲ… ಪ್ರವಾಸಿಗರ ಆಕರ್ಷಣೆಯ ಪ್ರದೇಶಗಳು,ಅಪಾಯದ ಗಡಿಗಳಾಗಿ ಪರಿವರ್ತನೆಯಾಗುತ್ತಿವೆ.ಮಳೆಯ ಆರ್ಭಟಕ್ಕೆ ಅಲ್ಲಲ್ಲಿ
ಸೃಷ್ಟಿಯಾಗುವ ಜಲಪಾತಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಸಂಕಷ್ಟಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿ ಒದ್ದಾಡುವುದು ಹೊಸದಲ್ಲ.

ಜಗತ್ತು, ಒಂದೆಡೆ ವರುಣನ ಪ್ರವಾಹಕ್ಕೆ ಕಂಗಾಲಾಗಿವೆ.ಯಾವ ರೀತಿ ಸಹಾಯ,ಸಹಕಾರ ಜನರಿಗೆ ಒದಗಿಸಬೇಕೆಂಬುದು ತಿಳಿಯದಷ್ಟು ಹಾನಿ ಉಂಟಾಗಿದೆ.ಕರೆಂಟ್ ಅವಗಡಗಳು,ಮರಗಿಡಗಳು ಧರೆಗುರುಳಿವೆ. ಬದುಕು ಒಂದು ಕ್ಷಣ ಮಾತ್ರದಲ್ಲಿ ಶೂನ್ಯವೆಂಬ ಪರಿಕಲ್ಪನೆ ಬಂದಿದ್ದು ನಿಜ.ಪ್ರಕೃತಿ ವಿಕೋಪದ ಮುಂದೆ ಮನುಷ್ಯನ ಎಲ್ಲ ಕಾರ್ಯತಂತ್ರಗಳು ನೀರಲ್ಲಿ ಹೋಮ ಮಾಡಿದಂತೆ. “ವಿಜ್ಞಾನ ಮತ್ತು ಪ್ರಕೃತಿ ಇವು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ”.ವೈಜ್ಞಾನಿಕ ಮನೋಭಾವ ತಿಳಿಯುವುದಷ್ಟೇ ಮುಖ್ಯವಲ್ಲ.ಪ್ರಕೃತಿ ವಿರುದ್ಧವಾಗಿ ಮಾಡುವ ಎಲ್ಲ ಕಾರ್ಯಗಳು ನಿಷಿದ್ಧ!.
ಹಿಂದೆಲ್ಲ ಇದರ ಹತ್ತು ಪಟ್ಟು ಮಳೆಯಾಗುತ್ತಿತ್ತು…ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಗಳು ಇರಲಿಲ್ಲ.ಪ್ರಕೃತಿ ಸಮೃದ್ಧವಾಗಿತ್ತು.ಎಲ್ಲವೂ ಒಂದು ಹಂತದಲ್ಲಿ ಸರಿದೂಗಿಸಿಕೊಂಡು ಹೋಗುವ ಜನಜೀವನವಿತ್ತು. ಮನುಷ್ಯನ ಅತಿಯಾಸೆ ಯಾವಾಗ ಮಿತಿಮೀರಿದ ಪರಿಣಾಮ ಇಂದು ನಿರಪರಾಧಿಗಳೂ ಕೂಡ ಶಿಕ್ಷೆ ಅನುಭವಿಸುವಂತಾಗಿದೆ.ನೂರು ಕೈಗಳು ದುಡಿಯುವ ಜಾಗದಲ್ಲಿ, ಜಿ ಸಿ ಪಿ ಗಳು ಕಾರ್ಯನಿರ್ವಹಿಸುತ್ತಿರುವುದು, ಭೂಮಿ ಸಡಿಲಗೊಳ್ಳುತ್ತಿರುವುದಕ್ಕೆ ಕಾರಣ. ಇನ್ನೂ ಅನೇಕ ಕಾರಣಗಳಿಂದ ಭೂಮಿಯ ಒಡಲು ಬಗೆದು ಬರಿದು ಮಾಡುವಾಗ ಪ್ರವಾಹ ಸೃಷ್ಟಿಯಾಗದೇ ಉಳಿದಿತೆ? ನಾವು ಮಾಡಿದ ಕರ್ಮಕ್ಕೆ ತಕ್ಕಂತೆ ಪ್ರತಿಫಲ ಅನುಭವಿಸುವುದು ನಮ್ಮ ಹಕ್ಕು..ಮಳೆಗೆ ಬೈದರೆ ಪ್ರಯೋಜನವಿಲ್ಲ.
ಯರೋಪನಲ್ಲಿ ಬರಗಾಲ!. ನೀರಿಲ್ಲದೆ ಜಾನುವಾರುಗಳು ತತ್ತರಿಸುತ್ತಿವೆ. ಜಲದ ಆಹಾಕಾರ! ನಮ್ಮಲ್ಲಿ ನೀರಿಗೆ ಬರವಿಲ್ಲ ಯಾವ ನದಿಯ ಹರಿವಿನ ದಿಕ್ಕನ್ನು ಅತ್ತ ಹರಿಸಬೇಕೆಂಬುದು ತೋಚದಾಗಿದೆ.ಕಾರಣ ನಮಗೆ ಅವಶ್ಯಕತೆಗಿಂತ ಹೆಚ್ಚಿನ ನೀರಲ್ಲಿ,ಜಲಸಮಾಧಿಯಾಗುವ ದೃಶ್ಯ ಕಂಡಾಗ ಕರುಳು ಚುರ್ ಅಂದರೆ,ನೀರಿಲ್ಲದೆ ಪ್ರಾಣ ಬಿಡುವ ಸನ್ನಿವೇಶ ನಿರ್ಮಾಣವಾಗುತ್ತಿರುವುದು ಪ್ರಕೃತಿಯ ಇನ್ನೊಂದು ಕರಾಳ ಮುಖ ದರ್ಶನ. ಪ್ರಕೃತಿಯ ವಿರುದ್ಧ ಸಮರ ಸಾರಿ ಗೆದ್ದವರುಂಟೆ? ಇನ್ನೂ
ಟರ್ಕಿ, ಗ್ರೀಸ್ ನಲ್ಲಿ ಕಾಡ್ಗಿಚ್ಚು ಉಲ್ಬಣಗೊಂಡ ಪರಿಣಾಮ ಅಲ್ಲಿಯ ಜನರು ಜೀವ ಕಳೆದುಕೊಳ್ಳುತ್ತಿರುವುದು ಒಂದೆಡೆ.ಪಂಚ ಭೂತಗಳು ಅಖಾಡಕ್ಕೆ ಇಳಿದಂತೆ ಭಾಸವಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜೀವ ಜಗತ್ತಿನ ಉಳಿವು,ಅಳಿವು ನಮ್ಮ ಅರಿವಿನ ಮೇಲೆ ನಿಂತಿದೆ.ಮನುಷ್ಯನ ಬುದ್ದಿ ಗ್ರಹಗಳ ಸುತ್ತಲೂ ಸ್ಥಿರತೆ ಇಲ್ಲದೆ ತಿರುಗುವ ಉಪಗ್ರಹಗಳಂತೆ!. ಕಾರಣ ಜೀವದುಸಿರು ಹಸಿರಲ್ಲಿ ಅಡಗಿದೆಯೆಂಬ ಪ್ರಾಥಮಿಕ ಜ್ಞಾನ ಪಡೆದಿದ್ದರೂ,ಅದರ ಉಳಿವಿಗೆ ಪ್ರಯತ್ನ ಪಡದಿರುವುದು.ಅಮೆಜಾನ್ ನಂತಹ ಕಾಡಿಗೆ ಕಾಡ್ಗಿಚ್ಚು ಹಬ್ಬಿ ವಿಶ್ವದ ಶ್ವಾಸಕೋಶವೇ ಸುಟ್ಟು ಬೂದಿಯಾಗಿದ್ದು ಯಾರು ಮರೆತಿಲ್ಲ.ಮಳೆ ಜೀವದ ಹೊಳೆಗೆ ಸಾಕ್ಷಿ.ನಮ್ಮಗಳ ಬದುಕು ಯಾವುದಕ್ಕೂ ಸ್ಥಿರವಲ್ಲ.ಮಳೆ…ರಜೆ…ಮಳೆ…ಜೀವಹಾನಿ…ಮಳೆ ಗುಡ್ಡಕುಸಿತ..ಮತ್ತೆ ಜೀವಹಾನಿ..ರಸ್ತೆ ಮೇಲೆ ಮರಗಳು..ವಿದ್ಯುತ್ ಕಂಬಗಳು..ಅಗ್ನಿ ಅನಾಹುತಗಳು..ಯಾವುದಕ್ಕೆ ಶಾಶ್ವತ ಪರಿಹಾರವಿದೆ?
ಮನುಷ್ಯನ ನಿರ್ಲಕ್ಷ್ಯ ಇಡೀ ಮನುಕುಲ ನರಳುವಂತಾಗಿದೆ. ಭೂಮಿ ಮಣ್ಣೊಳಗೆ ಕರಗುತ್ತಿದೆಯಾ? ಕೆಸರು ಪ್ರವಾಹ ಕಂಡು ಹೆದರಿಕೆಯಾಯಿತು.ಮಕ್ಕಳಿಗೆ ನಾವು ಪರಿಸರ ಸಂರಕ್ಷಣೆಯ ಬಗ್ಗೆ ತಿಳುವಳಿಕೆ ಹೇಳುತ್ತಲೇ ಇರುತ್ತೆವೆ.ಇಂತಹ ದುರಂತಗಳು ಭಯವನ್ನು ಹುಟ್ಟಿಸುತ್ತದೆ. ವಿಶ್ವದಾದ್ಯಂತ ಅಪ್ಪಿಕೋ ಚಳುವಳಿ ನಡೆಯಬೇಕು. ಬಂಜರು ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಕೆಲಸಕ್ಕೆ ಶರಣು…ಸಾಲುಮರದ ತಿಮ್ಮಕ್ಕ,ತುಳಸಿ ಗೌಡ… ಗಿಡಮರಗಳನ್ನು ತಮ್ಮ ಮಕ್ಕಳಂತೆ ಸಾಕಿ ಸಲುಹಿದ್ದನ್ನು ನೆನೆಯಬೇಕು.ಭೂಮಿಯ ಆಂತರಂಗಿಕ ಸಂರಕ್ಷಣೆ ನಮ್ಮೆಲ್ಲರ ಹೊಣೆಯೆಂಬುದನ್ನು ಮನದಟ್ಟು ಮಾಡುವ ಕಾರ್ಯ ಹೆಚ್ಚು ಪರಿಣಾಮಕಾರಿಯಾಗುವಂತೆ ಮನುಕುಲ ದಿಟ್ಟ ನಿರ್ಧಾರ ಮಾಡುವತ್ತ ಸಾಗಬೇಕಿದೆ.

ಶಿವಲೀಲಾ ಶಂಕರ್




ಸೂಪರ್ ಲೇಖನ
ಅದ್ಭುತವಾಗಿ ಸದ್ಯದ ಪರಿಸ್ಥಿತಿಯ ಅವಲೋಕನ ವನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದೀರಿ ಒಳ್ಳೆಯ ಸಾಹಿತ್ಯ ತಮಗೆ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ ಶುಭವಾಗಲಿ
Very nice …..vaastada chitrnaa…..manavoo Tallana gondrooo saagbeku….tq …