ಪ್ರೀತಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
“ಸ್ವ ಪ್ರೀತಿಯೆಂಬ ಬೆಳದಿಂಗಳಿಗೆ ಒಡ್ಡಿಕೊಳ್ಳಿ”


ಇತರರಲ್ಲಿಯ ಅರ್ಹತೆಗಳನ್ನು ನೋಡಿ ಕರಬುತ್ತ ನಮ್ಮಲ್ಲಿರುವ ಯೋಗ್ಯತೆಗಳನ್ನು ಮರೆಮಾಚಿ ನೊಂದುಕೊಳ್ಳುವುದರಲ್ಲಿಯೇ ಬದುಕಿನ ಬಂಡಿಯನ್ನು ದೂಕುತ್ತಿದ್ದೇವೆ.
ದೇವರು ಪ್ರತಿಯೊಬ್ಬರನ್ನು ವಿಶಿಷ್ಟವಾಗಿಯೇ ಸೃಷ್ಟಿಸಿದ್ದಾನೆ. ಪ್ರತಿಯೊಬ್ಬರಲ್ಲೂ ಯೋಗ್ಯತೆಗಳಿವೆ. ನಮ್ಮ ಯೋಗ್ಯತೆಗಳೇನು ಎಂಬುದನ್ನು ನಾವು ತಿಳಿದಕೊಳ್ಳಬೇಕು. ದೇವರು ನಮಗೆ ನೀಡಿದ ವಿಶೇಷತೆಗಳನ್ನು ಗುರುತಿಸಲು ಸ್ವ ಪ್ರೀತಿಯ ನಿಲುವುಗನ್ನಡಿಯಲ್ಲಿ ಪ್ರತಿಬಿಂಬವನ್ನು ಕಾಣಲು ಯತ್ನಿಸಬೇಕು.
ಆಗ ನಮ್ಮ ಯೋಗ್ಯತೆಯನ್ನು ಅತ್ಯುನ್ನತ ಮಟ್ಟಕ್ಕೊಯ್ಯಲು ಸಾಧ್ಯವಾಗುತ್ತದೆ. ,”ನಿನ್ನ ನೀನು ಮರೆತರೇನು ಸುಖವಿದೆ?” ಎನ್ನುವಂತೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದೆಂದರೆ ಆತ್ಮ ಪ್ರಶಂಸೆ ಎಂದರ್ಥವಲ್ಲ. ನಮ್ಮಲ್ಲಿರುವುದನ್ನು ಪ್ರೀತಿಸುವುದು ಪೋಷಿಸುವುದು ಬೆಳೆಸುವುದು. ನಾವಿರುವುದಕ್ಕೆ ಸಂತೃಪ್ತಿ ಪಟ್ಟುಕೊಳ್ಳುವುದು.
ಸ್ವ ಪ್ರೀತಿ ಪರುಷ ಮಣಿಯಂತೆ ಸಾಮಾನ್ಯವಾದವನನ್ನು ಅಸಾಮಾನ್ಯನಾಗಿಸುವತ್ತ ಆತ್ಮ ಸ್ಥೈರ್ಯ ತುಂಬುತ್ತದೆ. ಕಬ್ಬಿಣವನ್ನು ಹೊನ್ನಾಗಿಸುತ್ತದೆ. ಯೋಗ್ಯತೆಯನ್ನು ಗ್ರಹಿಸುವ ಕೊರತೆಯಿಂದಾಗಿ ನಮ್ಮೆಡೆ ನಾವು ಕರುಬುವಂತಾಗಿದೆ. ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಕೇವಲ ಇತರರ ಅರ್ಹತೆ ಗಮನಿಸಿದಾಗ ನಮ್ಮ ಆತ್ಮಗೌರವ ಕಬ್ಬಿಣದ ಕಡಲೆಯಂತೆ ಕಾಣಿಸುವುದು.
ಪರರ ಪ್ರತಿಭೆ ಸೌಂದರ್ಯ ಕಂಡು ನಾವು ಅವರಂತೆ ಇರಬೇಕಿತ್ತು ಎಂದು ಹಲಬುವುದಕ್ಕಿಂತ ನಮ್ಮಲ್ಲಿರುವುದನ್ನು ಕಂಡು ಆನಂದಿಸುವುದು ಉತ್ತಮ. ನಾವು ಇತರರಿಗಿಂತ ವಿಭಿನ್ನ ಎಂದು ಅರಿತಾಗ ಸ್ವ ಪ್ರೀತಿ ಹುಟ್ಟುವುದು.
ಪ್ರಸ್ತುತದಲ್ಲಿ ಸ್ವ ಪ್ರಶಂಸೆ ಸ್ವ ಪ್ರೀತಿಯೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಂಡು ಯೋಗ್ಯತೆಯನ್ನು ಅತ್ಯುತ್ತಮತೆಯೆಡೆಗೆ ಸಾಗಿಸುವುದೇ ಸ್ವ ಪ್ರಿತಿಯ ನಿಜವಾದ ಹಾದಿ.
ದೌರ್ಬಲ್ಯಗಳನ್ನು ಬಲಗಳನ್ನಾಗಿಸಿನಮ್ಮಲ್ಲಿರುವ ಸಹಜ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಅವುಗಳನ್ನು ಬಲಗಳನ್ನಾಗಿ ಪರಿವರ್ತಿಸುವುದು ಒಂದು ಕಲೆ. ಇದನ್ನು ಕರಗತಗೊಳಿಸಿಕೊಳ್ಳಬೇಕಿದೆ. ಬದುಕಿನ ಘಟನೆಗಳು ನಮ್ಮನ್ನು ಆವರಿಸುತ್ತವೆ. ಸ್ವ ಪ್ರೀತಿಯೇ ಅರ್ಥಪೂರ್ಣ ಬದುಕಿಗೆ ದಾರಿ ತೋರುವ ಮೈಲಿಗಲ್ಲು. ಸರಿಯಾದ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದೇವೆ ಎನ್ನುವುದಕ್ಕೆ ಸ್ವ ವಿಶ್ಲೇಷಣೆಗಳು ಸಾಕ್ಷಿಯಾಗುತ್ತವೆ. ನಡೆ ನುಡಿಗಳಲ್ಲಿ ವ್ಯತ್ಯಾಸವಿಲ್ಲದೆ ಬದುಕುವುದೇ ಕಾಯಕಕ್ಕೆ ಪರಮ ಪವಿತ್ರವಾದ ಸ್ಥಾನ ನೀಡಿದಂತೆ.
ಬೇಕಾದುದನ್ನು ಸಾಧಿಸುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಆತ್ಮ ಬಲ ವೃದ್ಧಿಸುತ್ತದೆ. ಕೊರತೆ ಕುರಿತು ಯೋಚಿಸಿದರೆ ಆತ್ಮ ಸ್ಥೈರ್ಯ ತಕ್ಷಣವೇ ಕುಗ್ಗಿ ಹೋಗಿ ಬಿಡುತ್ತದೆ. ಇಂಥ ಸಂದರ್ಭದಲ್ಲಿ ಸ್ವ ಪ್ರೀತಿಯ ವಿವೇಕ ಸೂರ್ಯನ ಬಿಂಬವನ್ನು ಕನ್ನಡಿಯಲ್ಲಿ ಬೀರುತ್ತ ಸ್ವ ಶಕ್ತಿಯನ್ನು ಬಲಗೊಳಿಸುತ್ತದೆ.
ವಿವೇಕವು ವಜ್ರಕ್ಕಿಂತಲೂ ಬೆಲೆಯುಳ್ಳದ್ದು. ಖಲೀಲ ಗಿಬ್ರಾನ್ ಹೇಳಿದಂತೆ, ಮಾನವನು ಎರಡು ಬಗೆಯವನು ಒಬ್ಬ ಕತ್ತಲೆಯಲ್ಲಿ ಎಚ್ಚೆತ್ತಿರುವವನು ಇನ್ನೊಬ್ಬ ಬೆಳಕಿನಲ್ಲಿ ನಿದ್ರಿಸುತ್ತಿರುವವನು.ಮನುಷ್ಯನ ಮನಸ್ಸು ಹುಚ್ಚು ಕುದುರೆಯಿದ್ದಂತೆ ಲಂಗು- ಲಗಾಮು ಇಲ್ಲದೆ, ಓಡಾಡುತ್ತಲೇ ಇರುವುದು. ಸ್ವತಪ್ರಜ್ಞೆಯಿಂದ ಮಾತ್ರ ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.ಎಂದಿದ್ದಾರೆ ರಾಮಕೃಷ್ಣ ಪರಮಹಂಸರು.
ಹೀಗಾಗಿ ಸ್ವ ಅರಿವು ಮತ್ತು ಸ್ಥಿತಪ್ರಜ್ಞೆ ಬಹು ಮುಖ್ಯ. ಮನುಷ್ಯ ಮತ್ತು ಇತರ ಪ್ರಾಣಿಗಳಲ್ಲಿ ಅಂತರವನ್ನು ತೋರಿಸುವ ದೊಡ್ಡ ಗುಣವೇ ಸ್ವ ಪ್ರೀತಿ.
ಸ್ವ ಪ್ರೀತಿಯ ಪಥ ಪಾಲಿಸಿ
ಸೂರ್ಯನ ಉಷ್ಣತೆಯಿಂದ ದೊರೆತ ಶಕ್ತಿಯಿಂದ ಶ್ರೀಮಂತ ಸಸ್ಯರಾಶಿಯನ್ನು ಪಡೆಯಲು ಸಾಧ್ಯವಾಯಿತು. ಚದುರಿದ ಉಷ್ಣತೆಯು ಉಪಯೋಗಕ್ಕೆ ಬಾರದು. ಸೂರ್ಯನ ಉಷ್ಣತೆಯಂತೆ ಅಂತರಂಗದ ಸ್ವ ಪ್ರೀತಿ ಪ್ರಯೋಗಿಸಲ್ಪಡುತ್ತದೆ.
ನಮ್ಮ ಇತಿಮಿತಿಗಳನ್ನು ಒಪ್ಪಿಕೊಂಡು ಜೀವನದ ಸಂದಿಗ್ದ ಪ್ರಸಂಗಗಳನ್ನು ಎದುರಿಸುವ ತಂತ್ರವು ನಮ್ಮನ್ನು ಪರಿವರ್ತಿಸುವ ಬಹು ಪರಿಣಾಮಕಾರಿ ವಿಧಾನವಾಗಿದೆ. ಅಷ್ಟೇ ಅಲ್ಲ ನಮ್ಮನ್ನು ನಾವು ಇಷ್ಟಪಡುವ ವ್ಯಕ್ತಿಯಾಗಿ ಮಾರ್ಪಾಡು ಮಾಡುತ್ತದೆಯೆಂದು ಸಾಬೀತು ಪಡಿಸುತ್ತದೆ. ಸಾಧು ಸಂತರು ಶರಣರು ತಲುಪಿದ ಮತ್ತು ಉಳಿಸಿಕೊಂಡ ಎತ್ತರಗಳು ದಿಢೀರ ಹಾರಾಟದ ಸಾಧನೆಗಳಲ್ಲ. ಅವು ಅಂತರಂಗದ ಸ್ವ ಶಕ್ತಿ ಸ್ವ ಪ್ರೀತಿಯ ಪಾತ್ರ ಅರಿತುದದರ ಫಲಗಳು. ಸ್ವ ಪ್ರೀತಿ ಪಥವನ್ನು ವಿನಮ್ರವಾಗಿ ಪಾಲಿಸಬೇಕು. ತುಂಬು ಭಾವನೆಯಿಂದ ಪಾಲಿಸಿದರೆ ಇದು ನಿಮ್ಮ ಸಂಕಲ್ಪಗಳನ್ನು ಉತ್ತಮಗೊಳಿಸಿ ನಿಮ್ಮನ್ನು ಹೆಚ್ಚು ಬಲಿಷ್ಟರಾಗಿಸುತ್ತದೆ.
ಕೆಲವೇ ದಿನಗಳಲ್ಲಿ ಸ್ವ ಪ್ರೀತಿ ಮನಸ್ಸನ್ನು ಪ್ರಪುಲ್ಲಗೊಳಿಸಿ ನಿಮ್ಮೊಳಗೆ ಬಲವು ಹೆಚ್ಚುತ್ತದೆ. ಫಲಿತಾಂಶಗಳು ವ್ಯಕ್ತವಾಗುತ್ತವೆ. ಜಾರೇಲಿಯಸ್ ಹೇಳಿದಂತೆ ಪ್ರೀತಿ ಮತ್ತು ಶಾಂತ ಗುಣವಿರುವವನು ಶಕ್ತ ಮನೋ ಗುಣವಿರುವವನಾಗುತ್ತಾನೆ.ಸ್ವ ಪ್ರೀತಿಯಷ್ಟು ಬಲಶಾಲಿ ಶಕ್ತಿ ಯಾವುದಿದೆ? ಸ್ವ ಪ್ರೀತಿಯ ಅಮೃತದ ಮಹಾಸಾಗರವು ಸಾತ್ವಿಕ ಸ್ಪೂರ್ತಿ ಮತ್ತು ಚೈತನ್ಯವನ್ನು ತುಂಬುತ್ತದೆ. ಸ್ವ ದೋಷಗಳನ್ನು ದೂರುವುದನ್ನು ಬಿಟ್ಟು ಸ್ವ ಪ್ರೀತಿಯೆಂಬ ಬೆಳದಿಂಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ. ಕಂಗಳಲ್ಲಿ ಹೊತ್ತಿರುವ ಕನಸುಗಳನ್ನು ನನಸಾಗಿಸಲು ಅಪಾರ ಶಕ್ತಿ ಹೊಂದಿರಿ.
ಜಯಶ್ರೀ.ಜೆ. ಅಬ್ಬಿಗೇರಿ





Nice article madam
ಸ್ವಗೌರವ ಅಮೂಲ್ಯ ಅವಶ್ಯಕತೆ… ಉಪಯುಕ್ತ ಲೇಖನ.. ಧನ್ಯವಾದಗಳು ಮೇಡಂ
ಈಶ್ವರಲಿಂಗ ಸಂಪಗಾವಿ ಕಕ್ಕೇರಿ.
ಬಹಳ ಜನ ಈ ಸ್ವ ಪ್ರೀತಿಯನ್ನು ಮರೆತು ಕೇವಲ ಸ್ವ ಪ್ರತಿಷ್ಠೆಯನ್ನು ಪೋಷಿಸುತ್ತಿದ್ದೇವೆ ಅನಿಸುತ್ತೆ. Swa ಪ್ರೀತಿಯ ಮಹತ್ವ ತಿಳಿಸಿದ ನಿಮಗೆ ಧನ್ಯವಾದಗಳು
Nice article madam