ಕಾವ್ಯಸಂಗಾತಿ
ರಾಜು ನಾಯ್ಕ ಅವರ ಕವಿತೆ
ʼಇಬ್ಬನಿಯ ಮಲೆನಾಡುʼ
(ಕುಸುಮ ಷಟ್ಪದಿ)

ಅಂದದಲಿ ಧರೆಗಿಳಿದು
ಬಂದಿರುವ ಮುಂಗಾರು
ಬಂಧುರವ ಬೆಸೆದಂತೆ ಕಾನು ಬಯಲು
ಚೆಂದದಲಿ ತೇಲಾಡೊ
ಚೆಂದುಳ್ಳಿ ಬಿಳಿ ಮೋಡ
ಚಂದಿರನ ನಗುವಂತೆ ಬಾನು ಹಗಲು
ಮುಂಬರೆಯ ವನದಲ್ಲಿ
ಮುಂಬೆಳಕ ಚೆಲ್ಲಾಟ
ಕುಂಭಿನಿಗೆ ಬಾಗಿನದ ಸಿಹಿ ಕಾಣಿಕೆ
ತಂಬೆಲರ ಸಂಗದಲಿ
ಹಂಬಲವು ಗರಿಗೆದರಿ
ನಂಬಿಕೆಯ ರಥದಲ್ಲಿ ಮರು ಹೂಡಿಕೆ
ಮಣ್ಣಿನಲಿ ಬೆವರು ಹನಿ
ಹಣ್ಣಾಗಿ ಮುತ್ತುಗಳು
ತಣ್ಣನೆಯ ಖುಶಿ ಗಾಳಿ ಪಂಚ ವಾದ್ಯ
ಉಣ್ಣುವರು ಬಿಸಿ ತುಪ್ಪ
ಸಣ್ಣಕ್ಕಿ ಸವಿ ಬಾನ
ಕಣ್ಣೆದುರು ಹಬ್ಬಗಳ ಪಂಚ ಖಾದ್ಯ….
ಇಬ್ಬನಿಯ ಮಲೆನಾಡು
ತಬ್ಬಿರುವ ಬಗೆನೋಡು
ಹಬ್ಬಿರುವ ಹಸಿರಲ್ಲಿ ಭಾವಗೀತೆ
ಉಬ್ಬಿರುವ ಬೆಟ್ಟಗಳು
ಮಬ್ಬಿರದ ಮನಸುಗಳು
ಕಬ್ಬಿಗರ ಕಾವ್ಯದಲಿ ಬಾಳಗೀತೆ
————–
ರಾಜು ನಾಯ್ಕ





ಸೂಪರ್ ಸರ್