ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್

ಯಾರೋ ಮಾನ ಕಾಯುವರೆಂದು ಕೂಡದಿರು ಕೃಷ್ಣನ ಕೈಯಲಿ ಈಗ ಸೀರೇಯೇ ಇಲ್ಲ
ಯಾರೋ ದಾನ ಕೊಡುವರೆಂದು ಹಸಿದು ಕೂಡದಿರು ಸಿರಿವಂತರಾರೂ ಖಾಲಿಯೇ ಇಲ್ಲ
ಊರ ನಡುವಿನ ಹಗೆವುಗಳಲ್ಲಿ ಧಾನ್ಯವೆಲ್ಲಿ ಈಗ? ಇಲಿ ಹೆಗ್ಗಣಗಳದೇ ದರಬಾರು
ಹರಕು ಬಟ್ಟೆಯಲಿ ಮೈಯ ತೋರದಿರು ಮಾನ ಮುಚ್ಚುವ ಉದಾರಿಗಳಾರೂ ಈಗ ದೊರಕಿಯೇ ಇಲ್ಲ
ಧರ್ಮ ದೇವರುಗಳೂ ಈಗ ಒಂದೊಂದು ಜಾತಿ ಅನುಯಾಯಿಗಳ ಮಾತು ಕೇಳುತ್ತಿವೆ
ರಕ್ಷಿಸಿದವರ ರಕ್ಷಿಸುವ ಮಾತು ನಂಬದಿರು ದೇವ ಮಾನವ ರಾರೂ ಜೀವೀಸಿಯೇ ಇಲ್ಲ
ಪುರಾಣ ಪ್ರವಚನಪಟುಗಳ ಹೇಳುವ ಮಾತುಗಳು ಉದರ ಪೋಷಣೆಯ ಮಾರ್ಗವಾಗಿವೆ
ಸಾರು ತತ್ವಗಳು ಗಾಳಿಯಲಿ ತೇಲುತಿವೆ ಹೇಳಿದವರಾರೂ ಅನುಸರಿಸಿಯೇ ಇಲ್ಲ
ಹರಿದು ಬರುವ ನೀರು ಗಾಳಿ ಕೂಡ ಈಗ ವಿಷವನೆ ಹೊತ್ತು ತರುತ್ತಲಿದೆ ಜೋಗಿ
ಉಳಿಯಲೆಲ್ಲಿದೆ ದಾರಿ ಅರಸುತ್ತಿದ್ದೇನೆ ಸುದರ್ಶನ ಹಿಡಿದ ಚಕ್ರಧರ ನೋಡಿಯೇ ಇಲ್ಲ
ವೈ.ಎಂ.ಯಾಕೊಳ್ಳಿ





ವಾಸ್ತವದ ಕವಿತೆ ಧನ್ಯವಾದಗಳು