ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಣ್ಣು ಮಣ್ಣೆಂದೇಕೆ ಮೂದಲಿಸುವಿರಿ ಕಣ್ಣು ಕಾಣದ ಗಾವಿಲರೇ… ಇದೇನಿದು? ಹೆಣ್ಣು ಎನ್ನುವುದ ಬಿಟ್ಟು ಮಣ್ಣು ಅಂತ ತಪ್ಪಾಗಿ ಹೇಳ್ತಾ ಇದ್ದೀರಲ್ಲ ಅನ್ಕೊಂಡ್ರಾ ಇಲ್ಲಾರೀ ನಾನು ನಿಜವಾಗ್ಲೂ ಮಣ್ಣೇ.. ನನ್ಬಗ್ಗೆ ಸ್ವಲ್ಪ ಹೇಳ್ಕೊಬೇಕು ಅನ್ನಿಸ್ತು.ನನ್ನ ಮನಸ್ಸಿನ ಹೊಯ್ದಾಟವನ್ನು ನಿಮ್ಮ ಮುಂದೆ ಹೇಳ್ತಾ ಇದ್ದೀನಿ,ಮಣ್ಣಿಂದ ಕಾಯಾ ಮಣ್ಣಿಂದ ಅಂತ ಹಾಡ್ತೀರಿ, ಆದ್ರೆ ನಿನ್ನ ತಲೇಲೇನಿದೆ ಮಣ್ಣು ಅಂತ ಬಯ್ತೀರಿ. ಮಾತೆತ್ತಿದ್ರೆ ಮಣ್ಣಾಂಗಟ್ಟಿ ಅಂತ ಅಂತೀರಿ…ನಿಜ ಹೇಳ್ರೀ ನನ್ನನ್ನು ಇಷ್ಟು ದೂಷಿಸ್ತೀರಲ್ಲ….ನಾನಿಲ್ದೆ ನೀವು ಬದುಕಲು ಸಾಧ್ಯನಾ… ಮಡಕೆಯ ಮಾಡುವೆಡೆ ಮಣ್ಣೇ ಮೊದಲು ಅಂತ ಹಾಡುವ ಕುಂಬಾರನೂ ನನ್ನನ್ನು ತುಳಿ ತುಳಿದು ನೋಯಿಸ್ತಾನಲ್ಲ ನನ್ನಡಿಯಲ್ಲಿ ಅವನನ್ನು ತುಳಿಯುವ ಕಾಲ ಬಂದೇ ಬರುವುದು ಒಂದು ದಿನ ಅಂತ ಯೋಚನೆನೇ ಮಾಡಲ್ವಲ್ರೀ…

ನನಗೆ ಹತ್ತಾರು ಹೆಸರಿಟ್ಟಿದ್ದೀರಿ….ಕೆಂಪು ಮಣ್ಣು, ಕಪ್ಪು ಮಣ್ಣು, ಜೇಡಿ ಮಣ್ಣು ,ಮೆಕ್ಕಲು ಮಣ್ಣು, ಮರಳು ಮಣ್ಣು ಹಾಗೇ ಹೀಗೇಂತ ….ನೈಸರ್ಗಿಕ ಪ್ರಕ್ರಿಯೆಯಿಂದ ನಾನು ರೂಪುಗೊಳ್ಳಲು ಸಾವಿರಾರು ವರ್ಷ ಬೇಕು.ನಾನಿಲ್ದೇ ಏನೂ ಇಲ್ಲ,ಮುಲ್ತಾನಿ ಮಿಟ್ಟಿ ಅಂತ ಫಳಫಳ ಹೊಳೆಯೋಕೆ ನನ್ನನ್ನು ಮುಖಕ್ಕೆ ಹಚ್ಕೋತೀರಿ, ಸಮುದ್ರ ತೀರಕ್ಕೆ ಬಂದು ಅದೇನೋ ಮಡ್ಬಾತ್ ಅಂತ ಮಾಡ್ಕೋತೀರಿ.ನನ್ನಲ್ಲಿ ಅನೇಕ ಔಷಧೀಯ ಗುಣಗಳನ್ನು ಕಂಡುಕೊಂಡಿದ್ದೀರಿ.ನೋಡ್ರಿ ಕಲ್ ಮೇಲೆ ಮಳೆ ಸುರಿದ್ರೆ ಕೆಳಗೆ ಹೋಗುತ್ತೆ.ಆದ್ರೆ ನಾನು…ಅದನ್ನು ಹೀರಿ ಹಿಡಿದಿಟ್ಟುಕೊಳ್ತೀನಿ,ತೇವಾಂಶವನ್ನು ಕಾಪಾಡ್ತೀನಿ.ಆದ್ರೂ ನಿಮ್ಮ ಅವೈಜ್ಞಾನಿಕ ಕ್ರಿಯೆಗಳಿಂದ ನನ್ನ ಸವೆತಕ್ಕೆ ಕಾರಣ ಆಗ್ತೀರಿ.

ನಿಮ್ಗೆ ಆಹಾರ ಬೆಳೆಯೋಕೆ ನಾನು ಬೇಕು,ನನ್ನಲ್ಲಿ ಪೌಷ್ಟಿಕಾಂಶ ಇದ್ದು,ನಾನು ಫಲವತ್ತಾಗಿದ್ದರೆ ತಾನೆ ನೀವು ಎಲ್ಲವನ್ನೂ ಬೆಳೆಯಲು ಸಾಧ್ಯ. ಪ್ರತಿ ಜೀವಸಂಕುಲಕ್ಕೂ ನಾನು ಬೇಕೇ ಬೇಕಲ್ವೇನ್ರಿ ನನ್ನೊಳಗೆ ಏನೇ ಹಾಕಿದರೂ ಅದನ್ನ ನನ್ನಂತೇ ಪರಿವರ್ತಿಸ್ತೀನಿ.ಕೊನೆಗೆ ನಿಮ್ಮನ್ನು ಕೂಡ…ನನಗೂ ನಿಮಗೂ ಅವಿನಾಭಾವ ಸಂಬಂಧ.ಒಕ್ಕೂ ಇಲ್ಲದಿದ್ದರೆ ಮಣ್ಣು ಮುಕ್ಕು ಅಂತೀರಲ್ಲಾ…ನಾನಿಲ್ದೆ ನನ್ನನ್ನು ಮುಕ್ಕದಿದ್ರೆ ಹೂವು, ಹಣ್ಣು, ಯಾವುದೂ ಇಲ್ಲ ತಿಳ್ಕಳಿ. ಒಂದು ಸಣ್ಣ ಸಸಿ ಕೂಡ ಮಣ್ಣಿನಲ್ಲೇ ಉಳಿಯದು ಬೆಳೆದು ಬೇರಿಗೆ ಪಾರಿಜಾತವ ಸುರಿವುದು ಎಂಬ ಸಾಲುಗಳನ್ನು ಕೇಳಿಲ್ಲವೇ? ನಿಮ್ಮ
ಜೀವಾಂತ್ಯದಲ್ಲೂ ನಾನೇ ಅಲ್ವೇನ್ರಿ ಕಂಪನಿ ಕೊಡೋದು….? ಮೂರಿಡಿ ನನ್ನನ್ನು ಹಾಕಿನೇ ಋಣ ಕಳ್ಕೋತೀರಿ.ಮಣ್ ಮಾಡಿ ಬಂದ್ವಿ ಅಂತ ನಿಟ್ಟುಸಿರು ಬಿಡ್ತೀರಿ.ಇನ್ನಾದ್ರೂ ನನ್ನ ಮಹತ್ವವನ್ನು ತಿಳೀರಿ ನನ್ನನ್ನು ಉಳಿಸಿರಿ. ಮನುಷ್ಯರಾದ ನೀವೆಷ್ಟು ಕೃತಗ್ನರಪ್ಪಾ ಕೃತಜ್ಞತೆಯೇ ಇಲ್ಲದಂತೆ ವರ್ತಿಸುವಿರಿ!


About The Author

Leave a Reply

You cannot copy content of this page

Scroll to Top