ಕಾವ್ಯ ಸಂಗಾತಿ
ಮಧು ವಸ್ತ್ರದ ಮುಂಬಯಿ
ಗಝಲ್ (ಏಳು ಶೇರ್ ಗಳು)


ನದಿ ತೀರದಲಿ ಕುಳಿತು ನಿನ್ನನೇ ನಿರೀಕ್ಷಿಸುತಿಹೆ ಮಂದಾನಿಲವಾಗಿ ಬರುವೆಯಾ ಸಖಾ
ನಿದಿರೆಯಲೂ ಕಾಡಿಸುತ ಕಾಡಿಗೆ ಕಣ್ಣಂಚಿನ ಹೊಂಗನಸಾಗಿ ಬರುವೆಯಾ ಸಖಾ
ಪದಗಳ ರೂಪದಿ ಪ್ರಣಯ ಕಾವ್ಯದ ಪುಟದಲಿ ಸಂಧಿಸುವೆನೆಂದವನು ನೀನಲ್ಲವೇ
ಕದಕೆ ಒರಗಿ ನಿಂತು ಹಗಲಿರುಳು ಕಾಯ್ದಿರುವೆ ಕಾವ್ಯಲಹರಿಯಾಗಿ ಬರುವೆಯಾ ಸಖಾ
ಜೋಡಿ ಮೇಘಗಳಾಗಿ ಆಗಸದಿ ತೇಲಾಡುವ ಕನಸುಗಳ ಕಂಡವನು ನೀನು
ಮೋಡಿ ಮಾಡಿ ಮೈ ಝಮ್ಮೆನಿಸಿ ಹೊಳೆಯುವ ಕೋಲ್ಮಿಂಚಾಗಿ ಬರುವೆಯಾ ಸಖಾ..
ಅಂಗಳದ ಹೊಂಬೆಳಕಿನಲಿ ಕುಳಿತು ಸಲ್ಲಾಪದಿ ಜಗ ಮರೆವ ನಿನ್ನಾಸೆಯ ನಾ ಬಲ್ಲೆ
ಮುಂಗುರುಳ ಸರಿಸಿ ಕಂಗಳಲಿ ಬಿಂಬ ಕಾಣಲು ಬೆಳದಿಂಗಳಾಗಿ ಬರುವೆಯಾ ಸಖಾ
ಒಡಲ ಶರಧಿಯಲಿ ಉಕ್ಕಿ ಹರಿಯುವ ಒಲವಿನ ಅಲೆಗಳಲಿ ಈಸುತಿದ್ದೆವಲ್ಲವೇ
ಮಡಿಲ ಪರಿಧಿಯಲಿ ಹರಡಿಹ ಪ್ರೀತಿ ಭಾವಕೆ ಬಿಸಿಯುಸಿರಾಗಿ ಬರುವೆಯಾ ಸಖಾ
ಏಳು ಬಣ್ಣಗಳ ಕಾಮನಬಿಲ್ಲಿನೊಳು ಒಂದಾಗಿ ಹೋಳಿ ಆಡೋಣವೆಂದಿದ್ದೆ
ಬಾಳ ಬಾನಿಗೆ ಬೆಳಕ ಚೆಲ್ಲಿ ಹೊಂಗಿರಣ ಹೊತ್ತ ನೇಸರನಾಗಿ ಬರುವೆಯಾ ಸಖಾ
ಅರಳಿದ ಹೂವಲಿ ಘಮ್ಮೆನ್ನುವ ಸುಗಂಧವಾಗಿ ಸೇರೋಣವೆಂದು ವಚನವಿತ್ತಿದ್ದೆ
ತರಳೆಯಧರದ ಮಧುವಿಗಾಗಿ ಝೇಂಕರಿಸುತ ಭೃಂಗವಾಗಿ ಬರುವೆಯಾ ಸಖಾ..
ಮಧು ವಸ್ತ್ರದ ಮುಂಬಯಿ..



