ಕಾವ್ಯಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ನೆನಪುಗಳಿಗೂ, ನಾ ಪರದೆ ಹಾಕುವಂತಿದ್ದಿದ್ದರೇ ಒಳ್ಳೆಯದಿತ್ತು
ಆ ಮನಸಿಗಾಗಿ, ಈ ಮನಸು ಹಾತೊರೆಯದಂತಿದ್ದಿದ್ದರೇ ಒಳ್ಳೆಯದಿತ್ತು
ಅದಾವ ಘಳಿಗೆಯಲಿ ನಾ ನಿನ್ನ ಭೇಟಿಯಾದೆನೋ ಏನೋ ಸಾಕಿ
ಆ ಸೂರ್ಯೋದಯ ತನ್ನೊಂದಿಗೆ, ಹಗಲು ತರದಂತಿದ್ದಿದ್ದರೇ ಒಳ್ಳೆಯದಿತ್ತು
ನಿನ್ನದೊಂದು ನೋಟದ ಬಿಸಿಗೆ ನಾ ಕರಗುತ್ತಾ ಹೋದೆ
ಆ ದಿನ ಮೋಡ ಕವಿದು ಕಣ್ಣು ಮಸುಕಾಗುವಂತಿದ್ದಿದ್ದರೇ ಒಳ್ಳೆಯದಿತ್ತು
ನೀನಾಡಿದ ಸವಿ ಮಾತುಗಳಿಗೆ ಸೋಲುತ್ತಾ ಹೋದೆ
ಮಗುವೊಂದು ಆಗ ರಚ್ಛೆ ಹಿಡಿವಂತಿದ್ದಿದ್ದರೇ ಒಳ್ಳೆಯದಿತ್ತು
ಮೊಹಬ್ಬತ್ತಿನ ಮಳೆಯಲಿ ‘ವಾಣಿ’ ಅದೇಕೆ ನೆನೆದಳೋ ಏನೋ
ನೀ ಕಳುಹಿಸುವ ಬಿಕ್ಕಳಿಕೆಗಾಗಿ ನಾ ಕಾಯದಂತಿದ್ದಿದ್ದರೇ ಒಳ್ಳೆಯದಿತ್ತು
ವಾಣಿ ಯಡಹಳ್ಳಿಮಠ





Very nice
Thank you