ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಆಕೆ ತನ್ನ ಗಂಡನಿಂದ ಡೈವೋರ್ಸ್ ತೆಗೆದುಕೊಂಡಿ ದ್ದಾಳಂತೆ… ಏನ್ ಕಥೆಯೋ ಏನೋ? ಈಕೆನೂ ಕಡಿಮೆ ಇಲ್ಲ ಬಿಡಿ. ತುಂಬಾ ಮಾತಾಳಿ. ಒಂದು ಮಾತಿಗೆ ನೂರು ಉತ್ತರ ಕೊಡ್ತಾಳೆ. ಅದಕ್ಕೆ ಆಕೆ ಗಂಡ ಆಕೆಯಿಂದ ಡೈವರ್ಸ್ ತಗೊಂಡಿರಬಹುದು.

 ಬೇಡ…. ಆಕೆಯ ತೊಂದರೆಯ ಅರಿವು ನಮಗಿಲ್ಲ. ಆಕೆ ವಿಚ್ಛೇದನ ತೆಗೆದುಕೊಳ್ಳುತ್ತಿರುವ ಹಿಂದಿನ ಕಾರಣ ನಮಗೆ ಗೊತ್ತಿಲ್ಲ… ಯಾರೇ ಆಗಲಿ ತಮ್ಮ ಬದುಕಿನ ಅತ್ಯಂತ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿರುತ್ತಾರೆ. ಅದೆಲ್ಲವನ್ನು ಅವರು ಉಳಿದವರ ಮುಂದೆ ಜಗಜ್ಜಾಹೀರು ಮಾಡುವ ಅವಶ್ಯಕತೆ ಇಲ್ಲ… ಆಕೆಯ ಮುಂದಿನ ಬದುಕು ಸುಗಮವಾಗಿ ಸಾಗಲಿ ಎಂದಷ್ಟೇ ಹಾರೈಸಿ, ಅಥವಾ ಹಾರೈಸದಿದ್ದರೂ ಪರವಾಗಿಲ್ಲ….ಅವರನ್ನು ಅವರ ಪಾಡಿಗೆ ಬಿಟ್ಟುಬಿಡೋಣ.

ಅಯ್ಯೋ! ಆ ಸಂಘದಲ್ಲಿ ಇರುವ ಹೆಣ್ಣು ಮಕ್ಕಳು ಗಂಡ, ಮನೆ ಮಕ್ಕಳ ಬಗ್ಗೆ ಕಾಳಜಿ ಇಲ್ಲದವರು. ಬರೀ ತಮ್ಮದೇ ಬದುಕನ್ನು ನಡೆಸಬೇಕು ಅನ್ನೋರು. ಸದಾ ಮೀಟಿಂಗು, ಸಮಾರಂಭ, ಪಿಕ್ನಿಕ್ ಅಂತ ತಿರುಗುತ್ತಾರೆ…. ಅವರ ಮನೆಯ ವಿಷಯ ಅವರಿಗೆ ಮಾತ್ರ ಸಂಬಂಧಿಸಿದ್ದು., ನಮ್ಮದಲ್ಲ. ನಾವೇನು ಅವರ ಮನೆಯ, ಮಕ್ಕಳ, ಗಂಡನ ಕಾಳಜಿ ಮಾಡಬೇಕಾಗಿಲ್ಲ. ಅಲ್ಲವೇ!  ನಮಗೆ ನಮ್ಮದೇ ನೂರೆಂಟು ತಾಪತ್ರಯಗಳು ಇರುತ್ತವೆ.ತಮ್ಮ ಬದುಕನ್ನು ಹೇಗೆ ನಡೆಸಬೇಕು ಎಂದು ಅವರು ಆಶಿಸುತ್ತಾರೆಯೋ ಹಾಗೆಯೇ ನಡೆಸುತ್ತಿದ್ದರೆ ಅದನ್ನು ಆಕ್ಷೇಪಿಸಲು ನಾವು ಯಾರು?

 ಆಕೆ ಸದಾ ಮನೆಯಿಂದ ಹೊರಗೆ ತಿರುಗಾಡುತ್ತಾಳೆ…
 ತನ್ನ ಮನೆಯ ಕೆಲಸ ಕಾರ್ಯಗಳಿಗಾಗಿ ಅದು ಆಕೆಗೆ ಅನಿವಾರ್ಯವಾಗಿರಬಹುದು, ಆಕೆಯ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದ್ದು. ಈ ಕುರಿತು ಆಕೆಯ ಜೊತೆ ಆಕೆಯ ಕುಟುಂಬದ ಸದಸ್ಯರು ಮಾತನಾಡಬಹುದೇ ಹೊರತು ನಾವಲ್ಲ. ಈ ಕುರಿತು ನಮ್ಮ ಅಭಿಪ್ರಾಯವನ್ನು ಆಕೆ ಕೇಳಿದ್ದಾಳೆಯೇ? ಇಲ್ಲವಲ್ಲ! ಹಾಗಿದ್ದರೆ ಆಕೆಯ ಗೊಡವೆ ನಮಗೇಕೆ?

 ಆ ಮನೆಯವರು ತಮ್ಮ ಸೊಸೆಯನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಾರೆ… ಅದಕ್ಕಾಗಿ ಆಕೆಯನ್ನು ಅಣಗಿಸುವುದು ಯಾವ ನ್ಯಾಯ? ಹಾಕಿ, ಆಕೆ ತಾನಾಗಿಯೇ ಹೇಳಿಕೊಳ್ಳದ ಹೊರತು ಆಕೆಯ ಪರವಾಗಲಿ ವಿರೋಧವಾಗಲಿ ಮಾತನಾಡುವ ಅವಶ್ಯಕತೆ ಇಲ್ಲ

 ತನ್ನ ಪತಿ ತನಗೆ ಮೋಸ ಮಾಡಿದ ನಂತರ ಆಕೆ ತನ್ನ ಪಾಲಕರ ಬಳಿ ಹಿಂತಿರುಗಿದಳು…..ಇದು ಆಕೆಯ ನಿರ್ಣಯ. ಇದರಲ್ಲಿ ತಲೆ ಹಾಕಲು ನಾವು ಆಕೆಯ ಬದುಕಿನ ನಿರ್ದೇಶಕರಲ್ಲ ಅಥವಾ ನಿರ್ಮಾತೃಗಳು ಕೂಡ ಅಲ್ಲ

 ಆಕೆ ಸಾಕಷ್ಟು ಓಡಾಡುತ್ತಾಳೆ.ಮನೆಯಲ್ಲಿ ಕಾಲು ನಿಲ್ಲೋದೇ ಇಲ್ಲ… ಅದು ಆಕೆಯ ಕೆಲಸ. ನಾವೇನು ಆಕೆಯ ಓಡಾಟದ ಖರ್ಚನ್ನು ನಿಭಾಯಿಸುತ್ತಿಲ್ಲ ಅಲ್ವೇ!

 ಈಗಾಗಲೇ ಮದುವೆಯಾಗುತ್ತಿರುವ ಜೋಡಿಗಳನ್ನು ನೋಡಿ ವಧು ವರರ ಸಾಮ್ಯ ಅಷ್ಟಾಗಿ ಇಲ್ಲ ಎಂದು ನಾವು ಎಷ್ಟೋ ಬಾರಿ ಮಾತನಾಡುತ್ತೇವೆ… ಅವರಿಬ್ಬರೂ ಪರಸ್ಪರ ಒಪ್ಪಿ ಮಾಡಿಕೊಂಡ ಮದುವೆ ಆದಾಗಿರುತ್ತದೆ. ಈಗಾಗಲೇ ಶುಭ ಮುಹೂರ್ತದಲ್ಲಿ ಅವರಿಬ್ಬರೂ ಪರಸ್ಪರ ಸಂಗಾತಿಗಳಾಗಿದ್ದಾರೆ… ಅವರಿಬ್ಬರ ಬಾಳು ಶುಭವಾಗಿರಲಿ ಎಂದು ಹಾರೈಸುವುದಷ್ಟೇ ನಮ್ಮ ಕೆಲಸ.

 ಆಕೆ ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಸಮನೆ ರೈಲಿನಂತೆ ವಿಪರೀತ ಪೋಸ್ಟ ಗಳನ್ನು ಹಾಕುತ್ತಾಳೆ…. ನಿಮಗೆ ಬೇಡವಾದರೆ ಅವರನ್ನು ಅನ್ ಫಾಲೋ ಮಾಡಿ ಅಥವಾ ಅನ್ ಫ್ರೆಂಡ್ ಮಾಡಿ… ಅದು ಸಾಧ್ಯವಿಲ್ಲ ಎಂದರೆ ಅವರ
ಸ್ಟೇಟಸ್ ಇಲ್ಲವೇ ಸ್ಟೋರಿ ನೋಡಬೇಡಿ.

 ಆಕೆ ಎಂತಹ ತಾಯಿ ತನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲ ಎಂದು ಹೇಳುವುದು ಬೇಡ…. ಆಕೆಯ ಮಕ್ಕಳನ್ನು ನಾವು ಬೆಳೆಸುತ್ತಿಲ್ಲವಲ್ಲ. ಅವರ ಸಾಧಕ ಬಾದಕಗಳು ಆಕೆಗೆ ಸೇರಿದ್ದೇ  ಹೊರತು ನಮ್ಮದಲ್ಲ

 ಆತ ತುಂಬಾ ಕುಡಿಯುತ್ತಾನೆ…. ಅದು ಆತನ ತೊಂದರೆ. ನಾವೇನು ಆತನಿಗೆ ಖರೀದಿಸಿ ಕೊಡುತ್ತಿಲ್ಲವಲ್ಲ.

 ಹೀಗೆ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಕೆಲ ಸತ್ಯಗಳ ನಮಗೆ ಅರಿವಾಗುತ್ತದೆ. ಬಹಳಷ್ಟು ಬಾರಿ ನಾವು ಅನವಶ್ಯಕ ವಿಷಯಗಳ ಕುರಿತು ಯೋಚಿಸುತ್ತೇವೆ, ಮಾತನಾಡುತ್ತೇವೆ… ವಿನಾಕಾರಣ ಬೇರೆಯವರ ಕುರಿತು ಮತ್ತೊಬ್ಬರೊಂದಿಗೆ ಮಾತನಾಡಿರುತ್ತೇವೆ.
 ನಮ್ಮ ಜೀವನ ಪರಿಪೂರ್ಣವಾಗಿರಬಹುದು… ಹಾಗೆಂದು ಬೇರೆಯವರ ಜೀವನದಲ್ಲಿ ನಡೆಯುವ ಆಗುಹೋಗುಗಳ ಕುರಿತು ನಾವೇಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು. ಅವರಾಗಿ ಹೇಳದ ಹೊರತು, ಕೇಳದ ವಿನ ನಾವು ಯಾರಿಗೂ ಸಲಹೆಗಳನ್ನು ಕೂಡ ಕೊಡಬಾರದು. ಎಲ್ಲರಿಗೂ ಅವರವರ ಬದುಕಿನ ಕುರಿತು ಅವರದ್ದೇ ಆದ ದೃಷ್ಟಿಕೋನಗಳು ಇರುತ್ತವೆ. ತಾವು ಹೇಗೆ ಬದುಕಬೇಕು ಎಂಬ ಕುರಿತು ಕನಿಷ್ಠ ತಿಳುವಳಿಕೆಯಂತೂ ಇದ್ದೇ ಇರುತ್ತದೆ.. ಇಲ್ಲದೆ ಹೋದರೂ ಕೂಡ ಅದು ಅವರ ತೊಂದರೆಯೇ ಹೊರತು ನಮ್ಮದಲ್ಲ.

 ತಮ್ಮ ತೊಂದರೆಗಳನ್ನು ಹೇಳಿಕೊಂಡು ನನಗೇನು ತೋಚುತ್ತಿಲ್ಲ…ನಾನು ಏನು ಮಾಡಲಿ ಎಂದು ಅವರು ಸಲಹೆ ಕೇಳಿದಾಗ ಮಾತ್ರ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಅದನ್ನು ಅವರು ಒಪ್ಪಿಕೊಳ್ಳಲೇಬೇಕು ಎಂಬ ಹಟ ಬೇಡ.

 ನಮಗೆ ನಮ್ಮದೇ ಆದ ಬದುಕಿದೆ, ಬದುಕು ಒಡ್ಡುವ ಹತ್ತು ಹಲವಾರು ಸವಾಲುಗಳಿವೆ. ಸುಖ ದುಃಖಗಳ ಸರಮಾಲೆಗಳಿವೆ…. ಅವುಗಳೊಂದಿಗೆ ಏಗುವುದು ನಮಗಿದ್ದೇ ಇದೆ.
 ನಮ್ಮ ಬದುಕನ್ನು ನಾವು ಬದುಕೋಣ ಬೇರೆಯವರ ಗೊಡವೆ ನಮಗೇಕೆ?
 ಅಲ್ಲವೇ ಸ್ನೇಹಿತರೆ?


About The Author

1 thought on “”

Leave a Reply

You cannot copy content of this page

Scroll to Top